
ಗಿಗ್ ಎಕಾನಮಿ ಉದ್ಯೋಗಗಳು(gig economy jobs) ಜನರ ಜೀವನದಲ್ಲಿ ಯಾವ ರೀತಿಯ ಬದಲಾವಣೆ ತರಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಸ್ನ್ಯಾಬಿಟ್(Snabbit ) ಕಂಪನಿಯ ಹಿರಿಯ ನಿರ್ದೇಶಕ ಸಾಯಿ ಕಿರಣ್ ಸಿಂಗನಮಾಲಾ(Sai Kiran Singanamala) ಅವರು ಲಿಂಕ್ಡ್‌ಇನ್(LinkedIn)ನಲ್ಲಿ ತಮಗಾದ ಅನುಭವದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ನೆಟಿಜನ್ ಗಮನ ಸೆಳೆದಿದ್ದು, ಗಿಗ್ ವರ್ಕರ್ ಕುರಿತು ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ಅವರು ಪೋಸ್ಟ್‌ನಲ್ಲಿ ಬರೆದುಕೊಂಡಂತೆ, ತಮ್ಮ ಕಂಪನಿಗೆ ಸೇರಿದ ಮಹಿಳೆಯೊಬ್ಬರು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಂಡಿದ್ದು, ಅವರ ಪತಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ
ಕೆಲವು ದಿನಗಳ ಹಿಂದೆ ನಮ್ಮೊಂದಿಗೆ ಕೇವಲ 4 ತಿಂಗಳಿನಿಂದ ಕೆಲಸ ಮಾಡುತ್ತಿರುವ ಒಬ್ಬ ಎಕ್ಸ್‌ಪರ್ಟ್ ಜೊತೆ ಮಾತನಾಡಿದ್ದೆ. ಆ ಮಹಿಳೆ ತಮ್ಮ ಮಗುವನ್ನು ವಾರ್ಷಿಕ ₹1.5 ಲಕ್ಷ ಶುಲ್ಕ ಇರುವ ಶಾಲೆಗೆ ದಾಖಲಿಸಿದ್ದಾರೆಂದು ತಿಳಿಯಿತು. ಆಕೆಯ ಪತಿ ಆಟೋ ಚಾಲಕರಾಗಿದ್ದು, ಇಬ್ಬರೂ ಸೇರಿ ಇದೀಗ ತಿಂಗಳಿಗೆ ಸುಮಾರು ₹80 ಸಾವಿರದಿಂದ ₹1 ಲಕ್ಷದವರೆಗೆ ಸಂಪಾದಿಸುತ್ತಿದ್ದಾರೆ ಎಂಬುತು ತಿಳಿಯಿತು ಸಾಯಿ ಕಿರಣ್ ಸಿಂಗನಮಾಲಾ ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ.
ಮಹಿಳೆಯೊಬ್ಬರು ತಿಂಗಳಿಗೆ ₹30-40 ಸಾವಿರ ಸಂಪಾದಿಸುವುದರಿಂದ ಒಂದು ಕುಟುಂಬದ ಎಷ್ಟೊಂದು ಬದಲಾವಣೆ ತರಬಲ್ಲುದು ಎಂಬುದು ಇವರಿಂದ ನನಗೆ ಅರ್ಥವಾಯ್ತು. ಮಹಿಳೆ ಇಷ್ಟು ವೇತನದ ಉದ್ಯೋಗ ಮಾಡುತ್ತಿದ್ದರೆ ಮಕ್ಕಳಿಗೆ ಉತ್ತಮ ಶಿಕ್ಷಣ, ಹೆಚ್ಚಿನ ಆರ್ಥಿಕ ಭದ್ರತೆ ಜೊತೆಗೆ ಆತ್ಮವಿಶ್ವಾಸ ಸಿಗುತ್ತದೆ ಎಂದು ಸಾಯಿ ಕಿರಣ್ ಹೇಳಿದ್ದಾರೆ.
ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅವರಲ್ಲೊಬ್ಬರು, 'ಖಂಡಿತವಾಗಿಯೂ. ಸಮಾಜದ ಪ್ರಗತಿಗೆ ಅಪಾರ ಸಾಮರ್ಥ್ಯ ಹೊಂದಿರುವ, ಆದರೆ ಹೆಚ್ಚಿನ ಬದಲಾವಣೆ ಮತ್ತು ಹೂಡಿಕೆ ಅಗತ್ಯವಿರುವ ವರ್ಗ ಇದಾಗಿದೆ'ಎಂದು ಗಿಗ್ ವರ್ಕರ್ ಬಗ್ಗೆ ಹೇಳಿದ್ದಾರೆ.
ಮತ್ತೊಬ್ಬರು, 'ಮಹಿಳೆಯೊಬ್ಬರು ಸಂಪಾದನೆ ಆರಂಭಿಸಿದಾಗ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಆಗುತ್ತದೆ. ಇಂತಹ ಕಥೆಗಳು ಉದ್ಯೋಗವೆಂದರೆ ಕೇವಲ ಆದಾಯವಲ್ಲ, ಗೌರವ, ಸಬಲೀಕರಣ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸುವುದಾಗಿದೆ ಎಂಬುದನ್ನು ನೆನಪಿಸುತ್ತವೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬ ಮಹಿಳೆ ಹೀಗೆ ಬರೆದಿದ್ದಾರೆ, 'ಸಂಪಾದಿಸಿದಾಗ ಕುಟುಂಬದ ಭವಿಷ್ಯವೇ ಬದಲಾಗುತ್ತದೆ. ಉದ್ಯೋಗ ಆದಾಯ ನೀಡುತ್ತದೆ ಅಷ್ಟೇ ಅಲ್ಲ, ಕೌಶಲ್ಯ, ಸಮಾಜದಲ್ಲಿ ಗೌರವ, ಬದುಕಿನ ಬಗ್ಗೆ ಆತ್ಮವಿಶ್ವಾಸ ನೀಡುತ್ತದೆ. ನೀವು ಹೇಳಿರುವ ಮಹಿಳೆಯ ಲೈಫ್ ಸ್ಟೋರಿ ಒಂದು ಸುಂದರ, ಸ್ಫೂರ್ತಿದಾಯಕ' ಎಂದು ಹೇಳಿದ್ದಾರೆ.
ಒಬ್ಬ ಮಹಿಳೆಯ ಬೆಳವಣಿಗೆ ಇಡೀ ಕುಟುಂಬದ ಭರವಸೆಯಾಗಿ ಬದಲಾಗುವುದು ಅರ್ಥಪೂರ್ಣ ಉದ್ಯಮಶೀಲತೆ ಹೇಗಿರುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲೆಡೆ ಗಿಗ್ ವರ್ಕ್ ಆಗಿ ಮಹಿಳೆಯರು ದುಡಿಯುತ್ತಿದ್ದಾರೆ. ಹಿಂದಿನಂತೆ ಮಹಿಳೆಯರು ಅಡುಗೆ ಮನೆಗೆ ಸಿಮೀತವಾಗುವ ಕಾಲ ಇದಲ್ಲ. ಸಂಸಾರದ ನೊಗ ಪತ್ನಿಯೂ ಸಮಾನವಾಗಿ ಹೊತ್ತರೆ ಕುಟುಂಬಕ್ಕೂ ಆರ್ಥಿಕ ಭದ್ರತೆ, ಸಮಾಜದಲ್ಲಿ ಗೌರವ, ಮಕ್ಕಳ ಭವಿಷ್ಯವೂ ಉಜ್ವಲ.. ಹೌದಲ್ಲವೇ?
ಸೂಚನೆ: ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿದ ಸುದ್ದಿಯಾಗಿದೆ. ಈ ಮಾಹಿತಿಯನ್ನು ಏಷಿಯಾನೆಟ್ ಸುವರ್ಣ ನ್ಯೂಸ್ ಸ್ವತಂತ್ರವಾಗಿ ಪರಿಶೀಲಿಸಿಲ್ಲ ಹಾಗೂ ಅದರ ಸತ್ಯಾಸತ್ಯತೆಗೆ ಯಾವುದೇ ಹೊಣೆಗಾರಿಕೆ ವಹಿಸುವುದಿಲ್ಲ.