
ಇತ್ತೀಚೆಗೆ ಗೋವಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ನಾಯಿಯೊಂದು ಕಾರನ್ನು ಹಾನಿಗೊಳಿಸುತ್ತಿರುವುದನ್ನು ಕಾಣಬಹುದು. ಆದರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಹಲವು ದಿನಗಳಿಂದ ನಡೆಯುತ್ತಿದ್ದ ಹುಡುಕಾಟಕ್ಕೆ ಒಂದು ಸುಳಿವು ಸಿಕ್ಕಿದೆ. ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಇದು ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ತಮ್ಮ 'ಚಿಕ್ಕು' ಎಂಬ ನಾಯಿ ಎಂದು ಮಾಲೀಕರು ಗುರುತಿಸಿದ್ದಾರೆ. ಹೀಗೆ, ಈ ವೈರಲ್ ವಿಡಿಯೋದಿಂದ ಮಾಲೀಕರು ತಮ್ಮ ನಾಯಿಯನ್ನು ಮರಳಿ ಪಡೆಯಲು ಸಾಧ್ಯವಾಯಿತು.
ಈ ತಿಂಗಳ ಆರಂಭದಲ್ಲಿ, ಮಾರುತಿ ಸುಜುಕಿ ಕಾರಿನ ಮೇಲೆ ನಾಯಿಯೊಂದು ದಾಳಿ ಮಾಡುವ ವಿಡಿಯೋ ಸೋಷಿಯಲ್ ಮೀಡಯಾದಲ್ಲಿ ಭಾರೀ ವೈರಲ್ ಆಗಿತ್ತು. ಬಹುಶಃ ನೀವೂ ಈ ವೈರಲ್ ನೋಡಿಯೇ ಇರುತ್ತೀರಿ. ವಿಡಿಯೋದಲ್ಲಿ ಕತ್ತಿಗೆ ಕಾಲರ್ ಕಟ್ಟಿದ್ದ ಕಂದು ಬಣ್ಣದ ನಾಯಿ ಕಾರಿನ ಮುಂಭಾಗದ ಬಂಪರ್ ಅನ್ನು ಹರಿದು ಹಾಕಲು ಪ್ರಯತ್ನಿಸುತ್ತಿರುವುದು ಬಳಿಕ ಕಾರಿನ ಒಳಗೆ ಅಡಗಿದ್ದ ಇಲಿಯನ್ನು ಹಿಡಿಯಲು ಯತ್ನಿಸಿರುವುದು ವಿಡಿಯೋದಲ್ಲಿ ಕಾಣಬಹುದು. ಆದರೆ, ಇಲಿ ಓಡಿಹೋಯಿತು. ಇದರಿಂದ ಕೋಪಗೊಂಡ ನಾಯಿ ಕಾರಿನ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಕಾಮೆಂಟ್‌ಗಳೊಂದಿಗೆ ಬಂದರು. 'ಡೋಗೇಶ್ ಭಾಯ್ ಇಲಿಯನ್ನು ಹಿಡಿದು ಕಾರಿನ ಮಾಲೀಕರಿಗೆ ಹೆಚ್ಚಿನ ಹಾನಿಯಾಗದಂತೆ ಸಹಾಯ ಮಾಡುತ್ತಿದ್ದಾನೆ' ಎಂಬಂತಹ ಕಾಮೆಂಟ್‌ಗಳನ್ನು ಹಲವರು ಮಾಡಿದ್ದಾರೆ. ಅದೇ ಸಮಯದಲ್ಲಿ, ಗೋವಾದ ಕುಟುಂಬವೊಂದು ಮುಂದೆ ಬಂದು, ಅದು ತಮ್ಮ ಕಾಣೆಯಾದ ನಾಯಿ, ಅದರ ಹೆಸರು ಚಿಕ್ಕು ಎಂದು ಹೇಳಿದೆ. 'ಇನ್ ಗೋವಾ' ವರದಿಯ ಪ್ರಕಾರ, ಚಿಕ್ಕು ಎಂಬ ನಾಯಿ 2025ರ ಜನವರಿಯಿಂದ ಮಾಪುಸಾದ ಶೆಟ್ಟಿ ವಾಡೋದಿಂದ ಕಾಣೆಯಾಗಿತ್ತು. ಈಗ ನಾಯಿಯ ಮಾಲೀಕರಾದ ಶ್ರದ್ಧಾ ಅವರು ನಾಯಿಯನ್ನು ಹುಡುಕಲು ಸಹಾಯ ಕೋರಿದ್ದಾರೆ. ಶ್ರದ್ಧಾ ಮತ್ತು ಅವರ ಕುಟುಂಬ ನಾಯಿಯನ್ನು ಹುಡುಕುವ ಭರವಸೆಯಲ್ಲಿದ್ದಾರೆ.