ಇರಾನ್‌ನಲ್ಲಿ 5.1 ತೀವ್ರತೆಯ ಭೂಕಂಪ : ಅಣು ಪರೀಕ್ಷೆ ಶಂಕೆ

Published : Jun 22, 2025, 05:19 AM IST
Iran earthquake

ಸಾರಾಂಶ

ಇಸ್ರೇಲ್‌ ಜತೆಗಿನ ಸಂಘರ್ಷದ ನಡುವೆಯೇ ಉತ್ತರ ಇರಾನ್‌ನ ಸೆಮ್ನಾನ್‌ನಲ್ಲಿ ರಿಕ್ಟರ್‌ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ.

ಟೆಹರಾನ್‌: ಇಸ್ರೇಲ್‌ ಜತೆಗಿನ ಸಂಘರ್ಷದ ನಡುವೆಯೇ ಉತ್ತರ ಇರಾನ್‌ನ ಸೆಮ್ನಾನ್‌ನಲ್ಲಿ ರಿಕ್ಟರ್‌ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಇರಾನ್‌ನ ಕ್ಷಿಪಣಿ ಸಂಕೀರ್ಣಕ್ಕೆ ಸಮೀಪದಲ್ಲೇ ಸಂಭವಿಸಿರುವ ಈ ಭೂಕಂಪನ ಸಾಕಷ್ಟು ಅನುಮಾನಗಳ ಸೃಷ್ಟಿಗೆ ಕಾರಣವಾಗಿದೆ. ಇರಾನ್‌ ಏನಾದರೂ ಪರಮಾಣು ಪರೀಕ್ಷೆ ನಡೆಸಿದೆಯೇ ಎಂಬ ಶಂಕೆ ಮೂಡಿಸಿದೆ.

ಸೆಮ್ನಾನ್‌ನ ನೈಋತ್ಯದ 27 ಕಿ.ಮೀ. ದೂರದಲ್ಲಿ ಭೂಮೇಲ್ಮೈನಿಂದ ಸುಮಾರು 10 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ. ಕಂಪನದ ಕೇಂದ್ರವು ಇರಾನ್‌ನ ಬಾಹ್ಯಾಕಾಶ ಮತ್ತು ಕ್ಷಿಪಣಿ ಸಂಕೀರ್ಣಗಳ ಸಮೀಪದಲ್ಲೇ ಇದೆ. ಈ ಸಂಕೀರ್ಣಗಳು ಇರಾನ್‌ ಸೇನೆಯಿಂದಲೇ ನಿರ್ವಹಿಸಲ್ಪಡುತ್ತಿವೆ. ಹೀಗಾಗಿ ಈ ಕಂಪನ ನಾನಾ ಊಹಾಪೋಹಗಳನ್ನು ಹುಟ್ಟುಹಾಕಿದೆ. ಇರಾನ್‌ ಅಣ್ವಸ್ತ್ರ ಹೊಂದುವ ಗುರಿ ಹೊಂದಿರುವುದು ಮತ್ತು ಇಸ್ರೇಲ್‌ ಇದೇ ಕಾರಣಕ್ಕೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಯುದ್ಧದ ನಡುವೆಯೇ ಪರಮಾಣು ಪರೀಕ್ಷೆ ನಡೆಸಿರಬಹುದೇ ಎಂಬ ಆತಂಕ ಮನೆ ಮಾಡಿದೆ.

ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಇರಾನ್‌ ಕೂಡ ಒಂದು. ಅರೇಬಿಯನ್‌ ಮತ್ತು ಯುರೇಷಿಯನ್‌ ಭೂಫಲಕಗಳು ಆಗಾಗ ಘರ್ಷಣೆ ಆಗುವ ಕಾರಣ ಇಲ್ಲಿ ಭೂಕಂಪ ಸಂಭವಿಸುತ್ತಲೇ ಇರುತ್ತದೆ. ಇರಾನ್‌ನಲ್ಲಿ ಸಾಮಾನ್ಯವಾಗಿ ವರ್ಷವೊಂದರಲ್ಲಿ 2,100 ಭೂಕಂಪನಗಳು ಸಂಭವಿಸುತ್ತವೆ. ಇವುಗಳಲ್ಲಿ ಕನಿಷ್ಠ 15ರಿಂದ 16 ಭೂಕಂಪನಗಳು ರಿಕ್ಟರ್‌ ಮಾಪಕದಲ್ಲಿ 5.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆ ಹೊಂದಿರುತ್ತವೆ. 2006 ಮತ್ತು 2015ರ ನಡುವೆ ದೇಶವು 96 ಸಾವಿರ ಭೂಕಂಪನಗಳಿಗೆ ಸಾಕ್ಷಿಯಾಗಿದೆ.

ಇರಾನ್‌ ಅಣ್ವಸ್ತ್ರ ಸಿದ್ಧಪಡಿಸುತ್ತಿಲ್ಲ ಎಂದಿದ್ದ ತುಳಸಿ ಉಲ್ಟಾ!

