
ವಯಸ್ಸಿಗೆ ಬಂದ ಮಗಳಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿ (Responsibility) ಕಳೆದುಕೊಳ್ಬೇಕು ಅನ್ನೋದು ಪಾಲಕರ ಆಸೆ. ಓದಿ, ಒಳ್ಳೆ ಕೆಲ್ಸ ಸಿಕ್ಕಿದ ತಕ್ಷಣ ಮದುವೆ ಬಂಧನಕ್ಕೆ ಬೀಳೋದು ಸಾಧ್ಯವೇ ಇಲ್ಲ. ಇನ್ನೊಂದಿಷ್ಟು ಕೆಲ್ಸ ಮಾಡ್ಬೇಕು, ಹಣ ಸಂಪಾದನೆ ಮಾಡ್ಬೇಕು, ಒಳ್ಳೆ ಹುದ್ದೆಗೆ ಏರ್ಬೇಕು ಅನ್ನೋದು ಈಗಿನ ಹೆಣ್ಮಕ್ಕಳ ಕನಸು. ಇಬ್ಬರ ಹಗ್ಗಜಗ್ಗಾಟ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ನಾನು ಮದುವೆ ಆಗೋದಿಲ್ಲ ಅಂತ ಹುಡುಗಿ ಹಠ ಮಾಡಿದ್ರೆ, ಮದುವೆ ಮಾಡೇ ಮಾಡಿಸ್ತೇವೆ ಅಂತ ಪಾಲಕರು ಪಟ್ಟು ಹಿಡಿದಿದ್ದಾರೆ. ಕೊನೆಗೂ ಹೈಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥ ಆಗಿದೆ. ಕೋರ್ಟ್, ಸಮಸ್ಯೆ ಬಗೆಹರಿಸಿದೆ.
ಘಟನೆ ನಡೆದಿದ್ದು ಮಹಾರಾಷ್ಟ್ರ (Maharashtra)ದಲ್ಲಿ. 24 ವರ್ಷದ ಬಿಹಾರದ ಹುಡುಗಿ ಪುಣೆಯ ರಿಯಲ್ ಎಸ್ಟೇಟ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದಾಳೆ. ಕಳೆದ ತಿಂಗಳು ಅವಳು ಬಿಹಾರದಲ್ಲಿರುವ ತನ್ನ ಮನೆಗೆ ಹೋಗಿದ್ಲು. ಈ ಟೈಂನಲ್ಲಿ ಕುಟುಂಬದವರು ಮದುವೆಗೆ ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಅವಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಮದುವೆ ಆಗುವಂತೆ ಒತ್ತಡ ಹೇರಿದ್ದಾರೆ. ಹುಡುಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಆದ್ರೆ ಮನೆಯವರು ಕೇಳಿಲ್ಲ. ಹುಡುಗಿಗೆ ಥಳಿಸಿ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಟೈಂನಲ್ಲಿ ಹುಡುಗಿ ತನ್ನ ಫ್ರೆಂಡ್ಸ್ ಸಹಾಯ ಪಡೆದಿದ್ದಾಳೆ. ಹುಡುಗಿ ಪರ ಆಕೆ ಫ್ರೆಂಡ್ಸ್ ಬಾಂಬೆ ಹೈಕೋರ್ಟ್ (Bombay High Court)ನಲ್ಲಿ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿ ಸಲ್ಲಿಸಿದ್ರು. ಹುಡುಗಿಯನ್ನು ಬಿಡುಗಡೆ ಮಾಡುವಂತೆ ಬೇಡಿಕೊಂಡಿದ್ರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಪುಣೆ ಪೊಲೀಸರಿಗೆ ಹುಡುಗಿಯನ್ನು ಹುಡುಕಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಿತು. ಮೇ 29 ರಂದು, ಪುಣೆ ಪೊಲೀಸರು ಬಿಹಾರದಿಂದ ಹುಡುಗಿಯನ್ನು ಮುಂಬೈಗೆ ಕರೆದುಕೊಂಡು ಬಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್ ಮುಂದೆ ಬಂದ ಹುಡುಗಿ. ನಾನು ಒಂಟಿಯಾಗಿರಲು ಬಯಸ್ತೇನೆ, ಕೆಲ್ಸ ಮಾಡೋಕೆ ಬಯಸ್ತೇನೆ, ಆದ್ರೆ ಕುಟುಂಬದವರು ಬಲವಂತವಾಗಿ ಮದುವೆ ಮಾಡೋಕೆ ಮುಂದಾಗಿದ್ದಾರೆ ಅಂತ ಹೇಳಿದ್ದಾಳೆ.
