
ಪಿರಾನ್ಹಾ ಮೀನುಗಳ ದಾಳಿಯಲ್ಲಿ ತನ್ನ ಬೆರಳಿನ ಒಂದು ಭಾಗವೇ ಹೋಯ್ತು ಅಂತ ಯುವಕನೊಬ್ಬ ಹೇಳಿಕೊಂಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಇದು ನಕಲಿ ವಿಡಿಯೋ ಎಂದು ಟೀಕೆಗಳು ಹೆಚ್ಚಾದ ಬೆನ್ನಲ್ಲೇ, ಆ ಯುವಕ ಮತ್ತೆ ಪ್ರತಿಕ್ರಿಯಿಸಿದ್ದಾನೆ. ವಿಡಿಯೋದಲ್ಲಿರುವುದು ನಿಜವಾದ ಘಟನೆ, ಪಿರಾನ್ಹಾ ದಾಳಿಯಿಂದ ನನ್ನ ಬೆರಳಿನ ತುಂಡು ಹೋಗಿದೆ ಎಂದು ವಾದಿಸಿದ್ದಾನೆ. ಆದರೂ, ಈ ಘಟನೆಯ ಸತ್ಯಾಸತ್ಯತೆಯನ್ನು ಇನ್ನೂ ಸ್ವತಂತ್ರವಾಗಿ ಖಚಿತಪಡಿಸಲಾಗಿಲ್ಲ.
ಆಗಸ್ಟ್ 25 ರಂದು ಲಿಯಾಂಡ್ರೋ ಅಪೋಂಟೆ ಎಂಬಾತ ಫೇಸ್‌ಬುಕ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದ. 'ಬೆಲ್ಲಾವಿಸ್ಟಾದಲ್ಲಿ ಪಿರಾನ್ಹಾಗಳು ನನ್ನ ಬೆರಳನ್ನು ಬಹುತೇಕ ಕಚ್ಚಿ ತುಂಡರಿಸಿದ ಕ್ಷಣ' ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ಬರೆದುಕೊಂಡಿದ್ದ. ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ನೀರಿನಲ್ಲಿದ್ದಾನೆ. ಅವನ ಬೆನ್ನಿಗೆಲ್ಲಾ ಮೀನುಗಳು ಕಚ್ಚಿ ಹಿಡಿದುಕೊಂಡಿವೆ. ಆತ ಕೈಯಿಂದ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ವೈರಲ್ ಆಗ್ತಿದ್ದಂತೆ, ಇದರ ಸತ್ಯಾಸತ್ಯತೆ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ. ಮೀನುಗಳ ಚಲನೆ ಸಹಜವಾಗಿಲ್ಲ, ಇದು ಕೃತಕವಾಗಿ ಸೃಷ್ಟಿಸಿದ ದೃಶ್ಯದಂತಿದೆ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು, ಮೀನುಗಳು ಕಚ್ಚಿದರೂ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಿರಾನ್ಹಾಗಳು ದೇಹಕ್ಕೆ ಅಂಟಿಕೊಳ್ಳುವುದಿಲ್ಲ, ಬದಲಾಗಿ ಮಾಂಸವನ್ನು ಕಚ್ಚಿ ಎಳೆಯುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಆದರೆ, ಈ ಎಲ್ಲಾ ಟೀಕೆಗಳಿಗೆ ಅಪೋಂಟೆ ಪ್ರತಿಕ್ರಿಯಿಸಿದ್ದು, 'ಅವು ನನ್ನ ಬೆರಳಿನ ಒಂದು ತುಂಡನ್ನು ತಿಂದಿವೆ' ಎಂದು ಮತ್ತೆ ಹೇಳಿಕೊಂಡಿದ್ದಾನೆ. ವಿಡಿಯೋದಲ್ಲಿರುವುದು ನಿಜವಾದ ಘಟನೆ ಎನ್ನುವುದು ಅವನ ವಾದ. ಆದರೂ, ವಿಡಿಯೋದಲ್ಲಿರುವ ಮೀನುಗಳು ನಿಜವಾಗಿಯೂ ಪಿರಾನ್ಹಾಗಳೇ? ಈ ಘಟನೆ ನಿಖರವಾಗಿ ಎಲ್ಲಿ ನಡೆಯಿತು? ಎಂಬ ಬಗ್ಗೆ ಅಪೋಂಟೆ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ.