ದಿನಕ್ಕೆ 16 ಗಂಟೆ ದುಡಿಯುವ ಭಾರತೀಯ ಟೆಕ್ಕಿಗೆ ತಿಂಗಳಿಗೆ ₹7 ಲಕ್ಷ ಸಂಬಳ, ₹82 ಲಕ್ಷಕ್ಕೂ ಅಧಿಕ ಉಳಿತಾಯವಿದ್ದರೂ ಆ ಭಯವೇಕೆ?

Published : Jul 16, 2026, 10:38 AM IST
Techie

ಸಾರಾಂಶ

ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಎರಡು ಕಂಪನಿಗಳಲ್ಲಿ ಕೆಲಸ ಮಾಡಿ ತಿಂಗಳಿಗೆ ₹7 ಲಕ್ಷ ಗಳಿಸುತ್ತಿದ್ದಾರೆ. ಆದರೆ, ದಿನಕ್ಕೆ 16 ಗಂಟೆಗಳ ದುಡಿಮೆ, ಕುಟುಂಬದ ಜವಾಬ್ದಾರಿ, ಮತ್ತು ಎಐನಿಂದ ಉದ್ಯೋಗ ಕಳೆದುಕೊಳ್ಳುವ ಭಯ ಅವರ ನೆಮ್ಮದಿಯನ್ನು ಕಸಿದುಕೊಂಡಿದೆ. ಅಧಿಕ ಆದಾಯವಿದ್ದರೂ, ಅವರು ಆರ್ಥಿಕ ಮತ್ತು ಮಾನಸಿಕ ಒತ್ತಡದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಬೆಂಗಳೂರು: ತಂತ್ರಜ್ಞಾನ ಲೋಕದಲ್ಲಿ 'ಮೂನ್‌ಲೈಟಿಂಗ್' (ಎರಡು ಕಂಪನಿಗಳಲ್ಲಿ ಕೆಲಸ) ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ. ಇದೀಗ ಭಾರತೀಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ತಾವು ಮಾಡುತ್ತಿರುವ ಮೂನ್‌ಲೈಟಿಂಗ್ ಕುರಿತು ಆಘಾತಕಾರಿ ಮತ್ತು ಅಷ್ಟೇ ರೋಚಕ ವಿಚಾರವನ್ನು ಹಂಚಿಕೊಂಡಿದ್ದಾರೆ. ಎರಡು ಐಟಿ ಉದ್ಯೋಗಗಳನ್ನು ಏಕಕಾಲದಲ್ಲಿ ಮಾಡುವ ಮೂಲಕ ಇವರು ತಿಂಗಳಿಗೆ ಬರೋಬ್ಬರಿ ₹7 ಲಕ್ಷ ಸಂಬಳ ಗಳಿಸುತ್ತಿದ್ದಾರೆ! ಆದರೆ ಈ ಸಂಬಳ ಅವರಿಗೆ ಖುಷಿ ತಂದುಕೊಟ್ಟಿಲ್ಲ. ಬದಲಿಗೆ ಅವರ ನೆಮ್ಮದಿ, ಸಮಯ ಮತ್ತು ಆರೋಗ್ಯವನ್ನು ಕಸಿದುಕೊಂಡಿದೆ.

ಮ್ಯೂಚುವಲ್ ಫಂಡ್ ಸಲಹೆಗಾರ ಮತ್ತು ಪ್ರಸಿದ್ಧ ಪಾಡ್‌ಕ್ಯಾಸ್ಟರ್ ಅಂಶುಮಾನ್ ಶರ್ಮಾ ಅವರ ವೈಯಕ್ತಿಕ ಹಣಕಾಸು ಕಾರ್ಯಕ್ರಮವಾದ 'ಫಿಕ್ಸ್ ಯುವರ್ ಫೈನಾನ್ಸ್'ನಲ್ಲಿ ಭಾಗವಹಿಸಿದ್ದ 29 ವರ್ಷದ ಟೆಕ್ಕಿಯೊಬ್ಬ ತಮ್ಮ ಜೀವನದ ಈ ಕಠಿಣ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

