Nepal Flood: ಪ್ರವಾಹದಿಂದ ಅನಾಥವಾದ ಮಗುವಿಗೆ ತಾಯಿಯ ಮಡಿಲಾದ ಸೇನಾ ಸಿಬ್ಬಂದಿ; ಪರಿಸ್ಥಿತಿ ಹುಟ್ಟುಹಾಕಿದ ಮಾತೃ ಪ್ರೀತಿ!

Published : Aug 29, 2026, 04:50 PM IST
Nepal Flood

ಸಾರಾಂಶ

ನೇಪಾಳದ ಭೀಕರ ಪ್ರವಾಹದ ನಡುವೆ, ತನ್ನ ಕುಟುಂಬದಿಂದ ಬೇರ್ಪಟ್ಟ ಪುಟ್ಟ ಬಾಲಕನೊಬ್ಬ ರಕ್ಷಣಾ ಸಿಬ್ಬಂದಿಗೆ ಸಿಕ್ಕಿದ್ದಾನೆ. ಭಯದಿಂದ ಅಳುತ್ತಿದ್ದ ಆ ಕಂದನಿಗೆ ನೇಪಾಳ ಸೇನೆಯ ಮಹಿಳಾ ಸಿಬ್ಬಂದಿಯೊಬ್ಬರು ತಾಯಿಯ ಮಮತೆಯಿಂದ ಅಪ್ಪಿಕೊಂಡು ಆರೈಕೆ ಮಾಡಿದ ಹೃದಯಸ್ಪರ್ಶಿ ಘಟನೆ ಇದು. ಈ ದೃಶ್ಯವು ವಿಪತ್ತಿನ ಸಮಯದಲ್ಲಿಯೂ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ಸಾರುತ್ತದೆ.

ನೇಪಾಳದಲ್ಲಿ ಪ್ರವಾಹದ ಅಬ್ಬರ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಉಕ್ಕಿ ಹರಿದ ನೀರು, ಕುಸಿದ ಮನೆಗಳು, ಕಣ್ಮರೆಯಾದ ಕುಟುಂಬಗಳು, ಎಲ್ಲೆಡೆ ನೋವು, ಆತಂಕ ಮತ್ತು ಅಸಹಾಯಕತೆಯ ದೃಶ್ಯಗಳು ಕಾಣಿಸುತ್ತಿವೆ. ಆದರೆ ಈ ಭೀಕರ ಪರಿಸ್ಥಿತಿಯ ನಡುವೆಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರುವ ಒಂದು ಹೃದಯಸ್ಪರ್ಶಿ ಚಿತ್ರ ಇದೀಗ ಎಲ್ಲರ ಮನಸ್ಸನ್ನು ಮುಟ್ಟುತ್ತಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ತಪ್ಪಿಸಿಕೊಂಡ ಪುಟ್ಟ ಬಾಲಕ!

ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪುಟ್ಟ ಬಾಲಕನೊಬ್ಬ ರಕ್ಷಣಾ ಸಿಬ್ಬಂದಿಯ ಕೈಗೆ ಸಿಕ್ಕಿದ್ದಾನೆ. ಅಪಾಯದಿಂದ ಆತನನ್ನು ಸುರಕ್ಷಿತವಾಗಿ ಹೊರತರಲಾಗಿದ್ದರೂ, ಆ ಕಂದಮ್ಮನ ಮನಸ್ಸಿನಲ್ಲಿದ್ದ ಭಯ ಮಾತ್ರ ಕಡಿಮೆಯಾಗಿರಲಿಲ್ಲ. ತನ್ನ ಹೆಸರೇನು, ಕುಟುಂಬ ಎಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದಷ್ಟು ಆತ ಗೊಂದಲಕ್ಕೊಳಗಾಗಿದ್ದ. ತನ್ನವರನ್ನು ಕಳೆದುಕೊಂಡ ಭಯದಲ್ಲಿ ಕಣ್ಣೀರಿಡುತ್ತಿದ್ದ ಆ ಮಗುವಿನ ಮುಖ ನೋಡುವುದೇ ಮನಕಲಕುವಂತಿತ್ತು. ಸುತ್ತಲೂ ಅಪರಿಚಿತ ಮುಖಗಳು, ಪರಿಚಯವಿಲ್ಲದ ಜಾಗ, ತನ್ನವರ ಸುಳಿವೇ ಇಲ್ಲ. ಆ ಪುಟ್ಟ ಹೃದ ಯಾವುದೇ ದೊಡ್ಡ ಸಹಾಯವಲ್ಲ, ತನ್ನನ್ನು ಅಪ್ಪಿಕೊಂಡು ನೀನು ಸುರಕ್ಷಿತವಾಗಿದ್ದೀಯ ಎಂದು ಹೇಳುವ ಒಂದು ಮಮತೆಯ ಸ್ಪರ್ಶ. ಅದೇ ಸಮಯದಲ್ಲಿ ನೇಪಾಳ ಸೇನೆಯ ಮಹಿಳಾ ಸಿಬ್ಬಂದಿಯೊಬ್ಬರು ಆ ಮಗುವಿನ ಬಳಿಗೆ ಬಂದಿದ್ದಾರೆ. ಸಮವಸ್ತ್ರದಲ್ಲಿದ್ದ ಆಕೆ ಮಗುವನ್ನು ತನ್ನ ಬಳಿಗೆ ಸೆಳೆದುಕೊಂಡು ಮಮತೆಯಿಂದ ಆರೈಕೆ ಮಾಡುತ್ತಿರುವ ದೃಶ್ಯವೇ ಈಗ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.