ವಾಷಿಂಗ್ಟನ್: ‘ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುತ್ತಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ’ ಎಂದು ಮಾರ್ಚ್‌ನಲ್ಲಿ ನೀಡಿದ್ದ ಹೇಳಿಕೆಯಿಂದ ಅಮೆರಿಕ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚಾಟಿ ಬೀಸಿದ ಬಳಿಕ ಹಿಂದೆ ಸರಿದಿದ್ದಾರೆ. ‘ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದವು. ಇರಾನ್ ಅಣ್ವಸ್ತ್ರ ಉತ್ಪಾದನೆ ಮಾಡುತ್ತಿದ್ದುದು ನಿಜ’ ಎಂದಿದ್ದಾರೆ.ಶುಕ್ರವಾರ ಮಾತನಾಡಿದ್ದ ಟ್ರಂಪ್, ಮಾರ್ಚ್‌ನಲ್ಲಿ ಇರಾನ್‌ಗೆ ತುಳಸಿ ಕ್ಲೀನ್‌ ಚಿಟ್‌ ನೀಡಿದ್ದು ತಪ್ಪು ಎಂದಿದ್ದರು.

ಇರಾನ್‌ ವಿಚಾರದಲ್ಲಿ ಮೋದಿ ಮೌನ ಏಕೆ?: ಸೋನಿಯಾ ಕಿಡಿ

ನವದೆಹಲಿ: ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಗಾಜಾ ಮತ್ತು ಇರಾನ್ ಮೇಲಿನ ಇಸ್ರೇಲ್ ದಾಳಿ ವಿಚಾರದಲ್ಲಿ ಭಾರತ ತಟಸ್ಥ ನಿಲುವು ಹೊಂದಿರುವುದಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಕಿಡಿ ಕಾರಿದ್ದು, ‘ಇದು ಧ್ವನಿಯ ನಷ್ಟ ಮಾತ್ರವಲ್ಲ, ಮೌಲ್ಯಗಳ ಶರಣಾಗತಿ’ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

‘ದಿ ಹಿಂದು ಪತ್ರಿಕೆ’ಗೆ ಬರೆದ ಲೇಖನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸೋನಿಯಾ, ‘ಈ ಹಿಂದೆ ಇಸ್ರೇಲ್‌ನಿಂದ ದಾಳಿಗೆ ಒಳಗಾದ ಗಾಜಾ ವಿವಾದದಲ್ಲಿ ಮೋದಿ ಸರ್ಕಾರ ಮೌನ ತಾಳಿತ್ತು. ಸ್ವತಂತ್ರ ಪ್ಯಾಲೆಸ್ತೀನ್ ಪರ ವಾದ ಮಂಡಿಸಿರಲಿಲ್ಲ. ಇದೀಗ ಇರಾನ್ ವಿರುದ್ಧ ಇಸ್ರೇಲ್‌ ಅಪ್ರಚೋದಿತ ದಾಳಿ ಮಾಡುತ್ತಿದೆ. ಈ ಬಗ್ಗೆ ಕೂಡ ಮೋದಿ ಮೌನ ವಹಿಸಿರುವುದು ಸಲ್ಲದು.

ಇದು ನಮ್ಮ ನೈತಿಕತೆ ಮತ್ತು ರಾಜತಾಂತ್ರಿಕ ಸಂಪ್ರದಾಯದಿಂದ ದೂರ ಸರಿಯುವುದನ್ನು ಪ್ರತಿಬಿಂಬಿಸುತ್ತದೆ, ಇದು ಕೇವಲ ಧ್ವನಿಯ ನಷ್ಟ ಮಾತ್ರವಲ್ಲದೇ ಮೌಲ್ಯಗಳ ಶರಣಾಗತಿ ಕೂಡ ಆಗಿದೆ’ ಎಂದಿದ್ದಾರೆ.

ಮುಂದುವರೆದಂತೆ ಭಾರತ ಎರಡೂ ರಾಷ್ಟ್ರಗಳ ನಡುವಿನ ಶಾಂತಿ ಸ್ಥಾಪನೆಗೆ ಭಾರತ ಜವಾಬ್ದಾರಿಯುತ ನಡೆ ಅನುಸರಿಸಬೇಕೆಂದು ಆಗ್ರಹಿಸಿರುವ ಅವರು, ‘ಇನ್ನೂ ತಡವಾಗಿಲ್ಲ. ಭಾರತವು ಸ್ಪಷ್ಟವಾಗಿ ಮಾತನಾಡಬೇಕು. ಜವಾಬ್ದಾರಿಯುತವಾಗಿ ವರ್ತಿಸಬೇಕು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಶಮನ, ಶಾಂತಿ ಸ್ಥಾಪನೆಗೆ ಲಭ್ಯವಿರುವ ಪ್ರತಿಯೊಂದು ರಾಜತಾಂತ್ರಿಕ ಮಾರ್ಗವನ್ನು ಬಳಸಬೇಕು ’ ಎಂದಿದ್ದಾರೆ.

ಇದೇ ವೇಳೆ ಸೋನಿಯಾ ಗಾಂಧಿ ಅವರು ಇರಾನ್ ನೆಲದಲ್ಲಿ ನಡೆದ ಬಾಂಬ್ ದಾಳಿ, ನಾಗರಿಕರ ಹತ್ಯೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!