
ಅಹಮದಾಬಾದ್ (ಅ.5): ಆಸ್ಪತ್ರೆಗಳಿಗೆ ಕಾಲಿಟ್ಟರೆ ಸಾಕು Consultation Fee ಹೆಸರಿನಲ್ಲೇ ಸಾವಿರಾರು ರೂಪಾಯಿ ಪೀಕುವ ಇಂದಿನ ವೈದ್ಯಕೀಯ ಜಗತ್ತಿನಲ್ಲಿ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ 81 ವರ್ಷದ ಹಿರಿಯ ಇಎನ್‌ಟಿ (ENT) ವೈದ್ಯ ಡಾ. ನಂದಲಾಲ್ ಮಾನ್ಸೆಟಾ (Dr Nandlal Manseta) ಅವರು ವೈದ್ಯಕೀಯ ವೃತ್ತಿಯ ಮೂಲ ಆಶಯವನ್ನು ಜೀವಂತವಾಗಿರಿಸಿದ್ದಾರೆ.
ತಮ್ಮ ಕ್ಲಿನಿಕ್‌ನಲ್ಲಿ ರೋಗಿಯ ಮಾಸಿಕ ಆದಾಯಕ್ಕೆ ತಕ್ಕಂತೆ ಅತ್ಯಂತ ಕಡಿಮೆ ಶುಲ್ಕ ಮಾದರಿಯನ್ನು ಅವರು ಅನುಸರಿಸುತ್ತಿದ್ದಾರೆ. ಇವರ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಯಾವುದೇ ಆದಾಯ ಪ್ರಮಾಣಪತ್ರ (Income Certificate) ಅಥವಾ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ರೋಗಿ ತಾನು ಗಳಿಸುವ ಆದಾಯಕ್ಕೆ ತಕ್ಕಂತೆ ತಾನೇ ನಿಗದಿಪಡಿಸಿದ ಹಣವನ್ನು ಕ್ಲಿನಿಕ್‌ನಲ್ಲಿರುವ ಸಣ್ಣ ದೇಣಿಗೆ ಪೆಟ್ಟಿಗೆಯಲ್ಲಿ (Donation Box) ಪಾವತಿಸಬಹುದಾಗಿದೆ.
ಡಾ. ನಂದಲಾಲ್ ಮಾನ್ಸೆಟಾ ಅವರ ಕ್ಲಿನಿಕ್‌ನಲ್ಲಿ ಪ್ರದರ್ಶಿಸಲಾಗಿರುವ ಶುಲ್ಕ ಪಟ್ಟಿಯ ಪ್ರಕಾರ
ತಮ್ಮ ಈ ವಿಶಿಷ್ಟ ಸೇವೆಯ ಕುರಿತು ಮಾತನಾಡುವ ಡಾ. ಮಾನ್ಸೆಟಾ, ಇದೊಂದು ಸಮಾಜಕ್ಕೆ ಮರಳಿ ಕೊಡುವ (Give back to society) ತಮ್ಮ ಸಣ್ಣ ಪ್ರಯತ್ನ ಎಂದು ಹೇಳಿಕೊಳ್ಳುತ್ತಾರೆ. "ವ್ಯಕ್ತಿಯೊಬ್ಬನ ಹಣಕಾಸಿನ ಪರಿಸ್ಥಿತಿಯು ಆತನಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದಂತೆ ತಡೆಯಬಾರದು" ಎಂಬ ಬಲವಾದ ನಂಬಿಕೆ ಅವರದ್ದಾಗಿದೆ. ತಮ್ಮ ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿ ಜೀವನದ ಬೆಳವಣಿಗೆಯ ಹಂತದಲ್ಲಿ ಸಮಾಜ ಮತ್ತು ಸರ್ಕಾರ ತಮಗೆ ನೀಡಿದ ಬೆಂಬಲ ಹಾಗೂ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವ ಅವರು, ಪ್ರತಿಯಾಗಿ ಸಮಾಜಕ್ಕೆ ಉಪಕಾರ ಮಾಡುವ ಉದ್ದೇಶದಿಂದ ಈ ಹಾದಿ ತುಳಿದಿದ್ದಾರೆ.