ತಾಯಿಯ ಮಡಿಲಿನಂತಾದ ಒಂದು ಅಪ್ಪುಗೆ!

ತಾಯಿಯನ್ನು ಹುಡುಕುತ್ತಿರುವ ಕಂದಮ್ಮನಿಗೆ ಆ ಕ್ಷಣದಲ್ಲಿ ಸಿಕ್ಕಿದ್ದು ತಾಯಿಯ ಮಡಿಲಿನಂತಾದ ಒಂದು ಅಪ್ಪುಗೆ. ಸೈನಿಕಳ ಮುಖದಲ್ಲಿ ಕರ್ತವ್ಯದ ಗಂಭೀರತೆ ಇದ್ದರೂ, ಮಗುವನ್ನು ಅಪ್ಪಿಕೊಂಡ ಕ್ಷಣದಲ್ಲಿ ಆ ಗಂಭೀರತೆಯ ಹಿಂದೆ ಅಡಗಿದ್ದ ತಾಯ್ತನದ ಮಮತೆ ಎದ್ದು ಕಾಣುತ್ತದೆ. ಮಗುವಿನ ತಲೆಯನ್ನು ಸವರಿಸುತ್ತಾ, ಅದರ ಭಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಆ ದೃಶ್ಯ, ಪ್ರವಾಹದ ಭೀಕರತೆಯ ನಡುವೆ ಮೂಡಿದ ಅಪರೂಪದ ಮಾನವೀಯ ಕ್ಷಣವಾಗಿ ಕಾಣುತ್ತದೆ.

ಸೇನಾ ಸಿಬ್ಬಂದಿಯಲ್ಲಿ ಕಾಣಿಸಿಕೊಂಡ ಮಾನವೀಯತೆ!

ಒಬ್ಬ ಸೈನಿಕನ ಕರ್ತವ್ಯ ಎಂದರೆ ಕೇವಲ ದೇಶವನ್ನು ರಕ್ಷಿಸುವುದಲ್ಲ. ಸಂಕಷ್ಟದಲ್ಲಿರುವ ಜನರ ಜೀವ ಉಳಿಸುವುದು, ಅಸಹಾಯಕರಿಗೆ ಧೈರ್ಯ ನೀಡುವುದು ಮತ್ತು ಭಯಗೊಂಡವರಲ್ಲಿ ಭರವಸೆ ಮೂಡಿಸುವುದೂ ಅವರ ಕರ್ತವ್ಯವೇ. ಈ ಪುಟ್ಟ ಕಂದಮ್ಮನ ವಿಚಾರದಲ್ಲೂ ಅದೇ ಮಾನವೀಯತೆ ಕಾಣಿಸಿಕೊಂಡಿದೆ.

ಕಂದನಿಗೆ ಆಧಾರವಾದ ಸೇನಾ ಸಿಬ್ಬಂದಿ!

