ಒಂಟಿಯಾಗಿ ಜೀವಿಸುತ್ತಿದ್ದ ವ್ಯಕ್ತಿ ಸಾವು... ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು

By Suvarna News  |  First Published Jan 22, 2022, 6:46 PM IST
  • ಸಾವನ್ನಪ್ಪಿದ ಮನೆಗೆ ಹೋಗಿ ನೋಡಿದ ಪೊಲೀಸರಿಗೆ ಶಾಕ್‌
  • ಮನೆಯಲ್ಲಿತ್ತು 125 ಕ್ಕೂ ಹೆಚ್ಚು ಬಗೆಯ ಹಾವು
  • ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಘಟನೆ

ನ್ಯೂಯಾರ್ಕ್‌(ಜ.22): ಮೇರಿಲ್ಯಾಂಡ್‌ನ (Maryland) ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ವೇಳೆ ಈತನ ಮನೆಗೆ ಭೇಟಿ ನೀಡಿದ ಪೊಲೀಸರು ಹಾಗೂ ಸ್ಥಳೀಯರಿಗೆ ಶಾಕ್‌ ಕಾದಿತ್ತು. ಈತನ ಮನೆಯಲ್ಲಿ  125 ಕ್ಕೂ ಹೆಚ್ಚು ಬಗೆಯ ಹಾವುಗಳಿದ್ದವು. ಇವುಗಳಲ್ಲಿ  ಹೆಚ್ಚು ವಿಷಕಾರಿ ಮತ್ತು ವಿಷ ಉಗುಳುವ ನಾಗರ ಹಾವುಗಳು ಮತ್ತು ಅತ್ಯಂತ ಅಪಾಯಕಾರಿ ಕಪ್ಪು ಮಾಂಬಾಗಳು ಕೂಡ ಇದ್ದವು. 

49 ವರ್ಷದ ಡೇವಿಡ್ ರಿಸ್ಟನ್ (David Riston) ಮೃತಪಟ್ಟ ವ್ಯಕ್ತಿ. ಇವರು ಬುಧವಾರ ಸಂಜೆ ತಮ್ಮ ಪಾಮ್‌ಫ್ರೆಟ್‌ನಲ್ಲಿರುವ ಮನೆಯಲ್ಲಿ ನಿಧನರಾಗಿದ್ದಾರೆ. ನಂತರದಲ್ಲಿ ಅಲ್ಲಿಗೆ ಹೋಗಿ ನೋಡಿದಾಗ ಅಲ್ಲಿ ಮೃತದೇಹದ ಸುತ್ತ ಪಂಜರದೊಳಗೆ ನೂರಾರು ಹಾವುಗಳಿದ್ದವು. ಅವುಗಳಲ್ಲಿ ಕೆಲವನ್ನು ಅಮೆರಿಕಾದಲ್ಲಿ ಸಾಕುಪ್ರಾಣಿಗಳಂತೆ ಇಟ್ಟುಕೊಳ್ಳುವುದು  ಕಾನೂನು ಬಾಹಿರವಾದಂತಹ ಹಾವುಗಳೂ ಇದ್ದವು. 

Tap to resize

Latest Videos

ಡೇವಿಡ್ ರಿಸ್ಟನ್  ಹೇಗೆ ಸಾವಿಗೀಡಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಮತ್ತು ಯಾವುದಾದರೂ ಹಾವುಗಳೇ ರಿಸ್ಟನ್ನನ್ನು ಕೊಂದಿರಬಹುದೇ ಎಂದು ತನಿಖಾಧಿಕಾರಿಗಳು ಇನ್ನಷ್ಟೇ ಹೇಳಬೇಕಾಗಿದೆ.  ರಿಸ್ಟನ್ ತನ್ನ ಮನೆಯನ್ನು ಹಾವಿನ ಸಂಗ್ರಹಾಲಯವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿದಿರಲಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ.

ಈ ಹುಡುಗಿ ತಲೆಯಲ್ಲಿರುವುದು ಹೂವಲ್ಲ ಹಾವು..?

ಡೇವಿಡ್ ರಿಸ್ಟನ್ ವಾಸವಿರುವ ಮನೆಯ ಬಳಿ ಯಾವುದೇ ಚಟುವಟಿಕೆ ಇಲ್ಲದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ತುರ್ತು ದೂರವಾಣಿ ಸಂಖ್ಯೆ 911ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ನಂತರ  ಚಾರ್ಲ್ಸ್ ಕೌಂಟಿ ಶೆರಿಫ್‌ನ ನಿಯೋಗವೂ ಬುಧವಾರ ರಾತ್ರಿ ಸುಮಾರು 6 ಗಂಟೆಗೆ ಪೊಂಫ್ರೆಟ್‌ನಲ್ಲಿರುವ ರಾಫೆಲ್ ಡ್ರೈವ್‌ನ 5500 ಬ್ಲಾಕ್‌ನಲ್ಲಿರುವ ಮನೆಗೆ ಭೇಟಿ ನೀಡಿ, ಮನೆಯ ಮಾಲೀಕನನ್ನು ಪರಿಶೀಲಿಸಲು ಹೋಗಿದ್ದಾರೆ. ಈ ವೇಳೆ ಕಿಟಕಿಯಿಂದ ನೋಡಿದಾಗ  ಡೇವಿಡ್ ನೆಲದ ಮೇಲೆ ನಿಶ್ಚಲವಾಗಿ ಮಲಗಿರುವುದು ಕಂಡು ಬಂದಿದೆ.

