
ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಸುತ್ತಾಡುತ್ತಿದ್ದ ಯುವತಿಯೊಬ್ಬಳಿಗೆ ಅಲ್ಲಿನ 'ಅಂಕಲ್ಸ್' (ವಯಸ್ಸಾದ ಪುರುಷರು) ಗುಂಪೊಂದು ನಿರಂತರವಾಗಿ ದಿಟ್ಟಿಸಿ ನೋಡಿದ್ದರಿಂದ ತೀವ್ರ ಮುಜುಗರವಾಗಿದೆ. ಇದರಿಂದ ಪಾರಾಗಲು ಆಕೆ ತಾನು ಧರಿಸಿದ್ದ ಬಟ್ಟೆಯ ಮೇಲೆ ಮತ್ತೊಂದು ಶರ್ಟ್ ಹಾಕಿಕೊಂಡಿದ್ದಾಳೆ. ಆಕೆಯ ಸ್ನೇಹಿತೆ ನೇಹಾ ಕೊಪಾನಿ ಈ ಘಟನೆಯನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವತಿ ಪಿಂಕ್ ಬಣ್ಣದ ಶರ್ಟ್ ಧರಿಸುವುದನ್ನು ಕಾಣಬಹುದು.
"ಅವಳಿಗೆ ಎಷ್ಟು ಮುಜುಗರವಾಯಿತೆಂದರೆ, ಕೊನೆಗೆ ಶರ್ಟ್ ಹಾಕಿಕೊಳ್ಳಲೇಬೇಕಾಯಿತು," ಎಂದು ವಿಡಿಯೋ ಮಾಡುತ್ತಿದ್ದ ನೇಹಾ ಹೇಳಿದ್ದಾರೆ. ಬಳಿಕ, ಯಾಕೆ ಹೀಗೆ ಮೈಮುಚ್ಚಿಕೊಳ್ಳುತ್ತಿದ್ದೀಯಾ ಎಂದು ಸ್ನೇಹಿತೆಯನ್ನು ಕೇಳಿದ್ದಾರೆ. ಅದಕ್ಕೆ ಆ ಯುವತಿ, "ಅಂಕಲ್ಸ್ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ," ಎಂದು ಉತ್ತರಿಸಿದ್ದಾಳೆ.
"ಇಂಥ ಕೆಟ್ಟ ಜನ ಎಲ್ಲ ಕಡೆಯೂ ಇರುತ್ತಾರೆ," ಎಂದು ನೇಹಾ ಹೇಳಿದಾಗ, ಕನ್ನಾಟ್ ಪ್ಲೇಸ್‌ನಂತಹ ಜಾಗದಲ್ಲಿ ಇಂಥ ವರ್ತನೆಯನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಆ ಯುವತಿ ಬೇಸರ ವ್ಯಕ್ತಪಡಿಸಿದ್ದಾಳೆ. ಪಿಂಕ್ ಶರ್ಟ್‌ನ ಬಟನ್ ಹಾಕಿಕೊಳ್ಳುತ್ತಾ, ತಾನು ಮೇಲಿನಿಂದ ಕೆಳಗಿನವರೆಗೆ ಸಂಪೂರ್ಣವಾಗಿ ಕವರ್ ಆಗಿರುವುದನ್ನು ಆಕೆ ತೋರಿಸಿದ್ದಾಳೆ. "ಈಗಲಾದರೂ ಜನ ನಿನ್ನನ್ನು ನೋಡುವುದು ನಿಲ್ಲಿಸಬಹುದು," ಎಂದು ನೇಹಾ ಕಾಮೆಂಟ್ ಮಾಡಿದ್ದಾರೆ.
"ಇಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲ," ಎಂದು ನೇಹಾ ಅಸಮಾಧಾನ ಹೊರಹಾಕಿದ್ದಾರೆ. ವಯಸ್ಸಾದ ಪುರುಷರು ನಿರಂತರವಾಗಿ ದಿಟ್ಟಿಸುತ್ತಿದ್ದ ಕಾರಣಕ್ಕಾಗಿಯೇ ತನ್ನ ಸ್ನೇಹಿತೆ ಶರ್ಟ್ ಧರಿಸಬೇಕಾಯಿತು ಎಂದು ಅವರು ವಿವರಿಸಿದ್ದಾರೆ. ವಿಶೇಷವೆಂದರೆ, ಯುವಕರು ಅಥವಾ ಹುಡುಗರಿಗಿಂತ ಹೆಚ್ಚಾಗಿ ವಯಸ್ಸಾದ ಪುರುಷರೇ ತನ್ನ ಸ್ನೇಹಿತೆಗೆ ಮುಜುಗರ ಉಂಟುಮಾಡಿದರು ಎಂದು ಅವರು ಒತ್ತಿ ಹೇಳಿದ್ದಾರೆ.
"ನಾನು ಇಷ್ಟಪಡುವ ಬಟ್ಟೆಯನ್ನು ಹಾಕಿಕೊಂಡು ಇಲ್ಲಿ ಓಡಾಡಲು ಸಾಧ್ಯವಿಲ್ಲ ಎಂದರೆ ನನಗೆ ತುಂಬಾ ಕೋಪ ಬರುತ್ತದೆ," ಎಂದು ನೇಹಾ ಕಿಡಿಕಾರಿದ್ದಾರೆ. ವಿಡಿಯೋದ ಕೊನೆಯಲ್ಲಿ, ಶರ್ಟ್ ಹಾಕಿಕೊಳ್ಳುವ ಮುನ್ನ ತನ್ನ ಸ್ನೇಹಿತೆ ಯಾವ ಬಟ್ಟೆ ಧರಿಸಿದ್ದಳು ಎಂಬುದನ್ನು ನೇಹಾ ತೋರಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಎದುರಿಸುವ ಇಂಥ ಮುಜುಗರದ ಸನ್ನಿವೇಶಗಳ ಬಗ್ಗೆ ಈ ವಿಡಿಯೋ ನೆಟ್ಟಿಗರ ನಡುವೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಕನ್ನಾಟ್ ಪ್ಲೇಸ್‌ನಲ್ಲಿರುವ ಜನರ ವರ್ತನೆ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. "ಕೆಲವು ವಯಸ್ಸಾದ ಪುರುಷರ ವರ್ತನೆಯಿಂದಾಗಿ ಆ ಜಾಗಕ್ಕೆ ಹೋಗುವುದೇ ಕಿರಿಕಿರಿಯಾಗುತ್ತದೆ," ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಮುಂದೆ ಹೀಗಾಗಬಹುದು ಎಂದು ಮೊದಲೇ ಊಹಿಸಿ ಆಕೆ ಎಕ್ಸ್‌ಟ್ರಾ ಶರ್ಟ್ ತಂದಿದ್ದಾಳೆ," ಎಂದು ಮತ್ತೊಬ್ಬರು ಹೇಳಿದ್ದಾರೆ. ಹೊರಗಡೆ ಹೋದಾಗ ಮಹಿಳೆಯರು ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