15 ವರ್ಷಗಳ ದೇಶಸೇವೆ ಮುಗಿಸಿ ಮನೆಗೆ ಬಂದ ಇಂಡಿಯನ್‌ ನೇವಿ ಹೀರೋ: ಪತಿಗೆ ಹಾರ ಹಾಕಿ, ಆರತಿ ಎತ್ತಿ ಸಂಭ್ರಮಿಸಿದ ಪತ್ನಿ!

Published : Sep 11, 2026, 09:01 PM IST
Indian Navy Officer Returns Home After 15 Years of Service, Wife Welcomes Her “Hero” With Special Ceremony

ಸಾರಾಂಶ

ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ ಅವರಿಗೆ, ಅವರ ಪತ್ನಿ ಶಿವಾನಿ ಸಾಂಪ್ರದಾಯಿಕವಾಗಿ ನೀಡಿದ ಭಾವುಕ ಸ್ವಾಗತದ ವಿಡಿಯೋ ವೈರಲ್ ಆಗಿದೆ.

ನವದೆಹಲಿ (ಸೆ.11): ಭಾರತೀಯ ನೌಕಾಪಡೆಯಲ್ಲಿ (Indian Navy) ಸುದೀರ್ಘ 15 ವರ್ಷಗಳ ಕಾಲ ಕಠಿಣ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ (Rahul Madhwal) ಅವರು ಮನೆಗೆ ಮರಳಿದಾಗ, ಅವರ ಪತ್ನಿ ಅತ್ಯಂತ ಭಾವುಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನೀಡಿದ ಅದ್ಧೂರಿ ಸ್ವಾಗತದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದೇಶ ಕಾಯುವ ಕಠಿಣ ಜವಾಬ್ದಾರಿ ಮುಗಿಸಿ ಬಂದ ಪತಿಯನ್ನು 'ನನ್ನ ರಿಯಲ್ ಹೀರೋ' ಎಂದು ಕರೆದಿರುವ ಪತ್ನಿಯ ಪ್ರೀತಿ ಹಾಗೂ ಸಂಭ್ರಮದ ಕ್ಷಣಗಳು ಲಕ್ಷಾಂತರ ನೆಟ್ಟಿಗರ ಮನ ಗೆದ್ದಿವೆ. ಸೆಪ್ಟೆಂಬರ್ 1 ರಂದು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಜನರು ಈ ದೇಶಪ್ರೇಮಿ ದಂಪತಿಗೆ ಶುಭಹಾರೈಸುತ್ತಿದ್ದಾರೆ.

ಹಾರ ಹಾಕಿ, ಆರತಿ ಎತ್ತಿ ಸಾಂಪ್ರದಾಯಿಕ ಸ್ವಾಗತ

ರಾಹುಲ್ ಮಾಧ್ವಾಲ್ ಅವರ ಪತ್ನಿ ಶಿವಾನಿ ಬುಧಕೋಟಿ (Shivani Budhkoti) ತಮ್ಮ ಪತಿಯ ನಿವೃತ್ತಿಯನ್ನು ಸ್ಮರಣೀಯವಾಗಿಸಲು ಮನೆ ಬಾಗಿಲಲ್ಲೇ ವಿಶೇಷ ಸಮಾರಂಭವನ್ನು ಆಯೋಜಿಸಿದ್ದರು. ರಾಹುಲ್ ಮನೆಗೆ ಆಗಮಿಸುತ್ತಿದ್ದಂತೆ ಬಾಗಿಲಲ್ಲಿ ನಿಂತು ಅವರ ಸಾಮಗ್ರಿಗಳನ್ನು ಕೈಗೆ ತೆಗೆದುಕೊಂಡ ಶಿವಾನಿ, ಪತಿಯ ಹಣೆಗೆ ಶ್ರೀಗಂಧ ಮತ್ತು ಅಕ್ಷತೆಯನ್ನು ಇಟ್ಟು, ಹೂವಿನ ಮಳೆಗರೆದು, ಆರತಿ ಎತ್ತುವ ಮೂಲಕ ಗೌರವದಿಂದ ಒಳಗೆ ಬರಮಾಡಿಕೊಂಡರು.

ಬಳಿಕ, ಜೀವನದ ಹೊಸ ಅಧ್ಯಾಯದ ಸಂಕೇತವಾಗಿ ಕತ್ತರಿಯನ್ನು ನೀಡಿ ಮನೆ ಬಾಗಿಲಲ್ಲಿದ್ದ ರಿಬ್ಬನ್ ಕತ್ತರಿಸುವಂತೆ ಮಾಡಿದರು. ಮನೆಯೊಳಗೆ "ಥ್ಯಾಂಕ್ ಯೂ ರಾಹುಲ್" (Thank You Rahul) ಎಂದು ಬರೆದಿದ್ದ ವಿಶೇಷ ಕೇಕ್ ಅನ್ನು ದಂಪತಿ ಹಾಗೂ ಅವರ ಮಗು ಒಟ್ಟಾಗಿ ಕತ್ತರಿಸಿ, 15 ವರ್ಷಗಳ ಸಾರ್ಥಕ ದೇಶಸೇವೆಯನ್ನು ಒಟ್ಟಾಗಿ ಸಂಭ್ರಮಿಸಿದರು.

