ಇಂಟರ್ನೆಟ್‌ ಹೃದಯ ಗೆದ್ದ ಲಸ್ಸಿ ಹುಡುಗನ ಕಥೆ, 11ನೇ ವಯಸ್ಸಿಗೆ ತಂದೆ ಸಾವು, 250 ರೂ ದಿನಗೂಲಿ ಈಗ ತಿಂಗಳಿಗೆ 90,000 ಆದಾಯ!

Published : Aug 19, 2026, 11:19 AM IST
Delhi Lassi Seller Success Story

ಸಾರಾಂಶ

ಡಿಜಿಟಲ್ ಕ್ರಿಯೇಟರ್ ಉಪೇನ್ ವರ್ಮಾ ಹಂಚಿಕೊಂಡ ವೀಡಿಯೊದಲ್ಲಿ, ದೆಹಲಿಯ ಲಸ್ಸಿ ಮಾರಾಟಗಾರನೊಬ್ಬನ ಸ್ಪೂರ್ತಿದಾಯಕ ಕಥೆ ಅನಾವರಣಗೊಂಡಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ದಿನಕ್ಕೆ ₹250 ಗಳಿಸುತ್ತಿದ್ದ ಅವರು, ದಶಕಗಳ ಪರಿಶ್ರಮದಿಂದ ಇಂದು ತಿಂಗಳಿಗೆ ₹90,000 ಸಂಪಾದಿಸಿ, ಸ್ವಂತ ಮನೆ ಕಟ್ಟಿದ್ದಾರೆ. ಈ ಕಥೆಯು ಕಠಿಣ ಪರಿಶ್ರಮಕ್ಕೆ ಸಿಕ್ಕ ಜಯವನ್ನು ಸಾರುತ್ತದೆ.

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಉಪೇನ್ ವರ್ಮಾ ಹಂಚಿಕೊಂಡಿರುವ ಬೀದಿ ಬದಿಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಕೋಟ್ಯಂತರ ಜನರ ಹೃದಯ ಗೆದ್ದಿದೆ. ದೆಹಲಿಯ ಲಸ್ಸಿ ಮಾರಾಟಗಾರನೊಬ್ಬ ತೀವ್ರ ಬಡತನ ಮತ್ತು ಕೌಟುಂಬಿಕ ದುರಂತಗಳನ್ನು ಮೆಟ್ಟಿ ನಿಂತು, ಯಶಸ್ಸಿನತ್ತ ಸಾಗಿದ ಭಾವುಕ ಪಯಣವನ್ನು ಈ ವೀಡಿಯೊ ಅನಾವರಣಗೊಳಿಸಿದೆ.

ತೀವ್ರ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಈ ವ್ಯಕ್ತಿ, ಕೇವಲ 11ನೇ ವಯಸ್ಸಿನಲ್ಲಿ ಇಡೀ ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೆ ಏರಿಸಿಕೊಂಡಿದ್ದರು. ಆರಂಭದಲ್ಲಿ ದಿನಕ್ಕೆ ಕೇವಲ ₹250 ಗಳಿಸುತ್ತಿದ್ದ ಅವರು, ದಶಕಗಳ ಕಾಲ ಸತತ ಶ್ರಮಪಟ್ಟು ಇಂದು ಸ್ವಂತ ಮನೆ ನಿರ್ಮಿಸುವ ಹಂತಕ್ಕೆ ಬೆಳೆದಿದ್ದಾರೆ.

ಇದು ಕೇವಲ ಒಂದು ಸಿಂಪಲ್ ಸಂಭಾಷಣೆಯಷ್ಟೇ ಆಗಿತ್ತು. ಆದರೆ, ನನಗೆ ನಿಜವಾದ ಜೀವನಪಾಠವನ್ನು ಕಲಿಸಿಕೊಟ್ಟಿತು. ನಿಮ್ಮ ಹೃದಯ ಮತ್ತು ಆತ್ಮವನ್ನು ತೊಡಗಿಸಿ ಕೆಲಸ ಮಾಡಿದರೆ, ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ ಎಂದು ವರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಾನು 11 ವರ್ಷದವನಿದ್ದಾಗಿನಿಂದಲೂ ದುಡಿಯುತ್ತಿದ್ದೇನೆ

ಉಪೇನ್ ವರ್ಮಾ: "ನೀವು ದೇವರಲ್ಲಿ ಒಂದೇ ಒಂದು ವರ ಕೇಳುವುದಾದರೆ, ಏನನ್ನು ಕೇಳುತ್ತೀರಾ?"

