
ವಾಷಿಂಗ್ಟನ್ (ಡಿ.3): ‘ಮೆರ್‌ಕೋರ್’ ಎಂಬ ಎಐ ಸ್ಟಾರ್ಟಪ್ ಹುಟ್ಟುಹಾಕಿದ ಕನ್ನಡಿಗ ಆದರ್ಶ್ ಹಿರೇಮಠ (22) ವಿಶ್ವದ ಅತಿ ಕಿರಿಯ ಸ್ವ-ನಿರ್ಮಿತ (ಸೆಲ್ಫ್‌ಮೇಡ್) ಬಿಲಿಯನೇರ್ (1 ಶತಕೋಟಿ ಡಾಲರ್- 8800 ಕೋಟಿ ರು) ಗಳಾಗಿದ್ದಾರೆ. ಇನ್ನಿಬ್ಬರು ಸಹಸಂಸ್ಥಾಪಕರೊಂದಿಗೆ ಸೇರಿಕೊಂಡು ಈ ಸಾಧನೆ ಮಾಡಿರುವ ಹಿರೇಮಠ, 23 ವರ್ಷದಲ್ಲಿ ಈ ಪಟ್ಟ ತಮ್ಮದಾಗಿಸಿಕೊಂಡು ದಶಕಗಳ ಕಾಲ ಉಳಿಸಿಕೊಂಡಿದ್ದ ಮೆಟಾ ಸಿಇಒ ಮಾರ್ಕ್ ಜಕರ್‌ಬರ್ಗ್ ಅವರನ್ನು ಮೀರಿಸಿದ್ದಾರೆ.
ಆದರ್ಶ್ ಅಮೆರಿಕದಲ್ಲೇ ಹುಟ್ಟಿ ಬೆಳೆದವರಾದರೂ ಅವರ ಹೆತ್ತವರು ಕನ್ನಡಿಗರು. ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿರೇಮಠ, ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದರು. ಬಳಿಕ ಸ್ನೇಹಿತರಾದ ಸೂರ್ಯ ಮಿಧಾ ಮತ್ತು ಬ್ರೆಂಡನ್ ಫೂಡಿ ಅವರೊಂದಿಗೆ ಸೇರಿ ಮೆರ್‌ಕೋರ್ ಎಂಬ ಸ್ಟಾರ್ಟಪ್ ಅನ್ನು 2023ರಲ್ಲಿ ಶುರು ಮಾಡಿದ್ದರು. 9 ತಿಂಗಳಲ್ಲೇ ಈ ಕಂಪನಿ 89 ಕೋಟಿ ರು. ಆದಾಯು ಪಡೆದುಕೊಂಡಿತ್ತು. ಇನ್ನು 2025ರ ಜೂನ್‌ನಲ್ಲಿ ಮೆಟಾ ಕಂಪನಿಯು ಮೆರ್‌ಕೋರ್ ಕಂಪನಿಯಲ್ಲಿನ 1.2 ಲಕ್ಷ ಕೋಟಿ ರು. ಬೆಲೆಯ ಶೇ.49ರಷ್ಟು ಷೇರುಗಳನ್ನು ಖರೀದಿಸಿದ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಮತ್ತಷ್ಟು ಏರಿಕೆಯಾಗಿತ್ತು. ಈ ನಡುವೆ ಇತ್ತೀಚೆಗೆ ಮೆರ್‌ಕೋರ್ ತನ್ನ ಸೇವಾ ವಿಸ್ತರಣೆಗಾಗಿ ಮಾರುಕಟ್ಟೆಯಿಂದ 3 ಲಕ್ಷ ಕೋಟಿ ರು. ಬಂಡವಾಳ ಸಂಗ್ರಹಿಸಿದೆ. ಇದರ ಬಳಿಕ ಕಂಪನಿಯ ಮಾರುಕಟ್ಟೆ ಮೌಲ್ಯ ಇನ್ನಷ್ಟು ಹೆಚ್ಚಾಗಿ, ಕಂಪನಿಯ ಮೂವರೂ ಸಂಸ್ಥಾಪಕರು ಬಿಲಿಯನೇರ್‌ಗಳಾಗಿ ಹೊರಹೊಮ್ಮಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆದರ್ಶ್, ‘ಸಿಲಿಕಾನ್ ವ್ಯಾಲಿಯಲ್ಲೇ ಬೆಳೆದ ನಾನು ಚಿಕ್ಕಂದಿನಿಂದಲೇ ಟೆಕಿಗಳಿಂದ ಸುತ್ತುವರೆದಿದ್ದೆ. ಬಳಿಕ ನನ್ನ ಒಲವೂ ಪ್ರಯತ್ನಗಳೂ ಸಹಜವಾಗಿ ಅದೇ ಕ್ಷೇತ್ರದತ್ತ ಹೆಚ್ಚಿತು. ವಿದ್ಯಾಭ್ಯಾಸವನ್ನು ಬಿಡದಿದ್ದರೆ ನಾನಿನ್ನೂ ಕಾಲೇಜಿನಲ್ಲೇ ಇರುತ್ತಿದ್ದೆ. ಸಮಾನಮನಸ್ಕ ಸಹ-ಸಂಸ್ಥಾಪಕರೊಂದಿಗೆ ಸೇರಿಕೊಂಡು, ಯಾವುದೇ ಸ್ಪಷ್ಟ ಗುರಿ ಇಲ್ಲದೆ ಹೊಸ ಆವಿಷ್ಕಾರಕ್ಕೆ ಕೈ ಹಾಕಿ, ಇಂದಿದನ್ನು ಸಾಧಿಸಿದ್ದೇವೆ’ ಎಂದರು.
ಜತೆಗೆ, ಮೆರ್‌ಕೋರ್ ಭಾರತದಾದ್ಯಂತ ಕಾರ್ಯಾಚರಣೆಗಳು, ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ಹೊಂದಿದೆ ಎಂದೂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