Success Story: ಓದು 5ನೇ ತರಗತಿಗೆ ನಿಂತಿತು, ಕನಸು ಮಾತ್ರ ನಿಲ್ಲಲಿಲ್ಲ! 4 ಚಿನ್ನದ ಬಳೆಗಳಿಂದ ₹11,000 ಕೋಟಿ ಬಿಸಿನೆಸ್ ಕಟ್ಟಿದ ಕಿರಣ್ ಕುಮಾರ್!

Published : Aug 17, 2026, 07:41 PM IST
Kiran Kumar

ಸಾರಾಂಶ

5ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ ಕಿರಣ್ ಕುಮಾರ್, ತಾಯಿಯ ನಾಲ್ಕು ಚಿನ್ನದ ಬಳೆಗಳನ್ನು ಬಂಡವಾಳವಾಗಿಟ್ಟುಕೊಂಡು ಆಭರಣ ಉದ್ಯಮಕ್ಕೆ ಕಾಲಿಟ್ಟರು. ಇಂದು ಅವರು ಲಲಿತಾ ಜ್ಯುವೆಲ್ಲರಿ ಮಾರ್ಟ್ ಅನ್ನು ₹11,000 ಕೋಟಿ ಮೌಲ್ಯದ ಬೃಹತ್ ಸಾಮ್ರಾಜ್ಯವಾಗಿ ಬೆಳೆಸಿದ್ದು, ಕಂಪನಿಯು IPOಗೆ ಸಜ್ಜಾಗಿದೆ.

ಓದು 5ನೇ ತರಗತಿಗೆ ನಿಂತರೂ, ಕನಸು ಮಾತ್ರ ನಿಲ್ಲಲಿಲ್ಲ. ತಾಯಿಯ ಬಳಿ ಇದ್ದ ಕೇವಲ ನಾಲ್ಕು ಚಿನ್ನದ ಬಳೆಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು, ಇಂದು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಭರಣ ಉದ್ಯಮ ಕಟ್ಟಿರುವ ಕಿರಣ್ ಕುಮಾರ್ ಅವರ ಯಶೋಗಾಥೆ ನಿಜಕ್ಕೂ ಅಚ್ಚರಿಯದ್ದು. ಲಲಿತಾ ಜ್ಯುವೆಲ್ಲರಿ ಮಾರ್ಟ್‌ ಅನ್ನು ದೊಡ್ಡ ಉದ್ಯಮವಾಗಿ ಬೆಳೆಸಿದ ಅವರ ಜೀವನ ಪಯಣ ಇದೀಗ ಕಂಪನಿಯ IPO ಹಿನ್ನೆಲೆಯಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬ!

ನೆಲ್ಲೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ದೊಡ್ಡ ಕುಟುಂಬದಲ್ಲಿ ಎಂಟನೇ ಮಗುವಾಗಿ ಕಿರಣ್ ಕುಮಾರ್ ಜನಿಸಿದರು. ಅವರ ತಂದೆ ಆಭರಣ ವ್ಯಾಪಾರಿಯೊಬ್ಬರ ಬಳಿ ಲೆಕ್ಕಪತ್ರಗಾರರಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದರಿಂದ ಕುಮಾರ್‌ ಅವರ ಶಿಕ್ಷಣವೂ ಮುಂದುವರಿಯಲಿಲ್ಲ. ಅವರು 5ನೇ ತರಗತಿಯಲ್ಲೇ ಶಾಲೆ ತೊರೆದು, ಸುಮಾರು 12ನೇ ವಯಸ್ಸಿನಲ್ಲಿ ಆಭರಣ ವ್ಯಾಪಾರದಲ್ಲಿ ಕೆಲಸ ಮಾಡಲು ಆರಂಭಿಸಿದರು.

ಬಾಲದಲ್ಲೇ ಕೈ ಹಿಡಿದ ಅದೃಷ್ಟ!

ಬಾಲ್ಯದಲ್ಲೇ ಆಭರಣ ಕ್ಷೇತ್ರದ ಬಗ್ಗೆ ಅನುಭವ ಪಡೆದ ಕುಮಾರ್‌ಗೆ ಒಂದು ಅವಕಾಶ ಕಾಣಿಸಿತು. ನೆಲ್ಲೂರಿನಲ್ಲಿ ತಯಾರಾಗುತ್ತಿದ್ದ ಆಭರಣಗಳನ್ನು ಚೆನ್ನೈ ಮತ್ತು ಹೈದರಾಬಾದ್‌ನಂತಹ ದೊಡ್ಡ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿತ್ತು. ಹೀಗಾಗಿ ಮಧ್ಯವರ್ತಿಗಳ ಬದಲು ತಾವೇ ನೇರವಾಗಿ ದೊಡ್ಡ ಮಾರುಕಟ್ಟೆಗೆ ಆಭರಣಗಳನ್ನು ತೆಗೆದುಕೊಂಡು ಹೋಗಬೇಕೆಂದು ಅವರು ನಿರ್ಧರಿಸಿದರು. ಆದರೆ ಅದಕ್ಕೆ ಬೇಕಾದ ಹಣ ಅವರ ಬಳಿ ಇರಲಿಲ್ಲ.

