ಸೇನಾ ಆಸ್ಪತ್ರೆಗೆ ಟ್ರಂಪ್ ಶಿಫ್ಟ್, ರೆಮ್ಡೆಸಿವಿರ್ನಿಂದ ಚಿಕಿತ್ಸೆ| ವಯಸ್ಸು, ಬೊಜ್ಜು ಮುಳುವು: ವೈದ್ಯರು
ವಾಷಿಂಗ್ಟನ್(ಅ.04): ಕೊರೋನಾ ಸೋಂಕಿಗೆ ಒಳಗಾದರೂ ತಮ್ಮ ಅಧಿಕೃತ ನಿವಾಸವಾದ ಅಮೆರಿಕದ ಶ್ವೇತಭವನದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ವಾಲ್ಟರ್ ರೀಡ್ ಸೇನಾ ಆಸ್ಪತ್ರೆ’ಗೆ ಸ್ಥಳಾಂತರಿಸಲಾಗಿದೆ.
undefined
ಟ್ರಂಪ್ರನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ವೇತಭವನ ಹೇಳಿದೆಯಾದರೂ, ‘ಟ್ರಂಪ್ ಅವರಿಗೆ ಈಗ 74 ವರ್ಷ ವಯಸ್ಸು. 65 ದಾಟಿದವರಿಗೆ ಅಪಾಯ ಹೆಚ್ಚು. ಅವರಿಗೆ ಬೊಜ್ಜು ಇದೆ. ಬೊಜ್ಜು ಇದ್ದವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ವಯಸ್ಸು ಹಾಗೂ ಇತರ ಆರೋಗ್ಯ ಸಮಸ್ಯೆಯನ್ನು ಹೊಂದಿದವರಿಗೆ ಕೊರೋನಾದಿಂದ ಅಪಾಯ ಹೆಚ್ಚು’ ಎಂದು ಅಮೆರಿಕದ ಹಿರಿಯ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ಆದರೆ, ಪ್ರಕಟಣೆ ಹೊರಡಿಸಿರುವ ಶ್ವೇತಭವನ, ‘ಮುಂಜಾಗ್ರತಾ ಕ್ರಮವಾಗಿ ಟ್ರಂಪ್ ಅವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಟ್ರಂಪ್ ಕೆಲವು ದಿನ ಆಸ್ಪತ್ರೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ’ ಎಂದು ತಿಳಿಸಿದೆ.
‘ಟ್ರಂಪ್ ಅವರು ನಮ್ಮ ಶಿಫಾರಸಿನ ಮೇರೆಗೆ ರೆಮ್ಡೆಸಿವಿರ್ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಿಂದ ಇದ್ದಾರೆ. ಸೌಮ್ಯ ರೋಗಲಕ್ಷಣಗಳಿವೆ’ ಎಂದು ಶ್ವೇತಭವನದ ವೈದ್ಯರೊಬ್ಬರು ಹೇಳಿದ್ದಾರೆ. ರೆಮ್ಡೆಸಿವಿರ್ ಔಷಧವು ಕೊರೋನಾ ಪೀಡಿತರಿಗೆ ಪರಿಣಾಮಕಾರಿಯಾಗಿದ್ದು, ಕೊರೋನಾ ಚಿಕಿತ್ಸೆಯಲ್ಲಿ ಇದರ ಬಳಕೆಗೆ ಟ್ರಂಪ್ ಆಡಳಿತ ಈ ಹಿಂದೆಯೇ ಒತ್ತು ನೀಡಿತ್ತು.
ಇದೇ ವೇಳೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಟ್ರಂಪ್, ‘ನಾನು ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನಾನು ಆರೋಗ್ಯದಿಂದ ಇದ್ದೇನೆ. ಕೊರೋನಾ ಸೋಂಕಿತ ಪತ್ನಿಯೂ ಆರೋಗ್ಯದಿಂದ ಇದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಮೆಲಾನಿಯಾ ಅವರು ಶ್ವೇತಭವನದಲ್ಲೇ ಹೌಸ್ ಐಸೋಲೇಶನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ, ಟ್ರಂಪ್ ಯಾರ ಸಹಾಯವಿಲ್ಲದೇ ಓಡಾಡುತ್ತಿದ್ದುದನ್ನು ತಾವು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.