ವೈದೇಹಿ ಕಂಡಂತೆ ಮಹಿಳಾ ಸಾಹಿತ್ಯ ಜಗತ್ತು ಬದಲಾಗಿದೆಯಾ?

By Kannadaprabha News  |  First Published Nov 25, 2019, 4:22 PM IST

ಯುವಜನರಲ್ಲಿ ಸಿಟ್ಟೇ ಪ್ರಧಾನವಾಗಿದ್ದರೆ ಸಾಲದು. ಅವರ ಸಿಟ್ಟು ಸೃಜನಶೀಲತೆಯ ರೂಪ ತಾಳಿ ಅರಿವಿನ ಕಣ್ಣು ತೆರೆಸುವಂತಿರಬೇಕು. ಅಂತಹ ಸಾಹಿತ್ಯ ಬಂದಿರುವುದು ಕಡಿಮೆ ಎನಿಸುತ್ತದೆ. ಮತ್ತೊಂದು ವಿಚಾರವೆಂದರೆ ಈಗಿನವರಿಗೆ ಡಿಜಿಟಲ್ ಲೋಕವನ್ನುಎದುರಿಸುವ ಸವಾಲು ಇದ್ದೇ ಇದೆ- ವೈದೇಹಿ 


ಕನ್ನಡ ಸಾಹಿತ್ಯ ಲೋಕದ ಖ್ಯಾತ ಬರಹಗಾರ್ತಿ ವೈದೇಹಿ ಅವರಿಗೆ 75 ರ ಸಂಭ್ರಮ. ಈ ಸಂದರ್ಭದಲ್ಲಿ ಅವರ ಬಗ್ಗೆ ಗೌರವ ಗ್ರಂಥವೊಂದು ಹೊರ ಬರಲಿದೆ. ಕನ್ನಡ ಸಾಹಿತ್ಯ ಲೋಕದ ಬಗ್ಗೆ ವೈದೇಹಿ ಆಡಿರುವ ಮಾತುಗಳಿವು. 

ನಿಮ್ಮ ಬರಹಲೋಕದ ಬಗ್ಗೆ ಹೇಳುತ್ತೀರಾ?

Tap to resize

Latest Videos

undefined

ಚಿಕ್ಕಂದಿನಲ್ಲಿಊರಿನ ಹೆಂಗಸರು ಮನೆಗೆ ಬಂದಾಗ ಎಷ್ಟೊಂದು ಕಷ್ಟಗಳನ್ನು, ಸುಖಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದ್ದರು! ಆ ಆಪ್ತತೆಯೇ ನನ್ನಲ್ಲಿಒಂದುಅಚ್ಚರಿಯನ್ನು ಮೂಡಿಸಿತ್ತು. ಅಮ್ಮನ ಮಾತುಗಳೂ ಹಾಗೆಯೇ. ಬಹಳ ಚುರುಕಾಗಿ ಇರುತ್ತಿದ್ದವು. ಬದುಕಿನ ಏಳುಬೀಳು, ಕಷ್ಟ ಸುಖ, ಒಳಿತು ಕೆಡುಕುಗಳ ಬಗ್ಗೆ ಪ್ರತಿಯೊಬ್ಬರಲ್ಲಿಯೂ ತಮ್ಮದೇ ಆದ ಅನಿಸಿಕೆ, ಧೋರಣೆಗಳು ಇರುತ್ತಿದ್ದವು. ಬದುಕನ್ನು ಪ್ರತಿಯೊಬ್ಬರೂ ನೋಡುವ ನೋಟಗಳು ಬೇರೆ ಬೇರೆಯೇಆಗಿರುತ್ತದಲ್ಲ!

ಶೈನ್ ಜತೆ ಲವ್ವಿತ್ತಾ? ‘ಛೇ..ಆ ಪದ ಬಳಸಬಾರ್ದಿತ್ತು’ ಅರ್ಥವೇ ಆಗದ ಹುಡುಗಿ ಚೈತ್ರಾ ಕೊಟೂರು

ಚಾವಡಿಯಲ್ಲಿ ಗಂಡಸರಿದ್ದಾಗ ಹೆಂಗಸರು ಅಲ್ಲಿಗೆ ಹೋಗುತ್ತಿರಲಿಲ್ಲ. ಚಾವಡಿ ಅಂತಲ್ಲ, ಗಂಡಸರೆಲ್ಲಾ ಸೇರಿ ಚರ್ಚಿಸುವ ಜಾಗಗಳಿಗೆಲ್ಲ ಹೆಂಗಸರು ಹೋಗುವ ರೂಢಿ ಆಗೆಲ್ಲಾ ಇರಲಿಲ್ಲ. ಆದ್ದರಿಂದ ಹೆಂಗಸರ ಬದುಕಿನ ಕತೆಗಳೇನಿದ್ದರೂ, ಹಿತ್ತಲ ಬಾಗಿಲಿನಲ್ಲೋ, ಜಗಲಿಯಲ್ಲೋ, ಮನೆಯ ನಡುಒಳಗೆ, ಅಥವಾ ಅಡುಗೆ ಮನೆಯಲ್ಲಿಯೋ ಅನಾವರಣಗೊಳ್ಳುತ್ತಿದ್ದವು. ಬದುಕಿನ ನೈಜತೆಯೇ ಅಲ್ಲಿ ಅನಾವರಣವಾಗುತ್ತಿತ್ತು ಎನ್ನಬಹುದು. ಅಂದಿನ ಆ ವಾತಾವರಣ ನನ್ನನ್ನು ಬಹುವಾಗಿ ಕಾಡಿದ್ದರಿಂದಲೊ ಏನೋ, ವ್ಯಾನಿಟಿ ಬ್ಯಾಗ್, ರಸಂ ಎಂಬ ರೂಪಕಗಳು ನನ್ನಿಂದ ಮೂಡಿಬಂದಿರಬಹುದು.ಅನೇಕ ಕತೆ, ಕವನಗಳು ಹುಟ್ಟಿಕೊಂಡವು.

ಇಷ್ಟೇ ಅಂತಲ್ಲ, ಇದರೊಂದಿಗೆ ಎಂ.ಕೆ.ಇಂದಿರಾ, ಶಿವರಾಮ ಕಾರಂತರು, ತ್ರಿವೇಣಿ, ಅನುಪಮ ನಿರಂಜನ ಮುಂತಾದವರ ಬರಹಗಳನ್ನು ಓದುತ್ತಿದ್ದೆ. ತಂದೆಯ ಮನೆಯಲ್ಲಿ ಪುಸ್ತಕಗಳ ಬೃಹತ್ ಸಂಗ್ರಹವೇ ಇತ್ತು. ಹಾಗಾಗಿ ನನ್ನ ಯೋಚನೆಗಳು, ಗ್ರಹಿಕೆಗಳು ಸಾಹಿತ್ಯಿಕ ರೂಪು ಪಡೆಯುತ್ತಿದ್ದವೇನೋ. ನಾನು ಬರೆದ ಕತೆಗಳಿಗೆಲ್ಲ ನಮ್ಮ ಮನೆಯ ಹಿತ್ತಿಲಿನಲ್ಲಿ ನಮ್ಮಮ್ಮ ಆಲಿಸುತ್ತಿದ್ದ ಕಷ್ಟ ಸುಖಗಳ ಎಳೆಯೇ ಪ್ರೇರಣೆ ಎಂದರೆ ತಪ್ಪಲ್ಲ. ಕತೆಗಳಲ್ಲಿ ಪಾತ್ರಗಳು ಕುಂದಾಪುರ ಕನ್ನಡದಲ್ಲೂ ಮಾತನಾಡುತ್ತವೆ. ಆದರೆ ಹಿತ್ತಿಲಿನಲ್ಲಿ ಕೇಳುವ ಈ ಮೆಲುಧ್ವನಿಯ ಕತೆಗಳು ಇಡೀ ಮಹಿಳಾ ಲೋಕದ ಕತೆಗಳೇ ಆಗಿವೆ. ಮಹಿಳೆಯರ ಲೋಕವೇ ಹಾಗೆಯೇ.. ಬಗೆದಷ್ಟೂ ಬದುಕಿನ ಭಾವಗಳು ಅನಾವರಣಗೊಳ್ಳುತ್ತ ಹೋಗುತ್ತವೆ.

