ಕೋರಿಯನ್ ಮದ್ವೆಯಲ್ಲಿ ಭಾರತೀಯ ಯುವತಿಗೆ ಊಟ ನೀಡದೇ ನಿಲ್ಲಿಸಿದ್ದರು; ಕಾರಣ ಕ್ಯೂಟ್ ಆಗಿದೆ

Published : Sep 08, 2026, 04:38 PM IST
Korean Wedding

ಸಾರಾಂಶ

ಮದುವೆ ಸಂಪ್ರದಾಯಗಳು ಒಂದೊಂದು ಕಡೆ ವಿಚಿತ್ರ ವಿಚಿತ್ರವಾಗಿರುತ್ತವೆ. ಅದರಂತೆ ಭಾರತೀಯ ಯುವತಿಯೊಬ್ಬಳು ಕೋರಿಯನ್ ಮದುವೆಗೆ ಹೋಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಆಕೆಗೆ ಊಟ ಮಾಡಲು ಬಿಡದೇ ತಡೆದು ನಿಲ್ಲಿಸಿದ ಪ್ರಸಂಗ ನಡೆಯಿತು. ಅಷ್ಟಕ್ಕೂ ಆಕೆ ಮಾಡಿದ ಯಡವಟ್ಟು ಏನು ಗೊಯತ್ತಾ?

ಸಿಯೋಲ್ (ದಕ್ಷಿಣ ಕೊರಿಯಾ): ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿಭಿನ್ನ ಸಂಸ್ಕೃತಿ ಮತ್ತು ಆಚರಣೆಗಳಿರುತ್ತವೆ. ನಮ್ಮ ದೇಶದಲ್ಲಿ ಮದುವೆ ಎಂದರೆ ಅತಿಥಿಗಳಿಗೆ ಮೊದಲ ಆದ್ಯತೆ, ಊಟದ ವಿಚಾರದಲ್ಲಿ ಯಾರನ್ನೂ ಕೇಳುವವರಿರುವುದಿಲ್ಲ. ಆದರೆ ದಕ್ಷಿಣ ಕೊರಿಯಾದಲ್ಲಿ ನಡೆದ ಮದುವೆಯೊಂದಕ್ಕೆ ಹೋದ ಭಾರತೀಯ ಯುವತಿಗೆ ಅಲ್ಲಿನ ವಿಚಿತ್ರ ಪದ್ಧತಿಯಿಂದಾಗಿ ಮುಜುಗರ ಅನುಭವಿಸುವಂತಾದ ಘಟನೆ ನಡೆದಿದೆ.

ಏನಿದು ಘಟನೆ?

ದಕ್ಷಿಣ ಕೊರಿಯಾದ ಪ್ರಯೋಗಾಲಯವೊಂದರಲ್ಲಿ ಕೆಲಸ ಮಾಡುತ್ತಿರುವ ಜಿಜ್ಞಾಸ (Jigyasa) ಎಂಬ ಭಾರತೀಯ ಯುವತಿ, ತನ್ನ ಸಹೋದ್ಯೋಗಿಯ (Labmate) ಮದುವೆಗೆ ಭಾರತ ಮತ್ತು ಶ್ರೀಲಂಕಾದ ಇಬ್ಬರು ಹಿರಿಯ ಸಹೋದ್ಯೋಗಿಗಳೊಂದಿಗೆ ತೆರಳಿದ್ದರು. ಮದುವೆ ಸಮಾರಂಭವನ್ನು ಕುತೂಹಲದಿಂದ ವೀಕ್ಷಿಸಿದ ಈ ತಂಡ, ಸಮಾರಂಭ ಮುಗಿದ ನಂತರ ಊಟದ ಹಾಲ್‌ನತ್ತ ಹೆಜ್ಜೆ ಹಾಕಿತು.

ಊಟಕ್ಕೆ ತಡೆದ ಭದ್ರತಾ ಸಿಬ್ಬಂದಿ

ಯುವತಿ ಮತ್ತು ಆಕೆಯ ತಂಡ ಊಟದ ಹಾಲ್ ಪ್ರವೇಶಿಸಲು ಮುಂದಾದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ಗಳು ಇವರನ್ನು ತಡೆದಿದ್ದಾರೆ. ಭದ್ರತಾ ಸಿಬ್ಬಂದಿ 'ಟೋಕನ್' ತೋರಿಸುವಂತೆ ಕೇಳಿದ್ದಾರೆ. ಇವರಿಗೆ ಕೊರಿಯನ್ ಭಾಷೆ ಸರಿಯಾಗಿ ತಿಳಿಯದ ಕಾರಣ ಏನು ಮಾಡಬೇಕೆಂದು ತೋಚದೆ ಗಾಬರಿಯಾಗಿದ್ದಾರೆ. ಕೂಡಲೇ ತಮ್ಮ ಸಹೋದ್ಯೋಗಿಗೆ (ಮದುಮಗ) ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗಿಫ್ಟ್ ನೀಡಿದರೆ ಮಾತ್ರ ಊಟದ ಟೋಕನ್