ಹೆಗಲಾಗಿ ನಿಂತದ್ದು ತಾಯಿ!

ಆ ಸಂದರ್ಭದಲ್ಲಿ ಅವರ ತಾಯಿ ನೆರವಿಗೆ ಬಂದರು. ತಮ್ಮ ಬಳಿ ಉಳಿಸಿಕೊಂಡಿದ್ದ ನಾಲ್ಕು ಚಿನ್ನದ ಬಳೆಗಳನ್ನು ಮಗನಿಗೆ ಆರಂಭಿಕ ಬಂಡವಾಳವಾಗಿ ನೀಡಿದರು. ಸುಮಾರು 48 ಗ್ರಾಂ ತೂಕದ ಆ ಚಿನ್ನವನ್ನು ಕುಮಾರ್ ಅಕ್ಕಸಾಲಿಗನ ಬಳಿ ತೆಗೆದುಕೊಂಡು ಹೋಗಿ ಆರು ಕಿವಿಯೋಲೆಗಳನ್ನು ತಯಾರಿಸಿದರು. ಬಳಿಕ ಅವುಗಳನ್ನು ಮಾರಾಟ ಮಾಡಲು ಚೆನ್ನೈಗೆ ಪ್ರಯಾಣ ಬೆಳೆಸಿದರು.

ಹೆಚ್ಚಿದ ಬೇಡಿಕೆ!

ಚೆನ್ನೈಯ ಟಿ ನಗರದಲ್ಲಿರುವ ಲಲಿತಾ ಜ್ಯುವೆಲ್ಲರಿಯಲ್ಲಿ ಅವರಿಗೆ ಮೊದಲ ದೊಡ್ಡ ಅವಕಾಶ ಸಿಕ್ಕಿತು. ಅಂಗಡಿ ಮುಚ್ಚುವ ಸಮಯದಲ್ಲಿ ತಲುಪಿದ ಕುಮಾರ್, ಮಾಲೀಕ ಎಂ.ಎಸ್. ಕಂದಸ್ವಾಮಿ ಪಿಳ್ಳೈ ಅವರನ್ನು ಭೇಟಿಯಾಗಿ ತಮ್ಮ ಆಭರಣಗಳನ್ನು ತೋರಿಸಿದರು. ಗುಣಮಟ್ಟ ಪರಿಶೀಲಿಸಿದ ನಂತರ ಪಿಳ್ಳೈ ಅವರು ಆರಂಭದಲ್ಲಿ 100 ಗ್ರಾಂ ಆಭರಣಗಳ ಆರ್ಡರ್ ನೀಡಿದರು. ಬೇಡಿಕೆ ಹೆಚ್ಚಾದಂತೆ ಆರ್ಡರ್ 200 ಗ್ರಾಂಗೆ ಏರಿತು.

ವಿವಧ ರಾಜ್ಯಗಳಲ್ಲಿ ವಿಸ್ತರಿಸಿದ ವ್ಯಾಪಾರ!

ಇದರಿಂದ ಕುಮಾರ್ ಅವರ ಸಗಟು ವ್ಯಾಪಾರ ವೇಗವಾಗಿ ಬೆಳೆಯತೊಡಗಿತು. ಅವರು ನೆಲ್ಲೂರು ಮತ್ತು ಚೆನ್ನೈ ನಡುವೆ ಆಗಾಗ್ಗೆ ಪ್ರಯಾಣಿಸಿ ಆಭರಣಗಳನ್ನು ಪೂರೈಸುತ್ತಿದ್ದರು. ನಂತರ ಅವರ ವ್ಯವಹಾರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೆ ಕೆನಡಾ, ಲಂಡನ್, ಸಿಂಗಾಪುರ್ ಮತ್ತು ದುಬೈಯಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೂ ವಿಸ್ತರಿಸಿತು.

ಲಲಿತಾ ಜ್ಯುವಲೇರಿ!

1999ರ ಫೆಬ್ರವರಿ 24 ಅವರ ಜೀವನದ ಮತ್ತೊಂದು ಪ್ರಮುಖ ತಿರುವಾಯಿತು. ಕಂದಸ್ವಾಮಿ ಪಿಳ್ಳೈ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಕುಮಾರ್ ಆ ವ್ಯವಹಾರವನ್ನು ಮುಚ್ಚಲು ಬಿಡದೆ ಅದನ್ನು ವಹಿಸಿಕೊಂಡರು ಮತ್ತು ಬಾಕಿ ಸಾಲಗಳನ್ನು ತೀರಿಸಲು ಮುಂದಾದರು. ಅವರು ಲಲಿತಾ ಜ್ಯುವೆಲ್ಲರಿಯ ಸ್ಥಾಪಕರಲ್ಲ; ಅಸ್ತಿತ್ವದಲ್ಲಿದ್ದ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡು ನಂತರ ಅದನ್ನು ತಮ್ಮದೇ ಬ್ರ್ಯಾಂಡ್ ಆಗಿ ಬೆಳೆಸಿದರು. ಸಗಟು ವ್ಯಾಪಾರದಿಂದ ಚಿಲ್ಲರೆ ವ್ಯಾಪಾರಕ್ಕೆ ಬದಲಾದ ನಂತರ, ಕುಮಾರ್ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಚಿನ್ನ ನೀಡುವುದನ್ನು ಪ್ರಮುಖ ತಂತ್ರವನ್ನಾಗಿ ಮಾಡಿಕೊಂಡರು.