ಕೋರ್ಟ್ ತೀರ್ಪೇನು? : ಹುಡುಗಿ ಮಾತುಗಳನ್ನು ಕೇಳಿದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ನೀಲಾ ಗೋಖಲೆ ಮತ್ತು ಫಿರ್ದೌಸ್ ಪೂನಾವಾಲಾ ಹುಡುಗಿ ಪರ ತೀರ್ಪು ನೀಡಿದ್ದಾರೆ. ಹುಡುಗಿ ತನ್ನ ಸ್ವಂತ ಇಚ್ಛೆಯಿಂದ ಪುಣೆಯಲ್ಲಿ ವಾಸಿಸಲು ಬಯಸ್ತಿದ್ದಾಳೆ. ಅವಳು ಒಬ್ಬಂಟಿಯಾಗಿ ವಾಸಿಸಲು ಮತ್ತು ಕೆಲಸ ಮಾಡಲು ಇಷ್ಟಪಡ್ತಿದ್ದಾಳೆ. ಅವಳ ಕುಟುಂಬ ಅವಳನ್ನು ಬಲವಂತವಾಗಿ ಮದುವೆ ಮಾಡಲು ಮುಂದಾಗಿದೆ. ಹುಡುಗಿಗೆ ಹೆತ್ತವರ ಜೊತೆ ವಾಸಿಸಲೂ ಇಷ್ಟವಿಲ್ಲ. ಹಾಗಾಗಿ ಹುಡುಗಿ ತನ್ನ ಇಚ್ಛೆಯಂತೆ ಬದುಕಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.
ಮದುವೆಯಿಂದ ದೂರ ಓಡ್ತಿದ್ದಾರೆ ಹುಡುಗಿಯರು : ಇತ್ತೀಚಿನ ದಿನಗಳಲ್ಲಿ ಮದುವೆಯಿಂದ ದೂರ ಓಡ್ತಿರುವ ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ. ಉನ್ನತ ಶಿಕ್ಷಣ ಮುಗಿಸಿ, ಉತ್ತಮ ವೃತ್ತಿ ಜೀವನ ನಡೆಸ್ತಿರುವ ಹುಡುಗಿಯರಿಗೆ ಮದುವೆ ಬಂಧನವಾಗ್ತಿದೆ. ಇದು ವೃತ್ತಿ ಜೀವನಕ್ಕೆ ಅಡ್ಡಿಯಾಗ್ತಿದೆ ಅನ್ನೋದು ಒಂದು ಕಾರಣವಾದ್ರೆ ಸ್ವಾತಂತ್ರ್ಯವಾಗಿ ಬದುಕುತ್ತಿರುವ ಹುಡುಗಿಯರಿಗೆ ಮದುವೆ ನಂತ್ರ ತಮ್ಮ ಜೀವನವನ್ನು ಹಂಚಿಕೊಳ್ಳಲು ಇಷ್ಟವಿರೋದಿಲ್ಲ. ಕಮಿಟ್ಮೆಂಟ್ ಭಯ, ಹಳೆ ಅನುಭವ, ಪ್ರೀತಿಯಲ್ಲಿ ಮೋಸ ಹೀಗೆ ನಾನಾ ಕಾರಣಕ್ಕೆ ಈಗಿನ ಹುಡುಗಿಯರು ಮದುವೆಯನ್ನು ಇಷ್ಟಪಡ್ತಿಲ್ಲ. ಆರ್ಥಿಕವಾಗಿ ಸ್ವಾತಂತ್ರಯವಾಗಿರುವ ಹುಡುಗಿಯರಿಗೆ ಒಂಟಿ ಜೀವನ ಆಪ್ತವಾಗ್ತಿದೆ.