
ಬೆಂಗಳೂರು (ಆ.19): ನಂಬಿಕೆ ಮತ್ತು ಗೌರವವೇ ಯಾವುದೇ ದಾಂಪತ್ಯ ಜೀವನದ ಭದ್ರ ಬುನಾದಿ. ಆದರೆ, ಕೆಲವೊಮ್ಮೆ ಕುಟುಂಬದೊಳಗಿನ 'ಅತಿಯಾದ ಸಲಿಗೆ' ಮತ್ತು 'ಮಿತಿಮೀರಿದ ವರ್ತನೆ' ಇಡೀ ಸಂಸಾರವನ್ನೇ ಹೇಗೆ ಧ್ವಂಸ ಮಾಡಬಲ್ಲದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಮನಕಲಕುವ ಘಟನೆಯೇ ಸಾಕ್ಷಿ. ಮದುವೆ ಮನೆಯ ಸಂಭ್ರಮದಲ್ಲಿ ತಮಾಷೆಯಾಗಿ ಆರಂಭವಾದ ಭಾವ-ನಾದಿನಿಯ ಒಡನಾಟ, ಕೊನೆಗೆ ಪತ್ನಿಯ ಬದುಕನ್ನೇ ಕತ್ತಲಾಗಿಸಿದ ನೈಜ ಕಥೆಯಿದು.
ಬೆಂಗಳೂರು ಮೂಲದ ದಂಪತಿ, ಪತ್ನಿಯ ತಂಗಿಯ (ನಾದಿನಿ) ಮದುವೆ ಸಮಾರಂಭಕ್ಕಾಗಿ ಒಂದು ವಾರ ಮುಂಚಿತವಾಗಿಯೇ ತವರು ಮನೆಗೆ ತೆರಳಿದ್ದರು. ಮದುವೆ ಸಿದ್ಧತೆಗಳ ನಡುವೆ, ಪತಿಯು ಪತ್ನಿಯ ತಂಗಿಯೊಂದಿಗೆ ಅತಿಯಾಗಿ ಬೆರೆಯಲು (ತುಂಬಾ ಕ್ಲೋಸ್) ಶುರುಮಾಡಿದ್ದನು. ಆರಂಭದಲ್ಲಿ ಇದನ್ನು ಕುಟುಂಬದ ಸದಸ್ಯರು ಕೇವಲ 'ಭಾವ-ನಾದಿನಿಯ ತಮಾಷೆಯ ಒಡನಾಟ' ಎಂದೇ ಭಾವಿಸಿದ್ದರು. ಪತ್ನಿಯೂ ಕೂಡ ಗಂಡ ಮತ್ತು ತಂಗಿ ನಗುತ್ತಾ ಆಡುತ್ತಿದ್ದ ತಮಾಷೆಗಳನ್ನು ಕಂಡು ಸಂತೋಷಪಟ್ಟು, ತಾನೇ ಸ್ವತಃ ಅವರ ವಿಡಿಯೋಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ನಗುತ್ತಿದ್ದಳು. ಆದರೆ, ಆ ಮುಗ್ಧ ಪತ್ನಿಗೆ ತಿಳಿದಿರಲಿಲ್ಲ— ತಮಾಷೆಯ ಪರದೆಯ ಹಿಂದೆ ಇಬ್ಬರ ನಡುವೆ ಸಂಬಂಧದ ಸೂಕ್ಷ್ಮತೆಯ ಗಡಿ ದಾಟಿದ ರಹಸ್ಯ ಅಕ್ರಮ ಸಂಬಂಧ ಶುರುವಾಗಿದೆ ಎಂದು!
ಮದುವೆಯ ಗದ್ದಲ, ಜನರ ಓಡಾಟದ ನಡುವೆಯೇ ಯಾರಿಗೂ ಅನುಮಾನ ಬಾರದಂತೆ ಇಬ್ಬರೂ ಏಕಾಂತದಲ್ಲಿ ದೈಹಿಕವಾಗಿ ಒಂದಾಗಿದ್ದರು. ಮದುವೆ ಮುಗಿದ ನಂತರ ಗಂಡ-ಹೆಂಡತಿ ಎಂದಿನಂತೆ ತಮ್ಮ ಮನೆಗೆ ವಾಪಸ್ ಬಂದಿದ್ದರು. ಆದರೆ, ಕೆಲವೇ ದಿನಗಳಲ್ಲಿ ಪತಿಗೆ ನಾದಿನಿಯಿಂದ ಬಂದ ಆ ಒಂದು ಫೋನ್ ಕಾಲ್ ಎಲ್ಲವನ್ನೂ ಬುಡಮೇಲು ಮಾಡಿತು! 'ನಾನು ಗರ್ಭಿಣಿಯಾಗಿದ್ದೇನೆ, ನನ್ನನ್ನು ನೀವೇ ಮದುವೆಯಾಗಬೇಕು' ಎಂದು ಹೇಳುತ್ತಾ ಅಳುವುದಕ್ಕೆ ಪ್ರಾರಂಭಿಸಿದ್ದಾಳೆ.
