ಜಿಮ್‌ನಲ್ಲಿ ಹಿರಿಯ ಅಧಿಕಾರಿಯ ಟವಲ್ ತಪ್ಪಿ ಬಳಸಿದ್ದಕ್ಕೆ ₹1 ಕೋಟಿ ಸಂಬಳದ ಐಟಿ ಉದ್ಯೋಗದಿಂದ ವಜಾಗೊಂಡ ಟೆಕ್ಕಿ!

Published : Sep 07, 2026, 04:20 PM IST
gym towel

ಸಾರಾಂಶ

ಸ್ವಿಟ್ಜರ್‌ಲ್ಯಾಂಡ್‌ನ ಟೆಕ್ ಕಂಪನಿಯೊಂದರಲ್ಲಿ, ಜಿಮ್ ಸೌನಾದಲ್ಲಿ ಆಕಸ್ಮಿಕವಾಗಿ ಹಿರಿಯ ಅಧಿಕಾರಿಯ ಟವಲ್ ಬಳಸಿದ್ದಕ್ಕೆ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ವಜಾಗೊಳಿಸಲಾಗಿದೆ. ಆರ್ಥಿಕ ಸಂಕಷ್ಟದ ಕಾರಣ ನೀಡಲಾಗಿದ್ದರೂ, ಈ ಸಣ್ಣ ಘಟನೆಯೇ ತನ್ನ ವಜಾಕ್ಕೆ ಕಾರಣವೆಂದು ನೌಕರ ಶಂಕಿಸಿದ್ದು, ಉದ್ಯೋಗದಾತರ ಅಹಂನಿಂದಾಗಿ ತಾನು ನಿರುದ್ಯೋಗಿಯಾಗಿರುವುದಾಗಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಜಿಮ್‌ನ ಸೌನಾದಲ್ಲಿ ಆಕಸ್ಮಿಕವಾಗಿ ಹಿರಿಯ ಅಧಿಕಾರಿಯೊಬ್ಬರ ಟವಲ್ ಬಳಸಿದ್ದಕ್ಕೆ, ಸ್ವಿಟ್ಜರ್‌ಲ್ಯಾಂಡ್‌ನ ಪ್ರಮುಖ ಟೆಕ್ ಕಂಪನಿಯೊಂದು ತನ್ನ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಕೆಲಸದಿಂದ ವಜಾಗೊಳಿಸಿದೆ. 2022ರಿಂದ ಅದೇ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಉದ್ಯೋಗಿ, ನಿರುದ್ಯೋಗಿಯಾದ ಬಳಿಕ ತಮ್ಮ ಅನುಭವವನ್ನು ರೆಡ್ಡಿಟ್ ನಲ್ಲಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಾವು ವಾರ್ಷಿಕವಾಗಿ ಸುಮಾರು ಅಂದಾಜು ₹1 ಕೋಟಿ ವೇತನ ಪಡೆಯುತ್ತಿದ್ದುದಾಗಿ ತಿಳಿಸಿರುವ ಅವರು, ನೌಕರರಿಗೆ ತಮ್ಮ ವೃತ್ತಿಜೀವನದ ಮೇಲೆ ಎಷ್ಟು ಕಡಿಮೆ ನಿಯಂತ್ರಣವಿರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದಿದ್ದಾರೆ.

ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವುದು ಅದೆಷ್ಟು ಅಸಹಾಯಕರತ್ನ ಎಂಬುದಕ್ಕೆ ನನ್ನ ಜೀವನದಲ್ಲಿ ನಡೆದ ಈ ಘಟನೆಯೇ ಉದಾಹರಣೆ. ಉದ್ಯೋಗ ಎಂದರೆ ಆಧುನಿಕ ಗುಲಾಮಗಿರಿ ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

