10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು

Published : Jun 22, 2025, 04:47 PM IST
mass grave of 19 Tamils was found in Jaffna

ಸಾರಾಂಶ

10 ತಿಂಗಳ ಹಸುಗೂಸು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಸೈನಿಕರಿಂದ ಕೊಲ್ಲಲ್ಪಟ್ಟವರ ಸಮಾಧಿ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

10 ತಿಂಗಳ ಹಸುಗೂಸು, ಮೂವರು ಮಕ್ಕಳು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆದರೆ, ಈ ಬಗ್ಗೆ ತನಿಖೆ ಕೈಗೊಳ್ಳುವುದಕ್ಕೆ ಸರ್ಕಾರ ಆಸಕ್ತಿ ತೋರದೇ, ಹಿಂದೇಟು ಹಾಕುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಶ್ರೀಲಂಕಾದಲ್ಲಿ ಎಲ್‌ಟಿಟಿಇ ವಿಷಯ ಮತ್ತೆ ಸದ್ದು ಮಾಡುತ್ತಿದೆ. ಈ ಸಲ ದೇಶದ ಮೇಲೆ ದಾಳಿ ಅಲ್ಲ, ಆಂತರಿಕ ಯುದ್ಧದ ಸಮಯದಲ್ಲಿ ಶ್ರೀಲಂಕಾ ಸೈನ್ಯ ಕೊಂದು ಹೂತಿಟ್ಟ ಮಕ್ಕಳನ್ನೂ ಒಳಗೊಂಡಂತೆ ಜನರ ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ. ಜಾಫ್ನಾ ಹೊರವಲಯದ ಸ್ಮಶಾನದಲ್ಲಿ 19 ಶವಗಳನ್ನು ಒಂದೇ ಸಮಾಧಿಯಲ್ಲಿ ಹೂತಿಟ್ಟಿರುವುದು ಪತ್ತೆಯಾಗಿದೆ. ಇದರಲ್ಲಿ 10 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವೂ ಸೇರಿದಂತೆ ಮೂರು ಮಕ್ಕಳಿದ್ದಾರೆ ಎಂದು ಅಲ್ ಜಜೀರ ವರದಿ ಮಾಡಿದೆ.

1970ರ ದಶಕದ ಕೊನೆಯಲ್ಲಿ ಶ್ರೀಲಂಕಾದಲ್ಲಿ ತಮಿಳು ಈಳಂ ವಿಮೋಚನಾ ಹುಲಿಗಳು (ಎಲ್‌ಟಿಟಿಇ) ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಶಸ್ತ್ರ ಸಂಘರ್ಷ ಆರಂಭವಾಯಿತು. 26 ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ ಎಲ್‌ಟಿಟಿಇ ವಿರುದ್ಧ ಹೋರಾಡಲು ಭಾರತೀಯ ಸೈನ್ಯವೂ ಶ್ರೀಲಂಕಾದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿತ್ತು. ಈ ಆಂತರಿಕ ಯುದ್ಧದಲ್ಲಿ 60,000 ರಿಂದ 1,00,000 ತಮಿಳರನ್ನು ಕಾಣೆಯಾಗಿದ್ದಾರೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ 2017 ರಲ್ಲಿ ವರದಿ ಮಾಡಿತ್ತು. 2009 ರಲ್ಲಿ ಯುದ್ಧದ ಕೊನೆಯ ಹಂತದಲ್ಲಿ ಸುಮಾರು 1,70,000 ಜನರು ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾದ ತಮಿಳು ಸಮುದಾಯ ಆರೋಪಿಸಿದೆ. ಆದರೆ, ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ 40,000 ಜನರು ಸಾವನ್ನಪ್ಪಿದ್ದಾರೆ.