ನೌಕಾಪಡೆಯಲ್ಲಿ ರಾಹುಲ್ ಅವರ ಪಾತ್ರವೇನಿತ್ತು?:

ರಾಹುಲ್ ಮಾಧ್ವಾಲ್ ಅವರು 2011 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡು 2026 ರಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ. ನೌಕಾಪಡೆಯಲ್ಲಿ ಅವರು ಪಿಒ-ಲಾಜ್‌ (PO-LOG - Petty Officer Logistics) ಹುದ್ದೆಯಲ್ಲಿದ್ದರು. ಇದು ನಾನ್-ಕಮಿಷನ್ಡ್ ಮಿಡ್-ರಾಂಕ್ ಹುದ್ದೆಯಾಗಿದ್ದು, ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಪೂರೈಕೆ ಸರಣಿ (Supply Chain), ದಾಸ್ತಾನು ನಿರ್ವಹಣೆ (Inventory), ಖರೀದಿ ಹಾಗೂ ಹಣಕಾಸು ಆಡಳಿತದಂತಹ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವ ಪಾತ್ರವಾಗಿದೆ.

ಪತಿ ಪಡೆದ ಪ್ರಶಸ್ತಿ ಮತ್ತು ಪದಕಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಶಿವಾನಿ, "15 ವರ್ಷಗಳ ಸಮರ್ಪಣೆ, ಶಿಸ್ತು ಮತ್ತು ತ್ಯಾಗದ ನಂತರ, ಈಗ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. ನಿಮ್ಮನ್ನು ಕಂಡು ಹೆಮ್ಮೆಯಾಗುತ್ತಿದೆ. ನಿವೃತ್ತಿಯ ಶುಭಾಶಯಗಳು. ಮನೆಗೆ ಸುಸ್ವಾಗತ ನನ್ನ ಹೀರೋ" ಎಂದು ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳ ಮೂಲಕ ದಂಪತಿಗೆ ಹಾರೈಸಿದ್ದಾರೆ. ವಿಡಿಯೋದಲ್ಲಿ ರಾಹುಲ್ ಅವರು ತಮಗೆ ನೀಡಿದ ಸಿಹಿಯನ್ನು ತಿಂದ ನಂತರ ಮೊದಲು ತಮ್ಮ ಪತ್ನಿಗೆ ನೀಡುವ ಸಣ್ಣ ಕ್ಷಣವನ್ನು ಹಲವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ, ಕೆಲ ಯೂಸರ್‌ಗಳು "ಅಷ್ಟು ಚಿಕ್ಕ ವಯಸ್ಸಿನಲ್ಲಿ, ಕೇವಲ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇಕೆ?" ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ನೌಕಾಪಡೆಯಲ್ಲಿ 15 ವರ್ಷಕ್ಕೆ ನಿವೃತ್ತಿ ಪಡೆಯುವುದೇಕೆ?

ಭಾರತೀಯ ನೌಕಾಪಡೆಯಲ್ಲಿ 15 ರಿಂದ 20 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ,

  • ಯುವಪಡೆಗೆ ಅವಕಾಶ: ನೌಕಾಪಡೆಯು ಸದಾ ಯುವ ಹಾಗೂ ಹುರುಪಿನ ಯೋಧರಿಂದ ಕೂಡಿರಲು ಈ ನಿಯಮ ನೆರವಾಗುತ್ತದೆ.
  • ಹುದ್ದೆಗಳ ಸಮತೋಲನ: ಶ್ರೇಣಿವಾರು ಹುದ್ದೆಗಳ (Ranks) ನಡುವೆ ಸರಿಯಾದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
  • ಕಠಿಣ ವಾತಾವರಣ: ಕಡಲಿನಲ್ಲಿ ಸುದೀರ್ಘ ನಿಯೋಜನೆ (Deployments) ಮತ್ತು ಸವಾಲಿನ ವಾತಾವರಣದಲ್ಲಿ ವಯಸ್ಸಾಗುತ್ತಿದ್ದಂತೆ ಕಾರ್ಯನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ.
  • ವಿಶೇಷ ಸೌಲಭ್ಯಗಳು: 15 ವರ್ಷಗಳ ನಿರಂತರ ಸೇವೆಯ ನಂತರ ಯೋಧರು ಪಿಂಚಣಿ ಸೇರಿದಂತೆ ಎಲ್ಲಾ ನಿವೃತ್ತಿ ಸೌಲಭ್ಯಗಳಿಗೆ (Benefits) ಅರ್ಹತೆ ಪಡೆಯುತ್ತಾರೆ.
  • ಹೊಸ ವೃತ್ತಿ ಅವಕಾಶ: ಬೇಗನೆ ನಿವೃತ್ತಿ ಹೊಂದುವುದರಿಂದ ಯೋಧರಿಗೆ ನಾಗರಿಕ ಜೀವನದಲ್ಲಿ ಬೇರೆ ಹೊಸ ವೃತ್ತಿಜೀವನದ ಅವಕಾಶಗಳನ್ನು (New Career Opportunities) ಕಂಡುಕೊಳ್ಳಲು ಸುಲಭವಾಗುತ್ತದೆ.

PREV
Read more Articles on
click me!

Recommended Stories

​'ನಿನ್ನ ಕೈ ಅಡುಗೆ ಬೇಡ' ಎಂದವನಿಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿ ತೋರಿಸಿ ಸುಮ್ಮನಾಗಿಸಿದ ಶೆಫ್!
ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ ಫ್ರೆಶರ್‌ಗಳ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗಿಂತ ದುಬಾರಿ iPhone Duo, ಭಾರೀ ವೈರಲ್‌ ಆದ ಪೋಸ್ಟ್‌