
ನವಿಲುಗಳನ್ನು ಭಾರತ ದೇಶದ ರಾಷ್ಟ್ರೀಯ ಪಕ್ಷಿ ಎಂದು ಪರಿಗಣಿಸಲಾಗಿದೆ. ಒಂದು ಸಮಯದಲ್ಲಿ ಅಳಿವಿನಂಚಿನಲ್ಲಿದ್ದ ನವಿಲುಗಳ ಸಂತತಿ ಇದೀಗ ಹೆಚ್ಚಾಗಿದೆ. ಪ್ರತಿಯೊಂದು ಹಳ್ಳಿಗಳಲ್ಲಿರುವ ಕಾಡುಗಳಲ್ಲಿಯೂ ನವಿಲುಗಳು ಕಂಡುಬರುತ್ತದೆ. ಸಾಮಾನ್ಯವಾಗಿ, ನವಿಲುಗಳು ಜನರು ಓಡಾಡುವ ಸ್ಥಳಕ್ಕೆ ಬಾರದೇ ಜನರಿಂದ ದೂರದಲ್ಲಿರುತ್ತವೆ. ಜನರು ಹತ್ತಿರ ಬರುತ್ತಿದ್ದಂತೆ ನಾಚಿಕೆಯಿಂದ ಅಥವಾ ಜೀವ ಭಯದಿಂದ ಅಲ್ಲಿಂದ ದೂರಕ್ಕೆ ಹಾರಿ ಹೋಗುತ್ತವೆ. ಆದರೆ, ದುಬೈನಲ್ಲಿ ನವಿಲುಗಳಿಗೆ ಹೆದರಿಕೆಯೇ ಇಲ್ಲ. ನಮ್ಮ ದೇಶದಲ್ಲಿ ಕೋಳಿಗಳು ಇರುವಂತೆಯೇ ಜನವಸತಿ ಪ್ರದೇಶಗಳಲ್ಲಿ ನವಿಲುಗಳು ವಾಸ ಮಾಡುತ್ತಿದ್ದು, ಜನಸಂಚಾರ ಮತ್ತು ವಾಹನ ಸಂಚಾರದ ನಡುವೆಯೂ ರಸ್ತೆಯಲ್ಲಿ ಕಂಡುಬರುತ್ತವೆ.
ದುಬೈನಿಂದ ಬಂದಿರೋ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ನವಿಲುಗಳ ಒಂದು ಕುಟುಂಬ ರಸ್ತೆ ದಾಟಲಿ ಅಂತಾ ಡಿಫೆಂಡರ್ ಕಾರೊಂದು ನಿಂತಿರೋದನ್ನು ಈ ವಿಡಿಯೋದಲ್ಲಿ ನೋಡಬಹುದು. 'ಇದು ದುಬೈನ ಸೇಫ್ಟಿ ಲೆವೆಲ್' ಅನ್ನೋ ಕ್ಯಾಪ್ಶನ್‌ನೊಂದಿಗೆ ಮೊಹಮ್ಮದ್ ಸಾದ್ ಚೌಧರಿ ಅನ್ನೋ ಯುವಕ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ, ಚೌಧರಿ ತನ್ನ ಮುಂದಿದ್ದ ಡಿಫೆಂಡರ್ ಕಾರಿನತ್ತ ಬೆರಳು ತೋರಿಸಿ, ಅದು ರಸ್ತೆ ಮಧ್ಯೆ ಯಾಕೆ ನಿಂತಿದೆ ಅಂತ ವಿವರಿಸುತ್ತಾರೆ. “ಮುಂದೆ ಆ ಡಿಫೆಂಡರ್ ಕಾರ್ ಕಾಣ್ತಿದ್ಯಾ? ಈಗ, ಈ ಡಿಫೆಂಡರ್ ನಿಲ್ಲುತ್ತೆ. ಯಾಕೆ ಗೊತ್ತಾ? ನಾನೇ ಹೇಳ್ತೀನಿ, ನೋಡಿ. ನವಿಲುಗಳ ಒಂದು ಗುಂಪು ಮುಂದೆ ಹೋಗ್ತಿದೆ. ಅದಕ್ಕೆ ಅವರು ನಿಲ್ಲಿಸಲೇಬೇಕು. ನೀವೇ ನೋಡಬಹುದು, ಇದು ದುಬೈನ ಸುರಕ್ಷತೆಯ ಮಟ್ಟ. ಇದು ದುಬೈ, ನಿಜ ಹೇಳಬೇಕೆಂದರೆ ಇದು ಎಮಿರೇಟ್ಸ್ ಟವರ್, ಇದೊಂದು ಗುಪ್ತ ರತ್ನ (hidden gem). ಈ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆಯೋ ನನಗೆ ತಿಳಿದಿಲ್ಲ, ಆದರೆ ಇಲ್ಲಿ ತುಂಬಾ ನವಿಲುಗಳಿವೆ. ನೋಡಿ, ಅವುಗಳಿಗೆ ಮರಿಗಳೂ ಇವೆ, ಬೇರೆ ಬೇರೆ ನವಿಲುಗಳೂ ಇವೆ. ಆದರೆ ಇದು ದುಬೈನ ಸೇಫ್ಟಿ ಲೆವೆಲ್. ಹಾಗಾಗಿ, ನಿಮ್ಮಲ್ಲಿ ಯಾರಾದ್ರೂ ದುಬೈಗೆ ಹೋಗಿ ಈ ಜಾಗ ನೋಡಿಲ್ಲ ಅಂದ್ರೆ, ನಾನೇ ಈಗತಾನೇ ಈ ಗುಪ್ತ ರತ್ನವನ್ನು ಪತ್ತೆ ಹಚ್ಚಿದ್ದು. ನೀವು ಖಂಡಿತವಾಗಿಯೂ ಈ ಜಾಗಕ್ಕೆ ಭೇಟಿ ನೀಡಬೇಕು, ಇದು ತುಂಬಾ ಸುಂದರವಾದ ಸ್ಥಳ' ಎಂದು ಅವರು ವಿಡಿಯೋದಲ್ಲಿ ಉತ್ಸಾಹದಿಂದ ಹೇಳುತ್ತಾರೆ. ಕಾರು ಕಾಯುತ್ತಿರುವಾಗ, ನವಿಲುಗಳು ನಿಧಾನವಾಗಿ ರಸ್ತೆ ದಾಟುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಪ್ರದೇಶಕ್ಕೆ ಭೇಟಿ ನೀಡುವವರಿಗೆ ಮತ್ತು ಇಲ್ಲಿನ ನವಿಲುಗಳ ಬಗ್ಗೆ ತಿಳಿಯದ ನಿವಾಸಿಗಳಿಗೆ ಚೌಧರಿ ಈ ಸ್ಥಳವನ್ನು 'ಗುಪ್ತ ರತ್ನ' ಎಂದು ಕರೆದಿದ್ದಾರೆ.
'ತುಂಬಾ ಸುಂದರವಾದ ದೃಶ್ಯ'
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ, ಹಲವಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ದುಬೈನ ಶಿಸ್ತು, ಸ್ವಚ್ಛತೆ ಮತ್ತು ಸಾರ್ವಜನಿಕ ಸ್ಥಳಗಳ ಬಗ್ಗೆ ಇರುವ ಗೌರವವನ್ನು ಹಲವರು ಹೊಗಳಿದ್ದಾರೆ. 'ದುಬೈ ಯಾಕೆ ಯಾವಾಗಲೂ ವಿಭಿನ್ನವಾಗಿ ಕಾಣುತ್ತೆ ಅಂದ್ರೆ ಇದೇ ಕಾರಣಕ್ಕೆ, ಇಲ್ಲಿ ಪ್ರಾಣಿಗಳೂ ಸುರಕ್ಷಿತವಾಗಿವೆ' ಅಂತ ಒಬ್ಬರು ಬರೆದಿದ್ದಾರೆ. 'ಎಷ್ಟು ಸುಂದರ ದೃಶ್ಯ. ಕಾರು ಚಾಲಕ ತಾಳ್ಮೆಯಿಂದ ನಿಲ್ಲಿಸಿದ ರೀತಿ ಆ ಸ್ಥಳದ ಬಗ್ಗೆ ತುಂಬಾ ಹೇಳುತ್ತೆ' ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 'ದುಬೈ ತನ್ನ ಗುಪ್ತ ರತ್ನಗಳಿಂದ ಜನರನ್ನು ಅಚ್ಚರಿಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಇದನ್ನು ನೋಡಲು ತುಂಬಾ ಶಾಂತವಾಗಿದೆ, ನವಿಲುಗಳು ಸಂಪೂರ್ಣವಾಗಿ ಆರಾಮವಾಗಿ ಕಾಣುತ್ತಿವೆ' ಎಂಬುದು ಇನ್ನೊಂದು ಕಮೆಂಟ್.
ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.