ಶೆರಿಫ್ ಕಛೇರಿಯ ಪ್ರಕಾರ, ಯಾವುದೇ ಅಪರಾಧ ನಡೆದಂತಹ ಸ್ಪಷ್ಟ ಚಿಹ್ನೆಗಳು ಅಲ್ಲಿರಲಿಲ್ಲ. ಮತ್ತು ಡೇವಿಡ್ ರಿಸ್ಟನ್ ಅವರ ಮೃತದೇಹವನ್ನು ಬಾಲ್ಟಿಮೋರ್‌ನಲ್ಲಿರುವ ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಗೆ ತಪಾಸಣೆಗಾಗಿ ಸಾಗಿಸಲಾಗಿತ್ತು.   ಈ ವೇಳೆ ರಿಸ್ಟನ್ ಅವರ ನಿವಾಸದ ಒಳಗೆ, ವಿವಿಧ ಜಾತಿಗಳ 125 ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳನ್ನು ಟ್ಯಾಂಕ್‌ಗಳಲ್ಲಿ ಇರಿಸಿರುವುದು ಪತ್ತೆಯಾಗಿದೆ. ಕಾಳಿಂಗ ಸರ್ಪಗಳು, ಉಗುಳುವ ನಾಗರಹಾವುಗಳು, ಕಪ್ಪು ಮಾಂಬಾಗಳು ,  ಆಫ್ರಿಕಾದ ಅತ್ಯಂತ ವಿಷಕಾರಿ ಹಾವುಗಳು ಮತ್ತು 14 ಅಡಿ ಉದ್ದದ ಬರ್ಮೀಸ್ ಹೆಬ್ಬಾವುಗಳು ಅಲ್ಲಿದ್ದವು. 

Python Climbs Tree: ಹೆಬ್ಬಾವುಗಳು ಅಡಿಕೆ ಮರ ಏರುವ ಸ್ಟೈಲ್‌ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

ಏಕಾಂಗಿಯಾಗಿ ಜೀವಿಸುತ್ತಿದ್ದ ರಿಸ್ಟನ್‌,  ಅವರು ಹಾವುಗಳು ಮತ್ತು ಸರೀಸೃಪಗಳನ್ನು ಸಾಕಲು ಪರವಾನಗಿಯನ್ನು ಹೊಂದಿದ್ದರು. ಆದರೆ ಮೇರಿಲ್ಯಾಂಡ್ ಕಾನೂನಿನ ಅಡಿಯಲ್ಲಿ ಯಾವುದೇ ವಿಷಕಾರಿ ಹಾವುಗಳನ್ನು ಹೊಂದುವುದಕ್ಕೆ ಅನುಮತಿ ಇರಲಿಲ್ಲ. ಕಪ್ಪು ಮಾಂಬಾ ಹಾವಿನ ವಿಷದ ಕೇವಲ ಎರಡು ಹನಿಗಳು ನರಮಂಡಲವನ್ನು ಸ್ಥಗಿತಗೊಳಿಸುವ ಮೂಲಕ ಮತ್ತು ಪಾರ್ಶ್ವವಾಯುವನ್ನು ಉಂಟುಮಾಡುವ ಮೂಲಕ ಮನುಷ್ಯನನ್ನು ಕೊಲ್ಲಬಹುದು.

ರಿಸ್ಟನ್‌ನ ಮನೆಯಲ್ಲಿದ್ದ ಎಲ್ಲಾ ಹಾವುಗಳನ್ನು ಅವುಗಳ ಮಾಲೀಕರು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಭಯಭೀತರಾದ ನೆರೆಹೊರೆಯವರು ಇತರ ಯಾವುದೇ ಹಾವುಗಳು ತಪ್ಪಿಸಿಕೊಂಡಿದ್ದರೆ, ಚಳಿಗಾಲದ ಶೀತ ಹವಾಮಾನವು ತುಂಬಾ ದೂರ ಹೋಗುವ ಮೊದಲು ಅವುಗಳನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ.

ಇದು ತಮ್ಮ 30 ವರ್ಷಗಳ ವೃತ್ತಿಜೀವನದಲ್ಲಿ ಇದುವರೆಗೆ ನೋಡಿದ ಹಾವುಗಳ ಅತಿದೊಡ್ಡ ಖಾಸಗಿ ಸಂಗ್ರಹಗಾರವಾಗಿದೆ ಎಂದು ಚಾರ್ಲ್ಸ್ ಕೌಂಟಿ ಅನಿಮಲ್ ಕಂಟ್ರೋಲ್ ಮುಖ್ಯಸ್ಥ ಎಡ್ ಟಕರ್ ಅವರು ಹೇಳಿದ್ದಾರೆ. ಪ್ರಾಣಿ ನಿಯಂತ್ರಣ ಅಧಿಕಾರಿಗಳು ವರ್ಜೀನಿಯಾ ಮತ್ತು ಉತ್ತರ ಕೆರೊಲಿನಾದಲ್ಲಿನ ಉರಗ ತಜ್ಞರನ್ನು ಸಂಪರ್ಕಿಸಿ, ಹಾವುಗಳನ್ನು ಸುರಕ್ಷಿತವಾಗಿ ಅವುಗಳನ್ನು ಸಂಗ್ರಹಿಸಿಟ್ಟ ಗೂಡಿನಿಂದ ತೆಗೆಯಲು ಸಹಾಯ ಮಾಡಿದರು. ನಂತರ ಅವುಗಳನ್ನು ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ವಾಹನಗಳಿಗೆ ಲೋಡ್ ಮಾಡಲಾಯಿತು. ವಿಷಕಾರಿಯಲ್ಲದ ಹಾವುಗಳನ್ನು ವರ್ಜೀನಿಯಾಕ್ಕೆ ಸಾಗಿಸಲಾಯಿತು. ಆದರೆ ವಿಷಕಾರಿ ಹಾವುಗಳನ್ನು ಉತ್ತರ ಕೆರೊಲಿನಾಗೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.

click me!