
ಇಂದು ಮನೆಗೆ ಯಾವುದಾದರೂ ಆಹಾರ ಸಾಮಾಗ್ರಿ ಬೇಕಾದ್ರೆ ಮೊಬೈಲ್ ಹಿಡಿದು ಆರ್ಡರ ಮಾಡುತ್ತಾರೆ. 10 ರಿಂದ 15 ನಿಮಿಷದಲ್ಲಿ ನಿಮಗೆ ಬೇಕಿರುವ ವಸ್ತು ಮನೆ ಬಾಗಿಲು ಬಳಿ ಬಂದಿರುತ್ತದೆ. ಇಂದಿನ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂದ್ರೆ ಒಗ್ಗರಣೆಗೆ ಒಲೆ ಆನ್ ಮಾಡಿ ಸಾಸಿವೆ, ಜೀರಿಗೆ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಈ ವ್ಯವಸ್ಥೆಯಿಂದ ಸಮಯ ಉಳಿತಾಯದ ಜೊತೆಯಲ್ಲಿ ಜೇಬು ಸಹ ಖಾಲಿಯಾಗುತ್ತದೆ. ಸುಮಾರು 20 ರಿಂದ 25 ವರ್ಷಗಳ ಹಿಂದೆ ಚೀಟಿ ಮಾಡಿಕೊಂಡು ಹೋಗಿ ಒಂದು ವಾರಕ್ಕೆ ಅಥವಾ ತಿಂಗಳಿಗೆ ಬೇಕಾಗುವ ಸಾಮಾಗ್ರಿಗಳನ್ನು ಒಂದೇ ಬಾರಿ ತೆಗೆದುಕೊಂಡು ಬರಲಾಗುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಚೀಟಿ ಮಾಡಿಕೊಂಡು ಕಿರಾಣಿ ಅಂಗಡಿಗೆ ಹೋಗುವುದು ಕಡಿಮೆಯಾಗುತ್ತಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 1962ರ ಕಿರಾಣಿ ಅಂಗಡಿಯ ರಶೀದಿ ವೈರಲ್ ಆಗುತ್ತಿದೆ. ಈ ಬಿಲ್ ನೋಡಿದ ಜನರು ದರಗಳು ಇಷ್ಟು ಕಡಿಮೆ ಇತ್ತಾ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಈಗಿನ ಬೆಲೆಗೂ 1962ರ ಬೆಲೆಗೂ ಹೆಚ್ಚು ಕಮ್ಮಿ 300ಪಟ್ಟು ಬೆಲೆ ಹೆಚ್ಚಳವಾಗಿದೆ. ಅಬ್ಬಾ ಇಷ್ಟು ಕಡಿಮೆ ಬೆಲೆಗಳು. ಕನಸಿನಲ್ಲೂ ಊಹಿಸಲು ಅಸಾಧ್ಯ. ಮೊದಲಿನ ದಿನಗಳು ವಾಪಾಸ್ ಬರಲಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಮಲ್ಲಿಕಾರ್ಜುನ್ ಮೇಟಿ (Mallikarjun Meti) ಎಂಬವರು ಫೇಸ್‌ಬುಕ್ ಖಾತೆಯಲ್ಲಿ 1962ರ ಕಿರಾಣಿ ಬಿಲ್ ಎಂದು ರಶೀದಿಯ ಫೋಟೋ ಹಂಚಿಕೊಂಡಿದ್ದಾರೆ. ಈ ರಶೀದಿ ಮೇಲೆ 4ನೇ ಆಗಸ್ಟ್ 1962 ಎಂದು ದಿನಾಂಕ ನಮೂದಿಸಲಾಗಿದೆ. ಗ್ರಾಹಕರು ಮಾಡಿಕೊಟ್ಟ ಪಟ್ಟಿಯಲ್ಲಿಯೇ ಅಂಗಡಿ ಮಾಲೀಕ ಬೆಲೆ ಬರೆದು ಒಟ್ಟು ಎಷ್ಟು ಹಣ ಎಂದು ನಮೂದಿಸಿದ್ದಾರೆ. ಸಕ್ಕರೆ, ಬೆಲ್ಲ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಆಹಾರ ಸಾಮಾಗ್ರಿಗಳಿಗೆ 53 ರೂಪಾಯಿ ಬಿಲ್ ಆಗಿದೆ. 1 ಕೆಜಿ ಸಕ್ಕರೆ ಬೆಲೆ 1.25 ರೂಪಾಯಿ ಆಗಿದೆ. ಇಂದು 1 ಕೆಜಿ ಸಕ್ಕರೆ 50 ರಿಂದ 55 ರೂಪಾಯಿಯ ಆಸುಪಾಸಿನಲ್ಲಿ ಸಿಗುತ್ತದೆ.
