
ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವ ಮಾತಿದೆ. ನಮ್ಮ ಮಕ್ಕಳು (Children) ಅಂದ್ಮೇಲೆ ಅವರು ಹೇಗಿದ್ರೂ ಚೆಂದವೆ. ಬಾಲ್ಯದಲ್ಲಿದ್ದಾಗ ಮಕ್ಕಳ ಫೋಟೋ, ವಿಡಿಯೋ ಕ್ಲಿಕ್ಕಿಸೋಕೆ ಪಾಲಕರು ಉತುಕರಾಗಿರ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ಬಾಲ್ಯದ ದಿನಗಳನ್ನು ಮಿಸ್ ಮಾಡ್ಕೊಳ್ಳುವ ಪಾಲಕರು, ಹಳೆ ಫೋಟೋಗಳನ್ನು ಪದೇ ಪದೆ ತಿರುವಿ ಹಾಕ್ತಾರೆ. ಚಿಕ್ಕವನಿರುವಾಗ ಹಾಕಿದ್ದೆ, ಹೀಗಿದ್ದೆ ಅಂತ ಮಕ್ಕಳಿಗೆ ಹೇಳ್ತಿರುತ್ತಾರೆ. ಬಾಲ್ಯದಲ್ಲಿ ನನ್ನ ಮಗ ಎಷ್ಟು ಚೆನ್ನಾಗಿದ್ದ ಗೊತ್ತಾ? ಎಲ್ಲರ ದೃಷ್ಟಿ ಅವನ ಮೇಲೆ ಬೀಳ್ತಾನೆ ಇರ್ತಿತ್ತು ಅಂತ ಅಪ್ಪ – ಅಮ್ಮ ಮಕ್ಕಳು ದೊಡ್ಡವರಾದ್ಮೇಲೂ ಅವರನ್ನು ಗುಣಗಾನ ಮಾಡಿ ಸುಮ್ಮನಾಗ್ತಾರೆ. ಆದ್ರೆ ಇಲ್ಲೊಬ್ಬ ಅಪ್ಪನಿಗೆ ಮಗನ ಸೌಂದರ್ಯವನ್ನು ಬಾಯಿಯಲ್ಲಿ ಹೇಳಿದ್ದು ಸಾಕಾಗ್ಲಿಲ್ಲ. ಚಿಕ್ಕವನಿರುವಾಗ ಮಗ ಅತೀ ಸುಂದರನಾಗಿದ್ದ. ಆತನ ಅಂದವನ್ನು ಪ್ರತಿಯೊಬ್ಬರೂ ನೋಡ್ಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು. ಅದಕ್ಕೆ ಆತ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುವಂತಿದೆ. ಆದ್ರೆ ತಂದೆ ಮಾಡಿದ ಈ ಕೆಲ್ಸವನ್ನು ಮಗನೇ ಮೆಚ್ಚಿಕೊಳ್ತಿಲ್ಲ.
ಘಟನೆ ನಡೆದಿದ್ದು ಜಪಾನಿ (Japan)ನಲ್ಲಿ. ರಿಯಲ್ ಎಸ್ಟೇಟ್ ಮಾಲೀಕನೊಬ್ಬ ತನ್ನ ಮಗನ ಫೋಟೋಗಳನ್ನು ಟೋಕಿಯೋದ ಮೂಲೆ ಮೂಲೆಗೆ ಹಾಕಿದ್ದಾನೆ. ಯು-ಕುನ್ ಎಂಬ ಹುಡುಗ, ದಿ ಲ್ಯಾಂಡ್ಮಾರ್ಕ್ ಕಿಡ್ ಎಂದೇ ಪ್ರಸಿದ್ಧಿ ಪಡೆದಿದ್ದಾನೆ. ಯು – ಕುನ್ ತಂದೆಗೆ ಮಗನೆಂದ್ರೆ ಪ್ರಾಣ. ಬಾಲ್ಯದಲ್ಲಿ ಮಗ ತುಂಬಾ ಸುಂದರವಾಗಿದ್ದ. ಆತನನ್ನು ಇಡೀ ಟೋಕಿಯೋ ನೋಡ್ಬೇಕು ಎನ್ನುವ ಕಾರಣಕ್ಕೆ 5 ಕೋಟಿ ಖರ್ಚು ಮಾಡಿ ಫೋಟೋಗಳನ್ನು ಹಾಕಿದ್ದಾನೆ. ಬಹುತೇಕ ಎಲ್ಲ ಜಾಹೀರಾತು ಬ್ಯಾನರ್ ಗಳಲ್ಲಿ ನೀವು ಯು – ಕುನ್ ಫೋಟೋಗಳನ್ನು ನೋಡ್ಬಹುದು.
