ಗುರುಗ್ರಾಮ ಹಿಟ್‌ & ರನ್‌ ಕೇಸ್‌: ನಾನು ಉದ್ದೇಶಪೂರ್ವಕವಾಗಿ ಆಕೆಯ ಬೈಕ್‌ಗೆ ಟಚ್‌ ಮಾಡಿಲ್ಲ ಎಂದ ಆರೋಪಿ

Published : Sep 14, 2026, 08:32 PM IST
Kalyan Bainsla

ಸಾರಾಂಶ

ಗುರುಗ್ರಾಮ್‌ನಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಹೊಡೆದ ಪ್ರಕರಣದ ಆರೋಪಿ ಕಲ್ಯಾಣ್ ಬೈನ್ಸ್ಲಾ, ತಾನು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿಲ್ಲ ಎಂದು ಹೇಳಿದ್ದಾನೆ. ಬೈಕ್ ಸವಾರರೇ ತನ್ನ ಕಾರಿನ ಮುಂದೆ ಬಂದು ಕಿರಿಕಿರಿ ಮಾಡುತ್ತಿದ್ದರು ಎಂದಿದ್ದಾರೆ.

ನವದೆಹಲಿ (ಸೆ.14): ಹರಿಯಾಣದ ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ (Golf Course Road) ಬೈಕರ್ಸ್ ಗ್ರೂಪ್ ಅನ್ನು ಕಾರಿನಲ್ಲಿ ಚೇಸ್ ಮಾಡಿ, ಮಹಿಳಾ ಬೈಕರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಆರೋಪ ಎದುರಿಸುತ್ತಿರುವ ಕಲ್ಯಾಣ್ ಬೈನ್ಸ್ಲಾ (Kailash Bainsla) ಎಂಬಾತ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ. ಬೈಕ್ ಸವಾರರು ಕಾರಿನ ಮುಂದೆ ಬಂದು ಪದೇ ಪದೆ ವೇಗ ತಗ್ಗಿಸುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಹೊರತು, ತಾವು ಉದ್ದೇಶಪೂರ್ವಕವಾಗಿ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿಲ್ಲ ಎಂದು ಆತ ಹೇಳಿದ್ದಾನೆ.

ಮಾಧ್ಯಮದ ಜೊತೆ ಮಾತನಾಡಿದ ಕಲ್ಯಾಣ್ ಬೈನ್ಸ್ಲಾ, ಭಾನುವಾರ ಬೆಳಿಗ್ಗೆ ತಮ್ಮ ಸೋದರಸಂಬಂಧಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾನೆ. 'ಇಬ್ಬರು ಬೈಕ್ ಸವಾರರು ಸೈಡ್‌ನಿಂದ ಬಂದು ನನ್ನ ಕಾರನ್ನು ಪದೇ ಪದೆ ಓವರ್‌ಟೇಕ್ (Overtake) ಮಾಡುತ್ತಿದ್ದರು. ಕಾರಿನ ಮುಂದೆ ಬಂದು ಹಠಾತ್ತನೆ ಬೈಕ್ ವೇಗವನ್ನು ಕಡಿಮೆ ಮಾಡುತ್ತಿದ್ದರು. ನಾನು ಅವರ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ. ಆದರೆ, ಘಟನೆಯಲ್ಲಿ ಯುವತಿಗೆ ಗಾಯಗಳಾಗಿರುವುದಕ್ಕೆ ನನಗೆ ಬೇಸರ ಹಾಗೂ ವಿಷಾದವಿದೆ' ಎಂದು ಬೈನ್ಸ್ಲಾ ಹೇಳಿದ್ದಾನೆ.

'ಸಿಸಿಟಿವಿ ಫೂಟೇಜ್ ಪರಿಶೀಲಿಸಿ'

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳ ಮಾತನಾಡಿರುವ ಆತ, 'ವೈರಲ್ ವಿಡಿಯೋದಲ್ಲಿ ತೋರಿಸಲಾಗುತ್ತಿರುವ ದೃಶ್ಯಗಳು ಸಂಪೂರ್ಣ ಸತ್ಯವಲ್ಲ. ಬೈಕ್ ಸವಾರರು ಪದೇ ಪದೆ ನನ್ನ ಕಾರಿನ ಮುಂದೆ ಬಂದು ಬೈಕ್ ಸ್ಲೋ ಮಾಡುತ್ತಿದ್ದರು. ನಾನು ಸಿಕ್ಕ ಸಿಕ್ಕ ಪ್ರತಿಯೊಬ್ಬರಿಗೂ ಕಾರು ಗುದ್ದಿಸಿಕೊಂಡು ಹೋಗಲು ಹುಚ್ಚನೇ? ಬೇಕಿದ್ದರೆ ಘಟನೆಯ ಸಂಪೂರ್ಣ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ' ಎಂದು ಹೇಳಿದ್ದಾರೆ.