ದಿನಕ್ಕೆ 16 ಗಂಟೆಗಳ ಕಾಲ ದುಡಿಮೆ

ಪಾಡ್‌ಕ್ಯಾಸ್ಟರ್ ಅಂಶುಮಾನ್ ಶರ್ಮಾ ಅವರೊಂದಿಗೆ ಫೋನ್ ಕರೆಯ ಮೂಲಕ ಸಂಭಾಷಣೆ ಆರಂಭಿಸಿದ ಟೆಕ್ಕಿ, ತಾವು ತಿಂಗಳಿಗೆ ₹7 ಲಕ್ಷ ಗಳಿಸಲು ಪಡುತ್ತಿರುವ ಪಾಡನ್ನು ವಿವರಿಸಿದರು. ನಾನು ಪ್ರಸ್ತುತ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ಹಗಲಿನ ಶಿಫ್ಟ್ ತಂತ್ರಜ್ಞಾನ ಕಂಪನಿಯಾದರೆ, ಮತ್ತೊಂದು ರಾತ್ರಿಯ ಶಿಫ್ಟ್. ಇದಕ್ಕಾಗಿ ನಾನು ದಿನಕ್ಕೆ ಕನಿಷ್ಠ 16 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು. ಇದರಲ್ಲಿ ಒಂದು ಕಂಪನಿ ಅಮೆರಿಕ (US) ಮೂಲದ್ದಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಈ ಕಠಿಣ ನಿರ್ಧಾರದ ಹಿಂದಿರುವ ಕೌಟುಂಬಿಕ ತ್ಯಾಗ

ದಿನಕ್ಕೆ 16 ಗಂಟೆಗಳ ಕಾಲ ದುಡಿಯುವ ಇಂತಹ ಕಠಿಣ ನಿರ್ಧಾರಕ್ಕೆ ಬರಲು ಕಾರಣವೇನು ಎಂದು ಕೇಳಿದಾಗ, ರೋಹಿತ್ ತಮ್ಮ ಬಾಲ್ಯದ ಕಡು ಬಡತನದ ದಿನಗಳನ್ನು ನೆನೆದು ಭಾವುಕರಾದರು. ಅವರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದ ಕುಟುಂಬದಿಂದ ಬಂದವರು. ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಇಡೀ ಕುಟುಂಬದಲ್ಲಿ ಒಬ್ಬರು ಮಾತ್ರ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಿತ್ತು. ಆ ಸಂದರ್ಭದಲ್ಲಿ ರೋಹಿತ್ ಅವರ ಅಣ್ಣ, ತಮ್ಮ ಸ್ವಂತ ಶಿಕ್ಷಣ ಮತ್ತು ಕನಸುಗಳನ್ನು ತ್ಯಾಗ ಮಾಡಿ, ತಮ್ಮ ತಮ್ಮನನ್ನು ಓದಿಸಿದರು. ನನ್ನ ಅಣ್ಣ ತನ್ನ ಓದನ್ನು ಅರ್ಧಕ್ಕೇ ನಿಲ್ಲಿಸಿ ನನಗೆ ವಿದ್ಯಾಭ್ಯಾಸ ಕೊಡಿಸಿದನು. ಹಾಗಾಗಿ, ನಾನು ಜೀವನದಲ್ಲಿ ಏನನ್ನಾದರೂ ಸಾಧಿಸದಿದ್ದರೆ ಅದು ಇಡೀ ಕುಟುಂಬದ ವೈಫಲ್ಯದಂತೆ ಭಾಸವಾಗುತ್ತಿತ್ತು. ಆ ಜವಾಬ್ದಾರಿಯ ಭಾರವೇ ನನ್ನನ್ನು ಇಷ್ಟು ದುಡಿಯುವಂತೆ ಮಾಡುತ್ತಿದೆ ಎಂದರು.

₹7 ಲಕ್ಷ ಆದಾಯವಿದ್ದರೂ ಕಾಡುತ್ತಿರುವ 'AI' ಮತ್ತು ವಜಾದ ಭೀತಿ!