ಇದನ್ನು ಜಾಹೀರಾತು ಅಭಿಯಾನ ಅಂತ ನೀವು ಕರೀಬಹುದು. ಯು – ಕುನ್ ನ ಸುಂದರ ಫೋಟೋಗಳು ಮಾತ್ರವಲ್ಲ ಬಾಲ್ಯದಲ್ಲಿ ತೆಗೆದ ಬಹುತೇಕ ಎಲ್ಲ ಫೋಟೋಗಳನ್ನೂ ಹಾಕಲಾಗಿದೆ. ಚಿತ್ರವಿಚಿತ್ರ ಮುಖ ಮಾಡಿರುವ ಫೋಟೋದಿಂದ ಹಿಡಿದು, ಪ್ರೊಟೆಸ್ಟ್ ಒಂದನ್ನು ನೋಡಿ, ಯು- ಕುನ್ ಅಳ್ತಿರುವ ಫೋಟೋವರೆಗೆ ಎಲ್ಲ ಫೋಟೋಗಳಿವೆ. ನನ್ನ ಮಗ ಬಾಲ್ಯದಲ್ಲಿ ತುಂಬಾ ಸುಂದರವಾಗಿದ್ದ. ಅವ ಹೇಗಿದ್ದ ಎಂಬುದನ್ನು ಎಲ್ಲರೂ ನೋಡ್ಬೇಕು ಎನ್ನುವ ಕಾರಣಕ್ಕೆ ನಾನು ಇಷ್ಟೊಂದು ಖರ್ಚು ಮಾಡಿ, ಮಗನ ಫೋಟೋಗಳನ್ನು ಎಲ್ಲ ಕಡೆ ಹಾಕಿಸಿದ್ದೇನೆ ಅಂತ ಯು –ಕುನ್ ತಂದೆ ಹೇಳಿದ್ದಾರೆ.
ತಂದೆ ಅಭಿಯಾನದ ಬಗ್ಗೆ ಮಗನ ಪ್ರತಿಕ್ರಿಯೆ ಏನು? : ಯು – ಕುನ್ ಗೆ ಈಗ 16 ವರ್ಷ ವಯಸ್ಸು. ತಂದೆ ಈ ಪ್ರೀತಿಯನ್ನು ಯು – ಕುನ್ ವಿರೋಧಿಸಿದ್ದಾನೆ. ನನಗೆ ಇದು ಇಷ್ಟವಿಲ್ಲ. ಜನರು ನನ್ನ ಬಾಲ್ಯದ ಫೋಟೋಗಳನ್ನು ನೋಡಿ ಏನು ಮಾಡ್ತಾರೆ, ನಾನೀಗ ದೊಡ್ಡವನಾಗಿದ್ದೇನೆ. ಇದು ನನಗೆ ನಾಚಿಕೆ ವಿಷ್ಯ ಅಂತ ಯು – ಕುನ್ ಹೇಳಿದ್ದಾನೆ. ಅಷ್ಟೇ ಅಲ್ಲ ನಾನು ಇಷ್ಟೊಂದು ಪ್ರಿಯವಾಗಿದ್ದೇನೆ ಎಂದಾದ್ರೆ ಫೋಟೋಗಳಿಗೆ ಖರ್ಚು ಮಾಡಿದ 100 ಮಿಲಿಯನ್ ಯೆನ್ ಅನ್ನು ನನ್ನ ಬ್ಯಾಂಕ್ ಖಾತೆಗೆ ಹಾಕ್ಬಹುದಿತ್ತು ಅಂತ ಯು – ಕುನ್ ಹೇಳಿದ್ದಾನೆ.
ಜಪಾನ್ ಈ ಸ್ಟೋರಿ ಚೀನಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾಲಕರ ಪ್ರೀತಿ ಉಚಿತವಾಗಿದ್ರೂ ಅದ್ರ ಬೆಲೆ ದುಬಾರಿ ಎಂದು ಜನರು ಕಮೆಂಟ್ ಮಾಡಿದ್ದಾರೆ. ಚೀನಾ ಪಾಲಕರು ತಮ್ಮ ಪ್ರೀತಿಯನ್ನು ಮುಚ್ಚಿಡಲು ಫೇಮಸ್ ಆದ್ರೆ ಜಪಾನಿ ಪಾಲಕರು, ಮಕ್ಕಳ ಪ್ರೀತಿಗೆ ಕೈಬಿಚ್ಚಿ ಖರ್ಚು ಮಾಡ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.