
ಭಕ್ತಿ ಅಂದರೆ ಭಗವಂತನಿಗೆ ಶರಣಾಗುವುದು. ಅಂತಹದೊಂದು ಅದ್ಭುತ ಭಕ್ತಿಯ ಪರಾಕಾಷ್ಠೆ ಈಗ ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಪುಟ್ಟ ಮಗುವಿನ ವಿಡಿಯೋ ಈಗ ಕೋಟ್ಯಂತರ ಜನರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ಒಡಿಶಾದ ಪ್ರಖ್ಯಾತ ಪುರಿ ಜಗನ್ನಾಥ ದೇವಾಲಯದ ಮುಂದೆ ಪುಟ್ಟ ಮಗುವೊಂದು ಭಜನೆ ಮಾಡುತ್ತಿರುವ ದೃಶ್ಯವೊಂದು ಈಗ ವ್ಯಾಪಕ ಜನಪ್ರಿಯತೆ ಗಳಿಸುತ್ತಿದೆ. ನೆಲದ ಮೇಲೆ ಕುಳಿತು, ಕೈಯಲ್ಲಿ ತಾಳಗಳನ್ನು ಹಿಡಿದು, ವೃತ್ತಾಕಾರವಾಗಿ ಸುತ್ತುತ್ತಾ ಆ ಮಗು ಹಾಡುತ್ತಿದ್ದ ಭಕ್ತಿಗೀತೆಗಳು ಅಲ್ಲಿ ಸೇರಿದ್ದ ಭಕ್ತರನ್ನು ಕ್ಷಣಕಾಲ ಸ್ತಬ್ಧಗೊಳಿಸಿವೆ. ಮಗುವಿನ ಲಯಬದ್ಧ ಗಾಯನ ಮತ್ತು ತನ್ಮಯತೆ ಕೇವಲ ವಿಡಿಯೋ ಮಾತ್ರವಲ್ಲ, ಒಂದು ದೈವಿಕ ಅನುಭೂತಿಯಂತೆ ಭಾಸವಾಗುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ವಿಡಿಯೋದಲ್ಲಿ ಆ ಮಗುವಿನ ಕಣ್ಣುಗಳು ಅಕ್ಷರಶಃ ಜಗನ್ನಾಥ ಸ್ವಾಮಿಯ ಕಣ್ಣುಗಳಂತೆಯೇ ತೀಕ್ಷ್ಣವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತಿವೆ. 'ಈ ಮಗು ಬೇರಾರೂ ಅಲ್ಲ, ಸಾಕ್ಷಾತ್ ಜಗನ್ನಾಥನ ಅವತಾರ'ಎಂದು ಭಕ್ತರು ಕಾಮೆಂಟ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಈ ಮುಗ್ಧ ಮಗುವಿನ ಭಕ್ತಿಯ ಲಯಕ್ಕೆ ಲಕ್ಷಾಂತರ ಮಂದಿ ಫಿದಾ ಆಗಿದ್ದಾರೆ.
ಪ್ರೇಮಾನಂದ ಮಹಾರಾಜರ ದರ್ಶನ ಪಡೆದ ಪುಟ್ಟ ಮಗು!
ಈ ವೈರಲ್ ಮಗು ಇತ್ತೀಚೆಗೆ ವೃಂದಾವನಕ್ಕೂ ಭೇಟಿ ನೀಡಿತ್ತು. ಅಲ್ಲಿ ಖ್ಯಾತ ಸಂತ ಪ್ರೇಮಾನಂದ ಮಹಾರಾಜರನ್ನು ಭೇಟಿ ಮಾಡಿದ್ದು, ಅವರೂ ಸಹ ಮಗುವಿನ ಭಕ್ತಿಯನ್ನು ಕಂಡು ಹರಸಿದ್ದಾರೆ. ಅಶ್ಲೀಲತೆ ಮತ್ತು ಗದ್ದಲದ ವಿಡಿಯೋಗಳ ನಡುವೆ, ಈ ಬಾಲಕನ ಭಕ್ತಿಯ ವೀಡಿಯೊ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತಿದೆ ಎಂದು ಜನ ಸ್ಮರಿಸುತ್ತಿದ್ದಾರೆ.
ಕಲಿಯುಗದ ದೇವತೆಯ ಪ್ರತಿರೂಪ?
ಕಾಶಿ, ಪುರಿ ಮತ್ತು ಜಗನ್ನಾಥ ಧಾಮದ ಭಕ್ತರ ಸಮೂಹದಲ್ಲಿ ಈ ಮಗು ಈಗ ದೊಡ್ಡ ಸೆನ್ಸೇಷನ್. ವಿಡಿಯೋ ನೋಡಿದ ಪ್ರತಿಯೊಬ್ಬರೂ 'ಜೈ ಜಗನ್ನಾಥ' ಎಂದು ಘೋಷಣೆ ಕೂಗುತ್ತಿದ್ದಾರೆ. ಕಲಿಯುಗದ ದೇವರು ಜಗನ್ನಾಥ ಸ್ವಾಮಿಯೇ ಈ ಮಗುವಿನ ರೂಪದಲ್ಲಿ ಭಜನೆ ಮಾಡುತ್ತಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.