
ಪವಿತ್ರ ಕೈಲಾಸ ಪರ್ವತದ ದರ್ಶನ ಪಡೆದು ಪುನೀತರಾಗಬೇಕೆಂಬ ಹಂಬಲದೊಂದಿಗೆ ತಮಿಳುನಾಡಿನ 21 ಯಾತ್ರಿಕರು ನಗುನಗುತ್ತಲೇ ಪ್ರಯಾಣ ಬೆಳೆಸಿದ್ದರು. ಆದರೆ, ನೇಪಾಳದ ಗಡಿ ತಲುಪುತ್ತಿದ್ದಂತೆ ಅವರ ಪಾಲಿಗೆ ಪ್ರಕೃತಿ ಘೋರ ದುಃಸ್ವಪ್ನವಾಗಿ ಮಾರ್ಪಟ್ಟಿತು. ಕೆರಳಿದ ತೈಮೂರ್ ಪರ್ವತ ಶ್ರೇಣಿಯ ಸೈಬ್ರು ಬೇಸ್ ಹಾಗೂ ಕೆರುಂಗ್ ನಡುವೆ ದಿಢೀರನೆ ಆಪ್ಪಳಿಸಿದ ಭೀಕರ ಬಿರುಗಾಳಿ, ಧಾರಾಕಾರ ಮಳೆ ಮತ್ತು ಬಂಡೆಕಲ್ಲುಗಳ ಸಸರ ಇಡೀ ಮಾರ್ಗವನ್ನು ಸಾವಿನ ಕೂಪವನ್ನಾಗಿ ಮಾಡಿತು. ಪ್ರವಾಹದ ಅಬ್ಬರಕ್ಕೆ ಸಿಲುಕಿ, ಮುಂದೇನು ಎಂಬುದು ತಿಳಿಯದೆ ಸಾವು ಕಣ್ಣಮುಂದೆ ಕಾಣಿಸುತ್ತಿದ್ದಾಗ, ಭಾರತೀಯ ದಂಪತಿಯೊಬ್ಬರು ತೋರಿದ ನಿಸ್ವಾರ್ಥ ಧೈರ್ಯ ಹಾಗೂ ಒಂದು ಸೀರೆ 21 ಜನರ ಪಾಲಿಗೆ ಸಂಜೀವಿನಿಯಾಯಿತು. ಈ ಕುರಿತು ಸಂಪೂರ್ಣ ವಿವರವನ್ನೊಮ್ಮೆ ನೋಡಿಕೊಂಡು ಬರೋಣ ಬನ್ನಿ.
ಪರ್ವತದ ಇಳಿಜಾರಿನಲ್ಲಿ ಪ್ರವಾಹದ ನೀರು ಭೋರ್ಗರೆದು ಹರಿಯುತ್ತಿತ್ತು. ಅಲ್ಲಿಂದ ಪಾರಾಗಲು ಇದ್ದ ಏಕೈಕ ಹಾದಿಯೆಂದರೆ ಮೇಲಿದ್ದ ಕಡಿದಾದ, ಜಾರುವ ಕೆಸರುಮಯ ಬೆಟ್ಟವನ್ನು ಏರುವುದು ಮಾತ್ರ. ಜೀವ ಉಳಿಸಿಕೊಂಡರೆ ಸಾಕೆಂದು ಪ್ರತಿಯೊಬ್ಬರೂ ದಿಕ್ಕಾಪಾಲಾಗಿ ಓಡುತ್ತಿದ್ದರು. ಭೀಕರ ವಾತಾವರಣ ಎಷ್ಟಿತ್ತೆಂದರೆ, ಯಾರೂ ಹಿಂತಿರುಗಿ ನೋಡುವ ಧೈರ್ಯವನ್ನೂ ಮಾಡುತ್ತಿರಲಿಲ್ಲ. ಇದೇ ವೇಳೆ, ಭಾರತೀಯ ರಾಯಭಾರ ಕಚೇರಿಯ ಚೆಕ್‌ಪಾಯಿಂಟ್ ಬಳಿ ಯಾತ್ರಿಕರಿದ್ದ ಕಾರು ನೀರಿನ ಸುಳಿಗೆ ಸಿಲುಕಿಕೊಂಡಿತ್ತು. ಕಾರು ಕೇವಲ ಐದು ಅಡಿ ಹೆಚ್ಚು-ಕಡಿಮೆ ನಗರಿದ್ದರೆ, ಒಳಗಿದ್ದವರೆಲ್ಲರೂ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದರು! ಅದೃಷ್ಟವಶಾತ್ ಚಾಲಕನ ಬದಿಯ ಬಾಗಿಲು ತೆರೆದು ಪ್ರಯಾಣಿಕರು ಹೇಗೋ ಹೊರಬಂದರು. ಆದರೆ ನಿಜವಾದ ಸವಾಲು ಕಾದಿದ್ದು ಬೆಟ್ಟ ಏರುವಾಗ.
