ಹುಡುಗಿಯರಿರುವ ಪಿಜಿ ಕೋಣೆಯೊಳಗೆ ಮಾಲೀಕನ ಕಣ್ಣು, ಲಿವಿಂಗ್ ರೂಂ ಗೆ ಸಿಸಿಟಿವಿ ಅಳವಡಿಸಿ ಸಭ್ಯ ಬಟ್ಟೆ ಧರಿಸಲು ತಾಕೀತು!

Published : Sep 08, 2026, 04:37 PM IST
CCTV

ಸಾರಾಂಶ

ಮುಂಬೈನಲ್ಲಿ, ಯುವತಿಯರ ಪಿಜಿಯ ಲಿವಿಂಗ್ ರೂಮ್‌ನಲ್ಲಿ ಮನೆ ಮಾಲೀಕನು ಅವರ ಅನುಮತಿಯಿಲ್ಲದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾನೆ. ಸುರಕ್ಷತೆಯ ಕಾರಣ ನೀಡಿದರೂ, ಇದು ತಮ್ಮ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ಯುವತಿಯರು ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮುಂಬೈ: ಬಾಡಿಗೆದಾರರ ಯಾವುದೇ ಪೂರ್ವ ಅನುಮತಿ ಪಡೆಯದೆ, ಯುವತಿಯರ ಪಿಜಿಯ ಕೋಣೆಯಲ್ಲೇ ಮನೆ ಮಾಲೀಕ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. 3 BHK ಅಪಾರ್ಟ್‌ಮೆಂಟ್‌ನ ಪಿಜಿಯಲ್ಲಿ ಇತರ ಆರು ಯುವತಿಯರೊಂದಿಗೆ ವಾಸಿಸುತ್ತಿರುವ ಸಂತ್ರಸ್ತ ಮಹಿಳೆಯೊಬ್ಬರು ತಮ್ಮ ಈ ಭೀಕರ ಅನುಭವವನ್ನು ರೆಡ್ಡಿಟ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಘಟನೆಯ ವಿವರ:

ಬಾಡಿಗೆಗೆ ಇರುತ್ತಿದ್ದ ಯುವತಿಯರ ಪ್ರಕಾರ, ಮನೆ ಮಾಲೀಕನು ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ಬಾಗಿಲು ತಟ್ಟಿ, ಲಿವಿಂಗ್ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದಾಗಿ ತಿಳಿಸಿದ್ದಾನೆ. ಇದನ್ನೇ ಆತ ಯುವತಿಯರ ಒಪ್ಪಿಗೆ ಎಂದು ಕರೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಲಿವಿಂಗ್ ರೂಮ್‌ಗೆ ಬರುವಾಗ 'ಸಭ್ಯವಾಗಿ ಉಡುಪು ಧರಿಸಿ' ಎಂದು ಮಾಲೀಕ ಖಡಕ್ ಆಗಿ ಸೂಚಿಸಿದ್ದಾನೆ. ನಮಗೆ ಸ್ವಂತ ಕೋಣೆಗಳಲ್ಲಿ ಸ್ಟಡಿ ಟೇಬಲ್ ಇಲ್ಲದಿರುವುದರಿಂದ, ನಾವು ಓದಲು ಮತ್ತು ಊಟ ಮಾಡಲು ಲಿವಿಂಗ್ ರೂಮ್ ಅನ್ನೇ ಬಳಸುತ್ತಿದ್ದೆವು. ಇದು ಉಡುಪಿನ ವಿಷಯವಲ್ಲ, ನಮಗೆ ಕನಿಷ್ಠ ಗೌಪ್ಯತೆಯ ಹಕ್ಕು ಇಲ್ಲವೇ? ಎಂದು ಯುವತಿ ಪ್ರಶ್ನಿಸಿದ್ದಾಳೆ.

