​ಹಳೆಯ ಪ್ರೇಮಿಯನ್ನ ಭೇಟಿಯಾಗೋಕೆ ಇಲ್ಲಿಗೆ ಹೋದ್ರೆ ಸಾಕು; ಎಲ್ಲಿದೆ ಈ 'ಲವ್ ಮಾರ್ಕೆಟ್'?

Published : Aug 19, 2026, 04:05 PM IST
love market vietnam ex lovers reunite every year

ಸಾರಾಂಶ

ಎಕ್ಸ್‌ ಜೊತೆ ಮತ್ತೆ ಮಾತನಾಡುವುದೇ ದೊಡ್ಡ ಸಮಸ್ಯೆ ಎಂದುಕೊಳ್ಳುವ ಕಾಲ ಇದು. ಆದರೆ ವಿಯೆಟ್ನಾಂನಲ್ಲಿ ಮಾತ್ರ ಮಾಜಿ ಪ್ರೇಮಿಗಳು ವರ್ಷಕ್ಕೊಮ್ಮೆ ಭೇಟಿಯಾಗಿ ಮಾತನಾಡಲು, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ನೀಡುವ ವಿಶಿಷ್ಟ ಸಂಪ್ರದಾಯವಿದೆ.

ಎಕ್ಸ್‌ ಜೊತೆ ಮತ್ತೆ ಮಾತನಾಡುವುದೇ ದೊಡ್ಡ ಸಮಸ್ಯೆ ಎಂದುಕೊಳ್ಳುವ ಕಾಲ ಇದು. ಆದರೆ ವಿಯೆಟ್ನಾಂನಲ್ಲಿ ಮಾತ್ರ ಮಾಜಿ ಪ್ರೇಮಿಗಳು ವರ್ಷಕ್ಕೊಮ್ಮೆ ಭೇಟಿಯಾಗಿ ಮಾತನಾಡಲು, ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ನೀಡುವ ವಿಶಿಷ್ಟ ಸಂಪ್ರದಾಯವಿದೆ. ಇದನ್ನು ‘ಖೌ ವೈ ಲವ್ ಮಾರ್ಕೆಟ್‌’ (Khau Vai Love Market) ಎಂದು ಕರೆಯಲಾಗುತ್ತದೆ. ವಿಯೆಟ್ನಾಂನ ಹಾ ಜಿಯಾಂಗ್ ಪ್ರಾಂತ್ಯದಲ್ಲಿ ನಡೆಯುವ ಈ ವಿಶಿಷ್ಟ ಮಾರುಕಟ್ಟೆಗೆ ಪ್ರೇಮಿಗಳು ಮಾತ್ರವಲ್ಲ, ಸಿಂಗಲ್ಸ್‌, ವಿವಾಹಿತ ಜೋಡಿಗಳು ಮತ್ತು ಮಾಜಿ ಪ್ರೇಮಿಗಳೂ ಆಗಮಿಸುತ್ತಾರೆ. ಪ್ರೀತಿಯನ್ನು ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಇದು ವರ್ಷಗಳಿಂದ ನಡೆದುಕೊಂಡು ಬಂದಿದೆ.