ಹೆಂಡತಿಯ ತಂಗಿ ತನ್ನಿಂದ ಗರ್ಭಿಣಿಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಪತಿ, ಮಗುವನ್ನು ಅಬಾರ್ಷನ್ (ಗರ್ಭಪಾತ) ಮಾಡಿಸುವಂತೆ ನಾದಿನಿಗೆ ದುಂಬಾಲು ಬಿದ್ದನು. ಆದರೆ ಆಕೆ ಇದಕ್ಕೆ ಒಪ್ಪದೆ, ನೇರವಾಗಿ ತನ್ನ ತಂದೆ-ತಾಯಿಯ ಎದುರೇ ವಿಷಯವನ್ನು ಹೇಳಿಕೊಂಡಿದ್ದಾಳೆ. ಕುಟುಂಬಸ್ಥರು ಸಿಟ್ಟಿಗೆದ್ದು ಅಳಿಯನ ಮನೆಗೆ ಧಾವಿಸಿ, ಆತನ ಪತ್ನಿ (ಅಕ್ಕ) ಎದುರೇ ಇಡೀ ಸತ್ಯವನ್ನು ಬಿಚ್ಚಿಟ್ಟರು. ತಾನು ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದ ಪತಿ ಹಾಗೂ ಸ್ವಂತ ತಂಗಿಯೇ ತನಗೆ ಬೆನ್ನಿಗೆ ಚೂರಿ ಹಾಕಿದ್ದನ್ನು ಕಂಡು ಪತ್ನಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ.
ಆರಂಭದಲ್ಲಿ ಆತನ ಪತ್ನಿ ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಅತ್ತ ಗರ್ಭಿಣಿಯಾದ ತಂಗಿಯ ಭವಿಷ್ಯ ಮತ್ತು ಕುಟುಂಬದ ಮರ್ಯಾದೆಯ ಪ್ರಶ್ನೆ ಎದುರಾಯಿತು. ಇತ್ತ ಗಂಡನೂ ಕೂಡ ತಪ್ಪಿನ ಹೊಣೆ ಹೊತ್ತು ನಾದಿನಿಯನ್ನು ಮದುವೆಯಾಗಲು ಒಪ್ಪಿಕೊಂಡನು. ಅಂತಿಮವಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ದೇವಸ್ಥಾನವೊಂದರಲ್ಲಿ ಇಬ್ಬರಿಗೂ ಸರಳ ವಿವಾಹ ಮಾಡಿಸಲಾಯಿತು. ತನ್ನ ಕಣ್ಣೆದುರೇ ಗಂಡ ಮತ್ತೊಬ್ಬಳ (ಸ್ವಂತ ತಂಗಿ) ಕೊರಳಿಗೆ ತಾಳಿ ಕಟ್ಟುವುದನ್ನು ಕಂಡು ಅಸಹಾಯಕ ಪತ್ನಿ ಮೂಕವೇದನೆಯಿಂದ ಕಣ್ಣೀರಿಟ್ಟಳು. 'ಆರಂಭದಲ್ಲೇ ಇಬ್ಬರ ಅತಿಯಾದ ಸಲಿಗೆಗೆ ಮಿತಿ ಹಾಕಿದ್ದರೆ ಇಂದು ನನ್ನ ಸಂಸಾರ ಉಳಿಯುತ್ತಿತ್ತೇನೋ' ಎಂದು ಆಕೆ ಕೊರಗುವಂತಾಯಿತು.
ಪ್ರತಿಯೊಂದು ಸಂಬಂಧಕ್ಕೂ ಒಂದು ಸೂಕ್ಷ್ಮತೆಯ 'ಗಡಿ' (Boundary) ಇರಲೇಬೇಕು. ತಮಾಷೆ, ಹರಟೆ ಎಂಬ ಹೆಸರಿನಲ್ಲಿ ಆ ಗಡಿಯನ್ನು ಮೀರಿದಾಗ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಎಚ್ಚರಿಕೆಯ ಗಂಟೆ.
ಸೂಚನೆ: ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧಿತ ಪೋಸ್ಟ್ ವೈರಲ್ ಆಗುತ್ತಿದೆ.