ರೋಹಿತ್ ಇತ್ತೀಚೆಗಷ್ಟೇ ತಂದೆಯಾಗಿದ್ದಾರೆ. ಮಗು ಜನಿಸಿದ ನಂತರ ಕುಟುಂಬದ ಜವಾಬ್ದಾರಿಗಳು ಮತ್ತು ವೆಚ್ಚಗಳು ಸಹಜವಾಗಿಯೇ ಹೆಚ್ಚಾಗಿವೆ. ಕುಟುಂಬದ ಒತ್ತಾಯದ ಮೇರೆಗೆ ಇತ್ತೀಚೆಗೆ ಒಂದು ಹೊಸ ಕಾರನ್ನು ಖರೀದಿಸಿದರು, ತದನಂತರ ₹85 ಲಕ್ಷ ಮೌಲ್ಯದ 2 BHK ಫ್ಲಾಟ್ ಒಂದನ್ನು ಸಹ ಖರೀದಿಸಿದ್ದಾರೆ. ಆದರೂ ಅವರ ಆರ್ಥಿಕ ಆತಂಕ ಮಾತ್ರ ದೂರವಾಗಿಲ್ಲ.

"ನಾನು ಇರುವುದು ಐಟಿ ಕ್ಷೇತ್ರದಲ್ಲಿ. ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜಾಗತಿಕವಾಗಿ AI ಕಾರಣದಿಂದಾಗಿ ಉದ್ಯೋಗ ಕಡಿತ (Layoffs) ಭೀತಿ ಎದುರಾಗಿದೆ. ಒಂದು ವೇಳೆ ಏನಾದರೂ ತಪ್ಪಾಗಿ ನನ್ನ ಕೆಲಸ ಹೋದರೆ, ನನ್ನ ಆದಾಯ ದಿಢೀರನೆ ಕುಸಿಯುತ್ತದೆ. ಆಗ ನಾನು ಇಷ್ಟೊಂದು ವೆಚ್ಚಗಳನ್ನು ಹೇಗೆ ನಿಭಾಯಿಸಲಿ? ಎಂಬುದು ರೋಹಿತ್ ಅವರ ನಿರಂತರ ಆತಂಕವಾಗಿದೆ.

₹80 ಲಕ್ಷಕ್ಕೂ ಅಧಿಕ ಉಳಿತಾಯವಿದ್ದರೂ ಇಎಂಐ (EMI) ಒತ್ತಡ!

ಆಶ್ಚರ್ಯಕರ ವಿಷಯವೆಂದರೆ, ಟೆಕ್ಕಿ ಈಗಾಗಲೇ ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಹೂಡಿಕೆಯ ಪೋರ್ಟ್‌ಫೋಲಿಯೊವನ್ನು ಹಂಚಿಕೊಂಡ ಅವರು, ನನ್ನ ಮ್ಯೂಚುವಲ್ ಫಂಡ್‌ಗಳಲ್ಲಿ ₹70 ಲಕ್ಷ, ಷೇರು ಮಾರುಕಟ್ಟೆಯಲ್ಲಿ ₹2 ಲಕ್ಷ ಮತ್ತು ಬ್ಯಾಂಕ್ ಎಫ್‌ಡಿಯಲ್ಲಿ (FD) ₹10 ಲಕ್ಷ ಸೇರಿ ಒಟ್ಟು ₹82 ಲಕ್ಷಕ್ಕೂ ಅಧಿಕ ಹಣ ಹೂಡಿಕೆಯಾಗಿದೆ ಎಂದು ತಿಳಿಸಿದರು.

ಆದರೆ, ಮಾಸಿಕ ವೆಚ್ಚಗಳ ಲೆಕ್ಕಾಚಾರ ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೊಸ ಮನೆ ಖರೀದಿಸಿರುವುದರಿಂದ ಅದರ ಮಾಸಿಕ ಗೃಹ ಸಾಲದ ಇಎಂಐ (Home Loan EMI) ₹60,000 ಆಗಿದೆ ಮತ್ತು ಕಾರಿನ ಇಎಂಐ ₹28,000 ಆಗಿದೆ. ಉಳಿದಂತೆ ಇತರ ಮನೆಬಳಕೆಯ ವೆಚ್ಚಗಳನ್ನು ಸೇರಿಸಿದರೆ ಅವರ ಮಾಸಿಕ ಖರ್ಚು ₹1.3 ಲಕ್ಷದಿಂದ ₹1.4 ಲಕ್ಷ ತಲುಪುತ್ತದೆ ಎಂದರು.