ಒಂದಿಷ್ಟು ಅನುಮಾನ!
ಮಲ್ಲಿಕಾರ್ಜುನ್ ಮೇಟಿಯವರ ಈ ಪೋಸ್ಟ್‌ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. 1962ರ ಕಾಲಘಟ್ಟದಲ್ಲಿ ಕನ್ನಡ ಬರವಣಿಗೆ ಹೀಗಿರುತ್ತಿರಲಿಲ್ಲ. ಅಂದು ಬಹುತೇಕರು, ಅದರಲ್ಲಿಯೂ ವ್ಯಾಪಾರಸ್ಥರು ಕನ್ನಡ ಅಂಕಿಗಳನ್ನು ಬಳಸುತ್ತಿದ್ದರು ಎಂದು ಕಮೆಂಟ್ ಮಾಡಿದ್ದಾರೆ. ಇಂದು ಒಮ್ಮೆ ಮನೆಗೆ ಬೇಕಾಗುವ ಸಾಮಾಗ್ರಿ ಖರೀದಿಸಿದ್ರೆ 3 ರಿಂದ 4 ಸಾವಿರ ರೂ. ಬೇಕಾಗುತ್ತದೆ. ಇನ್ನು ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಕಿರಾಣಿ ಬಿಲ್ 10 ಸಾವಿರ ರೂ.ವರೆಗೆ ಆಗುತ್ತದೆ.
1962ರ ಕಿರಾಣಿ ಬಿಲ್‌ನಲ್ಲಿರುವ ಆಹಾರ ಸಾಮಾಗ್ರಿಗಳು ಮತ್ತು ಅವುಗಳ ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
| ಆಹಾರ ಸಾಮಾಗ್ರಿ | ಪ್ರಮಾಣ | ಬೆಲೆ (ರೂ.,ಗಳಲ್ಲಿ) |
| ತೆಂಗಿನಕಾಯಿ | 10 | 3.13 |
| ಬೆಲ್ಲ | 10 ಕೆಜಿ | 8.00 |
| ತೊಗರಿಬೇಳೆ | 12 ½ ಕೆಜಿ | 12.50 |
| ಕಡಲೆಬೇಳೆ | 12 ½ ಕೆಜಿ | 8.25 |
| ಕಡಲೆಕಾಳು | 6 ½ಕೆಜಿ | 4.00 |
| ಬೆಳ್ಳುಳ್ಳಿ | 1 ಕೆಜಿ | 1.25 |
| ಸಕ್ಕರೆ | 1 ಕೆಜಿ | 1.25 |
| ಸೀಮೆಎಣ್ಣೆ | 1 ಡಬ್ಬಿ | 8.25 |
| ಸೀಗೆ ಪುಡಿ | 1 ಕೆಜಿ | 2.00 |
| ಗೋಧಿ ಹಿಟ್ಟು | 1 ಕೆಜಿ | 0.75 |
| ಊದುಬತ್ತಿ | 2 | 0.38 |
| ಕರ್ಪೂರ | 1 | 0.75 |
| ಮೈಸೂರು ಸ್ಯಾಂಡಲ್ ಸೋಪ್ | 3 | 1.97 |
| 501 ಬಾರ್ ಸೋಪ್ | 1 | 1.50 |
| ಒಟ್ಟು | 53.98 |