
ಬೆಂಗಳೂರು: ಸಣ್ಣ ಯೋಚನೆಗಳು, ಒಳ್ಳೆಯ ಕೆಲಸ ಕಾರ್ಯಗಳು ಮನುಷ್ಯನ ಮನಸ್ಸನ್ನು ಎಷ್ಟು ಆಳವಾಗಿ ಮುಟ್ಟಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿರುವ ಅತ್ಯಂತ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಕಣ್ಣಾಲಿಗಳಲ್ಲಿ ನೀರು ತರಿಸಿದೆ..
ಬೆಂಗಳೂರಿನಲ್ಲಿ ವಾಸಿಸುತ್ತಿರುವ ರಷ್ಯಾ ಮೂಲದ ಯಾನಾ (Yana) ಎಂಬ ಮಹಿಳೆ, ತಮ್ಮ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಮನೆಕೆಲಸದವಳಾಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಎಂಬುವವರ 40ನೇ ವರ್ಷದ ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚರಿಸಿ ಗೌರವಿಸಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನ ತಮ್ಮ @yana.in.india ಖಾತೆಯಲ್ಲಿ ಯಾನಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಯಾನಾ ಅವರು '40' ಎಂದು ಬರೆದಿರುವ ಹುಟ್ಟುಹಬ್ಬದ ಮೇಣದಬತ್ತಿಗಳನ್ನು ಕೇಕ್ ಮೇಲೆ ಜೋಡಿಸುವುದು ಕಾಣಿಸುತ್ತದೆ. ಬಾಗಿಲಿನ ಗಂಟೆ ಬಾರಿಸಿದ ತಕ್ಷಣ ಯಾನಾ ಅವರ ಪುತ್ರಿ ಬಾಗಿಲು ತೆರೆಯುತ್ತಾಳೆ. ಕೈಯಲ್ಲಿ ಕೇಕ್ ಹಿಡಿದು ಮುಂಭಾಗಕ್ಕೆ ಬರುವ ಯಾನಾ, ಸವಿತಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ.
ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ತಮಗಾಗಿ ಕೇಕ್ ತಂದು ಹುಟ್ಟುಹಬ್ಬ ಆಚರಿಸುತ್ತಿರುವುದನ್ನು ಕಂಡ ಸವಿತಾ, ತಕ್ಷಣವೇ ಭಾವುಕರಾಗಿ ಯಾನಾ ಅವರನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ. ಕಣ್ಣಲ್ಲಿನ ಆನಂದಬಾಷ್ಪವನ್ನು ಒರೆಸಿಕೊಳ್ಳುತ್ತಾ, ದುಪಟ್ಟಾದಿಂದ ಮುಖ ಒರೆಸಿಕೊಂಡು ಮೇಣದಬತ್ತಿಯನ್ನು ಊದುತ್ತಾರೆ. ನಂತರ ಯಾನಾ ಮತ್ತು ಅವರ ಪುತ್ರಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ.
ಸವಿತಾ ಕಳೆದ ಎರಡು ವರ್ಷಗಳಿಂದ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಕುಟುಂಬದ ಸದಸ್ಯರಂತೆಯೇ ಇದ್ದಾರೆ. ನನ್ನ ಮಗಳು ಹುಟ್ಟಿದ್ದು ಕೂಡ ಬೆಂಗಳೂರಿನಲ್ಲೇ, ಭಾರತ ಎಂದಿಗೂ ನಮ್ಮ ಹೃದಯಕ್ಕೆ ಹತ್ತಿರವಾದ ದೇಶ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸವಿತಾ ಅವರು ತಮ್ಮ ಕೆಲಸದ ವಾತಾವರಣ ಮತ್ತು ಈ ರೀತಿಯ ಪ್ರೀತಿ ಸಿಕ್ಕಿದ್ದಕ್ಕೆ ಅತ್ಯಂತ ಧನ್ಯತೆ ವ್ಯಕ್ತಪಡಿಸಿದ್ದಾರೆ.
ಯಾನ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಭಾರತೀಯ ಆಹಾರ, ಉಡುಗಡ ತೊಡುಗೆ, ಹಬ್ಬಗಳ ಬಗ್ಗೆ ಅಪಾರ ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಜೊತೆಗೆ ಭಾರತವೆಂದರೆ ಯಾಕಿಷ್ಟ ಎಂದು ಹಲವು ವಿಡಿಯೋಗಳು ಕೂಡ ಅವರ ಖಾತೆಗೆ ಹೋದರೆ ಕಾಣಲು ಸಿಗುತ್ತದೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಯಾನಾ ಅವರ ಸರಳತೆ ಮತ್ತು ದಯನೀಯ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
"ಅವರ ಜೀವನದಲ್ಲಿ ಬಹುಶಃ ಯಾರೂ ಅವರಿಗಾಗಿ ಹೀಗೆ ಮಾಡಿರಲಿಕ್ಕಿಲ್ಲ. ಮೊದಲ ಬಾರಿಗೆ ಅವರು ತಮ್ಮ ಶ್ರಮಕ್ಕೆ ಗೌರವ ಮತ್ತು ಗುರುತಿಸುವಿಕೆ ಪಡೆದಂತೆ ಕಾಣುತ್ತಿದೆ. ಈ ವಿಡಿಯೋ ನೋಡಿ ನನ್ನ ಕಣ್ಣಲ್ಲೂ ನೀರು ಬಂತು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
"ನೀವು ನಿಜಕ್ಕೂ ದೊಡ್ಡ ಕೆಲಸ ಮಾಡಿದ್ದೀರಿ. ನಿಮ್ಮಿಂದ ನಾವೆಲ್ಲರೂ ಕಲಿಯಬೇಕಾದದ್ದು ಬಹಳಷ್ಟಿದೆ. ಇಂತಹ ಜನರಿಂದಾಗಿಯೇ ಜಗತ್ತು ಇನ್ನೂ ಸುಂದರವಾಗಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
"ಅಧಿಕಾರ ಮತ್ತು ಹಣದ ಗರ್ವ ತೋರಿಸುವ ಈ ಕಾಲದಲ್ಲಿ, ದಯೆ ಮತ್ತು ಪ್ರೀತಿಯನ್ನು ಆಯ್ಕೆ ಮಾಡಿಕೊಂಡ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ" ಎಂದು ಹಲವರು ಹಾರೈಸಿದ್ದಾರೆ.
ಒಟ್ಟಿನಲ್ಲಿ, ಜಾತಿ, ದೇಶ, ಅಂತಸ್ತುಗಳ ಹಂಗಿಲ್ಲದೆ ಪ್ರೀತಿ ಮತ್ತು ಗೌರವ ನೀಡಿದರೆ ಜಗತ್ತು ಎಷ್ಟು ಸುಂದರವಾಗುತ್ತದೆ ಎಂಬುದಕ್ಕೆ ಈ ಸಣ್ಣ ಘಟನೆಯೇ ಸಾಕ್ಷಿಯಾಗಿದೆ.