ಚಿತ್ರದಲ್ಲಿರುವ ಬಾಲಕನ ಕುಟುಂಬವನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆತ ತನ್ನ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಆತನ ಕುಟುಂಬವನ್ನು ಹುಡುಕುವ ಕಾರ್ಯವೂ ನಡೆಯುತ್ತಿದೆ. ಈ ನಡುವೆ ಆತನಿಗೆ ರಕ್ಷಣಾ ಸಿಬ್ಬಂದಿಯೇ ಆಧಾರವಾಗಿದ್ದಾರೆ. ಪ್ರವಾಹದ ನೀರು ಮನೆಗಳನ್ನು ಕೊಚ್ಚಿಕೊಂಡು ಹೋಗಬಹುದು. ಸಂಬಂಧಗಳನ್ನು ಕ್ಷಣಾರ್ಧದಲ್ಲಿ ದೂರ ಮಾಡಬಹುದು. ಆದರೆ ಮನುಷ್ಯನೊಳಗಿನ ಕರುಣೆ ಮತ್ತು ಪ್ರೀತಿಯನ್ನು ಮಾತ್ರ ಯಾವುದೇ ಪ್ರವಾಹ ಕೊಚ್ಚಿಕೊಂಡು ಹೋಗಲು ಸಾಧ್ಯವಿಲ್ಲ. ಈ ಚಿತ್ರ ನಮಗೆ ಅದನ್ನೇ ನೆನಪಿಸುತ್ತದೆ.

ಅಪ್ಪಿಕೊಂಡ ಮಮತೆಯ ಕೈಗಳು!

ತನ್ನವರನ್ನು ಹುಡುಕುತ್ತಾ ಕಣ್ಣೀರಿಟ್ಟಿದ್ದ ಆ ಕಂದಮ್ಮನಿಗೆ, ಆ ಕ್ಷಣದಲ್ಲಿ ಸಿಕ್ಕಿದ್ದು ಕೇವಲ ರಕ್ಷಣೆ ಅಲ್ಲ, ‘ನೀನು ಒಬ್ಬಂಟಿಯಲ್ಲ’ ಎಂಬ ಭರವಸೆ. ವಿಪತ್ತಿನ ಸಮಯದಲ್ಲಿ ಹೀರೋಗಳು ಯಾವಾಗಲೂ ಕೇಪ್ ಧರಿಸಿರುವುದಿಲ್ಲ. ಕೆಲವೊಮ್ಮೆ ಅವರು ಸಮವಸ್ತ್ರ ಧರಿಸಿರುತ್ತಾರೆ. ಕೆಲವೊಮ್ಮೆ ಅವರ ಕೈಯಲ್ಲಿರುವುದು ಆಯುಧವಲ್ಲ, ಅಳುತ್ತಿರುವ ಮಗುವನ್ನು ಎದೆಗೆ ಅಪ್ಪಿಕೊಳ್ಳುವ ಮಮತೆಯ ಕೈ ಅಷ್ಟೇ. ನೇಪಾಳದ ಪ್ರವಾಹದ ನೋವಿನ ನಡುವೆ ಮೂಡಿದ ಈ ಒಂದು ದೃಶ್ಯ, ಮಾನವೀಯತೆಗೆ ಗಡಿ ಇಲ್ಲ, ಮಮತೆಗೆ ಭಾಷೆಯ ಅಗತ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಪುಟ್ಟ ಕಂದಮ್ಮ ತನ್ನ ಕುಟುಂಬವನ್ನು ಶೀಘ್ರದಲ್ಲೇ ಸೇರಿಕೊಳ್ಳಲಿ... ಅದರ ಕಣ್ಣೀರನ್ನು ಒರೆಸಲು ಮತ್ತೆ ತನ್ನವರ ಮಡಿಲು ಸಿಗಲಿ ಎಂಬುದೇ ಈ ಕ್ಷಣವನ್ನು ನೋಡುವ ಪ್ರತಿಯೊಬ್ಬರ ಹಾರೈಕೆಯಾಗಿದೆ.

PREV
Read more Articles on
click me!

Recommended Stories

ಪ್ರವಾಹದಲ್ಲಿ ಕೊಚ್ಚಿಬಂದ ಬ್ಯಾಂಕ್‌ ಲಾಕರ್..‌ ಅದೃಷ್ಟ ಖುಲಾಯಿಸಿತು ಎಂದು 57 ಲಕ್ಷ ರೂಪಾಯಿ ದೋಚಿದರು
ಜಿಮ್‌ನಲ್ಲಿ ಮ್ಯೂಜಿಕ್‌ ಹಾಕೋದು ಯಾಕೆ? ಇಲ್ಲಿದೆ ಆಸಕ್ತಿದಾಯಕ 5 ಕಾರಣಗಳು