ತಮಿಳುನಾಡಿನ ಮಾಯವರಂ ನಿವಾಸಿಗಳಾದ ರತ್ನಕುಮಾರ್ ಮತ್ತು ಅವರ ಪತ್ನಿ ಪೂಂಗುಳಲಿ ಈಗಾಗಲೇ ಸುರಕ್ಷಿತವಾಗಿ ಬೆಟ್ಟದ ಮೇಲ್ಭಾಗವನ್ನು ತಲುಪಿದ್ದರು. ಆದರೆ, ಕೆಳಗೆ 4-5 ಮಹಿಳೆಯರು ಕೆಸರಿನಲ್ಲಿ ಪದೇ ಪದೇ ಜಾರಿ ಬೀಳುತ್ತಾ, ಮೇಲೇರಲಾಗದೆ ಸಾವಿನ ಭಯದಿಂದ ಚೀರುತ್ತಿರುವುದನ್ನು ರತ್ನಕುಮಾರ್ ಗಮನಿಸಿದರು. ತಮ್ಮ ಜೀವದ ಹಂಗು ತೊರೆದ ರತ್ನಕುಮಾರ್ ತಕ್ಷಣವೇ ಅಪಾಯದ ವಲಯಕ್ಕೆ ಧುಮುಕಿದರು. ಪತ್ನಿ ಪೂಂಗುಳಲಿ ಅವರ ಸೀರೆಯನ್ನು ಬಿಚ್ಚಿ, ಅದನ್ನೇ ಬಲವಾದ ಹಗ್ಗದಂತೆ ಬಳಸಿದರು. ಪೂಂಗುಳಲಿ ಬೆಟ್ಟದ ಮೇಲೆಯಿಂದ ಸೀರೆಯ ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೆಂಬಲ ನೀಡಿದರೆ, ರತ್ನಕುಮಾರ್ ಕೆಳಗಿನಿಂದ ಪ್ರತಿಯೊಬ್ಬ ಮಹಿಳೆಯನ್ನು ಆ ಸೀರೆಯ ನೆರವಿನಿಂದ ಮೇಲಕ್ಕೆ ಎಳೆಯತೊಡಗಿದರು. ಪ್ರವಾಹದ ಆರ್ಭಟದ ನಡುವೆಯೂ ರತ್ನಕುಮಾರ್ ಮತ್ತು ಪೂಂಗುಳಲಿ ದಂಪತಿ 21 ಯಾತ್ರಿಕರನ್ನು ಜಾರುವ ಬೆಟ್ಟದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಜೀವದಾನ ಮಾಡಿದರು.
ಆ ಭಯಾನಕ ಕ್ಷಣವನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಾ ಯಾತ್ರಿಕಿ ಶಿವರಂಜನಿ, "ಆ ಘೋರ ವಾತಾವರಣದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವ ಉಳಿಸಿಕೊಂಡು ಮೇಲೇರುತ್ತಿದ್ದರೆ ಹೊರತು ಯಾರೂ ಕೆಳಗೆ ತಿರುಗಿಯೂ ನೋಡಲಿಲ್ಲ. ಆದರೆ ರತ್ನಕುಮಾರ್ ಭಾಯ್ ನಮಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಳಗೆ ಬಂದರು. ಆ ಕ್ಷಣದಲ್ಲಿ, ಅವರಿಬ್ಬರೂ ನಮಗೆ ಸಾಕ್ಷಾತ್ ಪಾರ್ವತಿ ಮತ್ತು ಪರಮೇಶ್ವರನಂತೆ ಕಾಣುತ್ತಿದ್ದರು. ನಾವು ಕಣ್ಣೀರಿನಿಂದ ಕೈಜೋಡಿಸಿ ಅವರಿಗೆ ನಮಸ್ಕರಿಸಿದೆವು," ಎಂದು ಭಾವನಾತ್ಮಕವಾಗಿ ನುಡಿದರು.
ಸಾವಿನ ದವಡೆಯಿಂದ ಪಾರಾದ ನಂತರವೂ ಸಂಕಷ್ಟ ತೀರಲಿಲ್ಲ. ಇಡೀ ಗುಂಪು ಎರಡು ದಿನಗಳ ಕಾಲ ಕೊರೆಯುವ ಚಳಿಯಲ್ಲಿ, ಸ್ಥಳೀಯರು ನೀಡಿದ ಅಲ್ಪಸ್ವಲ್ಪ ತಿಂಡಿ ಮತ್ತು ನೀರನ್ನು ಸೇವಿಸಿ ಬದುಕಿುಳಿಯಿತು. ವಿಷಯ ತಿಳಿದ ತಕ್ಷಣ ಕ್ರಿಯಾಶೀಲರಾದ ಭಾರತೀಯ ರಾಯಭಾರ ಕಚೇರಿ, ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ತಮಿಳುನಾಡು ಸರ್ಕಾರವು 48 ಗಂಟೆಗಳಲ್ಲಿ ಕ್ಷಿಪ್ರ ವಾಯು ರಕ್ಷಣಾ ಕಾರ್ಯಾಚರಣೆ (Air Rescue) ನಡೆಸಿತು. ಕಠ್ಮಂಡುವಿನಿಂದ ವಿಶೇಷ ವಿಮಾನದ ಮೂಲಕ ಎಲ್ಲ 21 ಯಾತ್ರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು. ಸಾವಿನ ಅಂಚಿನಲ್ಲಿದ್ದ 21 ಜೀವಗಳಿಗೆ ಪೂಂಗುಳಲಿ ಅವರ ಸೀರೆ ಮತ್ತು ದಂಪತಿಯ ಧೈರ್ಯವೇ ರಕ್ಷಾಕವಚವಾಯಿತು. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ದಂಪತಿಯ ಸಾಹಸಗಾಥೆಯೇ ಜೀವಂತ ಸಾಕ್ಷಿ.