ಲಸ್ಸಿ ಮಾರಾಟಗಾರ: "ನನ್ನ ತಂದೆಯ ಪ್ರಾಣವನ್ನು ಕೇಳುತ್ತೇನೆ. ಏಕೆಂದರೆ, ನಮ್ಮ ಜೀವನದಲ್ಲಿ ಸ್ವಂತ ಮನೆ ಕೂಡ ಇಲ್ಲವಲ್ಲ ಎಂಬ ಚಿಂತೆಯಲ್ಲೇ ನನ್ನ ತಂದೆ ತೀರಿಕೊಂಡರು. ನನಗೆ 11 ವರ್ಷ ವಯಸ್ಸಿದ್ದಾಗಿನಿಂದಲೂ ನಾನು ನಿರಂತರವಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ."

ತಂದೆಯ ಅಗಲಿಕೆಯ ನಂತರ ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ತಾವು ವಹಿಸಿಕೊಂಡ ದಿನಗಳನ್ನು ಅವರು ನೆನಪಿಸಿಕೊಂಡರು. ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ತಮ್ಮ ಒಡಹುಟ್ಟಿದವರ ಮದುವೆ ಮಾಡಿ, ತಾವೂ ಸಂಸಾರ ಹೂಡಿದರು. ಅಷ್ಟೇ ಅಲ್ಲದೆ, ತಂದೆಯ ಕನಸಿನಂತೆ ಉತ್ತರ ಪ್ರದೇಶದಲ್ಲಿ ತಮ್ಮ ಕುಟುಂಬಕ್ಕೆ ಸುಸಜ್ಜಿತವಾದ ಎರಡು ಅಂತಸ್ಥಿನ ಸ್ವಂತ ಮನೆಯನ್ನೂ ನಿರ್ಮಿಸಿದರು.

₹250 ದಿನಗೂಲಿಯಿಂದ ₹90,000 ಮಾಸಿಕ ಆದಾಯಕ್ಕೆ!

ತಮ್ಮ ತಂದೆ ಜೀವಂತವಾಗಿದ್ದಾಗ ದಿನಕ್ಕೆ ಕೇವಲ ₹250 ಗಳಿಸುತ್ತಿದ್ದಾಗಿ ಅವರು ತಿಳಿಸಿದರು. ಆದರೆ, ಇಂದು ದೆಹಲಿಯಲ್ಲಿ ಲಸ್ಸಿ ಮಾರಾಟ ಮಾಡುವ ಮೂಲಕ ತಿಂಗಳಿಗೆ ₹80,000 ದಿಂದ ₹90,000 ರವರೆಗೆ ಅತ್ಯುತ್ತಮ ಆದಾಯ ಗಳಿಸುತ್ತಿದ್ದಾರೆ.

ಈಗ ದೇವರ ದಯೆಯಿಂದ ನಾನು ಚೆನ್ನಾಗಿ ಸಂಪಾದಿಸುತ್ತಿದ್ದೇನೆ. ತಿಂಗಳಿಗೆ ₹80,000 ದಿಂದ ₹90,000 ವರೆಗೆ ಕೈಗೆ ಸಿಗುತ್ತದೆ. ಕಷ್ಟಪಟ್ಟು ದುಡಿದೇ ಇಂದು ಆ ಮನೆಯನ್ನು ಕಟ್ಟಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಜೀವನದಲ್ಲಿ ನಮಗೇನೂ ಸಾಧಿಸಲು ಸಾಧ್ಯವಿಲ್ಲ ಎಂದು ನಿರಾಶರಾಗುವವರಿಗೆ ನೀಡುವ ಸಂದೇಶವೇನು ಎಂದು ವರ್ಮಾ ಕೇಳಿದಾಗ 'ಅಂತಹದ್ದೇನೂ ಇಲ್ಲ. ನಿರಂತರವಾಗಿ ಕಷ್ಟಪಟ್ಟು ಕೆಲಸ ಮಾಡಿ. ನೀವು ಪ್ರಾಮಾಣಿಕವಾಗಿ ಪರಿಶ್ರಮ ಪಡಿ, ದೇವರು ಖಂಡಿತ ನಿಮ್ಮನ್ನು ಆಶೀರ್ವದಿಸುತ್ತಾನೆ. ಯಾವುದೋ ಒಂದು ದಿನ ನೀವು ದೊಡ್ಡ ಮಟ್ಟಕ್ಕೆ ಬೆಳೆಯುತ್ತೀರಿ ಎಂದರು.