ಈ ಹಂತದಲ್ಲಿ ಪಾಡ್‌ಕ್ಯಾಸ್ಟರ್ ಅಂಶುಮಾನ್ ಶರ್ಮಾ ಅವರು, ನಿಮ್ಮ ಮುಂದಿನ 4 ವರ್ಷಗಳ ಒಟ್ಟು ಖರ್ಚಿಗೆ ಸಾಕಾಗುವಷ್ಟು ಹಣವನ್ನು ನೀವು ಈಗಾಗಲೇ ಆಸ್ತಿಯ ರೂಪದಲ್ಲಿ ಉಳಿಸಿದ್ದೀರಿ. ಹಾಗಿರುವಾಗ ನಿಮಗೆ ಇಷ್ಟೊಂದು ಒತ್ತಡ ಏಕೆ? ಎಂದು ಪ್ರಶ್ನಿಸಿದರು.

ವೈಯಕ್ತಿಕ ಜೀವನವೇ ಶೂನ್ಯ: ಮುಂದಿನ ಗುರಿಯೇನು?

ನಿರಂತರ 16 ಗಂಟೆಗಳ ದುಡಿಮೆಯಿಂದಾಗಿ ತಮಗೆ ವೈಯಕ್ತಿಕ ಜೀವನವೇ ಇಲ್ಲದಂತಾಗಿದೆ ಎಂಬುದನ್ನು ಟೆಕ್ಕಿ ಒಪ್ಪಿಕೊಂಡರು. ಕುಟುಂಬಕ್ಕಾಗಲಿ, ಸ್ನೇಹಿತರಿಗಾಗಲಿ ಅಥವಾ ತಮಗಾಗಲಿ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಈ ಯಾಂತ್ರಿಕ ಜೀವನದಿಂದ ಹೊರಬರಲು ಮನಸ್ಸಿದ್ದರೂ, ಸದ್ಯಕ್ಕೆ ಕೆಲಸ ಬಿಡುವುದು ಕಷ್ಟವಾಗಿದೆ.

ತಮ್ಮ ಮುಂದಿನ ಆರ್ಥಿಕ ಗುರಿಯನ್ನು ಹಂಚಿಕೊಂಡ ಟೆಕ್ಕಿ, "ಮುಂದಿನ 5 ರಿಂದ 6 ವರ್ಷಗಳಲ್ಲಿ ಕಠಿಣವಾಗಿ ದುಡಿದು ₹7 ರಿಂದ ₹8 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಬೇಕೆಂಬ ದೊಡ್ಡ ಗುರಿ ನನ್ನದಾಗಿದೆ. ಆ ಗುರಿ ತಲುಪಿದ ತಕ್ಷಣ ನಾನು ಭಾರತೀಯ ಕಂಪನಿಯ ಹಗಲಿನ ಕೆಲಸವನ್ನು ಬಿಟ್ಟುಬಿಡುತ್ತೇನೆ. ಕೇವಲ ಅಮೆರಿಕ ಮೂಲದ ಕಂಪನಿಯ ಕೆಲಸವನ್ನು ಮಾತ್ರ ಮುಂದುವರಿಸಿ ನೆಮ್ಮದಿಯ ಜೀವನ ನಡೆಸುತ್ತೇನೆ," ಎನ್ನುವ ಮೂಲಕ ತಮ್ಮ ಮಾತು ಮುಗಿಸಿದರು.

PREV
Read more Articles on
click me!

Recommended Stories

"ಭಾರತದ ಯಾವ ರಾಜ್ಯ ನಿಂದು?" - ಸ್ಟೇಜ್ ಮೇಲೆ ಸುಳ್ಳು ಹೇಳಿ ಸಿಕ್ಕಿಬಿದ್ದ ಪಾಕಿಸ್ತಾನಿ ವ್ಯಕ್ತಿ!
ತನ್ನ ಬಳಿ ₹25 ಕೋಟಿ ಆಸ್ತಿ ಇದ್ದರೂ, ಅಪ್ಪನ ₹45 ಲಕ್ಷ ಸಾಲ ತೀರಿಸಲು ನಯಾಪೈಸೆ ಕೊಡದೆ ಬೀದಿಗೆ ತಳ್ಳಿದ ಮಗಳು!