
ಕೋಲ್ಕತ್ತಾ/ಮುಂಬೈ (ಆ.19): ದೇಶದಲ್ಲೇ ಅತಿ ವಿಚಿತ್ರ ಕಾಯಿಲೆಯಿಂದಾಗಿ ಮನೆಯ ಬದಲು ದಿನದ 24 ಗಂಟೆಯೂ ಕೆರೆಯ ನೀರಿನಲ್ಲೇ ವಾಸಿಸುತ್ತಿದ್ದ ಪಶ್ಚಿಮ ಬಂಗಾಳದ ಬಡ ಬಾಲಕನೊಬ್ಬನ ನೆರವಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ (Anant Ambani) ಧಾವಿಸಿದ್ದಾರೆ. ನೀರಿನಿಂದ ಹೊರಬಂದರೆ ಇಡೀ ದೇಹ ಉರಿಯುವ ಸಮಸ್ಯೆಯಿಂದ ನರಳುತ್ತಿದ್ದ ಬಾಲಕನನ್ನು ವಿಮಾನದ (Airlift) ಮೂಲಕ ಮುಂಬೈಗೆ ಕರೆಸಿಕೊಂಡಿರುವ ಅಂಬಾನಿ, ತಮ್ಮದೇ ಒಡೆತನದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಚಿತ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾ ಗ್ರಾಮದ ನಿವಾಸಿ ಇಕ್ಬಾಲ್ ಕಳೆದ ಹಲವು ಸಮಯದಿಂದ ಗ್ರಾಮದ ಕೆರೆಯ ನೀರಿನಲ್ಲೇ ಹಗಲು-ರಾತ್ರಿ ಕಳೆಯುತ್ತಿದ್ದನು. ನೀರಿನಿಂದ ಹೊರಬಂದ ತಕ್ಷಣ ಇಡೀ ದೇಹದಲ್ಲಿ ತೀವ್ರವಾದ ಉರಿ ಮತ್ತು ಸೂಜಿ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುತ್ತಿತ್ತು. ದೇಹವೆಲ್ಲಾ ಉರಿಯುತ್ತಿದ್ದರಿಂದ ಇದನ್ನು ತಾಳಲಾರದೇ ಉರಿ ತಪ್ಪಿಸಿಕೊಳ್ಳಲು ಆತ ಸದಾ ನೀರಿನಲ್ಲೇ ಮುಳುಗಿರಬೇಕಿತ್ತು. ಇತ್ತೀಚೆಗೆ ಬಾಲಕ ಕೆರೆಯ ನೀರಿನಲ್ಲಿ ಕುಳಿತೇ ತಿಂಡಿ ತಿನ್ನುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಬಡ ಕುಟುಂಬದವರಾದ ಪೋಷಕರು ಈ ಹಿಂದೆ ಆಸ್ಪತ್ರೆಗೆ ಕರೆದೊಯ್ದರೂ ಗುಣಮುಖವಾಗಿರಲಿಲ್ಲ. ಬಡತನದ ಕಾರಣ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗದೆ ನೆರವಿಗಾಗಿ ಮನವಿ ಮಾಡಿದ್ದರು.
