ಪ್ರವಾಹದಲ್ಲಿ ಸೈಕಲ್ ತಳ್ಳಿಕೊಂಡು ಆಸ್ಪತ್ರೆಗೆ ಹೋದ ವೈದ್ಯ, ಇಬ್ಬರ ಪ್ರಾಣ ಉಳಿಸಿದ ಹೀರೋ!

Published : Jul 24, 2026, 01:49 PM IST
Chinese Doctor Becomes Hero After Braving Floodwaters on Bicycle for Surgeries

ಸಾರಾಂಶ

ಚೀನಾದ ಈಶಾನ್ಯ ಭಾಗದಲ್ಲಿ ನಗರವೇ ಪ್ರವಾಹದಿಂದ ಮುಳುಗಿದ್ದರೂ, ವೈದ್ಯರೊಬ್ಬರು ಸೊಂಟದ ಮಟ್ಟದ ನೀರಿನಲ್ಲಿ ತಮ್ಮ ಸೈಕಲ್ ತಳ್ಳಿಕೊಂಡು ಆಸ್ಪತ್ರೆಗೆ ತಲುಪಿ, ಅಲ್ಲಿ ಇಬ್ಬರು ಗರ್ಭಿಣಿಯರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಅವರ ಪ್ರಾಣ ಉಳಿಸಿದ್ದಾರೆ. ವೈದ್ಯರ ಕರ್ತವ್ಯ ನಿಷ್ಠೆಗೆ ಎಲ್ಲೆಡೆ ಮೆಚ್ಚುಗೆ

ಭಾರೀ ಮಳೆಯಿಂದ ಇಡೀ ನಗರವೇ ಮುಳುಗಿ ಎಲ್ಲ ಅಸ್ತವ್ಯಸ್ತವಾದರೂ ನಗರದಲ್ಲಿ ಹರಿಯುತ್ತಿದ್ದ ಸೊಂಟದ ಮಟ್ಟದ ನೀರಿನಲ್ಲಿ ತಮ್ಮ ಸೈಕಲ್ ತಳ್ಳಿಕೊಂಡು ಆಸ್ಪತ್ರೆಗೆ ತಲುಪಿ, ಅಲ್ಲಿ ನೋವಿನಿಂದ ನರಳುತ್ತಿದ್ದ ಇಬ್ಬರು ಗರ್ಭಿಣಿಯರ ಪ್ರಾಣ ಉಳಿಸಿದ್ದಾರೆ. ಈ ಘಟನೆ ಚೀನಾದ ಈಶಾನ್ಯ ಭಾಗದಲ್ಲಿ ನಡೆದಿದ್ದು ವೈದ್ಯ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟಿಜೆನ್ಸ್ಸ ಆ ವೈದ್ಯರ ಕರ್ತವ್ಯ ನಿಷ್ಠೆಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ.

ಅಲ್ಲಿ ನಡೆದಿದ್ದೇನು?

ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂದ್ರೆ, ಜುಲೈ 13ರಂದು ಚೀನಾದ ಲಿಯಾನಿಂಗ್ ಪ್ರಾಂತ್ಯದ ಶೆಯಾಂಗ್ ನಗರದಲ್ಲಿ ಹಿಂದೆಂದೂ ಕಂಡರಿಯದಂತಹ ಮಳೆ ಸುರಿದಿದೆ. ಒಂದೇ ದಿನದಲ್ಲಿ ಬರೋಬ್ಬರಿ 230 ಮಿ.ಮೀ ಮಳೆಯಾಗಿದ್ದು, 1951ರ ನಂತರ ನಗರದಲ್ಲಿ ಸುರಿದ ಅತಿ ದೊಡ್ಡ ಮಳೆ ಇದು ಎಂದು ಸ್ಥಳೀಯ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಸ್ತೆಗಳೆಲ್ಲಾ ಜಲಾವೃತವಾಗಿ, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ, ಜನರು ಮನೆಯಿಂದ ಹೊರಬರದೆ ಕೆಲಸಕ್ಕೆ ರಜೆ ಹಾಕುವಂತೆ ಅಧಿಕಾರಿಗಳು ಸೂಚಿಸಿದ್ದರು. ಆದರೆ, ವೈದ್ಯಕೀಯ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

ಈ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಚು ಜೆನ್‌ಹಾವೋ. ಇವರು ಈಶಾನ್ಯ ಚೀನಾದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಶೆಂಜಿಂಗ್ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋ ಸೆರೆಹಿಡಿದಿದ್ದು, ಡಾ. ಚು ಅವರು ಸೊಂಟದ ಮಟ್ಟದ ನೀರಿನಲ್ಲಿ ತಮ್ಮ ಸೈಕಲ್ ತಳ್ಳಿಕೊಂಡು ಹೋಗುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

'ಇಬ್ಬರು ಗರ್ಭಿಣಿಯರು ನನಗಾಗಿ ಕಾಯುತ್ತಿದ್ದರು..

