ಬಾಡಿಗೆದಾರರ ಆಧಾರ್ ಕಾರ್ಡ್‌ ಬಳಸಿ ₹4 ಲಕ್ಷ ಸಾಲ ಪಡೆದ ಮನೆ ಮಾಲೀಕ! ಬ್ಯಾಂಕ್‌ ನೋಟೀಸ್ ನೋಡಿ ಕುಟುಂಬ ಶಾಕ್!

Published : Aug 29, 2026, 11:41 AM IST
Rent Agreement Aadhar card scam

ಸಾರಾಂಶ

ಮನೆ ಬಾಡಿಗೆ ಒಪ್ಪಂದಕ್ಕೆಂದು ನೀಡಿದ ಆಧಾರ್ ಕಾರ್ಡ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು, ಮಾಲೀಕನ ಮಗ ಬಾಡಿಗೆದಾರರ ಹೆಸರಿನಲ್ಲಿ 4 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದಾನೆ. ಸಾಲ ವಸೂಲಾತಿ ಏಜೆಂಟರು ಇದೀಗ ಮುಗ್ಧ ಬಾಡಿಗೆದಾರರಿಗೆ ಕಿರುಕುಳ ನೀಡುತ್ತಿದ್ದು, ಈ ವಂಚನೆಯಿಂದ ಪಾರಾಗಲು ಕಾನೂನು ಕ್ರಮಗಳು ಮತ್ತು ಸುರಕ್ಷತಾ ಮಾರ್ಗಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಬೆಂಗಳೂರು: ಮನೆ ಬಾಡಿಗೆ ಒಪ್ಪಂದಕ್ಕೆಂದು (Rental Agreement) ಮನೆ ಮಾಲೀಕನಿಗೆ ನೀಡಿದ್ದ ಆಧಾರ್ ಕಾರ್ಡ್ (Aadhaar Card) ವಿವರಗಳನ್ನು ದುರ್ಬಳಕೆ ಮಾಡಿಕೊಂಡು, ಮಾಲೀಕನ ಮಗನೇ ಬಾಡಿಗೆದಾರರ ಹೆಸರಿನಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಸಾಲ ಪಡೆದು ತಲೆಮರೆಸಿಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇದೀಗ ಸಾಲದ ಇಎಂಐ (EMI) ಪಾವತಿಯಾಗದ ಹಿನ್ನೆಲೆಯಲ್ಲಿ ಸಾಲ ವಸೂಲಾತಿ ಏಜೆಂಟರು (Loan Recovery Agents) ಮುಗ್ಧ ಬಾಡಿಗೆದಾರರಿಗೆ ಕರೆ ಮಾಡಿ ಲೀಗಲ್ ನೋಟಿಸ್ ಕಳಿಸುವುದಾಗಿ ಬೆದರಿಕೆ ಹಾಕುತ್ತಿದ್ದು, ಈ ಬಗ್ಗೆ ಸಂತ್ರಸ್ತ ಯುವಕ ಸಾಮಾಜಿಕ ಜಾಲತಾಣದಲ್ಲಿ ಕಾನೂನು ನೆರವು ಕೋರಿದ್ದಾನೆ.

ಅಗ್ರಿಮೆಂಟ್ ನೆಪದಲ್ಲಿ ಆಧಾರ್ ಪಡೆದು ವಂಚನೆ!

ಸಂತ್ರಸ್ತ ಕುಟುಂಬವು ಕಳೆದ ವರ್ಷ ಮನೆ ಬಾಡಿಗೆ ಒಪ್ಪಂದ ನವೀಕರಣದ ಸಮಯದಲ್ಲಿ ಪರಿಶೀಲನೆಗಾಗಿ ತಮ್ಮ ತಂದೆಯ ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಫೋನ್ ನಂಬರ್ ಅನ್ನು ಮನೆ ಮಾಲೀಕನಿಗೆ ನೀಡಿತ್ತು. ಆದರೆ ಮಾಲೀಕನ ಮಗ ಈ ವೈಯಕ್ತಿಕ ವಿವರಗಳನ್ನು ಬಳಸಿ ಸುಮಾರು 4 ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ. ಕಳೆದ ಒಂದು ವರ್ಷದಿಂದ ಇಎಂಐ ಕಟ್ಟದೆ ಆತ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಮಾಲೀಕನನ್ನು ಕೇಳಿದರೆ, 'ನನ್ನ ಮಗ ಬಂದಾಗ ಆತನನ್ನೇ ಕೇಳಿ' ಎಂದು ಜಾರಿಕೊಂಡಿದ್ದಾನೆ. ಇತ್ತೀಚೆಗೆ ರಿಕವರಿ ಏಜೆಂಟ್ ಕರೆ ಮಾಡಿ, ನಿಮ್ಮ ತಂದೆಯ ಆಧಾರ್ ವಿವರಗಳನ್ನು ರೆಫರೆನ್ಸ್ ಆಗಿ ನೀಡಲಾಗಿದೆ. ಹಣ ಕಟ್ಟದಿದ್ದರೆ ನಿಮ್ಮ ತಂದೆಯ ಆಧಾರ್ ಕಾರ್ಡ್ ಮೇಲೆ ಲೀಗಲ್ ನೋಟಿಸ್ ಕಳುಹಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ.

