
ನವದೆಹಲಿ (ಆ.17): ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯೊಂದರಲ್ಲಿ ‘ದೆವ್ವ’ ಇದೆ ಎಂಬ ವದಂತಿ ಹಾಗೂ ಭೀತಿಯಿಂದಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯನ್ನು ತೊರೆದು ತಮ್ಮ ಮನೆಗಳಿಗೆ ಓಡಿಹೋಗಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಅಮರಾವತಿಯ ಮೇಲ್ಘಾಟ್ ಪ್ರದೇಶದ ಚಿಖಲದಾರ ತಾಲೂಕಿನಲ್ಲಿರುವ ‘ಡೋಮಾ ಸರ್ಕಾರಿ ಬುಡಕಟ್ಟು ಆಶ್ರಮಶಾಲೆ’ಯಲ್ಲಿ (Doma Government Tribal Ashramshala) ಈ ಘಟನೆ ನಡೆದಿದ್ದು, ಅಸಹಜ ಘಟನೆಗಳ ಭೀತಿಯಿಂದಾಗಿ 345 ಹೆಣ್ಣುಮಕ್ಕಳು ಹಾಗೂ 263 ಗಂಡುಮಕ್ಕಳು ಸೇರಿದಂತೆ ಒಟ್ಟು 608 ವಿದ್ಯಾರ್ಥಿಗಳು ವಸತಿ ಶಾಲೆಯನ್ನು ತೊರೆದು ಮನೆಗೆ ಮರಳಿದ್ದಾರೆ.
ರಾತ್ರಿ ವೇಳೆಯಲ್ಲಿ ಶಾಲೆಯ ಆವರಣದಲ್ಲಿ ಗೆಜ್ಜೆಯ ನಾದ, ಯಾರೋ ಜೋರಾಗಿ ಅಳುವ ಮತ್ತು ನಗುವಂತಹ ವಿಚಿತ್ರ ಶಬ್ದಗಳು ಕೇಳಿಬಂದವು ಎಂದು ಕೆಲವು ವಿದ್ಯಾರ್ಥಿಗಳು ಹೇಳಿಕೊಂಡ ನಂತರ ಈ ಭೀತಿ ಆರಂಭವಾಗಿದೆ. ಇದಾದ ಕೆಲವೇ ದಿನಗಳಲ್ಲಿ ಹಲವು ವಿದ್ಯಾರ್ಥಿಗಳಲ್ಲಿ ಅಸಹಜ ಲಕ್ಷಣಗಳು ಕಾಣಿಸಿಕೊಂಡಾಗ ಪರಿಸ್ಥಿತಿ ಮತ್ತಷ್ಟು ಕೈಮೀರಿದೆ.
ಕೆಲವು ವಿದ್ಯಾರ್ಥಿಗಳು ದಿಢೀರನೆ ಮೂರ್ಛೆ ಹೋಗುವುದು, ನಡುಗುವುದು, ಕಿರುಚುವುದು, ಒಂದೇ ಸಮನೆ ಯಾರೋ ಸತ್ತಂತೆ ಅಳುವುದು ಅಥವಾ ಸುಖಾ ಸುಮ್ಮನೆ ಜೋರಾಗಿ ನಗುವುದು ಮತ್ತು ಆಕ್ರಮಣಕಾರಿಯಾಗಿ ವರ್ತಿಸುವುದು ಕಂಡುಬಂದಿದೆ. ವಸತಿ ನಿಲಯದ ಸಹಪಾಠಿಗಳು ಈ ರೀತಿಯಾಗಿ ವರ್ತಿಸುವುದನ್ನು ನೋಡಿ ಇತರ ವಿದ್ಯಾರ್ಥಿಗಳಲ್ಲೂ ಭೀತಿ ತೀವ್ರವಾಗಿ ಹರಡಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳು ಈ ರೀತಿ ವರ್ತಿಸುತ್ತಿರುವ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಲೆಗೆ ದೆವ್ವ ಹಿಡಿದಿದೆ ಎಂಬ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ.
ಘಟನೆಯ ಗಂಭೀರತೆಯನ್ನು ಅರಿತು ಸ್ಥಳಕ್ಕೆ ಧಾವಿಸಿದ ವೈದ್ಯಕೀಯ ತಂಡಗಳು ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದ್ದು, ಯಾವುದೇ ರೀತಿಯ ಅಲೌಕಿಕ ಅಥವಾ ದೆವ್ವದ ಅಸ್ತಿತ್ವದ ಕುರಿತು ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿವೆ.
ವೈದ್ಯರ ಪ್ರಕಾರ, ಇದು ದೆವ್ವದ ಕಾಟವಲ್ಲ, ಬದಲಾಗಿ 'ಸಾಮೂಹಿಕ ಆತಂಕ' (Mass Anxiety) ಮತ್ತು 'ಸೈಕೋಸೊಮ್ಯಾಟಿಕ್' (Psychosomatic - ಮಾನಸಿಕ ಒತ್ತಡದಿಂದ ಶಾರೀರಿಕವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು) ಪ್ರತಿಕ್ರಿಯೆಯಾಗಿದೆ. ತೀವ್ರವಾದ ಭಯ ಅಥವಾ ಒತ್ತಡವು ಒಂದೇ ಕಡೆ ವಾಸಿಸುವ ಗುಂಪಿನಲ್ಲಿ ಹರಡಿದಾಗ, ಯಾವುದೇ ದೆವ್ವ ಅಥವಾ ಭೂತದ ಪ್ರಭಾವವಿಲ್ಲದಿದ್ದರೂ ವ್ಯಕ್ತಿಗಳಲ್ಲಿ ನೈಜವಾದ ದೈಹಿಕ ಮತ್ತು ಮಾನಸಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ವಿವರಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ 'ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ' (MANS) ಮಧ್ಯಪ್ರವೇಶಿಸಿದ್ದು, ಶಾಲೆಯಲ್ಲಿ ದೆವ್ವದ ಕಾಟವಿಲ್ಲ ಎಂದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕೌನ್ಸಿಲಿಂಗ್ ಮತ್ತು ಜಾಗೃತಿ ಪ್ರಚಾರದ ನಂತರ ಶಾಲೆಯಿಂದ ತೆರಳಿದ್ದ ಹಲವು ವಿದ್ಯಾರ್ಥಿಗಳು ಇದೀಗ ಮತ್ತೆ ಶಾಲೆಗೆ ಮರಳಲು ಒಪ್ಪಿಕೊಂಡಿದ್ದಾರೆ.
ದೂರದ ಬುಡಕಟ್ಟು ಪ್ರದೇಶಗಳ ವಸತಿ ಶಾಲೆಗಳಲ್ಲಿ ವಾಸಿಸುವ ಮಕ್ಕಳು ವದಂತಿ ಮತ್ತು ಭಯಕ್ಕೆ ಎಷ್ಟು ಬೇಗನೆ ಒಳಗಾಗುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪ್ರಸ್ತುತ ಅಧಿಕಾರಿಗಳು ಶಾಲೆಯಲ್ಲಿ ಭರವಸೆಯ ವಾತಾವರಣ ನಿರ್ಮಿಸಲು, ವಿದ್ಯಾರ್ಥಿಗಳಿಗೆ ಸೂಕ್ತ ಕೌನ್ಸಿಲಿಂಗ್ ನೀಡಲು ಮತ್ತು ಸುಳ್ಳು ವದಂತಿಗಳು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.