1996 ರಲ್ಲಿ ಆಂತರಿಕ ಯುದ್ಧದ ಸಮಯದಲ್ಲಿ ಶ್ರೀಲಂಕಾ ಸೈನ್ಯವು ಕೃಶಾಂತಿ ಕುಮಾರಸ್ವಾಮಿ ಎಂಬ ಶಾಲಾ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾ*ಚಾರ ಎಸಗಿ ಕೊಲೆ ಮಾಡಿದ ನಂತರ ಜಾಫ್ನಾ ಬಳಿಯ ಚೆಮ್ಮನಿ ಗ್ರಾಮವು ಜಾಗತಿಕ ಗಮನ ಸೆಳೆಯಿತು. ನಂತರ ಕೃಶಾಂತಿ ಕುಮಾರಸ್ವಾಮಿಯವರ ತಾಯಿ, ಸಹೋದರ ಮತ್ತು ಕುಟುಂಬದ ಸ್ನೇಹಿತರ ಶವಗಳು ಇಲ್ಲಿಂದ ಪತ್ತೆಯಾಗಿವೆ. ಈ ಗ್ರಾಮದ ಸ್ಮಶಾನದ ಬಳಿಯೇ ಈಗ 19 ಜನರ ಸಾಮೂಹಿಕ ಸಮಾಧಿ ಪತ್ತೆಯಾಗಿದೆ.


ಕೃಶಾಂತಿ ಕುಮಾರಸ್ವಾಮಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಮಾಜಿ ಸೇನಾ ಕಾರ್ಪೋರಲ್ ಸೋಮರತ್ನ ರಾಜಪಕ್ಸೆ, ಚೆಮ್ಮನಿಯ ಸಾಮೂಹಿಕ ಸಮಾಧಿಗಳಲ್ಲಿ 300 ರಿಂದ 400 ಜನರನ್ನು ಕೊಂದು ಹೂತಿಟ್ಟಿದ್ದಾಗಿ ಬಹಿರಂಗಪಡಿಸಿದ್ದರು. ನಂತರ ನಡೆದ ತನಿಖೆಯಲ್ಲಿ 15 ಶವಗಳು ಪತ್ತೆಯಾಗಿವೆ. ಇದರ ನಂತರ ಕಳೆದ ದಿನ 19 ಜನರ ಸಮಾಧಿ ಪತ್ತೆಯಾಗಿದೆ. ಆದರೆ, ಮೊದಲು ಪತ್ತೆಯಾದ ಸಮಾಧಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಶ್ರೀಲಂಕಾ ಸರ್ಕಾರ ಇನ್ನೂ ಸಿದ್ಧವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಉತ್ತರ ಪ್ರಾಂತ್ಯದ ಮಾನ್ನಾರ್, ಕೊಕ್ಕುತೊಡುವಾಯ್ ಮತ್ತು ತಿರುಕೇತೀಶ್ವರಂನಲ್ಲಿ ಈ ಹಿಂದೆ ನಡೆಸಿದ ಉತ್ಖನನಗಳನ್ನು ಸರ್ಕಾರ ಮುಚ್ಚಿಟ್ಟಿದೆ ಎಂಬ ಆರೋಪವೂ ವ್ಯಾಪಕವಾಗಿದೆ. ಮಾನ್ನಾರ್‌ನ ವಾಯುವ್ಯ ಪ್ರದೇಶದಲ್ಲಿ ಅತಿ ದೊಡ್ಡ ಸಾಮೂಹಿಕ ಸಮಾಧಿ ಉತ್ಖನನ ನಡೆಸಲಾಗಿದೆ. 2018 ರಿಂದ ಪುರಾತತ್ವಶಾಸ್ತ್ರಜ್ಞ ರಾಜ್ ಸೋಮದೇವ ನೇತೃತ್ವದಲ್ಲಿ ಉತ್ಖನನ ನಡೆದಿದೆ. ಒಟ್ಟು 346 ಅಸ್ಥಿಪಂಜರಗಳು ಇಲ್ಲಿಂದ ಪತ್ತೆಯಾಗಿವೆ. 2017 ರಲ್ಲಿ ಸರ್ಕಾರ ಸ್ಥಾಪಿಸಿದ ನ್ಯಾಯ ಸಚಿವಾಲಯ ಮತ್ತು ಕಾಣೆಯಾದವರ ಕಚೇರಿ ಜಂಟಿಯಾಗಿ ಉತ್ಖನನವನ್ನು ಮೇಲ್ವಿಚಾರಣೆ ಮಾಡುತ್ತಿದ್ದರೂ, ಸರ್ಕಾರದಿಂದ ಆರ್ಥಿಕ ನೆರವು ಸೇರಿದಂತೆ ಹಲವು ವಿಷಯಗಳಲ್ಲಿ ಸಹಕಾರ ಸಿಗುತ್ತಿಲ್ಲ ಎಂದು ರಾಜ್ ಸೋಮದೇವ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!