
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈರಲ್ ಆಗುತ್ತಿರುವ ಬಹುತೇಕ ವಿಡಿಯೋಗಳು ಕನ್ನಡ ಅಥವಾ ಹಿಂದಿ ಭಾಷಿಕರ ನಡುವೆ ಉಂಟಾದ ಜಗಳ ಅಥವಾ ಕಿತ್ತಾಟಕ್ಕೆ ಸಂಬಂಧಿಸಿದ್ದೇ ಆಗಿರುತ್ತವೆ. ಆದರೆ, ಇಲ್ಲೊಂದು ವಿಡಿಯೋ ದೆಹಲಿಯಿಂದ ಬಂದ ಹಿಂದಿ ಭಾಷಿಕ ಸೋಶಿಯಲ್ ಮೀಡಿಯಾ ಇನ್ಲ್ಪೂಯೆನ್ಸರ್‌ಗೆ ಭರ್ಜರಿ ಆತೊಥ್ಯ ನೀಡಿರುವುದು ಭಾರೀ ವೈರಲ್ ಆಗಿದೆ.
ದಿನ ಬೆಳಗಾದರೆ ಸಾಕು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋವನ್ನು ಸದೀವ್ ಸಿಂಗ್ ಎಂಬುವವರು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಂದು ವಾಸ ಮಾಡುತ್ತಿರುವ ಕೆಲವು ಉತ್ತರ ಭಾರತೀಯರು ಭಾಷಾ ವಿವಾದಕ್ಕೆ ಕುರಿತಂತೆ ಯಾವಾಗಲೂ ದ್ವೇಷ, ನಕಾರಾತ್ಮಕ ಸುದ್ದಿಗಳನ್ನು ಹಂಚಿಕೊಳ್ಳುವವುದು ಹೆಚ್ಚಾಗುತ್ತಿದೆ, ಇದರ ನಡುವೆ ಸದೀವ್ ಸಿಂಗ್ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ. ಇಡೀ ದಕ್ಷಿಣ ಭಾರತದ ಜನರು ಯಾರೇ ಅಪರಿಚಿತರು ಸಹಾಯ ಕೇಳಿಕೊಂಡು ಬಂದರೆ ಎಂತಹ ಆತಿಥ್ಯವನ್ನು ನೀಡುತ್ತಾರೆ ಎಂಬುದಕ್ಕೆ ಬೆಂಗಳೂರಿನ ಕುಟುಂಬ ನೀಡಿದ ಆತಿಥ್ಯದ ವಿಡಿಯೋ ಒಂದು ಉದಾಹರಣೆಯಾಗಿದೆ.
ದೆಹಲಿ ಮೂಲದ ಹಿಂದಿ ಭಾಷಿಕ ಇನ್ಫ್ಲುಯೆನ್ಸರ್ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕರಾದ ಸದೀವ್ ಸಿಂಗ್, ಬೆಂಗಳೂರಿನ ಯಾವುದಾದರೂ ಮನೆಯಲ್ಲಿ ತಯಾರಿಸಿದ ಊಟ ಸವಿಯಬೇಕೆಂದು ನಿರ್ಧರಿಸಿದ್ದರು. ಅದನ್ನು ಹೇಗೆ ಸಾಧಿಸಿದರು ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಪ್ರೀತಿ, ಸ್ನೇಹ ಮತ್ತು ಪರಸ್ಪರ ಗೌರವದ ಭಾವನೆಗಳನ್ನು ಈ ವಿಡಿಯೋ ಬಿಂಬಿಸುತ್ತದೆ. ಈ ವಿಡಿಯೋದಲ್ಲಿ, ಸದೀವ್ ಒಂದು ಮನೆಯ ಹೊರಗೆ ನಿಂತ ಮಹಿಳೆಯನ್ನು ಬೆಳಗಿನ ಉಪಾಹಾರಕ್ಕೆ ನಿಮ್ಮ ಮನೆಯಲ್ಲಿ ಮಾಡಬಹುದೇ ಎಂದು ಕೇಳುತ್ತಾರೆ. ಮಹಿಳೆ ಒಳಗೆ ಹೋಗಿ ಕೇಳಿ ಬರುತ್ತೇನೆ ಎನ್ನುತ್ತಾರೆ. ನಂತರ ಸದೀವ್ ಮತ್ತು ಅವರ ಜೊತೆಗಿದ್ದ ಮಹಿಳೆಯನ್ನು ಉಪಾಹಾರಕ್ಕೆ ಆಹ್ವಾನಿಸುತ್ತಾರೆ.
ಇಬ್ಬರೂ ಒಳಗೆ ಹೋಗುತ್ತಾರೆ. ಮನೆಯವರು ಪ್ರೀತಿಯಿಂದ ಊಟ ಬಡಿಸುತ್ತಾರೆ. ಮನೆಯಲ್ಲಿರುವ ವ್ಯಕ್ತಿ ಸಂಗೀತಗಾರ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಊಟ ಮುಗಿಸಿ, ಸದೀವ್ ಮತ್ತು ಅವರ ಜೊತೆಗಿದ್ದ ಮಹಿಳೆ ಮನೆಯವರ ಪಾದಗಳಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ಬೆಂಗಳೂರಿನ ಜನರು ತುಂಬಾ ಒಳ್ಳೆಯವರು ಎಂದು ಸದೀವ್ ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೋಗೆ ಕಾಮೆಂಟ್‌ಗಳನ್ನು ಬರೆದಿದ್ದಾರೆ. ಅವರು ಬಡಿಸಿದ್ದು ರಾಗಿ ಮುದ್ದೆ ಎಂದು ಕೆಲವರು ಹೇಳಿದ್ದಾರೆ. ಇದು ತುಂಬಾ ಹೃದಯಸ್ಪರ್ಶಿ ವಿಡಿಯೋ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ನೆಟ್ಟಿಗನೊಬ್ಬ ಪ್ರತಿಕ್ರಿಯಿಸಿ 'ಅವರು ನಿಮ್ಮನ್ನು ಕನ್ನಡದಲ್ಲಿ ಮಾತನಾಡಲು ಎಂದಿಗೂ ಕೇಳಲಿಲ್ಲ. ಕೇವಲ ಅವರು ನಿಮಗೆ ಶುಭ ಹಾರೈಸಿದರು. ನೀವು ಭಾಷೆ ಮತ್ತು ಸಂಸ್ಕೃತಿಯನ್ನು ಅಗೌರವ ತೋರಿಸದಿದ್ದರೆ ನಿಮಗೆ ಖಂಡಿತವಾಗಿಯೂ ಗೌರವ ಮರಳಿ ಸಿಗುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಅಲ್ಲಿ ನಿಮಗೆ ರಾಗಿ ಮುದ್ದೆಯನ್ನು ಊಟಕ್ಕೆ ಕೊಟ್ಟಿದ್ದಾರೆಂದರೆ ನೀವು ಸರಿಯಾದ ಮೂಲ ಬೆಂಗಳೂರಿಗರ ಸ್ಥಳದಲ್ಲಿದ್ದೀರಿ' ಎಂದು ಕಾಮೆಂಟ್ ಮಾಡಿದ್ದಾರೆ.