ನೂರಾರು ವರ್ಷಗಳ ಹಿಂದಿನ ಪ್ರೇಮಕಥೆಯೇ ಮೂಲ

ಈ ಲವ್‌ ಮಾರ್ಕೆಟ್‌ನ ಹಿಂದೆ ಒಂದು ಹಳೆಯ ಪ್ರೇಮಕಥೆಯಿದೆ. ನುಂಗ್ ಸಮುದಾಯದ ಬಾ ಎಂಬ ಯುವಕ ಮತ್ತು ಗಿಯಾಯ್ ಸಮುದಾಯದ ಉಟ್ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರೂ ಬೇರೆ ಬೇರೆ ಜನಾಂಗ ಮತ್ತು ಸಂಪ್ರದಾಯಗಳಿಗೆ ಸೇರಿದವರಾಗಿದ್ದರಿಂದ ಕುಟುಂಬಗಳು ಅವರ ಪ್ರೀತಿಗೆ ಒಪ್ಪಿಗೆ ನೀಡಲಿಲ್ಲ. ತಮ್ಮ ಪ್ರೀತಿಗಾಗಿ ಕುಟುಂಬಗಳ ನಡುವೆ ಸಂಘರ್ಷ ಉಂಟಾಗಬಾರದು ಎಂದು ನಿರ್ಧರಿಸಿದ ಈ ಜೋಡಿ, ಒಂದು ವಿಶೇಷ ಒಪ್ಪಂದ ಮಾಡಿಕೊಂಡರು. ವರ್ಷಕ್ಕೆ ಒಮ್ಮೆ ಖೌ ವೈನಲ್ಲಿ ಭೇಟಿಯಾಗೋಣ ಎಂದು ಇಬ್ಬರೂ ನಿರ್ಧರಿಸಿದರು. ಈ ಭೇಟಿ ಸಂಪ್ರದಾಯವಾಗಿ ಮುಂದುವರಿದು, ನಂತರ ಖೌ ವೈ ಲವ್ ಮಾರ್ಕೆಟ್‌ಗೆ ಕಾರಣವಾಯಿತು ಎಂದು ಹೇಳಲಾಗುತ್ತದೆ.

ಎಕ್ಸ್‌ ಜೊತೆ ಭೇಟಿಯಾಗಲು ಇಲ್ಲಿದೆ ‘ಸ್ಪೆಷಲ್ ಡೇ’

ಇಂದಿಗೂ ವರ್ಷಕ್ಕೊಮ್ಮೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಾಜಿ ಪ್ರೇಮಿಗಳು ಭೇಟಿಯಾಗಬಹುದು. ಹಳೆಯ ಸಂಬಂಧವನ್ನು ಮತ್ತೆ ಆರಂಭಿಸಲೇಬೇಕು ಎಂಬ ನಿಯಮವಿಲ್ಲ. ಬದಲಾಗಿ, ಹಳೆಯ ಸ್ನೇಹಿತನಂತೆ ಭೇಟಿಯಾಗಿ ಮಾತನಾಡುವುದು, ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದು ಮತ್ತು ನಂತರ ತಮ್ಮ ತಮ್ಮ ಜೀವನಕ್ಕೆ ಮರಳುವುದು ಈ ಸಂಪ್ರದಾಯದ ವಿಶೇಷತೆ. ಇದು ಸಿಂಗಲ್ಸ್‌ಗೂ ಹೊಸ ಸಂಗಾತಿಯನ್ನು ಹುಡುಕುವ ಅವಕಾಶ ನೀಡುತ್ತದೆ. ವಿವಾಹಿತ ದಂಪತಿಗಳೂ ಕಾರ್ಯಕ್ರಮಕ್ಕೆ ಆಗಮಿಸಿ ಅಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಆನಂದಿಸುತ್ತಾರೆ. ಕೆಲವರು ತಮ್ಮ ಸಂಬಂಧದಲ್ಲಿನ ಹಳೆಯ ಆತ್ಮೀಯತೆಯನ್ನು ಮತ್ತೆ ನೆನಪಿಸಿಕೊಳ್ಳಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಾರೆ.

ಲವ್‌ ಮಾರ್ಕೆಟ್‌ನಲ್ಲಿ ಏನೆಲ್ಲಾ ಇರುತ್ತೆ?