 ಕತೆ, ಕವನ, ಮಕ್ಕಳ ನಾಟಕಗಳು..ಯಾವುದಿಷ್ಟ ?

ನನಗೆ ಬರವಣಿಗೆಯೇ ಇಷ್ಟವೆನಿಸುತ್ತದೆ. ಕತೆ ನಾನು ಚಿಕ್ಕಂದಿನಲ್ಲಿ ಇಷ್ಟಪಟ್ಟು ಆಲಿಸುತ್ತಿದ್ದ ಪ್ರಕಾರ. ನನ್ನ ದಿನನಿತ್ಯದ ಜಂಜಾಟದ ಮಧ್ಯೆ ಹಲವಾರು ಪಾತ್ರಗಳು ಹಾದು ಹೋಗುತ್ತಿರುತ್ತವೆ. ಕತೆಗಳ ಪಾತ್ರಗಳು ನನ್ನಲ್ಲಿ ಮಾತನಾಡಲು ತೊಡಗಿದಾಗ ಬಹುಶಃ ನಾನು ಬರೆಯಲುತೊಡಗಿದೆ. ಕವನಗಳೂ ನನಗಿಷ್ಟ. ಅವುಗಳ ನಡುವೆ ಹೆಚ್ಚೇನೂ ಭೇದ ಕಾಣಿಸುವುದಿಲ್ಲ. ಕವನಗಳು ಅಂತರಂಗದ ಧ್ವನಿಯಾಗಿಯೂ ಹೊಮ್ಮುವುದು. ಮಕ್ಕಳ ಸಾಹಿತ್ಯಇಂದು ಬಹಳ ಸವಾಲಿನ ಪ್ರಕಾರ ಎನಿಸಬಹುದು.ಆದರೆ ಜಗತ್ತು ಎಷ್ಟೇ ಬದಲಾದರೂ ಮಕ್ಕಳು ಮಕ್ಕಳೇ ಅಲ್ಲವೇ. ಇತ್ತೀಚೆಗೆ ಪ್ರದರ್ಶನಗೊಂಡ ಮಕ್ಕಳ ನಾಟಕ ನೋಡಲು ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಅಲ್ಲಿಗೆ ಬಂದಿದ್ದರು.

ಕಂಗಳು ಕಂಡ ಕನಸುಗಳು: ಚೈತ್ರಾ ವಾಸುದೇವನ್ ಬಿಗ್ ಬಾಸ್ ಅನುಭವಗಳು!