ಈ ಬಗ್ಗೆ ಮಾತನಾಡಿದ ಡಾ. ಚು, 'ಆಸ್ಪತ್ರೆಯಲ್ಲಿ ಇಬ್ಬರು ಗರ್ಭಿಣಿಯರು ನನಗಾಗಿ ಕಾಯುತ್ತಿದ್ದರು. ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಹಾಗಾಗಿ ಎಷ್ಟೇ ಕಷ್ಟವಾದರೂ ನಾನು ಆಸ್ಪತ್ರೆ ತಲುಪಲೇಬೇಕಿತ್ತು. ಒಬ್ಬ ವೈದ್ಯನಾಗಿ, ರೋಗಿಗಳ ಸುರಕ್ಷತೆಯೇ ನನಗೆ ಮೊದಲ ಆದ್ಯತೆ. ನಾವು ರಜೆ ಹಾಕಿದ್ದರೆ ರೋಗಿಗಳ ಪ್ರಾಣಕ್ಕೆ ಅಪಾಯವಾಗುತ್ತಿತ್ತು' ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಸೈಕಲ್‌ನಲ್ಲೇ ಕೆಲಸಕ್ಕೆ ಹೋಗುತ್ತಿದ್ದ ಚು, ಪ್ರವಾಹದ ಪ್ರಮಾಣವನ್ನು ಕಡಿಮೆ ಅಂದಾಜು ಮಾಡಿದ್ದರಂತೆ. ಆದರೆ ನೀರು ಇಷ್ಟೊಂದು ಆಳ ಇರುತ್ತದೆ, ಸೈಕಲ್ ತುಳಿಯಲು ಆಗುವುದಿಲ್ಲ ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇಂತಹ ಕಠಿಣ ಹವಾಮಾನ ಇದ್ದರೂ ಅಂದು ತಮ್ಮ ಎಲ್ಲಾ ಸಹೋದ್ಯೋಗಿಗಳು ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ನಗರದ ಸಾವಿರಾರು ವೈದ್ಯಕೀಯ ಸಿಬ್ಬಂದಿಯಲ್ಲಿ ನಾನೂ ಒಬ್ಬ ಸಾಮಾನ್ಯ ವ್ಯಕ್ತಿ. ನಮ್ಮಷ್ಟೇ ಅಲ್ಲ, ಬೇರೆ ಬೇರೆ ಇಲಾಖೆಯವರೂ ತಮ್ಮ ಕರ್ತವ್ಯ ಮಾಡಿದ್ದಾರೆ. ಈ ಎಲ್ಲಾ ಹೊಗಳಿಕೆ ಅವರೆಲ್ಲರಿಗೂ ಸಲ್ಲಬೇಕು ಎಂದು ಚು ವಿನಮ್ರವಾಗಿ ಹೇಳಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ಗುವಾಂಗ್‌ಕ್ಸಿ ಜುವಾಂಗ್ ಸ್ವಾಯತ್ತ ಪ್ರದೇಶದಲ್ಲಿ ಕೂಡ ಇದೇ ರೀತಿ ಒಬ್ಬ ಅಗ್ನಿಶಾಮಕ ದಳದ ಸಿಬ್ಬಂದಿ ಭಾರೀ ಮಳೆಯಲ್ಲಿ ಊಟ ಮಾಡುತ್ತಿದ್ದ ಫೋಟೋ ವೈರಲ್ ಆಗಿ ಜನರಿಂದ ಮೆಚ್ಚುಗೆ ಗಳಿಸಿತ್ತು.

PREV
Read more Articles on
click me!

Recommended Stories

1.9 ಮಿಲಿಯನ್ ಜನಕ್ಕೆ ಇಷ್ಟವಾಯ್ತು ಟೀ ತಯಾರಿಸೋ ಈ ಹೊಸ ವಿಧಾನ - ನೀವೂ ಟ್ರೈ ಮಾಡಿ
'ಡ್ಯಾಡೀಸ್ ಹೋಮ್'.. ಯಶ್ ಹೋದಲ್ಲೆಲ್ಲಾ ಫಾಲೋ ಮಾಡ್ತಿದೆ ಈ ಡೈಲಾಗ್; ಅಷ್ಟಕ್ಕೂ ಇದರಲ್ಲಿರೋ ಸೀಕ್ರೆಟ್ ಏನು?