ನಂತರ ತಿಳಿದ ವಿಷಯವೇನೆಂದರೆ..ದಕ್ಷಿಣ ಕೊರಿಯಾದಲ್ಲಿ ಅತಿಥಿಗಳು ಮದುವೆ ಮಂಟಪ ಪ್ರವೇಶಿಸುವ ಮುನ್ನವೇ ಸ್ವಾಗತ ಕೌಂಟರ್‌ನಲ್ಲಿ (Reception counter) ಹಣದ ಲಕೋಟೆ ಅಥವಾ ಉಡುಗೊರೆಯನ್ನು ನೀಡಬೇಕು. ಅದರ ಬದಲಾಗಿ ಅಲ್ಲಿನ ಸಿಬ್ಬಂದಿ ಅತಿಥಿಗಳಿಗೆ ಒಂದು 'ಟೋಕನ್' ನೀಡುತ್ತಾರೆ. ಈ ಟೋಕನ್ ಇದ್ದರೆ ಮಾತ್ರ ಊಟದ ಹಾಲ್‌ಗೆ ಪ್ರವೇಶ ಸಿಗುತ್ತದೆ!

ಜಿಜ್ಞಾಸ ಮತ್ತು ಅವರ ತಂಡದ ಬಳಿ ಉಡುಗೊರೆಯ ಲಕೋಟೆ ಇತ್ತಾದರೂ, ಅವರು ಅದನ್ನು ನೇರವಾಗಿ ಮದುಮಕ್ಕಳಿಗೆ ನೀಡಲು ಇಟ್ಟುಕೊಂಡಿದ್ದರು. ಹೀಗಾಗಿ ಅವರ ಬಳಿ ಟೋಕನ್ ಇರಲಿಲ್ಲ. ವಿಷಯ ತಿಳಿದ ನಂತರ ಅವರು ಲಕೋಟೆಯನ್ನು ಕೌಂಟರ್‌ನಲ್ಲಿ ನೀಡಿ, ಟೋಕನ್ ಪಡೆದು ಊಟ ಸವಿದಿದ್ದಾರೆ.

ಈ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಜಿಜ್ಞಾಸ, ನಮ್ಮ ಭಾರತದಲ್ಲಿ ಮದುವೆಗೆ ಬಂದವರಿಗೆ ಪ್ರೀತಿಯಿಂದ ಊಟ ಬಡಿಸಲಾಗುತ್ತದೆ. ಉಡುಗೊರೆ ನೀಡುವುದು ಅಥವಾ ನೀಡದಿರುವುದು ಅತಿಥಿಗಳ ಇಚ್ಛೆ. ಆದರೆ ಇಲ್ಲಿ ಊಟಕ್ಕೂ ಟೋಕನ್ ಸಿಸ್ಟಮ್ ಇರುವುದು ನನಗೆ ತುಂಬಾ ವಿಚಿತ್ರ ಎನಿಸಿತು ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ದೇಶಗಳ ಸಂಪ್ರದಾಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ಹುಡುಗಿಯರಿರುವ ಪಿಜಿ ಕೋಣೆಯೊಳಗೆ ಮಾಲೀಕನ ಕಣ್ಣು, ಲಿವಿಂಗ್ ರೂಂ ಗೆ ಸಿಸಿಟಿವಿ ಅಳವಡಿಸಿ ಸಭ್ಯ ಬಟ್ಟೆ ಧರಿಸಲು ತಾಕೀತು!
ಕೈಯಲ್ಲಿದ್ದುದ್ದು ಕೇವಲ ಅರ್ಧ ಎಕರೆ ಮಾತ್ರ! 80 ಲಕ್ಷ ಗಳಿಸುವ ಮಟ್ಟಿಗೆ ಬೆಳೆದ ಈ ರೈತ ಮಹಿಳೆಯ ರೋಚಕ ಕಥೆ!