ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ?

By Suvarna NewsFirst Published May 27, 2021, 2:46 PM IST
Highlights

ಸೋಷಿಯಲ್ ಮೀಡಿಯಾಗಳ ಮೇಲೆ ನಿಯಂತ್ರಣ ಸಾಧಿಸಲು ಅನುಕೂಲವಾಗುವ ಕೇಂದ್ರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಬಳಕೆದಾರರ ಖಾಸಗಿ ಹಕ್ಕನ್ನು ಉಲ್ಲಂಘಿಸುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಣೆ ನೀಡಿದೆ. ಆದರೆ, ವಾಟ್ಸಾಪ್ ಸೇರಿದಂತೆ ಕೆಲವು ಸೋಷಿಯಲ್ ಮೀಡಿಯಾಗಳು ಖಾಸಗಿ ಹಕ್ಕಿಗೆ ಭಂಗ ಬರಲಿದೆ ಎಂದು ವಾದ ಮಾಡುತ್ತಿವೆ.

ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮಾವಳಿಗಳ ವಿರುದ್ಧ ವಾಟ್ಸಾಪ್‌ ಹೈಕೋರ್ಟ್ ಮೆಟ್ಟಿಲೇರಿದೆ. ಆ ಮೂಲಕ ಸೋಷಿಯಲ್ ಮೀಡಿಯಾ ಮತ್ತು ಕೇಂದ್ರ ಸರ್ಕಾರದ ನಡುವಿನ ಹಗ್ಗ-ಜಗ್ಗಾಟ ಜೋರಾಗಿದೆ. ಇದರ ಮಧ್ಯೆಯೇ, ಕೇಂದ್ರ ಸರ್ಕಾರದ ಹೊಸ ನಿಯಮಗಳಿಂದ ಬಳಕೆದಾರರ ಖಾಸಗಿ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಖಾಸಗಿತನ ನೀತಿ ಕೈಬಿಡಿ: ವಾಟ್ಸಾಪ್‌ಗೆ ಕೇಂದ್ರ ತಾಕೀತು!

ಕೇಂದ್ರ ಸರ್ಕಾರವು ಈ ಬಗ್ಗೆ ಹೇಳಿಕೆ ನೀಡಿದ್ದು, ಬಳಕೆದಾರರ ಖಾಸಗಿ ಹಕ್ಕನ್ನು ಸರ್ಕಾರವು ಗೌರವಿಸುತ್ತದೆ. ಸಾರ್ವಜನಿಕ ವ್ಯಸವ್ಥೆ ಮತ್ತು ದೇಶದ ಸೌರ್ವಭೌಮತ್ವಕ್ಕೆ ಗಂಭೀರವಾಗಿ ಸವಾಲೊಡ್ಡುವ ಪ್ರಕರಣಗಳ ತನಿಖೆಗೆ ಅನುಕೂಲವಾಗುವಂಥ ಸಂದೇಶಗಳ ಮೂಲವನ್ನು ಹುಡುಕುವುದು ಈ ಹೊಸ ನಿಯಮಗಳ ಅನ್ವಯ ಕಡ್ಡಾಯವಾಗಲಿದೆ ಎಂದು ಹೇಳಿದೆ. ಐಟಿ ನಿಯಮಗಳು ಜಾರಿಗೆ ಬರುವುದನ್ನು ತಡೆಯಲು ಕೊನೆ ಕ್ಷಣದಲ್ಲಿ ವಾಟ್ಸಾಪ್‌ ಹೈಕೋರ್ಟ್ ಮೊರೆ ಹೋಗಿರುವುದು ದುರದೃಷ್ಟಕರ ಎಂದು ಐಟಿ ಸಚಿವಾಲಯವು ಹೇಳಿದೆ.

ಕೇಂದ್ರ ಸರ್ಕಾರವು ಈಗ ಜಾರಿಗೆ ತಂದಿರುವ ನಿಯಮಗಳೇನೂ ಹೊಸದಲ್ಲ. ಈಗಾಗಲೇ ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾಗಳಲ್ಲಿ ಇಂಥ ನಿಯಮಗಳು ಜಾರಿಯಲ್ಲಿದ್ದು, ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ಕಂಪನಿಗಳು ನೆರವು ನೀಡುತ್ತವೆ. ಈಗ ಜಾರಿಗೆ ತಂದಿರುವ ಐಟಿ ನಿಯಮಗಳು ಈ ದೇಶಗಳಲ್ಲಿ ಜಾರಿಯಲ್ಲಿರುವ ನಿಯಮಗಳಿಗೆ ಹೋಲಿಸಿದರೆ ತೀರಾ ಕಠಿಣವಲ್ಲ ಎಂದು ಸಚಿವಾಲಯ ಅಭಿಪ್ರಾಪಟ್ಟಿದೆ.