ಸಾಮಾಜಿಕ ವೇದಿಕೆ 'ದಿ ಬೆಟರ್ ಇಂಡಿಯಾ' (The Better India) ಇತ್ತೀಚೆಗೆ ಡಾ. ಮಾನ್ಸೆಟಾ ಅವರ ಈ ಸ್ಪೂರ್ತಿದಾಯಿಕ ಜೀವನಕಥೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಆ ಪೋಸ್ಟ್‌ನಲ್ಲಿ ಮಾನ್ಸೆಟಾ ಅವರ "ರೋಗಿಯ ಆದಾಯ ಶೂನ್ಯವಾಗಿದ್ದರೆ, ನನ್ನ Consultation Fee ಶೂನ್ಯ" ಎಂಬ ಹೇಳಿಕೆಯು ಲಕ್ಷಾಂತರ ಜನರ ಗಮನ ಸೆಳೆದಿತ್ತು.
ಈ ಪೋಸ್ಟ್ ಪ್ರಕಟವಾದ ಬೆನ್ನಲ್ಲೇ ಸಾವಿರಾರು ನೆಟ್ಟಿಗರು ಹಿರಿಯ ವೈದ್ಯರ ಈ ಮಾನವೀಯ ಕಾಯಕಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಚಿಕಿತ್ಸಾ ವೆಚ್ಚ ಭರಿಸಲಾಗದ ರೋಗಿಗಳಿಗೆ ಇಂತಹ ಮಾನವೀಯ ವೈದ್ಯರು ನಿಜಕ್ಕೂ ದೇವರಿಗಿಂತ ಕಡಿಮೆಯಿಲ್ಲ. ದೇವರಿಗೆ ಧನ್ಯವಾದಗಳು" ಎಂದು ಒಬ್ಬರು ಬರೆದಿದ್ದಾರೆ. "ಹೆಚ್ಚು ಸಂಪಾದನೆ ಮಾಡುವವರೇ ಹೆಚ್ಚಾಗಿ ಉಚಿತ ಸೌಲಭ್ಯಗಳಿಗೆ ಜಗಳವಾಡುತ್ತಾರೆ. ಆದರೆ ಇಂತಹ ವೈದ್ಯರು ನಿಜವಾದ ಬಡವರ ನೆರವಿಗೆ ನಿಂತಿದ್ದಾರೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
"ಎಲ್ಲಕ್ಕಿಂತ ಮುಖ್ಯವಾಗಿ ಕ್ಲಿನಿಕ್‌ನಲ್ಲಿ 'ಯಾವುದೇ ಆದಾಯ ಸಾಬೀತು ಮಾಡುವ ಅಗತ್ಯವಿಲ್ಲ' ಎಂದು ಬರೆದಿರುವುದು ಮುಖ್ಯವಾಗಿದೆ. ಪ್ರಾಮಾಣಿಕತೆ ಎನ್ನುವುದು ನಿಜಕ್ಕೂ ಸಾಂಕ್ರಾಮಿಕ" ಎಂದು ಮೂರನೆಯವರು ಶ್ಲಾಘಿಸಿದ್ದಾರೆ. "ಮಾನ್ಸೆಟಾ ಸರ್ ಅವರ ಫೌಂಡೇಶನ್ (Foundation) ಮೂಲಕ ಈಗಾಗಲೇ ಸಾವಿರಾರು ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ನೆರವು ಹಾಗೂ ಅನುದಾನ ಕಲ್ಪಿಸಲಾಗಿದೆ" ಎಂದು ಸ್ಥಳೀಯರೊಬ್ಬರು ಹಂಚಿಕೊಂಡಿದ್ದಾರೆ.