ತಕ್ಷಣ ಸೈಬರ್ ಕ್ರೈಂ & ಪೊಲೀಸ್ ಠಾಣೆಗೆ ದೂರು ನೀಡಿ:

ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡಿರುವ ಮಾಲೀಕನ ಮಗನ ವಿರುದ್ಧ ಗುರುತು ಕಳ್ಳತನ (Identity Theft) ಮತ್ತು ನಕಲಿ ದಾಖಲೆ ಸೃಷ್ಟಿ (Forgery) ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ cybercrime.gov.in ನಲ್ಲಿ ಅಧಿಕೃತ ದೂರು ದಾಖಲಿಸಿ FIR ಪ್ರತಿ ಇಟ್ಟುಕೊಳ್ಳಿ. ರಿಕವರಿ ಏಜೆಂಟ್ ಮತ್ತೆ ಕರೆ ಮಾಡಿದಾಗ ಬ್ಯಾಂಕ್/NBFC ಹೆಸರು ಮತ್ತು ಲೋನ್ ಅಕೌಂಟ್ ನಂಬರ್ ಪಡೆಯಿರಿ. ಆ ಹಣಕಾಸು ಸಂಸ್ಥೆಗೆ ಇಮೇಲ್ ಅಥವಾ ರಿಜಿಸ್ಟರ್ಡ್ ಪೋಸ್ಟ್ ಮೂಲಕ 'ನಮ್ಮ ಅನುಮತಿಯಿಲ್ಲದೆ ನಮ್ಮ ಆಧಾರ್ ದುರುಪಯೋಗಪಡಿಸಿಕೊಳ್ಳಲಾಗಿದೆ' ಎಂದು ಪೊಲೀಸ್ ದೂರಿನ ಪ್ರತಿಯೊಂದಿಗೆ ಲಿಖಿತ ಸ್ಪಷ್ಟನೆ ನೀಡಿ.

ರಿಕವರಿ ಏಜೆಂಟ್‌ಗಳ ಕಿರುಕುಳಕ್ಕೆ ಆರ್‌ಬಿಐ ನಿಯಮ:

ಆರ್‌ಬಿಐ (RBI) ನಿಯಮಗಳ ಪ್ರಕಾರ, ಯಾವುದೇ ಏಜೆಂಟ್ ಸಾಲ ಪಡೆಯದ ಮೂರನೇ ವ್ಯಕ್ತಿಗೆ ಬೆದರಿಕೆ ಹಾಕುವಂತಿಲ್ಲ. ಇಂತಹ ಕಿರುಕುಳದ ವಿರುದ್ಧ ಆರ್‌ಬಿಐ ಒಂಬುಡ್ಸ್‌ಮನ್‌ಗೆ (RBI Ombudsman) ದೂರು ಸಲ್ಲಿಸಬಹುದು. ಯಾರಿಗೆ ಯಾವುದೇ ಕಾರಣಕ್ಕೂ ಮೂಲ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುವ ಬದಲು, ಮಾಸ್ಕ್ಡ್ ಆಧಾರ್ (Masked Aadhaar) ಕೊಡಿ. ಅದರಲ್ಲಿ ಮೊದಲ 8 ಸಂಖ್ಯೆಗಳು ಮರೆಯಾಗಿರುತ್ತವೆ. ಜೊತೆಗೆ ಜೆರಾಕ್ಸ್ ಪ್ರತಿಯ ಮೇಲೆ 'Only for Rental Agreement Verification' ಎಂದು ಅಡ್ಡಲಾಗಿ ದಿನಾಂಕ ಸಮೇತ ಬರೆದು ಸಹಿ ಹಾಕಿ ನೀಡಿ.

PREV
Read more Articles on
click me!

Recommended Stories

60 ಕಿ.ಮೀ ಕ್ಯಾಬ್ ಬುಕ್ಕಿಂಗ್‌ಗೆ 240 ಕಿ.ಮೀ ಚಾರ್ಜ್, ಇದು ಓಲಾ Scam; 5,662 ರೂ. ಬಿಲ್ ನೋಡಿ ಬೆಚ್ಚಿಬಿದ್ದ ಪ್ರಯಾಣಿಕ
₹83 ಲಕ್ಷದ ಗೂಗಲ್ ಕೆಲಸಕ್ಕೆ ಗುಡ್‌ಬೈ! ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿದ ಸಾಫ್ಟ್‌ವೇರ್ ಎಂಜಿನಿಯರ್!