ಹಾಗಂತ ನಾಟಕದಲ್ಲಿ ಕಂಪ್ಯೂಟರ್, ಮೊಬೈಲ್‌ಗಳ ಉಲ್ಲೇಖವೇನೂ ಇರಲಿಲ್ಲ. ಆದರೂ ಮಕ್ಕಳು ಇಷ್ಟಪಟ್ಟು ನೋಡಿದರಲ್ಲ! ಇವತ್ತಿಗೂ ‘ನಾಟಕ ನೋಡಿ ಮಕ್ಕಳೇ’ ಅಂತ ಹೆತ್ತವರು ಕಳುಹಿಸಿದರೆ, ಮಕ್ಕಳು ಬಂದೇ ಬರುತ್ತಾರೆ. ಅಂದರೆ ಮಕ್ಕಳ ಮನಸ್ಸು ಬದಲಾಗಿಲ್ಲ. ಅವರಿಗೆ ಮಾರ್ಗದರ್ಶನ ಮಾಡುವವರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ.  ಮಕ್ಕಳ ಮೇಲೆ ದೊಡ್ಡವರು ಹೇರುವ ಒತ್ತಡವೇ ಹೆಚ್ಚಾಗುತ್ತಿದೆಯೇನೋ.ಕಾರ್ಟೂನ್ ಲೋಕ ಸೃಷ್ಟಿಯಾದ ಬಳಿಕ ಆ ನಿಟ್ಟಿನಲ್ಲಿ ಬರೆಯುವವರು ಕಡಿಮೆಯಾದರೇನೋ. ಆದರೆ ಇತ್ತೀಚೆಗೆ ಮಕ್ಕಳ ಸಾಹಿತ್ಯಕ್ಷೇತ್ರದಲ್ಲಿ ಹಲವರು ಲವಲವಿಕೆಯಿಂದ ಬರೆಯುವವರಿದ್ದಾರೆ. ಅದು ಸಂತೋಷದ ವಿಷಯ.

ಹೊಸತಲೆಮಾರಿನ ಸಾಹಿತ್ಯದ ಬಗ್ಗೆ ನಿಮಗೆ ಏನನಿಸುತ್ತದೆ ?

ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹೊಸ ತಲೆಮಾರಿನವರಿಗೆ ಹಲವಾರು ಸವಾಲುಗಳು ಇವೆ. ಜಗತ್ತು ನಿರಂತರ ಬದಲಾಗುತ್ತಲೇ ಇದೆ. ಆದರೆ ಹಿಂದೆಲ್ಲ ಬದಲಾವಣೆಯ ಗತಿ ಸ್ವಲ್ಪ ನಿಧಾನವಾಗಿತ್ತು. ಇಂದು ವೇಗವಾದ ಓಟದಲ್ಲಿ ಅವರು ಎಲ್ಲವನ್ನೂ ಸಂಭಾಳಿಸಬೇಕಾಗಿದೆ. ಈ ಹೊಸ ಪ್ರಪಂಚದಲ್ಲಿ ಅವರು ಸೃಜನಶೀಲತೆಗೆ ಹೆಚ್ಚು ಒತ್ತುಕೊಟ್ಟು ಬರವಣಿಗೆ ಮಾಡಲು ಕಷ್ಟಪಡಬೇಕಾಗುತ್ತದೆ. ಯುವಜನರಲ್ಲಿ ಸಿಟ್ಟೇ ಪ್ರಧಾನವಾಗಿದ್ದರೆ ಸಾಲದು.

ಅವರ ಸಿಟ್ಟು ಸೃಜನಶೀಲತೆಯ ರೂಪ ತಾಳಿ ಅರಿವಿನ ಕಣ್ಣು ತೆರೆಸುವಂತಿರಬೇಕು. ಅಂತಹ ಸಾಹಿತ್ಯ ಬಂದಿರುವುದು ಕಡಿಮೆ ಎನಿಸುತ್ತದೆ. ಮತ್ತೊಂದು ವಿಚಾರವೆಂದರೆ ಈಗಿನವರಿಗೆ ಡಿಜಿಟಲ್ ಲೋಕವನ್ನುಎದುರಿಸುವ ಸವಾಲು ಇದ್ದೇ ಇದೆ. ನಾವೂ ದೈನಂದಿನ ಬದುಕಿನಲ್ಲಿ ಅಂತಹ ಸವಾಲುಗಳನ್ನು ಎದುರಿಸಿದ್ದೆವು. ಆದರೆ ಸೃಜನಶೀಲತೆಯ ವಿಚಾರಕ್ಕೆ ಬಂದಾಗ ನವಮಾಧ್ಯಮಗಳು ಒಡ್ಡುವ ಸವಾಲು ತೀವ್ರತರವಾಗಿದೆ ಎಂದು ಅನಿಸುತ್ತದೆ.

- ಸ್ವಯಂಪ್ರಭ 

 

click me!