
ಸೋಶಿಯಲ್ ಮೀಡಿಯಾದಲ್ಲಿ ಈಗ ಫ್ಯೂಚರ್ ಕಟ್ಟಿಕೊಂಡ ಅನೇಕರಿಗೆ ದಾರಿ ತೋರಿಸಿದ್ದು ಟಿಕ್ ಟಾಕ್ (TikTok). ಒಂದು ಕಾಲದಲ್ಲಿ ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದ ಶಾರ್ಟ್ ವಿಡಿಯೋ ಅಪ್ಲಿಕೇಷನ್ ಟಿಕ್ ಟಾಕ್, ಐದು ವರ್ಷಗಳ ನಂತ್ರ ಮತ್ತೆ ಭಾರತಕ್ಕೆ ವಾಪಸ್ ಆಗಲಿದೆ ಎನ್ನುವ ಸುದ್ದಿ ಹರಡಿದೆ. ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ಭಾರತ ಸರ್ಕಾರ 2020 ರಲ್ಲಿ ಟಿಕ್ ಟಾಕ್ ನಿಷೇಧಿಸಿತ್ತು. ಐದು ವರ್ಷಗಳ ನಂತ್ರ ಕೆಲ ಭಾರತೀಯ ಬಳಕೆದಾರರು ಮತ್ತೆ ಟಿಕ್ಟಾಕ್ ವೆಬ್ಸೈಟ್ ಪ್ರವೇಶಿಸಿದ್ದಾರೆ. ಭಾರತದಲ್ಲಿ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದೆ, ಟಿಕ್ ಟಾಕ್ ವಾಪಸ್ ಆಗಲಿದೆ ಅಂತ ಚರ್ಚೆ ಶುರು ಮಾಡಿದ್ದಾರೆ. ಆದ್ರೆ ಭಾರತದಲ್ಲಿ ವೆಬ್ ಸೈಟ್ ಬ್ಯಾನ್ ಆಗಿಲ್ಲ, ಆಪ್ ಮಾತ್ರ ಬ್ಯಾನ್ ಆಗಿದೆ ಅಂತ ಸರ್ಕಾರಿ ಮೂಲಗಳು ಹೇಳಿವೆ. ಕಂಪನಿ ಈ ಬಗ್ಗೆ ಯಾವುದೇ ಹೇಳಿಕೆ ನೀಡ್ತಿಲ್ಲ.
ಪ್ರಸ್ತುತ, ಟಿಕ್ಟಾಕ್ ವೆಬ್ಸೈಟ್ (TikTok website) ಮಾತ್ರ ಭಾರತದಲ್ಲಿ ಲಭ್ಯವಿದೆ. ವೆಬ್ ಸೈಟ್ ಓಪನ್ ಆಗುತ್ತೆ ಆದ್ರೆ ಸೇವೆಗಳು ಲಭ್ಯವಿಲ್ಲ ಎಂದು ಕೆಲ ಬಳಕೆದಾರರು ಹೇಳಿದ್ದಾರೆ. ಮತ್ತೆ ಕೆಲವರು ನಮಗೆ ವೆಬ್ ಸೈಟ್ ಸಂಪೂರ್ಣ ಲಭ್ಯವಾಗ್ತಿದೆ ಎಂದಿದ್ದಾರೆ. ವೆಬ್ ಸೈಟ್ ಓಪನ್ ಆದ್ರೂ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ನಲ್ಲಿ ಟಿಕ್ ಟಾಕ್ ಅಪ್ಲಿಕೇಷನ್ ಲಭ್ಯವಿಲ್ಲ.
