ಪ್ರವಾಹದಲ್ಲಿ ಕೊಚ್ಚಿಬಂದ ಬ್ಯಾಂಕ್‌ ಲಾಕರ್..‌ ಅದೃಷ್ಟ ಖುಲಾಯಿಸಿತು ಎಂದು 57 ಲಕ್ಷ ರೂಪಾಯಿ ದೋಚಿದರು

Published : Aug 29, 2026, 04:33 PM IST
nepal bank locker money

ಸಾರಾಂಶ

ನೇಪಾಳದ ರಸುವಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ನಗದು ತುಂಬಿದ ಭದ್ರತಾ ಪೆಟ್ಟಿಗೆಯೊಂದು ನೆರೆಯ ಧಾಡಿಂಗ್ ಜಿಲ್ಲೆಯ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿದೆ. ಈ ಪೆಟ್ಟಿಗೆಯನ್ನು ಕಂಡ ಸ್ಥಳೀಯರು ಒಡೆದು ಹಣ ದೋಚಿದ್ದು, ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 29 ಜನರನ್ನು ಬಂಧಿಸಿ ಸುಮಾರು 57 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

ನೇಪಾಳದಲ್ಲಿ ಒಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬ್ಯಾಂಕ್ ಅಥವಾ ಕಚೇರಿಯೊಂದರ ಭದ್ರತಾ ಪೆಟ್ಟಿಗೆಯನ್ನು (Safe Locker) ಪತ್ತೆಹಚ್ಚಿದ ಸ್ಥಳೀಯರು, ಅದನ್ನು ಒಡೆದು ಅದರಲ್ಲಿದ್ದ ಕೋಟ್ಯಂತರ ರೂಪಾಯಿ ಹಣವನ್ನು ದೋಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಾಲ ಬೀಸಿದ್ದು, ತಕ್ಷಣವೇ 29 ಜನರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ 92 ಲಕ್ಷಕ್ಕೂ ಅಧಿಕ ನೇಪಾಳಿ ರೂಪಾಯಿಗಳನ್ನು (ಭಾರತೀಯ ಮೌಲ್ಯ ಸುಮಾರು 57.9 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ.

ನದಿಯ ದಡದಲ್ಲಿ ಸಿಕ್ಕಿದ್ದ ಭದ್ರತಾ ಪೆಟ್ಟಿಗೆ

ನೇಪಾಳದ ಧಾಡಿಂಗ್ ಜಿಲ್ಲೆಯ ಗಲ್ಚಿ ಗ್ರಾಮೀಣ ಮುನ್ಸಿಪಾಲಿಟಿಯ ಬೆಲ್ಖೋಲಾ ಎಂಬಲ್ಲಿ ತ್ರಿಶೂಲಿ ನದಿಯ ದಡದಲ್ಲಿ ಈ ಭದ್ರತಾ ಪೆಟ್ಟಿಗೆ ಪತ್ತೆಯಾಗಿತ್ತು. ರಸುವಾ ಜಿಲ್ಲೆಯ ಭೋಟೆಕೋಶಿ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಪ್ರವಾಹದ ನೀರಿಗೆ ಈ ಪೆಟ್ಟಿಗೆ ಕೊಚ್ಚಿಬಂದಿತ್ತು. ನದಿಯ ಪ್ರವಾಹದ ಜೊತೆ ತೇಲಿಬಂದ ಪೆಟ್ಟಿಗೆ ಕೊನೆಗೆ ನೆರೆಯ ಧಾಡಿಂಗ್ ಜಿಲ್ಲೆಯ ನದಿ ದಡದಲ್ಲಿ ಬಂದು ನಿಂತಿತ್ತು.