ಕ್ಯಾಮೆರಾ ಅಳವಡಿಕೆಯನ್ನು ಯುವತಿಯರು ಪ್ರಶ್ನಿಸಿದಾಗ, ಪೊಲೀಸರು ಸಿಸಿಟಿವಿ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದಾರೆ, ಅಲ್ಲದೆ ಈ ಹಿಂದೆ ವಸತಿಗೃಹಕ್ಕೆ ಸ್ನೇಹಿತರು ಬಂದು ವಸ್ತುಗಳು ಕಳೆದು ಹೋಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಲೀಕ ಸಮರ್ಥಿಸಿಕೊಂಡಿದ್ದಾನೆ. ಆದರೆ, ಮನೆಯ ಮುಖ್ಯ ದ್ವಾರದ ಹೊರಗೆ ಕ್ಯಾಮೆರಾ ಅಳವಡಿಸುವ ಬದಲು, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯುವ ಶ್ರಮ ತಪ್ಪಿಸಲು ಮನೆ ಒಳಗಡೆಯೇ ಕ್ಯಾಮೆರಾ ಹಾಕಿದ್ದಾನೆ ಎಂದು ಬಾಡಿಗೆದಾರರು ಆರೋಪಿಸಿದ್ದಾರೆ.

ನೆಟ್ಟಿಗರ ಆಕ್ರೋಶ ಹಾಗೂ ಸಲಹೆಗಳು:

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಾಲೀಕನ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಖಾಸಗಿತನದ ಹಕ್ಕಿನ ಉಲ್ಲಂಘನೆ: ಸ್ಪಷ್ಟ ಸಮ್ಮತಿಯಿಲ್ಲದೆ ಮನೆ ಒಳಗಡೆ ಕಣ್ಗಾವಲು ಕ್ಯಾಮೆರಾ ಇಡುವುದು ಕಾನೂನುಬಾಹಿರ ಹಾಗೂ ವೈಯಕ್ತಿಕ ಗೌಪ್ಯತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ದೂರಿಗೆ ಸಲಹೆ: ಸುರಕ್ಷತೆಯ ನೆಪದಲ್ಲಿ ಲಿವಿಂಗ್ ರೂಮ್‌ನಲ್ಲಿ ಕ್ಯಾಮೆರಾ ಇಡುವ ಬದಲು ಮುಖ್ಯ ದ್ವಾರದ ಬಳಿ ಅಳವಡಿಸಬೇಕಿತ್ತು. ಮಾಲೀಕನ ನಡೆ ಅನುಮಾನಾಸ್ಪದವಾಗಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಹಾಗೂ ಹೊಸ ವಸತಿ ವ್ಯವಸ್ಥೆಯನ್ನು ಹುಡುಕಿಕೊಳ್ಳುವಂತೆ ಬಳಕೆದಾರರು ಸಲಹೆ ನೀಡಿದ್ದಾರೆ.

ಸಣ್ಣ ವಯಸ್ಸಿನ ಉದ್ಯೋಗಿ ಹಾಗೂ ವಿದ್ಯಾರ್ಥಿನಿಯರು ಎಂಬ ಕಾರಣಕ್ಕೆ ಮನೆ ಮಾಲೀಕರು ಇಂತಹ ಅಸಮಂಜಸ ನಿಯಮಗಳನ್ನು ಹೇರುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ನೋವು ತೋಡಿಕೊಂಡಿದ್ದಾರೆ.

PREV
Read more Articles on
click me!

Recommended Stories

ಕೈಯಲ್ಲಿದ್ದುದ್ದು ಕೇವಲ ಅರ್ಧ ಎಕರೆ ಮಾತ್ರ! 80 ಲಕ್ಷ ಗಳಿಸುವ ಮಟ್ಟಿಗೆ ಬೆಳೆದ ಈ ರೈತ ಮಹಿಳೆಯ ರೋಚಕ ಕಥೆ!
ಲಕ್ಷ ಲಕ್ಷ ಸಂಪಾದನೆ ಇದ್ದರೂ ನೆಮ್ಮದಿ ಇಲ್ಲ, ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಕಳೆದುಕೊಂಡು ಕಣ್ಣೀರಿಟ್ಟ ಯುವತಿ