ಹಾಗಾಗಿ ಭಾರತದ ಇಂಟರ್‌ಮಿಡಿಯರಿ ಗೈಡ್‌ಲೈನ್ಸ್‌ ಖಾಸಗಿ ಹಕ್ಕಿನ ವಿರುದ್ಧವಾಗಿದೆ ಎಂದು ಚಿತ್ರಿಸುತ್ತಿರುವ ವಾಟ್ಸಾಪ್‌ ಪ್ರಯತ್ನಗಳು ತಪ್ಪು ಕಲ್ಪನೆಗಳಿಂದ ಕೂಡಿವೆ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ಸಚಿವಾಲಯವು ತಿಳಿಸಿದೆ. ಖಾಸಗಿ ಹಕ್ಕು ಮೂಲಭೂತ ಹಕ್ಕು ಎಂದು ಸರ್ಕಾರವು ಮಾನ್ಯ ಮಾಡುತ್ತದೆ. ಮತ್ತು ತನ್ನ ನಾಗರಿಕರ ಈ ಹಕ್ಕಿನ ರಕ್ಷಣೆಗೆ ಬದ್ಧವಾಗಿದೆ ಎಂದೂ ಹೇಳಿದೆ.

ನೋಟಿಸ್ ನೀಡಿದ ಕೇಂದ್ರ ಸರ್ಕಾರ
ಬುಧವಾರದಿಂದಲೇ ಜಾರಿಯಾಗಿರುವ ಹೊಸ ಐಟಿ ಕಾಯ್ದೆ ಪಾಲನೆ ಕುರಿತು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ತಕ್ಷಣವೇ ಸ್ಥಿತಿಗತಿಯ ಬಗ್ಗೆ ವರದಿ ನೀಡುವಂತೆ ಸೋಷಿಯಲ್ ಮೀಡಿಯಾಗಳಿಗೆ, ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೇಂದ್ರದ ಹೊಸ ಐಟಿ ನಿಯಮದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ Whatsapp!

ಯಾವುದೇ ವಿಷಯ ಇತ್ಯರ್ಥಕ್ಕೆ ನೇಮಕವಾಗಿರುವ ನೋಡಲ್ ಸಂಪರ್ಕದ ವ್ಯಕ್ತಿ, ಸಮಸ್ಯೆ ಇತ್ಯರ್ಥದ ಅಧಿಕಾರಿ, ಮುಖ್ಯ ಅನುಸರಣೆ ಅಧಿಕಾರಿಯ ಸಂಪರ್ಕದ ಮಾಹಿತಿ ಸಲ್ಲಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಕೋರಿದೆ.

ಒಂದು ವೇಳೆ ನೂತನ ನಿಯಮಗಳನ್ನು ಜಾರಿಗೊಳಿಸದೇ ಇದ್ದರೆ ನಿಮ್ಮ ಸಂಸ್ಥೆ ಭಾರತದಲ್ಲಿ ನೀಡುತ್ತಿರುವ ಸೇವೆ ಮತ್ತು ನೂತನ ಕಾನೂನು ಜಾರಿ ಏಕೆ ಸಾಧ್ಯವಾಗಿಲ್ಲ ಎಂಬ ವಿವರಣೆ ನೀಡುವಂತೆಯೂ ಹೇಳಿದೆ. ಜೊತೆಗೆ, ನಿಮ್ಮಿಂದ ಹೆಚ್ಚುವರಿ ಮಾಹಿತಿ ಪಡೆಯಲು ನೂತನ ಕಾನೂನಿನ ಅಡಿ ಅವಕಾಶವಿದೆ ಎಂದು ಸೋಷಿಯಲ್ ಮೀಡಿಯಾ ಕಂಪನಿಗಳಿಗೆ  ಕೇಂದ್ರ ಸರ್ಕಾರವು ಎಚ್ಚರಿಕೆಯ ರೂಪದ ಸಂದೇಶವನ್ನು ರವಾನಿಸಿದೆ.

ಸಾಮಾಜಿಕ ಜಾಲತಾಣಗಳ ಮೇಲಿನ ಸರ್ಕಾರದ ನಿರ್ಬಂಧ ಹೇರುವ ಹೊಸ ನಿಯಮಾವಳಿಯು ಬುಧವಾರದಿಂದಲೇ  ಜಾರಿಗೆ ಬಂದಿದೆ. ಹೀಗಾಗಿ ಫೇಸ್‌ಬುಕ್, ಟ್ವಿಟರ್, ಇನ್ಸಾಟಾಗ್ರಾಮ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಒಂದು ವೇಳೆ ಈ ನಿಯಮಗಳನ್ನು ಜಾರಿಗೊಳಿಸದಿದ್ದರೆ ಅಂಥ ಸೋಷಿಯಲ್ ಮೀಡಿಯಾಗಳ ಸೇವೆಯನ್ನು ತಡೆ ಹಿಡಿಯುವ ಅಧಿಕಾರಿ ಕೇಂದ್ರ ಸರ್ಕಾರಕ್ಕಿದೆ.

ಮತ್ತೊಂದು ವಾರ್ನಿಂಗ್; ಟ್ವಿಟರ್, ಫೇಸ್ ಬುಕ್‌ಗೆ ಕೊನೆ ಮೊಳೆ?

ಇದರ ಮಧ್ಯೆಯೇ, ಕೇಂದ್ರ ಹೊಸ ನಿಯಮಗಳನ್ನು ಪ್ರಶ್ನಿಸಿ ವಾಟ್ಸಾಪ್ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ನಿಯಮಾವಳಿಗಳ ಜಾರಿಗೆ ಕಗ್ಗಾಂಟಾಗಿದೆ. ಏತನ್ಮಧ್ಯೆ, ಕೇಂದ್ರ ಸರ್ಕಾರದ ನಿಯಮಗಳ ವಿರುದ್ಧ ಪರ, ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

 

click me!