
ಗುಜರಾತ್‌ನ ಮೋರ್ಬಿ ತಾಲೂಕಿನ ವೀರಪರ್ದಾ ಗ್ರಾಮದ ನಿಗೂಢ ಬಾವಿಯಲ್ಲಿ ಗುರುವಾರ ಮಧ್ಯಾಹ್ನ ನೀರು ತಾನಾಗಿಯೇ ಚಲಿಸತೊಡಗಿದೆ. ಈ ವಿಚಿತ್ರ ಘಟನೆಯಿಂದಾಗಿ ಈ ಬಾವಿ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಗುರುವಾರ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಅಸಾಮಾನ್ಯ ಚಟುವಟಿಕೆ ಪುನರಾರಂಭವಾಗಿದೆ. ಎರಡು ದಿನಗಳ ಹಿಂದೆ ಇದೇ ರೀತಿಯ ಘಟನೆ ಕಂಡುಬಂದಿತ್ತು, ಆದರೆ ಗುರುವಾರ ಮಧ್ಯಾಹ್ನದ ವೇಳೆಗೆ ಚಲನೆ ಕ್ರಮೇಣ ನಿಂತು ನಂತರ ದಿನದ ನಂತರ ಮತ್ತೆ ಪ್ರಾರಂಭವಾಗಿದೆ. ಈ ವಿಚಿತ್ರ ವಿದ್ಯಮಾನವು ಗ್ರಾಮಸ್ಥರ ನಿದ್ದಿಗೆಡಿಸಿದ್ದು, ಹಲವಾರು ಜನ ಈ ಸನ್ನಿವೇಶವನ್ನು ವೀಕ್ಷಿಸಲು ಬಾವಿ ಬಳಿ ಜಮಾಯಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಈ ಚಟುವಟಿಕೆಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಮೋರ್ಬಿ ಹಿಂದೆ ಭೂಕಂಪನ ಚಟುವಟಿಕೆ ಅನುಭವಿಸಿದ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ, ಇದು ಪ್ರದೇಶದ ಭೂಕಂಪನ ಸ್ವರೂಪಕ್ಕೆ ಸಂಬಂಧಿಸಿರಬಹುದು ಎಂದು ಕೆಲವು ನಿವಾಸಿಗಳು ಹೇಳುತ್ತಿದ್ದಾರೆ. ಅಲ್ಲದೇ, ಅಧಿಕಾರಿಗಳು ಇನ್ನೂ ಅಧಿಕೃತ ವಿವರಣೆಯನ್ನು ನೀಡಿಲ್ಲ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಬಾವಿಯಲ್ಲಿ ಪದೇ ಪದೇ ಚಲನೆ ಉಂಟಾಗಲು ಕಾರಣವೇನೆಂದು ನಿರ್ಧರಿಸಲು ತಜ್ಞರ ಮಾಹಿತಿಗಾಗಿ ಕಾಯುತ್ತಿದ್ದಾರೆ. ಭೂಕಂಪ ಸಂಭವಿಸುವುದಿಲ್ಲ ಎಂದು ಹೇಳಿದ ಅಧಿಕಾರಿಗಳು, ವದಂತಿಗಳನ್ನು ನಂಬಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಮೋರ್ಬಿಯ ಬಾವಿಯಲ್ಲಿ ನಡೆದ ಈ ಚಟುವಟಿಕೆ ಸಂಬಂಧಿಸಿದ ವರದಿಗಳು ಬಂದ ನಂತರ, ಗಾಂಧಿನಗರದ ತಂಡವನ್ನು ನಿಯೋಜಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಭೂಕಂಪಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯ ಸೂಚನೆಯಿಲ್ಲ, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮೋರ್ಬಿ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ವಪ್ನಿಲ್ ಖರೆ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ಅನಿಲ ಸೋರಿಕೆಯ ಸಂಭವನೀಯತೆಯ ಬಗ್ಗೆ ಕೆಲವು ಊಹಾಪೋಹಗಳು ಹೊರಹೊಮ್ಮಿವೆ. ಅಲ್ಲದೇ, ತನಿಖಾ ತಂಡವು ಇನ್ನೂ ನೀರಿನ ಮಾದರಿ ಸಂಗ್ರಹಿಸಿಲ್ಲ, ಮತ್ತು ಸರಿಯಾದ ವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಕೇವಲ ವೀಡಿಯೊ ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸ್ವಪ್ನಿಲ್ ಹೇಳಿದ್ದಾರೆ. ಇಂದು ಬಾವಿಯಲ್ಲಿನ ಈ ಚಟುವಟಿಕೆ ಕಡಿಮೆಯಾಗಿದೆ, ಮತ್ತು ನಮ್ಮ ತಂಡಗಳು ಈ ವಿದ್ಯಮಾನದ ನಿಖರ ಕಾರಣವನ್ನು ನಿರ್ಧರಿಸಲು ಕೆಲಸ ಮಾಡುತ್ತಿವೆ. ತನಿಖೆ ಪೂರ್ಣಗೊಂಡ ನಂತರ ಪರಿಶೀಲಿಸಿದ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಖರೆ ಹೇಳಿದ್ದಾರೆ.