ಇಕ್ಬಾಲ್ ಹೆಸರಿನ ಈ ಹುಡುಗ ಹಗಲು-ರಾತ್ರಿ ಎನ್ನದೆ ಕೆರೆಯಲ್ಲೇ ಇರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಎನ್‌ಐ ವರದಿಯ ಪ್ರಕಾರ, ಆತ ಹಲವು ದಿನಗಳಿಂದ ನೀರಿನಲ್ಲೇ ಇದ್ದ. ನೀರಿನಿಂದ ಹೊರಗೆ ಬಂದರೆ ಮೈಯೆಲ್ಲಾ ಉರಿಯ ಅನುಭವ ಆಗುತ್ತದೆ, ಹಾಗಾಗಿ ನೀರಿನಲ್ಲೇ ಇರಬೇಕೆನಿಸುತ್ತದೆ ಎಂದು ಆತ ಹೇಳಿದ್ದ. ಕೆರೆಯಲ್ಲೇ ಕುಳಿತು ಊಟ ಮಾಡುತ್ತಿದ್ದ ಮತ್ತೊಂದು ವಿಡಿಯೋ ಆತನ ಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಪ್ರಾಣಿಗಳ ಮೇಲೆ ಕರುಣೆ ತೋರಿ ವಂತಾರಾ ಚಿಕಿತ್ಸಾ ಕೇಂದ್ರವನ್ನೇ ಆರಂಭಿಸಿದ ಅನಂತ್ ಅಂಬಾನಿ, ಈ ಬಡ ಹುಡುಗನ ನೋಡಿ ಸಹಾಯ ಮಾಡಬೇಕೆನಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಬಾಲಕನ ದಯನೀಯ ಸ್ಥಿತಿಯನ್ನು ಕಂಡ ಅನಂತ್ ಅಂಬಾನಿ ತಕ್ಷಣವೇ ಕಾರ್ಯಪ್ರವೃತ್ತರಾದರು. ಬಾಲಕನಿಗೆ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಮುಂಬೈನಿಂದ ವಿಶೇಷ ವೈದ್ಯರ ತಂಡದ ಜೊತೆ ವಿಮಾನದ ವ್ಯವಸ್ಥೆ (Airlift) ಮಾಡಿಸಿದರು. ಇಕ್ಬಾಲ್‌ನನ್ನು ಮುಂಬೈನ ಪ್ರತಿಷ್ಠಿತ ‘ಸರ್ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ’ಗೆ (Sir HN Reliance Foundation Hospital) ದಾಖಲಿಸಲಾಗಿದೆ. ಬಾಲಕನಿಗೆ ಅಗತ್ಯವಿರುವ ಎಲ್ಲಾ ರೋಗನಿರ್ಣಯ ಪರೀಕ್ಷೆಗಳು ಹಾಗೂ ದೀರ್ಘಾವಧಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಅನಂತ್ ಅಂಬಾನಿ ತಿಳಿಸಿದ್ದಾರೆ.
Kekurangan uang kadang bukan cuma membuat hidup sulit, tapi membuat seseorang seolah tak punya pilihan.
Iqbal Sheikh (16), dari Murshidabad, Bengal Barat, India, disebut sudah lebih dari 5 tahun tinggal di dalam kolam karena penyakit kulit yang membuat tubuhnya terasa perih saat…— Greta Amelia (@gretaamelia7) August 11, 2026
ಚರ್ಮರೋಗ ತಜ್ಞರ ಪ್ರಕಾರ, ನಿರಂತರವಾಗಿ ನೀರಿನಲ್ಲೇ ಇರುವುದರಿಂದ ಚರ್ಮವು ಮೃದುವಾಗಿ (Skin Maceration) ಗಾಯಗಳು, ಬಿರುಕುಗಳು ಹಾಗೂ ಗಂಭೀರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ (Fungal) ಸೋಂಕಿಗೆ ತುತ್ತಾಗುವ ಅಪಾಯವಿತ್ತು. ಇದೀಗ ಮುಂಬೈನ ಉನ್ನತ ವೈದ್ಯರ ಮೇಲ್ವಿಚಾರಣೆಯಲ್ಲಿ ಬಾಲಕನಿಗೆ ಚಿಕಿತ್ಸೆ ಆರಂಭವಾಗಿದ್ದು, ಶೀಘ್ರದಲ್ಲೇ ಗುಣಮುಖನಾಗುವ ಭರವಸೆ ಮೂಡಿದೆ. ಬಡ ಬಾಲಕನ ನೋವಿಗೆ ಸ್ಪಂದಿಸಿ ಜೀವ ಉಳಿಸಲು ಮುಂದಾದ ಅನಂತ್ ಅಂಬಾನಿ ಅವರ ಮಾನವೀಯ ಗುಣಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.