PUBG - TikTok ban in Afghanistan: ಜನಪ್ರಿಯ ಗೇಮ್ ಪಬ್‌ಜಿ ಮತ್ತು ಮನರಂಜನಾ ಆಪ್ ಟಿಕ್‌ಟಾಕ್ ಅನ್ನು ಅಫ್ಘಾನಿಸ್ತಾನ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆಪ್‌ಗಳಿಂದ ಯುವ ಸಮುದಾಯ ಹಾಳಾಗುತ್ತಿದೆ ಎಂಬ ಕಾರಣ ನೀಡಿ ನಿಷೇಧಿಸಲು ತಾಲೀಬಾನಿಗರು ಮುಂದಾಗಿದ್ದಾರೆ.
ನವದೆಹಲಿ: ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ಒಂದು ಗಾದೆ ಮಾತಿದೆ. ಅದಕ್ಕೆ ಸಾಕ್ಷಿಯೆಂಬಂತೆ ತಾಲಿಬಾನಿಗಳ ಅಫ್ಘಾನಿಸ್ತಾನ ಸರ್ಕಾರ PUBG ಮತ್ತು TikTok ಆಪ್‌ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಈ ಆಪ್‌ಗಳಿಂದ ಯುವ ಸಮೂಹ ಹಾಳಾಗುತ್ತದೆ ಎಂಬುದೇ ಅಫ್ಘಾನಿಸ್ತಾನ ಸರ್ಕಾರ ಈ ನಿರ್ಣಯ ತಳೆಯಲು ಕಾರಣ. ಹಾಗಾದರೆ ತಾಲಿಬಾನಿಗಳು ಮಾಡುವ ಕೆಲಸ ಯುವ ಸಮುದಾಯಕ್ಕೆ ಮಾದರಿಯಾಗಿವೆಯೇ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ಸರ್ಕಾರವೂ ನೀಡಲು ಸಾಧ್ಯವಿಲ್ಲ. ಅಮಾಯಕ ಜನರ ಮೇಲಿನ ತಾಲಿಬಾನಿಗಳ ಪೈಶಾಚಿಕತೆಗಿಂದ ಪಬ್‌ಜಿ ಆಟ ಕ್ರೂರವೇ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಇನ್ನೂ ಮೂರು ತಿಂಗಳೊಳಗೆ ಎರಡೂ ಆಪ್‌ಗಳನ್ನು ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಏಷಿಯನ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಈ ಹಿಂದೆ ಏಪ್ರಿಲ್‌ನಲ್ಲಿಯೇ ಆಪ್ ನಿಷೇಧದ ಬಗ್ಗೆ ಅಫ್ಘಾನಿಸ್ತಾನ ಸರ್ಕಾರ ಪ್ರಸ್ತಾಪ ಮಾಡಿತ್ತು.
ತಾಲೀಬಾನ್ ವಕ್ತಾರ ಇನಾಮುಲ್ಲಾ ಸಮಂಗನಿ ಈ ಸಂಬಂಧ ಹೇಳಿಕೆ ನೀಡಿದ್ದು "ಯುವ ಸಮುದಾಯ ಹಾದಿ ತಪ್ಪದಂತೆ ತಡೆಯಲು ಟಿಕ್‌ಟಾಕ್ ಮತ್ತು ಪಬ್‌ಜಿ ನಿಷೇಧಿಸುವುದು ಅನಿವಾರ್ಯ," ಎಂದಿದ್ದಾರೆ. ಟೆಲೆಕಮ್ಯುನಿಕೇಷನ್ ಇಲಾಖೆಯ ಸಭೆಯಲ್ಲಿ ನಿಷೇಧದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಇಲಾಖೆ ಮತ್ತು ಷರಿಯತ್ ಕಾನೂನು ಜಾರಿ ನಿರ್ವಹಣಾಲಯದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯಕ್ಕೆ ತಳೆಯಲಾಗಿದೆ.