ವಿವಿಧ ರಾಜ್ಯಗಳಿಗೆ ವಿಸ್ತರಣೆ!
ಹೆಚ್ಚುವರಿ ಶುಲ್ಕಗಳನ್ನು ಕಡಿಮೆ ಮಾಡುವುದು, BIS ಹಾಲ್‌ಮಾರ್ಕ್ ಚಿನ್ನಕ್ಕೆ ಒತ್ತು ನೀಡುವುದು ಮತ್ತು ಕಡಿಮೆ ಲಾಭಾಂಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವುದು ಅವರ ವ್ಯವಹಾರ ಮಾದರಿಯಾಯಿತು.zzzzzzಇಂದು ಲಲಿತಾ ಜ್ಯುವೆಲ್ಲರಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಯಲ್ಲಿ 51 ನಗರಗಳಲ್ಲಿ 61 ಮಳಿಗೆಗಳನ್ನು ಹೊಂದಿದೆ. ಕಂಪನಿಗೆ ತಮಿಳುನಾಡಿನಲ್ಲಿ ತನ್ನದೇ ಉತ್ಪಾದನಾ ಸೌಲಭ್ಯಗಳೂ ಇವೆ. ಕಂಪನಿಯ ಹಣಕಾಸು ಬೆಳವಣಿಗೆಯೂ ಗಮನಾರ್ಹವಾಗಿದೆ. FY26ರಲ್ಲಿ ಆದಾಯ ₹25,039.80 ಕೋಟಿಗೆ ಏರಿದ್ದು, ತೆರಿಗೆ ನಂತರದ ಲಾಭ ₹1,009.82 ಕೋಟಿಗೆ ತಲುಪಿದೆ. ಇದೇ ವೇಳೆ ಕಂಪನಿಯ ಆಸ್ತಿಗಳು ₹10,945.14 ಕೋಟಿಗೆ ಏರಿವೆ. ಈಗ ಲಲಿತಾ ಜ್ಯುವೆಲ್ಲರಿ ಮಾರ್ಟ್ IPOಗೆ ಸಜ್ಜಾಗಿದ್ದು, ಪ್ರತಿ ಷೇರಿಗೆ ₹190–₹201 ಬೆಲೆ ನಿಗದಿಪಡಿಸಲಾಗಿದೆ. ಮೇಲಿನ ಬೆಲೆ ಆಧರಿಸಿದರೆ ಕಂಪನಿಯ ಮೌಲ್ಯಮಾಪನ ಸುಮಾರು ₹11,250 ಕೋಟಿ ಆಗಲಿದೆ. ಒಮ್ಮೆ ತಾಯಿಯ ನಾಲ್ಕು ಚಿನ್ನದ ಬಳೆಗಳಿಂದ ಆರಂಭವಾದ ಪ್ರಯಾಣ ಇಂದು ಸಾವಿರಾರು ಕೋಟಿ ರೂಪಾಯಿಗಳ ಉದ್ಯಮವಾಗಿ ಬೆಳೆದಿದೆ. **5ನೇ ತರಗತಿಯಲ್ಲಿ ನಿಂತ ಶಿಕ್ಷಣದ ನಡುವೆಯೂ, ಕಿರಣ್ ಕುಮಾರ್ ಅವರ ಉದ್ಯಮದ ಪಯಣ ಮಾತ್ರ ಅಲ್ಲೇ ನಿಲ್ಲಲಿಲ್ಲ.**

PREV
Read more Articles on
click me!

Recommended Stories

9 ಗಂಟೆ ಕೋರ್ಟ್ ಕೆಲಸ ಕೇಳಿದ್ದಕ್ಕೆ ನೇರ ‘ನೋ’! Gen Z ಇಂಟರ್ನ್‌ನ ಮುಂದಿನ ಮಾತು ಕೇಳಿ ಕಂಗಾಲಾದ ಬಿದ್ದ ಬಾಸ್!
ಮೈಸೂರಿನಿಂದ ಉಡುಗೊರೆಯಾಗಿ ಹೋದ ಆನೆ ಶ್ರೀಲಂಕಾದ ‘ರಾಜ’ನಾದದ್ದು ಹೇಗೆ?