ಇದು ಕೇವಲ ಮಾಜಿ ಪ್ರೇಮಿಗಳ ಭೇಟಿಯ ಸ್ಥಳವಲ್ಲ. ವಿವಿಧ ಸಮುದಾಯಗಳ ಜನರು ಸಾಂಪ್ರದಾಯಿಕ ಉಡುಗೆಗಳಲ್ಲಿ ಇಲ್ಲಿ ಸೇರಿಕೊಳ್ಳುತ್ತಾರೆ. ಜಾನಪದ ಸಂಗೀತ, ನೃತ್ಯ, ಸ್ಥಳೀಯ ಆಹಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಮಾರುಕಟ್ಟೆಯ ಪ್ರಮುಖ ಆಕರ್ಷಣೆಗಳಾಗಿವೆ. ಮೂರನೇ ಚಂದ್ರ ಮಾಸದ 27ನೇ ದಿನದಂದು, ಸಾಮಾನ್ಯವಾಗಿ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಈ ಆಚರಣೆ ನಡೆಯುತ್ತದೆ.

2021ರಲ್ಲಿ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ

ಖೌ ವೈ ಲವ್ ಮಾರ್ಕೆಟ್‌ಗೆ 2021ರಲ್ಲಿ ವಿಯೆಟ್ನಾಂನ ಸಂಸ್ಕೃತಿ ಸಚಿವಾಲಯ ರಾಷ್ಟ್ರೀಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂಬ ಅಧಿಕೃತ ಮಾನ್ಯತೆ ನೀಡಿದೆ. ಇದೀಗ ಈ ಕಾರ್ಯಕ್ರಮ ಸ್ಥಳೀಯ ಸಂಸ್ಕೃತಿಯ ಭಾಗವಾಗಿರುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿಯೂ ಇದು ಪಾತ್ರವಹಿಸುತ್ತಿದೆ.

‘ಎಕ್ಸ್‌’ ಎಂದರೆ ಯಾವಾಗಲೂ ವೈರಿಯಲ್ಲ

ಖೌ ವೈ ಲವ್ ಮಾರ್ಕೆಟ್‌ ಒಂದು ವಿಭಿನ್ನ ಸಂದೇಶವನ್ನೂ ನೀಡುತ್ತದೆ. ಸಂಬಂಧ ಮುಗಿದ ಬಳಿಕವೂ ಹಿಂದಿನ ವ್ಯಕ್ತಿಯನ್ನು ಗೌರವದಿಂದ ನೆನಪಿಸಿಕೊಳ್ಳಬಹುದು. ಮಾತನಾಡಬಹುದು, ಹಳೆಯ ದಿನಗಳನ್ನು ನೆನಪಿಸಿಕೊಂಡು ನಗಬಹುದು ಮತ್ತು ಯಾವುದೇ ಗೊಂದಲವಿಲ್ಲದೆ ತಮ್ಮ ಜೀವನಕ್ಕೆ ಮರಳಬಹುದು ಎಂಬ ಮನೋಭಾವ ಇಲ್ಲಿದೆ. ಆದರೆ ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ: ನಿಮ್ಮ ಸಂಗಾತಿ ವರ್ಷಕ್ಕೊಮ್ಮೆ ತಮ್ಮ ಎಕ್ಸ್‌ ಅನ್ನು ಭೇಟಿಯಾಗಲು ಹೋಗುತ್ತೇನೆ ಎಂದರೆ ನೀವು ಒಪ್ಪಿಕೊಳ್ಳುತ್ತೀರಾ?

PREV
Read more Articles on
click me!

Recommended Stories

ಅಕ್ಕನ ಮದುವೆಯಾಗಲು ಬಂದ ಭಾವನೇ ನಾದಿನಿಯ ಬುಟ್ಟಿಗೆ ಹಾಕೊಂಡ; ನಾನು ನನ್ನ ಹೆಂಡ್ತೀರು ಕಥೆ ವೈರಲ್!
Mumbai Viral Video: 'ನಾನೂ ಹ್ಯಾಂಡಿಕ್ಯಾಪ್, ನನಗೂ ದುಡ್ಡು ಕೊಡು!' ವಿದೇಶಿಗನಿಗೆ ಮಹಿಳೆ ಅವಾಜ್! ಮುಂದೇನಾಯ್ತು ನೋಡಿ!