ಇತ್ತೀಚೆಗಷ್ಟೇ ಒಟ್ಟಾರೆ 23 ಮಿಲಿಯನ್ ವೆಬ್‌ಸೈಟ್‌ಗಳನ್ನು ಅಫ್ಘಾನಿಸ್ತಾನ ಸರ್ಕಾರ ನಿಷೇಧಿಸಿತ್ತು. ಇದರಲ್ಲಿನ ಕಂಟೆಂಟ್ ಅನೈತಿಕ ಎಂದು ತಾಲೀಬಾನ್ ಕರೆದಿತ್ತು. ಇನ್ನು 90 ದಿನಗಳೊಳಗೆ ಪಬ್ ಜಿ ಮತ್ತು ಟಿಕ್ ಟಾಕ್ ಸಂಪೂರ್ಣವಾಗಿ ನಿಷೇಧವಾಗಲಿದೆ. ಈ ಎರಡೂ ಆಪ್‌ಗಳನ್ನು ಅಫ್ಘಾನಿಸ್ತಾನ ಯುವ ಸಮುದಾಯ ವ್ಯಾಪಕವಾಗಿ ಬಳಸುತ್ತಿತ್ತು.
ತಾಲೀಬಾನ್ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರ ಹಿಡಿದ ನಂತರ ಮನರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗುತ್ತಿದೆ. ಸಂಗೀತ, ಸಿನೆಮಾ, ದಾರವಾಹಿಗಳು ಅಫ್ಘಾನಿಸ್ತಾನದಲ್ಲಿ ನಿಷೇಧಗೊಂಡಿವೆ. ಮಾಧ್ಯಮ ಸ್ವಾತಂತ್ರ್ಯವೂ ಅಫ್ಘಾನಿಸ್ತಾನದಲ್ಲಿ ಇಲ್ಲ. ಕಟ್ಟರ್ ಇಸ್ಲಾಂ ವಾದವನ್ನು ತಾಲೀಬಾನಿಗರು ಪಾಲಿಸುತ್ತಿದ್ದು, ಸ್ವಚ್ಚಂದದ ಸ್ವತಂತ್ರ ದೇಶದ ಕನಸು ಅಫ್ಘಾನಿಸ್ತಾನೀಯರಿಗೆ ಮರೀಚಿಕೆಯಾಗಿದೆ.
ಇದನ್ನೂ ಓದಿ: ತಾಲಿಬಾನ್ ಆರ್ಡರ್, ಹೆಣ್ಣುಮಕ್ಕಳು ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವಂತಿಲ್ಲ!
ಅಫೀಮು ಕೃಷಿ ನಿಷೇಧ:
ವಿಶ್ವದ ಅತಿದೊಡ್ಡ ಅಫೀಮು ಉತ್ಪಾದಕ ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್ (Taliban) ಮಾದಕ ದ್ರವ್ಯಗಳ (Drugs)ಕೃಷಿಯನ್ನು ನಿಷೇಧಿಸುವುದಾಗಿ ಘೋಷಿಸಿತ್ತು. "ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನ ತೀರ್ಪಿನ ಪ್ರಕಾರ, ತಾಲಿಬಾನ್‌ನ ಸರ್ವೋಚ್ಚ ನಾಯಕ ಹೈಬತುಲ್ಲಾ ಅಖುಂಡ್‌ಜಾದಾ ಮಾದಕ ದೃವ್ಯ ಬೆಳೆಯುವುದನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಎಲ್ಲಾ ಆಫ್ಘನ್ನರಿಗೆ ತಿಳಿಸಲಾಗಿತ್ತು.
"ಯಾರಾದರೂ ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿದರೆ, ಬೆಳೆಯನ್ನು ತಕ್ಷಣವೇ ನಾಶಪಡಿಸಲಾಗುವುದು ಮತ್ತು ಉಲ್ಲಂಘಿಸುವವರನ್ನು ಷರಿಯಾ ಕಾನೂನಿನ (Law) ಪ್ರಕಾರ ಶಿಕ್ಷೆ ನೀಡಲಾಗುವುದು" ಎಂದು ಆದೇಶವನ್ನು ಕಾಬೂಲ್‌ನಲ್ಲಿ (Kabul) ಆಂತರಿಕ ಸಚಿವಾಲಯವು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನ: ಮಹಿಳಾ ಟಿವಿ ನಿರೂಪಕರಿಗೆ ಮುಖ ಮುಚ್ಚಿಕೊಳ್ಳುವಂತೆ ತಾಲಿಬಾನ್ ಆದೇಶ!