ಬೈಕ್ ಸವಾರರು ಕಾರಿನ ಮಿರರ್ (Side mirror) ನೋಡದೆ ಏಕಾಏಕಿ ಬೈಕ್ ತಿರುಗಿಸಿದರು. ಇದರಿಂದ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಯಾದರು. ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಒಪ್ಪಿಕೊಳ್ಳೋಣ, ನನ್ನ ಕಡೆಯಿಂದ ತಪ್ಪಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ವಿಡಿಯೋದಲ್ಲೂ 'ನೀವು ಚೆನ್ನಾಗಿ ಬೈಕ್ ಚಲಾಯಿಸುತ್ತಿದ್ದೀರಿ, ಆದರೆ ನಿಧಾನವಾಗಿ ಚಲಾಯಿಸಿ. ಪದೇ ಪದೆ ನನಗೆ ಕಿರಿಕಿರಿ ಮಾಡಬೇಡಿ' ಎಂದು ಹೇಳುತ್ತಿದ್ದೆ. ಆದ್ದರಿಂದ ವಿಡಿಯೋದ ಸಂಪೂರ್ಣ ಭಾಗವನ್ನು ಪರಿಶೀಲಿಸಿ ಬಳಿಕ ಮಾತನಾಡಬೇಕು ಎಂದಿದ್ದಾರೆ.

ಬೈಕ್‌ನಲ್ಲಿದ್ದದ್ದು ಯುವತಿ ಎಂದು ಗೊತ್ತಿರಲಿಲ್ಲ

ಅಪಘಾತದಲ್ಲಿ ಯುವತಿಗೆ ಗಾಯಗಳಾಗಿರುವುದಕ್ಕೆ ಕ್ಷಮೆ ಯಾಚಿಸಿದ ಬೈನ್ಸ್ಲಾ, ಆ ಬೈಕ್ ರೈಡ್‌ ಮಾಡುತ್ತಿರುವುದು ಯುವತಿ ಎಂಬ ವಿಷಯವೇ ನನಗೆ ಡಿಕ್ಕಿ ಹೊಡೆದ ಸಮಯದಲ್ಲಿ ಗೊತ್ತಿರಲಿಲ್ಲ. ತಪ್ಪು ನಡೆದಿರುವುದಕ್ಕೆ ನನಗೆ ಬೇಸರವಿದೆ. ಆದರೆ ಜನರ ಆರೋಪಗಳು ನನ್ನ ಕುಟುಂಬದ ಗೌರವಕ್ಕೆ ಧಕ್ಕೆ ತಂದರೆ, ನಾನು ಖಂಡಿತವಾಗಿಯೂ ಧ್ವನಿ ಎತ್ತಿ ಅಂತಹದ್ದೇನೂ ನಡೆದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದಿದ್ದಾನೆ. ತನ್ನ ಮೇಲೆ ಯಾವುದೇ ಹಳೆಯ ಅಪರಾಧ ಹಿನ್ನೆಲೆ ಇಲ್ಲ ಎಂದು ಪ್ರತಿಪಾದಿಸಿರುವ ಕಲ್ಯಾಣ್, "ನನ್ನ ಹೆಸರಿನಲ್ಲಿ ಇದುವರೆಗೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ" ಎಂದು ಪ್ರತಿಪಾದಿಸಿದ್ದಾನೆ.

ಆರೋಪಿ ಬೈನ್ಸ್ಲಾನ ಹೇಳಿಕೆಗೂ ಮತ್ತು ಸಂತ್ರಸ್ತೆ 'ಸಿಯಾ' ನೀಡಿದ ಹೇಳಿಕೆಗೂ ಭಾರಿ ವ್ಯತ್ಯಾಸವಿದೆ. ಕಾರಿನಲ್ಲಿದ್ದ ಕಿಡಿಗೇಡಿಗಳು ತಮ್ಮನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದರು ಮತ್ತು ಆಕ್ರಮಣಕಾರಿಯಾಗಿ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದರು ಎಂದು ಸಿಯಾ ಆರೋಪಿಸಿದ್ದರು.

ಬೈಕ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ, ಅಪಘಾತದ ಬಳಿಕ ಸಿಯಾ ಅವರ ಸ್ನೇಹಿತರೊಬ್ಬರು ವೇಗವಾಗಿ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿರುವುದು ಮತ್ತು ಬಳಿಕ ಆ ಕಾರು ಅಲ್ಲಿಂದ ವೇಗವಾಗಿ ಪರಾರಿಯಾಗಿರುವುದು ಸ್ಪಷ್ಟವಾಗಿ ದಾಖಲಾಗಿತ್ತು.

ಈ ವೈರಲ್ ವಿಡಿಯೋಗಳನ್ನು ಆಧರಿಸಿ ಗುರುಗ್ರಾಮ್ ಪೊಲೀಸರು ಈಗಾಗಲೇ ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು, ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಗಾಯಗೊಂಡ ಮಹಿಳಾ ಬೈಕರ್ ಕೂಡ ತಮ್ಮ ವಕೀಲರೊಂದಿಗೆ ತೆರಳಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!
Revati Kamat: ಕೋಟ್ಯಂತರ ಆಸ್ತಿ ಇದ್ರು, ಗಣೇಶ ಮಾತ್ರ ಸಿಂಪಲ್‌; ಸೋಶಿಯಲ್‌ ಮಿಡೀಯಾದಲ್ಲಿ ವೈರಲ್‌ ಆದ ರೇವತಿ ಕಾಮತ್ ಪೋಟೋ