ಇದು ನಾನು ದಾಖಲಿಸಿದ ಅತ್ಯುತ್ತಮ ಅನುಭವ

ಈ ಸಂದರ್ಶನ ಮುಗಿಯುತ್ತಿದ್ದಂತೆ, ತಮ್ಮ ಡಿಜಿಟಲ್ ಪಯಣದಲ್ಲಿ ದಾಖಲಿಸಿದ ಅತ್ಯಂತ ಅದ್ಭುತ ಮತ್ತು ಪ್ರೇರಣಾದಾಯಕ ಅನುಭವಗಳಲ್ಲಿ ಇದೂ ಒಂದು ಎಂದು ವರ್ಮಾ ಬಣ್ಣಿಸಿದ್ದಾರೆ. "ನೀವು ಮನಸ್ಸು ಮಾಡಿ ಏನನ್ನಾದರೂ ಸಾಧಿಸಲು ಹೊರಟರೆ, ಅದನ್ನು ಸಾಧಿಸಿಯೇ ತೀರುತ್ತೀರಾ. ಯಶಸ್ಸು ಸಾಧಿಸಲು ನಿಮಗೆ ಬೇಕಿರುವುದು ಕೇವಲ ' ದೃಢಸಂಕಲ್ಪ' ಅಷ್ಟೇ," ಎಂದು ವರ್ಮಾ ವಿಡಿಯೋವನ್ನು ಮುಕ್ತಾಯಗೊಳಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ

ಈ ಪ್ರೇರಣಾದಾಯಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ನೆಟ್ಟಿಗರು ಸಾಲು ಸಾಲು ಭಾವುಕ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ:

ಮೊದಲನೆಯವರು: "ವಾವ್! ಪರಿಶ್ರಮದ ನೈಜ ಪ್ರತಿರೂಪವಾಗಿರುವ ಈ ವ್ಯಕ್ತಿಯ ಕಥೆಯನ್ನು ಜಗತ್ತಿಗೆ ತಲುಪಿಸಿದ್ದಕ್ಕಾಗಿ ಧನ್ಯವಾದಗಳು."

ಎರಡನೆಯವರು: "ಇಂಟರ್ನೆಟ್‌ನಲ್ಲಿ ನಾನು ನೋಡಿದ ಅತ್ಯಂತ ನೆಚ್ಚಿನ ವೀಡಿಯೊ ಇದಾಗಿದೆ."

ಮೂರನೆಯವರು: "ಕಠಿಣ ವಾಸ್ತವದ ನಡುವೆಯೂ ಬೆಳೆದು ನಿಂತ ಸ್ಪೂರ್ತಿದಾಯಕ ಕಥೆ. ಇಂತಹ ನೈಜ ಕಥೆಗಳು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುತ್ತವೆ."

ನಾಲ್ಕನೆಯವರು: "ಇದು ನಿಜಕ್ಕೂ ಶ್ಲಾಘನೀಯ. ಶಿಸ್ತು ಮತ್ತು ಸ್ಥಿರವಾದ ಶ್ರಮ ನಮ್ಮನ್ನು ಎಂದಿದ್ದರೂ ಯಶಸ್ಸಿನ ತುದಿಗೆ ತಲುಪಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ."

PREV
Read more Articles on
click me!

Recommended Stories

ವಿಚಿತ್ರ ಕಾಯಿಲೆಯಿಂದ ಕೆರೆಯಲ್ಲೇ ಬದುಕುತ್ತಿದ್ದ ಬಾಲಕನಿಗೆ ಅನಂತ್ ಅಂಬಾನಿ ಆಸರೆ! ಏರ್‌ಲಿಫ್ಟ್ ಮಾಡಿಸಿ ಉಚಿತ ಚಿಕಿತ್ಸೆ
Prahlad Meena IPS success story: ರೈಲ್ವೆ ಗ್ಯಾಂಗ್‌ಮನ್ ಆಗಿದ್ದವರು ಐಪಿಎಸ್ ಆದ್ರು!