ಹೆಂಡತಿಯ ಪರ್ಮಿಷನ್ ಇಲ್ಲದೆ ಎಣ್ಣೆ ಹೊಡೆದರೆ ಗಂಡನಿಗೆ ಜೈಲು? ವೈರಲ್ ಆಗ್ತಿರೋ ಈ ಸುದ್ದಿಯ ಅಸಲಿಯತ್ತೇನು?

Published : Jan 01, 2026, 08:07 PM IST
Husband Jailed for Drinking Without Wife s Permission Viral

ಸಾರಾಂಶ

ಪತ್ನಿಯ ಅನುಮತಿಯಿಲ್ಲದೆ ಮದ್ಯಪಾನ ಮಾಡಿದರೆ ಜೈಲು ಎಂಬ ವೈರಲ್ ಸುದ್ದಿಯ ಸತ್ಯಾಸತ್ಯತೆಯನ್ನು ಈ ಲೇಖನ ವಿವರಿಸುತ್ತದೆ. ಭಾರತೀಯ ನ್ಯಾಯ ಸಂಹಿತೆಯು ಕೇವಲ ಮದ್ಯಪಾನಕ್ಕೆ ಶಿಕ್ಷೆ ನೀಡುವುದಿಲ್ಲ, ಬದಲಾಗಿ ಕುಡಿದು ಪತ್ನಿಯ ಮೇಲೆ ದೌರ್ಜನ್ಯ ಎಸಗುವ 'ಕ್ರೌರ್ಯ'ಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುತ್ತದೆ.

ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿರುವ ಮದ್ಯಪ್ರಿಯರಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಸುದ್ದಿ ನಡುಕ ಹುಟ್ಟಿಸಿದೆ. 'ಹೆಂಡತಿಯ ಒಪ್ಪಿಗೆಯಿಲ್ಲದೆ ಮದ್ಯಪಾನ ಮಾಡಿದರೆ ಗಂಡ ಜೈಲು ಪಾಲಾಗುತ್ತಾನೆ' ಎಂಬ ಸಂದೇಶವೊಂದು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಹೊಸವರ್ಷದ ಹಬ್ಬದ ಸಂಭ್ರಮದ ನಡುವೆ ವಿವಾಹಿತ ಪುರುಷರನ್ನು ಕಂಗೆಡಿಸಿರುವ ಈ ಸುದ್ದಿಯ ಹಿಂದೆ ನಿಜವಾಗಿಯೂ ಕಾನೂನಿನ ಬಲವಿದೆಯೇ? ಅಥವಾ ವಿವಾಹಿತ ಪುರುಷರನ್ನ ಭಯಪಡಿಸುವ ಉದ್ದೇಶವೇ? ಇಲ್ಲಿದೆ ಪಕ್ಕಾ ಮಾಹಿತಿ.

ಹೆಂಡತಿಯ ಅನುಮತಿಯಿಲ್ಲದೆ ಮದ್ಯ ಸೇವಿಸಿದರೆ ಜೈಲಿಗೆ ಹೋಗಬೇಕೇ?

ಪತ್ನಿಯ ಅನುಮತಿ ಪಡೆಯದೇ ಮದ್ಯ ಸೇವಿಸಿದರೆ ನೇರವಾಗಿ ಜೈಲಿಗೆ ಹಾಕಲಾಗುತ್ತದೆ ಎಂಬುದು ಸಂಪೂರ್ಣ ಸತ್ಯವಲ್ಲ. ಕಾನೂನಿನಲ್ಲಿ ಕೇವಲ ಮದ್ಯ ಸೇವನೆಗಾಗಿ ಗಂಡನನ್ನು ಜೈಲಿಗೆ ಕಳುಹಿಸುವ ಯಾವುದೇ ಪ್ರತ್ಯೇಕ ನಿಬಂಧನೆ ಇಲ್ಲ. ಆದರೆ, ಈ ಸುದ್ದಿ ವೈರಲ್ ಆಗಲು ಕಾರಣ 'ಭಾರತೀಯ ನ್ಯಾಯ ಸಂಹಿತೆ' (BNS) ಅಡಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ತಂದಿರುವ ಕೆಲವು ಕಟ್ಟುನಿಟ್ಟಿನ ನಿಯಮಗಳು. ಹಾಗಾದರೆ ಆ ನಿಯಮಗಳು ಏನು ಹೇಳುತ್ತವೆ? ಮುಂದೆ ಓದಿ.

ಕಾನೂನು ಚಾಟಿ ಬೀಸುವುದು ಮದ್ಯಕ್ಕಲ್ಲ, 'ಕ್ರೌರ್ಯ'ಕ್ಕೆ!

ಇಲ್ಲಿ ಅಸಲಿ ವಿಚಾರ ಇರುವುದು ಬಿಎನ್‌ಎಸ್‌ನ (BNS) ಸೆಕ್ಷನ್ 85 ಮತ್ತು 85 ಬಿ ಅಡಿಯಲ್ಲಿ. ಪತಿ ಮದ್ಯ ಸೇವಿಸಿದ ನಂತರ ಪತ್ನಿಯ ಮೇಲೆ ದೈಹಿಕ ಅಥವಾ ಮಾನಸಿಕ ದೌರ್ಜನ್ಯ ಎಸಗಿದರೆ, ಆಕೆಯ ಘನತೆಗೆ ಧಕ್ಕೆ ತಂದರೆ ಅಥವಾ ಮನೆಯಲ್ಲಿ ಭಯದ ವಾತಾವರಣ ನಿರ್ಮಿಸಿದರೆ ಅದನ್ನು 'ಕ್ರೌರ್ಯ' ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪತ್ನಿ ಎಫ್‌ಐಆರ್ ದಾಖಲಿಸಿದರೆ, ಗಂಡನಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

ಮನೆಗೆ ಬರಬೇಡ ಎಂದರೂ ಬಂದರೆ ಸಂಕಷ್ಟ ಗ್ಯಾರಂಟಿ!

