
ಮಳೆಗಾಲದಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಸಹ ಜೇಬಿನಲ್ಲಿದ್ದ ಅಥವಾ ಬ್ಯಾಗ್‌ನಲ್ಲಿರುವ ಹಣ ನೆನೆದು ಹೋಗುವುದು ಸಹಜ. ಇಂಥ ಸಮಯದಲ್ಲಿ ನೋಟುಗಳು ಹಾಳಾಗುತ್ತವೆ ಎಂದು ಅನೇಕರು ಗಾಬರಿಯಾಗುತ್ತಾರೆ. ಕೆಲವು ಸುಲಭ ಮನೆಮದ್ದುಗಳನ್ನು ಬಳಸುವ ಮೂಲಕ ತೇವವಾದ ನೋಟುಗಳನ್ನು ಸುರಕ್ಷಿತವಾಗಿ ಒಣಗಿಸುವುದು ಮಾತ್ರವಲ್ಲದೆ, ಅವುಗಳನ್ನು ಮತ್ತೆ ಹೊಸ ನೋಟುಗಳಂತೆ ಕರಕರ ಎನ್ನುವಂತೆ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ..
ನೋಟುಗಳು ತೇವವಾದ ತಕ್ಷಣ ಅವುಗಳನ್ನು ಮಡಚಲು ಅಥವಾ ಬಿಡಿಸಲು ಪ್ರಯತ್ನಿಸದೆ, ಗಾಳಿ ಚೆನ್ನಾಗಿ ಆಡುವ ಜಾಗದಲ್ಲಿ ಇಡಿ. ಮನೆಯ ಸೀಲಿಂಗ್ ಫ್ಯಾನ್ ವೇಗವಾಗಿ ಹಾಕಿ, ನೋಟುಗಳನ್ನು ಒಂದೊಂದಾಗಿ ಬೇರ್ಪಡಿಸಿ ಕೆಳಗೆ ಹರಡಿ. ಫ್ಯಾನ್ ಗಾಳಿಗೆ ನೋಟಿನಲ್ಲಿರುವ ತೇವಾಂಶ ಬೇಗನೆ ಆರಿಹೋಗುತ್ತದೆ.
ನೋಟುಗಳು ಅತಿಯಾಗಿ ನೆನೆದಾಗ ಅವು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಅವುಗಳನ್ನು ಬಲವಂತವಾಗಿ ಎಳೆದು ಬೇರ್ಪಡಿಸಲು ಹೋದರೆ ನೋಟು ಹರಿದುಹೋಗುವ ಅಪಾಯವಿರುತ್ತದೆ. ಹಾಗಾಗಿ ಅವುಗಳನ್ನು ಹಾಗೆಯೇ ಫ್ಯಾನ್ ಗಾಳಿಗೆ ಬಿಡಿ. ತೇವಾಂಶ ಕಡಿಮೆಯಾದಂತೆ ಅವು ತಾವಾಗಿಯೇ ಸುಲಭವಾಗಿ ಬೇರ್ಪಡುತ್ತವೆ.
ನೋಟುಗಳನ್ನು ಬೇಗನೆ ಒಣಗಿಸಲು ಮನೆಯಲ್ಲಿರುವ ದೋಸೆ ಹಂಚು ಅಥವಾ ಪೆನಂ ಬಳಸಬಹುದು. ಸ್ಟೌವ್ ಹಚ್ಚಿ ಹಂಚನ್ನು ಸ್ವಲ್ಪ ಬಿಸಿ ಮಾಡಿ. ಹಂಚು ಸಾಧಾರಣ ಬಿಸಿಯಾದ ನಂತರ ಸ್ಟೌವ್ ಆಫ್ ಮಾಡಿ. ನಂತರ ಆ ಬಿಸಿಯಾದ ಹಂಚಿನ ಮೇಲೆ ತೇವವಾದ ನೋಟನ್ನು ಇಡಿ. ಒಂದು ಬದಿ ಒಣಗಿದ ನಂತರ ಮತ್ತೊಂದು ಬದಿಗೆ ತಿರುಗಿಸಿ. ನೆನಪಿಡಿ, ಹಂಚು ಅತಿಯಾಗಿ ಬಿಸಿಯಾಗಿರಬಾರದು, ಇಲ್ಲದಿದ್ದರೆ ನೋಟು ಸುಟ್ಟು ಹೋಗಬಹುದು.
ನೋಟುಗಳು ನೆನೆದು ಸುಕ್ಕಾಗಿದ್ದರೆ ಅಥವಾ ಮುರುಟಿಕೊಂಡಿದ್ದರೆ ಅದನ್ನು ಸರಿಪಡಿಸಲು ಇಸ್ತ್ರಿ ಪೆಟ್ಟಿಗೆ (Iron Box) ಅತ್ಯುತ್ತಮ. ಮೊದಲು ಒಂದು ಕಾಟನ್ ಬಟ್ಟೆಯನ್ನು ಹರಡಿ, ಅದರ ಮೇಲೆ ತೇವವಾದ ನೋಟುಗಳನ್ನು ಇಡಿ. ಇಸ್ತ್ರಿ ಪೆಟ್ಟಿಗೆಯನ್ನು 'ಕಡಿಮೆ ತಾಪಮಾನ'ದಲ್ಲಿ (Low Heat) ಇಟ್ಟು ನೋಟುಗಳ ಮೇಲೆ ಲಘುವಾಗಿ ಒತ್ತಿರಿ. ಹೀಗೆ ಮಾಡುವುದರಿಂದ ನೋಟುಗಳು ಬೇಗ ಒಣಗುವುದು ಮಾತ್ರವಲ್ಲದೆ, ಬ್ಯಾಂಕಿನಿಂದ ತಂದ ಹೊಸ ನೋಟುಗಳಂತೆ ಕರಕರ ಎನ್ನುತ್ತವೆ. ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಳೆಯಲ್ಲಿ ನೆನೆದ ಹಣವನ್ನು ಯಾವುದೇ ಹಾನಿಯಿಲ್ಲದೆ ಮತ್ತೆ ಮೊದಲಿನ ಸ್ಥಿತಿಗೆ ತರಬಹುದು.