ಜೂನ್ 2020 ರಲ್ಲಿ, ಭಾರತ ಸರ್ಕಾರ 59 ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು. ಇವುಗಳಲ್ಲಿ ಟಿಕ್ಟಾಕ್, ಶೇರ್ಇಟ್, ಯುಸಿ ಬ್ರೌಸರ್ ಮತ್ತು ಕ್ಯಾಮ್ಸ್ಕ್ಯಾನರ್ನಂತಹ ಅಪ್ಲಿಕೇಶನ್ಗಳು ಸೇರಿವೆ. ಈ ಅಪ್ಲಿಕೇಷನ್, ಭಾರತದ ಸಾರ್ವಭೌಮತ್ವ, ಭದ್ರತೆ, ರಕ್ಷಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ಕೇಂದ್ರ ಈ ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು.
ಭಾರತ-ಚೀನಾ (China) ಸಂಬಂಧ ಪುನಃಸ್ಥಾಪಿಸಲು ಮಾತುಕತೆ ನಡೆಯುತ್ತಿದೆ. ಅದ್ರ ಪರಿಣಾಮ ಒಂದೊಂದಾಗಿ ಕಾಣಿಸ್ತಿದೆ. ಈ ಸಮಯದಲ್ಲಿ ಟಿಕ್ಟಾಕ್ ವೆಬ್ಸೈಟ್ ಪ್ರವೇಶಕ್ಕೆ ಅವಕಾಶ ಸಿಗ್ತಿರೋದು ಗಮನಾರ್ಹ ಸಂಗತಿ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ಮೇಲೆ ಸುಂಕ ವಿಧಿಸಿದ ನಂತ್ರ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದ್ರು. ಮೋದಿ ಅವರನ್ನು SCO ಶೃಂಗಸಭೆಗೆ ಆಹ್ವಾನಿಸಲಾಗಿದೆ. ಭಾರತ ಮಾತ್ರವಲ್ಲ ಅಮೆರಿಕದಲ್ಲೂ ಟಿಕ್ಟಾಕ್ ಬ್ಯಾನ್ ಆಗಿದೆ. ಅಮೆರಿಕಾ ಕಂಪನಿ ಇದನ್ನು ಖರೀದಿಸಲು ಸಿದ್ಧವಿದೆ.
ಅಮೆರಿಕಾದ ಸುರಕ್ಷತೆಗೆ ಧಕ್ಕೆ ಆಗುತ್ತೆ ಎನ್ನುವ ಕಾರಣಕ್ಕೆ ಅಮೆರಿಕಾದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದೆ. ಒಂದ್ವೇಲೆ ಅಮೆರಿಕಾದ ವ್ಯಕ್ತಿ ಇದನ್ನು ಖರೀದಿ ಮಾಡಿದ್ರೆ, ಅಮೆರಿಕಾದಲ್ಲಿ ಟಿಕ್ ಟಾಕ್ ವಾಪಸ್ಸಾತಿಗೆ ಒಪ್ಪಿಗೆ ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮಧ್ಯೆ ಟಿಕ್ಟಾಕ್ ಮಾಲೀಕ ಬೈಟ್ಡ್ಯಾನ್ಸ್ ಯುಕೆಯಲ್ಲಿ ತನ್ನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುತ್ತಿದ್ದು, ಅಪ್ಲಿಕೇಷನ್ ಕಾರ್ಯಾಚರಣೆಗಳನ್ನು ಕೃತಕ ಬುದ್ಧಿಮತ್ತೆ (AI) ಮೇಲೆ ಕೇಂದ್ರೀಕರಿಸುತ್ತಿರುವುದಾಗಿ ಘೋಷಿಸಿದ್ದಾರೆ. ಬೈಟ್ಡ್ಯಾನ್ಸ್ 2017 ರಲ್ಲಿ ಟಿಕ್ ಟಾಕ್ ಪ್ರಾರಂಭಿಸಿದ್ದರು. ಭಾರತದಲ್ಲಿ ಅನೇಕರು ಟಿಕ್ ಟಾಕ್ ಖಾತೆ ತೆರೆದಿದ್ದರು. ಟಿಕ್ ಟಾಕ್ ಮೂಲಕ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡಿ ಪ್ರಸಿದ್ಧಿಗೆ ಬಂದಿದ್ರು.