ಒಂದು ವೇಳೆ ಹೆಂಡತಿ 'ನೀವು ಕುಡಿದು ಮನೆಗೆ ಬರಬಾರದು' ಎಂದು ಸ್ಪಷ್ಟವಾಗಿ ಹೇಳಿದ್ದರೂ, ಗಂಡ ಅದನ್ನು ಮೀರಿ ಕುಡಿದು ಬಂದು ಗಲಾಟೆ ಮಾಡಿದರೆ, ಅದು ಕೌಟುಂಬಿಕ ಹಿಂಸಾಚಾರದ ಅಡಿ ಬರುತ್ತದೆ. ಪತಿಯ ಮದ್ಯಪಾನವು ಪತ್ನಿಯ ಮನಸ್ಸಿನ ಶಾಂತಿ ಕೆಡಿಸಿದರೆ ಆಕೆ ಕಾನೂನಿನ ರಕ್ಷಣೆ ಪಡೆಯಬಹುದು. ಕೇವಲ ಮದ್ಯ ಕುಡಿಯುವುದು ಅಪರಾಧವಲ್ಲದಿದ್ದರೂ, ಕುಡಿದು ಮಾಡುವ ಅನಾಹುತಗಳು ಮಾತ್ರ ಪತಿಯನ್ನು ಕಂಬಿ ಎಣಿಸುವಂತೆ ಮಾಡಬಲ್ಲವು.

40% ದೌರ್ಜನ್ಯಕ್ಕೆ ಮದ್ಯವೇ ಕಾರಣ

ಸರ್ಕಾರಿ ಅಂಕಿಅಂಶಗಳ ಪ್ರಕಾರ ಶೇ. 40ಕ್ಕೂ ಹೆಚ್ಚು ಕೌಟುಂಬಿಕ ಹಿಂಸಾಚಾರಗಳು ಮದ್ಯಪಾನದ ಅಮಲಿನಲ್ಲೇ ನಡೆಯುತ್ತಿವೆ. ಈ ಕಾರಣಕ್ಕಾಗಿಯೇ ಹೊಸ ಕಾನೂನು ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡಿದೆ. ಪತ್ನಿ ಬಯಸಿದರೆ ರಕ್ಷಣೆ ಪಡೆಯಬಹುದು ಅಥವಾ ಗಂಡನಿಂದ ಪ್ರತ್ಯೇಕವಾಗಿ ವಾಸಿಸಲು ನ್ಯಾಯಾಲಯದ ಮೊರೆ ಹೋಗಬಹುದು. ಪತಿ ಶಾಂತವಾಗಿ ಮದ್ಯ ಸೇವಿಸಿ ಯಾವುದೇ ತೊಂದರೆ ನೀಡದಿದ್ದರೆ ಈ ಕಠಿಣ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ.

ಕುಡಿಯುವುದು ನಿಮ್ಮಿಷ್ಟ, ಆದರೆ ಮನೆಯಲ್ಲಿರಲಿ ನೆಮ್ಮದಿ!

ಹೊಸ ವರ್ಷದ ವೈರಲ್ ಸಂದೇಶವು ಮಹಿಳೆಯರ ಸುರಕ್ಷತೆಯನ್ನು ಎತ್ತಿ ಹಿಡಿಯುವ ಉದ್ದೇಶ ಹೊಂದಿದೆಯೇ ಹೊರತು, ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧ ಹೇರುವ ಉದ್ದೇಶ ಕಾನೂನಿಗಿಲ್ಲ. ಹಾಗಾಗಿ, ಕುಡಿದು ಮನೆಯಲ್ಲಿ ಗಲಾಟೆ ಮಾಡುವ ಅಭ್ಯಾಸವಿದ್ದರೆ ಈ ಹೊಸ ವರ್ಷದಲ್ಲಿ ಅದು ನಿಮಗೆ ಜೈಲು ದರ್ಶನ ಮಾಡಿಸಬಹುದು ಎಂಬ ಎಚ್ಚರಿಕೆ ಇರಲಿ!

PREV
Read more Articles on
click me!

Recommended Stories

'ಗಿಲ್ಲಿ ಕಪ್ ಗೆಲ್ಲಬಹುದು' ಎಂದ ಮಾಳು.. ಮಾಳು ಈಗ 'ಯೂ ಟರ್ನ್‌' ಹೊಡೆದಿರೋದು ಯಾಕೆ ಗೊತ್ತಾ?
ಕೂದಲು ನೇರವಾಗಿಸುವ ಮಷಿನ್​ನಿಂದ ಹೆಚ್ಚುತ್ತಿದೆ ಕಿಡ್ನಿ ಡ್ಯಾಮೇಜ್​! ತಜ್ಞರು ನೀಡಿರುವ ಎಚ್ಚರಿಕೆ ಏನು? ಏಕೆ ಹೀಗೆ?