ನದಿಯ ದಡದಲ್ಲಿ ಬಿದ್ದಿದ್ದ ಭದ್ರತಾ ಪೆಟ್ಟಿಗೆಯನ್ನು ನೋಡಿದ ಸ್ಥಳೀಯ ನಿವಾಸಿಗಳು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವ ಬದಲು ತಾವೇ ಅದನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಈ ಕುರಿತು ಪೊಲೀಸರಿಗೆ ರಹಸ್ಯ ಮಾಹಿತಿ ಸಿಕ್ಕ ತಕ್ಷಣ ಹಿರಿಯ ಅಧಿಕಾರಿಗಳ ನೇತೃತ್ವದ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿತು. ಪ್ರಾಥಮಿಕ ತನಿಖೆಯ ಭಾಗವಾಗಿ ಪೊಲೀಸರು ಶಂಕಿತ ಪ್ರದೇಶಗಳ ಮೇಲೆ ದಾಳಿ ನಡೆಸಿ 29 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳನ್ನು ತಪಾಸಣೆ ನಡೆಸಿದಾಗ ಅವರ ಬಳಿ ಕಳವು ಮಾಡಲಾಗಿದ್ದ ಒಟ್ಟು 92.68 ಲಕ್ಷ ನೇಪಾಳಿ ರೂಪಾಯಿಗಳು (INR 57.9 ಲಕ್ಷ) ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಧಾಡಿಂಗ್ ಜಿಲ್ಲಾ ಪೊಲೀಸ್ ಕಚೇರಿ ತಿಳಿಸಿದೆ. ವಶಪಡಿಸಿಕೊಂಡ ಈ ಅಪಾರ ಪ್ರಮಾಣದ ನಗದು ಹಣದ ಮೂಲ ಯಾವುದು ಮತ್ತು ಈ ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 29 ಮಂದಿಯಲ್ಲಿ 14 ಮಂದಿಯ ಹೆಸರನ್ನು ಪೊಲೀಸರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪವನ್ ಪೌಡೆಲ್ (27), ಬೀರ್ ಬಿ. ರಾಣಾ ಮಗರ್ (41), ವಿನೋದ್ ಗಿರಿ (25), ನವರಾಜ್ ಭೇಟುವಾಲ್ (33), ಪೂರ್ಣ ಲಾಲ್ ಶ್ರೇಷ್ಠ (40), ವಿಷ್ಣುಮಣಿ ಅಧಿಕಾರಿ (31), ಕೃಷ್ಣ ಮಗರ್ (36), ಶಿವ ಬಿ. ರಾಣಾ ಮಗರ್ (49), ಯುವರಾಜ್ ಅಧಿಕಾರಿ (46), ಸುಶಾಂತ್ ಶ್ರೇಷ್ಠ (47), ಸುಚಿಮ್ ಬಿ. ರಾಣಾ ಮಗರ್ (46), ಸಬಿನ್ ಶ್ರೇಷ್ಠ (24), ಪ್ರೇಮ್ ಬಿ. ರಾಣಾ ಮಗರ್ (43) ಮತ್ತು ಅನಿಲ್ ಭೇಟುವಾಲ್ (19) ಸೇರಿದ್ದಾರೆ. ಇವರೆಲ್ಲರೂ ಗಲ್ಚಿ ಗ್ರಾಮೀಣ ಮುನ್ಸಿಪಾಲಿಟಿಯ ಮಸ್ತಾರ್ ನಿವಾಸಿಗಳಾಗಿದ್ದಾರೆ. ಈ ಭದ್ರತಾ ಪೆಟ್ಟಿಗೆ ಯಾರಿಗೆ ಸೇರಿದ್ದು? ಪ್ರವಾಹದ ತೀವ್ರತೆಗೆ ಆ ಪೆಟ್ಟಿಗೆ ಕೊಚ್ಚಿಹೋಗಿದ್ದು ಹೇಗೆ? ಮತ್ತು ಅದರಲ್ಲಿ ಅಷ್ಟೊಂದು ಪ್ರಮಾಣದ ಹಣವೇಕಿತ್ತು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಪೆಟ್ಟಿಗೆಯ ಮೂಲ ಮಾಲೀಕರ ಪತ್ತೆಗೂ ಪ್ರಯತ್ನ ಮುಂದುವರಿದಿದೆ.

PREV
Read more Articles on
click me!

Recommended Stories

ಜಿಮ್‌ನಲ್ಲಿ ಮ್ಯೂಜಿಕ್‌ ಹಾಕೋದು ಯಾಕೆ? ಇಲ್ಲಿದೆ ಆಸಕ್ತಿದಾಯಕ 5 ಕಾರಣಗಳು
ಅಮ್ಮ ಅಮ್ಮನೇ... ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮರಿ ಆನೆ ರಕ್ಷಿಸಲು ಹೋರಾಡಿದ ತಾಯಿ ಆನೆ ವಿಡಿಯೋ ವೈರಲ್