ಗೂಗಲ್‌ನಲ್ಲಿ ಇದೀಗ ಹಲವು ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಲು ಸರ್ಚ್ ಮಾಡುತ್ತಿದ್ದಾರೆ. ಹೀಗೆ ಸರ್ಚ್ ಮಾಡುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಇದಕ್ಕೆ ಕಾರಣವೇನು ಗೊತ್ತಾ?
ನವದೆಹಲಿ(ಜ.11) ಸೋಶಿಯಲ್ ಮೀಡಿಯಾ ಖಾತೆಗಳ ಪೈಕಿ ಬಹುತೇಕರು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದಾರೆ. ಇವೆರಡು ಅತ್ಯಂತ ಜನಪ್ರಿಯ ಹಾಗೂ ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಅವಶ್ಯಕ ಜೊತೆಗಾರನಾಗಿದೆ. ಇದರ ಜೊತೆಗೆ ಇತ್ತೀಚೆಗೆ ಮೆಟಾ ಮಾಲೀಕತ್ವದ ಥ್ರೆಡ್ಸ್ ಕೂಡ ಸೇರಿಕೊಂಡಿದೆ. ಆದರೆ ಇದೀಗ ಹಲವರು ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಥ್ರೆಡ್ಸ್ ಖಾತೆಗಳನ್ನು ಡಿಲೀಟ್ ಮಾಡಲು ಬಯಸುತ್ತಿದ್ದಾರೆ. ಇದಕ್ಕಾಗಿ ಖಾತೆಗಳನ್ನು ಹೇಗೆ ಡಿಲೀಟ್ ಮಾಡಬೇಕು, ಪ್ರಕ್ರಿಯೆ ಏನು ಅನ್ನೋದನ್ನು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಏಕಾಏಕಿ ಈ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣವೇನು?
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಥ್ರೆಡ್ಸ್ ಖಾತೆಗಳನ್ನು ಜನರು ಡಿಲೀಟ್‌ಗೆ ಮುಂದಾಗಲು ಮುಖ್ಯ ಕಾರಣ ಇತ್ತೀಚೆಗೆ ಮಾರ್ಕ್ ಜುಕರ್‌ಬರ್ಗ್ ಮೆಟಾ ಮಾಡಿದ ಘೋಷಣೆ. ಮೆಟಾ ಇತ್ತೀಚೆಗೆ ಥರ್ಡ್ ಪಾರ್ಟಿ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆಯನ್ನು ಅಂತ್ಯಗೊಳಿಸಿದೆ. ಇದರ ಜೊತೆಗೆ ರಾಜಕೀಯ ವಿಷಯಗಳು, ರಾಜಕೀಯ ಪ್ರೇರಿತ ವಿಷಯಗಳು ಸೇರಿದಂತೆ ಎಲ್ಲಾ ರಾಜಕೀಯ ಸಂಬಂಧಿಸಿದ ವಿಷಯಗಳ ಮೇಲೆ ಹಲವು ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧವನ್ನೂ ತೆರವು ಗೊಳಿಸಲಾಗಿದೆ. ಕಂಟೆಂಟ್ ಮಾಡರೇಶನ್ ಪಾಲಿಸಿಯಲ್ಲಿ ಮಾಡಿರುವ ಮಹತ್ವದ ಬದಲಾವಣೆ ಇದೀಗ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಥ್ರೆಡ್ಸ್ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.