ಇತರ ಮಾದಕ ವಸ್ತುಗಳ (Drugs) ಉತ್ಪಾದನೆ, ಬಳಕೆ ಅಥವಾ ಸಾಗಣೆಯನ್ನೂ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಡ್ರಗ್ ನಿಯಂತ್ರಣವು ಇಸ್ಲಾಮಿಸ್ಟ್ ಗುಂಪಿನ ಅಂತರರಾಷ್ಟ್ರೀಯ ಸಮುದಾಯದ ಪ್ರಮುಖ ಬೇಡಿಕೆಯಾಗಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ದೇಶವನ್ನು ತಾಲೀಬಾನಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಂತಾರಾಷ್ಟ್ರೀಯ ಹಣಕಾಸು ನೆರವು ನಿಂತುಹೋಗುತ್ತದೆ ಎಂಬ ಕಾರಣಕ್ಕೆ ತಾಲೀಬಾನಿಗಳು ತಮ್ಮ ವರ್ತನೆಯಲ್ಲಿ ಕೊಂಚ ಬದಲಾವಣೆ ತಂದುಕೊಂಡಿದ್ದಾರೆ. ಯಾವ ಕಾರಣ ಎಂದು ಸ್ಷಷ್ಟಪಡಿಸದೇ ಇದ್ದರೂ ಹೊಲಗಳಲ್ಲಿ Poppy ಬೆಳೆಯುವದನ್ನು ನಿಷೇಧಿಸಲಾಗಿದೆ.
ಅಫ್ಘಾನಿಸ್ತಾನದ ಅಫೀಮು ಉತ್ಪಾದನೆ 1.4 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಿದೆ. ದೇಶದ ಭೀಕರ ಆರ್ಥಿಕ ಪರಿಸ್ಥಿತಿಯು ಆಗ್ನೇಯ ಪ್ರಾಂತ್ಯಗಳ ನಿವಾಸಿಗಳು ಅಕ್ರಮವಾಗಿ ಬೆಳಖೆ ಬೆಳೆಯುವುದರಲ್ಲಿ ತೊಡಗುವಂತೆ ಮಾಡಿತು. ಗೋಧಿಯಂತಹ ಕಾನೂನು ಬೆಳೆಗಳಿಗಿಂತ ವೇಗವಾಗಿ ಮತ್ತು ಹೆಚ್ಚಿನ ಆದಾಯ ಗಳಿಸಲು ಜನರು ಇಂಥ ಕೆಲಸಕ್ಕೆ ಇಳಿದರು.
ಇದನ್ನೂ ಓದಿ: ಇನ್ಮುಂದೆ ಪುರುಷ ಸರ್ಕಾರಿ ನೌಕರರು ಗಡ್ಡ ಇಲ್ಲದೇ ಕಚೇರಿಗೆ ಹೋಗುವಂತಿಲ್ಲ
ತಾಲೀಬಾನ್ ರಾಷ್ಟ್ರದಲ್ಲಿ ಜನ ಆಹಾರಕ್ಕಾಗಿ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಹಾರಕ್ಕಾಗಿ, ಪುಡಿಗಾಸಿಗಾಗಿ ಹೆಣ್ಣು ಮಕ್ಕಳಮನ್ನೇ ಮಾರಾಟ ಮಾಡಿದ್ದರು. ಅಮೆರಿಕ ವಶದಲ್ಲಿದ್ದ ದೇಶವನ್ನು ತಾಲೀಬಾನಿಗಳು ವಶಪಡಿಸಿಕೊಂಡಿದ್ದರು. ತಾವು ಮೊದಲಿನಂತೆ ಇಲ್ಲ ಬದಲಾಗಿದ್ದೇವೆ ಎಂದು ಹೇಳಿದ್ದರು. ಒಟ್ಟಿನಲ್ಲಿ ಇಡೀ ಜಗತ್ತು ಆ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಕಡೆ ನೋಡಿತ್ತು.