'ಹೊಸ ಉದ್ಯೋಗ ಹುಡುಕಿಕೊಳ್ಳಿ' ಎಂದಿದ್ದ ಅಧಿಕಾರಿ

ನಾನು ಸ್ವಿಟ್ಜರ್‌ಲ್ಯಾಂಡ್‌ನ ಪ್ರಸಿದ್ಧ ಟೆಕ್ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದೆ. ಉತ್ತಮ ಸಂಬಳ ಹಾಗೂ ಕೆಲಸದ ವಾತಾವರಣ ಚೆನ್ನಾಗಿದ್ದರಿಂದ 2022ರಿಂದ ಅಲ್ಲೇ ಮುಂದುವರಿದಿದ್ದೆ. ಆದರೆ ಈ ವಾರದಿಂದ ನಾನು ಅಧಿಕೃತವಾಗಿ ನಿರುದ್ಯೋಗಿಯಾಗಿದ್ದು, ಈಗ ಈ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿರುವಂತೆ, ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಿಯಮಿತವಾಗಿ ಜಿಮ್‌ಗೆ ಹೋಗುತ್ತಿದ್ದರು. ಮೇ 8ರ ಶುಕ್ರವಾರದಂದು ಕಸರತ್ತು ಮುಗಿಸಿ ಸೌನಾಗೆ ಹೋದಾಗ, ಯಾವುದೋ ಭ್ರಮೆಯಲ್ಲಿ ಆಕಸ್ಮಿಕವಾಗಿ ಮತ್ತೊಬ್ಬರ ಟವಲ್ ಎತ್ತಿಕೊಂಡಿದ್ದರು. ದುರದೃಷ್ಟವಶಾತ್, ಆ ಟವಲ್ ಅವರದ್ದೇ ಕಂಪನಿಯ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗೆ ಸೇರಿತ್ತು.

ತಮ್ಮ ಟವಲ್ ಅನ್ನು ಉದ್ಯೋಗಿ ಬಳಸಿದ್ದನ್ನು ಕಂಡು ಆ ಅಧಿಕಾರಿ ಹೊರನೋಟಕ್ಕೆ ಶಾಂತವಾಗಿದ್ದರೂ, ನೀವು ತಕ್ಷಣವೇ ಹೊಸ ಉದ್ಯೋಗ ಹುಡುಕಿಕೊಳ್ಳುವುದು ಒಳಿತು ಎಂದು ಪರೋಕ್ಷ ಬೆದರಿಕೆ ಒಡ್ಡಿದ್ದರು. ನಂತರ, ಅಧಿಕಾರಿಯ ಸೂಚನೆಯಂತೆ ಎಂಜಿನಿಯರ್ ಜಿಮ್ ರಿಸೆಪ್ಷನ್‌ಗೆ ಹೋಗಿ ಹೊಸ ಟವಲ್ ತಂದುಕೊಟ್ಟಿದ್ದರು.

ಐದೇ ದಿನಗಳಲ್ಲಿ ಕೈಸೇರಿದ ಪಿಂಕ್ ಸ್ಲಿಪ್

ಈ ಘಟನೆ ನಡೆದ ಐದೇ ದಿನಗಳಲ್ಲಿ, ಅಂದರೆ ಮೇ 13ರ ಬೆಳಿಗ್ಗೆ 7:30ಕ್ಕೆ, HR ವಿಭಾಗದಿಂದ ಮೈಕ್ರೋಸಾಫ್ಟ್ ಟೀಮ್ಸ್ ಕರೆ ಬಂದಿದ್ದು, ಆರ್ಥಿಕ ಸಂಕಷ್ಟದ ಕಾರಣ ನೀಡಿ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಆ ಸಮಯದಲ್ಲಿ ಕಂಪನಿಯಲ್ಲಿ ಈಗಾಗಲೇ ಸರಣಿ ವಜಾಗಳು ನಡೆಯುತ್ತಿದ್ದವು. ಆದಾಗ್ಯೂ, ಸೌನಾ ಘಟನೆಯೇ ತಮ್ಮ ವಜಾಕ್ಕೆ ಮುಖ್ಯ ಕಾರಣವೆಂದು ಅವರು ಶಂಕಿಸಿದ್ದಾರೆ.

ಈ ಕುರಿತು ನಾನು ಕಾನೂನು ರಕ್ಷಣೆ ವಿಮೆ ಸಂಸ್ಥೆಯನ್ನು ಸಂಪರ್ಕಿಸಿದೆ. ಆದರೆ, ಆರ್ಥಿಕ ಕಾರಣಗಳನ್ನು ನೀಡಿ ವಜಾಗೊಳಿಸುವುದು ಕಾನೂನುಬದ್ಧವಾಗಿರುವುದರಿಂದ ಮತ್ತು ಸೌನಾ ಒಳಗೆ ಕ್ಯಾಮೆರಾಗಳು ಇರದ ಕಾರಣ ಅಧಿಕಾರಿಯ ಬೆದರಿಕೆಯನ್ನು ನಿರೂಪಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರು ತಿಳಿಸಿದರು ಎಂದು ಎಂಜಿನಿಯರ್ ಹೇಳಿದ್ದಾರೆ.

ಕಪ್ಪುಪಟ್ಟಿಗೆ ಸೇರಿಸುವ ಭೀತಿ

ಅಷ್ಟೇ ಅಲ್ಲದೆ, ಕಂಪನಿಗಳು ಅನಧಿಕೃತವಾಗಿ ನಿರ್ವಹಿಸುವ ಗುಪ್ತ 'ಕಪ್ಪುಪಟ್ಟಿ'ಗೆ (Blacklist) ನನ್ನ ಹೆಸರನ್ನು ಸೇರಿಸಲಾಗಿದೆ. ಇಂತಹ ಪಟ್ಟಿಗಳನ್ನು ಉದ್ಯೋಗದಾತರು ಪರಸ್ಪರ ಹಂಚಿಕೊಳ್ಳುವುದರಿಂದ ನನಗೆ ಮತ್ತೆ ಕೆಲಸ ಸಿಗುವುದು ಕಷ್ಟ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಲವು ಪ್ರಮುಖ ಯೋಜನೆಗಳ ಮಧ್ಯದಲ್ಲಿದ್ದರೂ ತಮ್ಮನ್ನು ತೆಗೆದುಹಾಕಿದ್ದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ವಜಾದಿಂದಾಗಿ ಕಂಪನಿಯ ಯೋಜನೆಯ ಗಡುವುಗಳನ್ನು ಮುಂದೂಡಬೇಕಾಯಿತು. ಇದನ್ನು ನೋಡಿದರೆ ಕಂಪನಿಗೆ ಉದ್ಯೋಗಿಯ ಕಾರ್ಯಕ್ಷಮತೆಗಿಂತ ವ್ಯಕ್ತಿಗತ ಅಹಂ ಮುಖ್ಯ ಎಂಬುದು ತಿಳಿಯುತ್ತದೆ. ಕಳೆದ 3 ತಿಂಗಳಿನಿಂದ ನಾನು ನಿರುದ್ಯೋಗಿಯಾಗಿದ್ದು, ಮುಂದೆಯೂ ಕೆಲಸ ಸಿಗುವ ಭರವಸೆ ಇಲ್ಲ. ಹೀಗಾಗಿ ಸ್ವಂತ ಉದ್ಯಮ ಪ್ರಾರಂಭಿಸುವುದೊಂದೇ ನನಗೆ ಉಳಿದಿರುವ ಹಾದಿ ಎಂದು ಅವರು ಬರೆದಿದ್ದಾರೆ.

PREV
Read more Articles on
click me!

Recommended Stories

ಸ್ಪಿತಿ ಕಣಿವೆಯಲ್ಲಿ ಬೌದ್ಧ ಭಿಕ್ಕುಗಳ ಜೊತೆ ಫುಟ್‌ಬಾಲ್ ಆಡಿ ನೆಟ್ಟಿಗರ ಮನಗೆದ್ದ ವಿಶೇಷ ಅತಿಥಿ!
Viral Story: ಹುಟ್ಟುಹಬ್ಬಕ್ಕೆ ಸ್ನೇಹಿತ ಕೊಟ್ಟ ಸಣ್ಣ ಗಿಫ್ಟ್, ಆದರೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವ್ಯಕ್ತಿ!