ಸೋಶಿಯಲ್ ಮೀಡಿಯಾ ಖಾತೆಗಳನ್ನು ಬಳಸುವ ಬಹುತೇಕರು ಇದೀಗ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ, ಜನರನ್ನು ಮೋಸ ಮಾಡುವ, ಉದ್ದೇಶಪೂರ್ವಕ ತಪ್ಪು ದಾರಿಗೆಳೆಯುವ ಮಾಹಿತಿ, ದ್ವೇಷಪೂರಿತ ಭಾಷಣ, ಪ್ರಚೋದನಕಾರಿ ಭಾಷಣಗಳು ಹೆಚ್ಚಾಗಲಿದೆ. ಇದು ಬಳಕೆದಾರರ ಸುರಕ್ಷತೆಗೂ ಅಪಾಯ ತಂದೊಡ್ಡಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೆಟಾ ಸತ್ಯಾಸತ್ಯತೆ ಪರಿಶೀಲನೆ ಮಾಡುತ್ತಿದ್ದ ಥರ್ಟ್ ಪಾರ್ಟಿ ವ್ಯವಸ್ಥೆ ಅಂತ್ಯಗೊಳಿಸಿದ ಕಾರಣ ಇದೀಗ ಯಾವುದೇ ತಪ್ಪು ಮಾಹಿತಿಗಳು ನಿಜ ಎಂದು ಬಿಂಬಿಸುವ ರೀತಿಯಲ್ಲಿ ಹರಿದಾಡುತ್ತದೆ. ಇದು ಬಳಕೆದಾರನಿಗೆ ಅತೀವ ಸಮಸ್ಯೆ ತಂದೊಡ್ಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೆಟಾ ಮಾಡಿದ ಈ ಘೋಷಣೆಯಿಂದ ಇದೀಗ ಜನರು ಗೂಗಲ್ ಮೂಲಕ ಈ ಖಾತೆಗಳನ್ನು ಡೀಲಿಟ್ ಮಾಡುವ ಪ್ರಕ್ರಿಯೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಗೂಗಲ್ ಟ್ರೆಂಡ್ಸ್‌ನಲ್ಲಿ ಹೌ ಟು ಪರ್ಮನೆಂಟ್ಲಿ ಡಿಲೀಟ್ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್( ಶಾಶ್ವತವಾಗಿ ಫೇಸ್‌ಬುಕ್ ಸೇರಿ ಇತರ ಖಾತೆ ಡಿಲೀಟ್ ಮಾಡುವುದು ಹೇಗೆ)ಎಂದು ಹುಡುಕುತ್ತಿದ್ದಾರೆ. ಈ ಸಂಖ್ಯೆ ಬರೋಬ್ಬರಿ ಶೇಕಜಾ 5000ದಷ್ಟು ಹೆಚ್ಚಾಗಿದೆ. ಇದೀಗ ಜನರು ಫೇಸ್‌ಬುಕ್ ಸೇರಿದಂತೆ ಮೆಟಾದ ಸೋಶಿಯಲ್ ಮೀಡಿಯಾ ಖಾತೆಗಳಿಂದ ದೂರ ಸರಿಯುತ್ತಿದ್ದಾರೆ.
ಒಂದಷ್ಟು ಬಳಕೆದಾರರು ಮೆಟಾಗೆ ಮಹತ್ವದ ಸಲಹೆ ನೀಡಿದ್ದಾರೆ. ಫ್ಯಾಕ್ಟ್ ಚೆಕಿಂಗ್ ಅಂತ್ಯಗೊಳಿಸಿರುವುದು ಉತ್ತಮ ನಿರ್ಧಾರವಲ್ಲ ಎಂದಿದ್ದಾರೆ. ಇದೇ ವೇಳೆ ಥರ್ಡ್ ಪಾರ್ಟಿ ವ್ಯವಸ್ಥೆ ಅಂತ್ಯಗೊಳಿಸಲಾಗಿದೆ. ಆದರೆ ಇದೇ ಜಾಗದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಸಿ ಫ್ಯಾಕ್ಟ್ ಚೆಕಿಂಗ್ ವ್ಯವಸ್ಥೆ ಜಾರಿ ಮಾಡುವಂತೆ ಸಲಹೆ ನೀಡಿದ್ದಾರೆ. ಇಲ್ಲಿದಿದ್ದರೆ ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್‌ಬರ್ಗ್ ಹಾಗೂ ಮೋಸದ, ತಪ್ಪು ಮಾಹಿತಿಯ ಪೋಸ್ಟ್ ಹಾಕುವ ಜನ ಮಾತ್ರ ಉಳಿದುಕೊಳ್ಳಲಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
AI ಮೂಲಕ ಒಂದಷ್ಟು ಕ್ರಮಗಳನ್ನು ಕೈಗೊಳ್ಳಬಹುದು. ಅಥವಾ ಮೆಟಾ ತನ್ನದೇ ಫ್ಯಾಕ್ಟ್ ಚೆಕಿಂಗ್, ತಪ್ಪು ಮಾಹಿತಿಯನ್ನು ನಿಯಂತ್ರಿಸವು ತಂಡವನ್ನು ನೇಮಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ಸದ್ಯ ಮೆಟಾ ಸಂಕಷ್ಟಕ್ಕೆ ಸಿಲುಕಿದೆ. ಸೋಶಿಯಲ್ ಮೀಡಿಯಾ ಬಳಕೆಯಿಂದ ಜನ ದೂರ ಸರಿಯುತ್ತಿದ್ದಾರೆ. ಇದರ ನಡುವೆ ಈ ಬೆಳವಣಿಗೆ ಮೆಟಾದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ.