ರ‍್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ ‘I Love You’ ಮೆಸೇಜ್! ಚಾಲಕನ ಹಠಾತ್ ಪ್ರೇಮ ನಿವೇದನೆಗೆ ಯುವತಿ ಕಂಗಾಲು!

Published : Sep 07, 2026, 08:33 AM IST
Rapido Driver Allegedly Sends ‘I Love You’ to Woman

ಸಾರಾಂಶ

ರ‍್ಯಾಪಿಡೋ ಮೂಲಕ ಪಾರ್ಸೆಲ್‌ ಡೆಲಿವರಿ ಬುಕ್‌ ಮಾಡಿದ ಮಹಿಳೆಗೆ ಚಾಲಕ ಖಾಸಗಿ ಸಂಖ್ಯೆಗೆ ‘ಐ ಲವ್ ಯೂ’ ಸೇರಿದಂತೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆ ಲಿಂಕ್ಡ್‌ಇನ್‌ನಲ್ಲಿ ಘಟನೆ ಹಂಚಿಕೊಂಡ ಬಳಿಕ ಪೋಸ್ಟ್‌ ವೈರಲ್‌ ಆಗಿದ್ದು, ರಾಪಿಡೋ ಸುರಕ್ಷತಾ ಕ್ರಮಗಳ ಬಗ್ಗೆ ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ.

ರ‍್ಯಾಪಿಡೋ ಪಾರ್ಸೆಲ್ ಬುಕ್ ಮಾಡಿದ ಮಹಿಳೆಗೆ ‘ಐ ಲವ್ ಯೂ’ ಮೆಸೇಜ್!

ಆನ್‌ಲೈನ್‌ ಕ್ಯಾಬ್‌ ಮತ್ತು ಡೆಲಿವರಿ ಸೇವೆಗಳನ್ನು ಬಳಸುವ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ರ‍್ಯಾಪಿಡೋ ಮೂಲಕ ಪಾರ್ಸೆಲ್‌ ಡೆಲಿವರಿ ಬುಕ್‌ ಮಾಡಿದ್ದ ಮಹಿಳೆಯೊಬ್ಬರಿಗೆ ಚಾಲಕ ಖಾಸಗಿ ಸಂಖ್ಯೆಗೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಪಾರ್ಸೆಲ್‌ ಡೆಲಿವರಿ ಬಳಿಕ ಖಾಸಗಿ ಸಂದೇಶ

ಡಿಜಿಟಲ್ ರೆಪ್ಯುಟೇಷನ್‌ ಕ್ಷೇತ್ರದಲ್ಲಿ ಕೆಲಸ ಮಾಡುವ ಗೀತಿಕಾ ಶ್ರೀವಾಸ್ತವ ಅವರು ತಮ್ಮ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಪಾರ್ಸೆಲ್‌ ಡೆಲಿವರಿ ಬಳಿಕ ರ‍್ಯಾಪಿಡೋ ಚಾಲಕ ತಮ್ಮ ವೈಯಕ್ತಿಕ ಮೊಬೈಲ್‌ ಸಂಖ್ಯೆಗೆ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಚಾಲಕ ಯಾವುದೇ ಮುನ್ನೋಟವಿಲ್ಲದೆ ‘ಐ ಲವ್ ಯೂ’ ಎಂದು ಮೆಸೇಜ್‌ ಮಾಡಿದ್ದಾನೆ. ನಂತರ ‘ಹೇಗಿದ್ದೀರಾ?’ ಎಂಬ ರೀತಿಯ ವೈಯಕ್ತಿಕ ಪ್ರಶ್ನೆಗಳನ್ನೂ ಕೇಳಿದ್ದಾನೆ ಎಂದು ಗೀತಿಕಾ ತಿಳಿಸಿದ್ದಾರೆ.

ದೂರು ನೀಡುವುದಾಗಿ ಹೇಳಿದರೂ ವ್ಯಂಗ್ಯ?

ಚಾಲಕನ ವರ್ತನೆಯಿಂದ ಅಸಮಾಧಾನಗೊಂಡ ಗೀತಿಕಾ, ಪೊಲೀಸ್‌ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಚಾಲಕ ‘ಹೌದು, ದೂರು ನೀಡಿ’ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾನೆ ಎನ್ನಲಾಗಿದೆ. ರ‍್ಯಾಪಿಡೋದಲ್ಲೇ ದೂರು ನೀಡಿ ಎಂದು ಹೇಳುವ ಮೂಲಕ ತನ್ನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಂತೆ ವರ್ತಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಇದಾದ ಬಳಿಕ ಗೀತಿಕಾ ಆತನ ಸಂಖ್ಯೆಯನ್ನು ಬ್ಲಾಕ್‌ ಮಾಡಿ, ಘಟನೆ ಕುರಿತು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. “ಪಾರ್ಸೆಲ್‌ ಬುಕ್‌ ಮಾಡುವುದೂ ಮಹಿಳೆಯರಿಗೆ ಸುರಕ್ಷಿತವಾಗಿಲ್ಲವೇ?” ಎಂಬ ಪ್ರಶ್ನೆಯನ್ನು ಅವರು ರ‍್ಯಾಪಿಡೋ ಸಂಸ್ಥೆಯ ಮುಂದಿಟ್ಟಿದ್ದಾರೆ.

ರ‍್ಯಾಪಿಡೋ ಪ್ರತಿಕ್ರಿಯೆಗೆ ನೆಟ್ಟಿಗರ ಅಸಮಾಧಾನ

ಗೀತಿಕಾ ಅವರ ಪೋಸ್ಟ್‌ ವೈರಲ್‌ ಆದ ಬಳಿಕ ರ‍್ಯಾಪಿಡೋ ಸಪೋರ್ಟ್‌ ತಂಡ ಪ್ರತಿಕ್ರಿಯಿಸಿ, ನಡೆದ ಅನುಭವಕ್ಕೆ ವಿಷಾದ ವ್ಯಕ್ತಪಡಿಸಿದೆ. ಗ್ರಾಹಕರ ಸುರಕ್ಷತೆ ಮತ್ತು ಗೌರವಕ್ಕೆ ಸಂಸ್ಥೆ ಆದ್ಯತೆ ನೀಡುತ್ತದೆ ಎಂದು ತಿಳಿಸಿ, ರೈಡ್‌ ಐಡಿ ಹಾಗೂ ಮೊಬೈಲ್‌ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ಕೇಳಿದೆ.

ಆದರೆ, ಈ ಪ್ರತಿಕ್ರಿಯೆ ಕೇವಲ ಸಿದ್ಧ ಮಾದರಿಯ ಉತ್ತರದಂತಿದೆ ಎಂದು ಕೆಲವರು ಟೀಕಿಸಿದ್ದಾರೆ. ಆರೋಪಿತ ಚಾಲಕನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಈ ಘಟನೆ ವೈಯಕ್ತಿಕ ಮಾಹಿತಿಯ ದುರುಪಯೋಗ, ಮಹಿಳಾ ಸುರಕ್ಷತೆ ಮತ್ತು ಡೆಲಿವರಿ ಸಿಬ್ಬಂದಿಯ ಹೊಣೆಗಾರಿಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

PREV
Read more Articles on
click me!

Recommended Stories

66 ಕೆಜಿ ಚಿನ್ನ, 335 ಕೆಜಿ ಬೆಳ್ಳಿ ತೊಡುವ ದೇವರಿಗೆ 703 ಕೋಟಿ ರೂ. ಇನ್ಶೂರೆನ್ಸ್! ಎಲ್ಲಿದೆ ಈ ಮಹಾಗಣಪತಿ?
​"ನಿಮ್ಮ ವೆಬ್‌ಸೈಟ್ ತೀರಾ ಅಸಹ್ಯವಾಗಿದೆ" - ಉದ್ಯೋಗಾಕಾಂಕ್ಷಿಯ ಕಮೆಂಟ್‌ಗೆ ಬೆಂಕಿ ಉತ್ತರ ನೀಡಿದ ಬೆಂಗಳೂರು ಸ್ಟಾರ್ಟ್‌ಅಪ್ ಸಿಇಒ