
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯಲ್ಲಿ ಕೇವಲ 46 ಪೈಸೆ ವ್ಯತ್ಯಾಸವಾಗಿದ್ದಕ್ಕೆ ಬ್ಯಾಂಕ್ ಒಂದೂವರೆ ಸಾವಿರಕ್ಕೂ ಅಧಿಕ ರೂಪಾಯಿ ದಂಡ ವಿಧಿಸಿರುವ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ 46 ಪೈಸೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ₹1,200ಕ್ಕೂ ಹೆಚ್ಚು ವಿಳಂಬ ಪಾವತಿ ಶುಲ್ಕ (Late Payment Fee) ಹಾಗೂ ಇತರೆ ಚಾರ್ಜ್‌ಗಳನ್ನು ವಿಧಿಸಿರುವುದಕ್ಕೆ ಗ್ರಾಹಕರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಹಕರ ಹೇಳಿಕೆಯ ಪ್ರಕಾರ, ಅವರಿಗೆ ಬಂದಿದ್ದ ಒಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತ ₹10,649.46 ಆಗಿತ್ತು. ಆದರೆ, ಅವರು ಪಾವತಿ ಮಾಡುವಾಗ ಗಮನಿಸದೆ ಆಕಸ್ಮಿಕವಾಗಿ ₹10,649 ಪಾವತಿಸಿದ್ದರು. ಅಂದರೆ, ಕೇವಲ 46 ಪೈಸೆ ಮಾತ್ರ ಕಟ್ಟಿರಲಿಲ್ಲ. ಆದರೆ, ಮುಂದಿನ ಬಿಲ್‌ನಲ್ಲಿ ಬ್ಯಾಂಕ್ ಈ ಸಣ್ಣ ಕೊರತೆಯನ್ನೇ ನೆಪವಾಗಿಟ್ಟುಕೊಂಡು ₹1,200ಕ್ಕೂ ಅಧಿಕ ವಿಳಂಬ ಪಾವತಿ ಶುಲ್ಕವನ್ನು ಸೇರಿಸಿ ಬಿಲ್ ಕಳುಹಿಸಿದೆ.
ತಮಗೆ ಎದುರಾದ ಈ ಅನ್ಯಾಯದ ವಿರುದ್ಧ ಗ್ರಾಹಕರು 'X' (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ HDFC ಬ್ಯಾಂಕ್ ಅನ್ನು ಟ್ಯಾಗ್ ಮಾಡಿ ನೇರವಾಗಿ ಪ್ರಶ್ನಿಸಿದ್ದಾರೆ. "ಪ್ರಿಯ HDFC ಬ್ಯಾಂಕ್, ನೀವು ನನಗೆ ₹10,649.46 ಮೊತ್ತದ ಕ್ರೆಡಿಟ್ ಕಾರ್ಡ್ ಬಿಲ್ ಕಳುಹಿಸಿದ್ದೀರಿ. ನಾನು ಆಕಸ್ಮಿಕವಾಗಿ ₹10,649 ಪಾವತಿಸಿದ್ದೇನೆ (ಅಲ್ಲಿಗೆ 46 ಪೈಸೆ ಪಾವತಿಯಾಗಲಿಲ್ಲ). ಕೇವಲ ಈ 46 ಪೈಸೆ ತಪ್ಪಿದ್ದಕ್ಕಾಗಿ ನೀವು ನನಗೆ ₹1,200ಕ್ಕೂ ಹೆಚ್ಚು ವಿಳಂಬ ಪಾವತಿ ಶುಲ್ಕವನ್ನು ವಿಧಿಸಿದ್ದೀರಾ? ಬ್ಯಾಂಕಿನ ಗ್ರಾಹಕ ಸೇವಾ ಪ್ರತಿನಿಧಿಗಳು ದುರಹಂಕಾರಿಗಳು ಮತ್ತು ಅಜ್ಞಾನಿಗಳಂತೆ ವರ್ತಿಸುತ್ತಿದ್ದಾರೆ. ಈ ದಂಡದ ಮೊತ್ತವನ್ನು ಬ್ಯಾಂಕ್ ತಕ್ಷಣವೇ ಹಿಂಪಡೆಯಬೇಕು." ಎಂದಿದ್ದಾರೆ.
ಈ ಪೋಸ್ಟ್ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲ್ಪಡುತ್ತಿದ್ದಂತೆ ತೀವ್ರ ಸಂಚಲನ ಮೂಡಿಸಿತು. ನೆಟ್ಟಿಗರು ಬ್ಯಾಂಕ್‌ಗಳ ಇಂತಹ ನಿಯಮಗಳ ವಿರುದ್ಧ ಹಾಗೂ ನಿಯಮಾವಳಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರರು, "ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ತಕ್ಷಣ ರದ್ದುಗೊಳಿಸಿ, ಅದನ್ನು 4 ತುಂಡುಗಳಾಗಿ ಕತ್ತರಿಸಿ ಕಸದ ತೊಟ್ಟಿಗೆ ಎಸೆಯಿರಿ. ಕೇವಲ 0.46 ಪೈಸೆಗೆ ₹1,200 ಬಡ್ಡಿ ಹೇಗೆ ಆಯಿತು ಎಂಬುದನ್ನು ಬ್ಯಾಂಕ್ ಕೋರ್ಟ್‌ನಲ್ಲಿ ಸಾಬೀತುಪಡಿಸಲಿ ಎಂದು ಸಲಹೆ ನೀಡಿದ್ದಾರೆ.
ಮತ್ತೊಬ್ಬರು, ನನಗೂ HDFC ಕ್ರೆಡಿಟ್ ಕಾರ್ಡ್‌ನಿಂದ ಕೆಟ್ಟ ಅನುಭವವಾಗಿದೆ. ನಾನು ಅದನ್ನು ಮುರಿದು ಎಸೆದರೂ ಸಹ ದಿನವೂ ಸಾಲ ಅಥವಾ ಕ್ರೆಡಿಟ್ ಕಾರ್ಡ್ ತಗೊಳ್ಳಿ ಎಂದು ಕರೆ ಮಾಡುತ್ತಾರೆ. ತೀರಾ ಬೇಜವಾಬ್ದಾರಿ ವ್ಯವಸ್ಥೆ ಎಂದು ದೂರಿದ್ದಾರೆ.
ಇನ್ನೊಬ್ಬ ನೆಟ್ಟಿಗರು, ಈ ಬ್ಯಾಂಕಿನಲ್ಲಿ ನನಗೂ ಅನೇಕ ಸಮಸ್ಯೆಗಳಿದ್ದವು. ಇವರ ಅಜ್ಞಾನಿ ಮತ್ತು ದುರಹಂಕಾರಿ ಸಿಬ್ಬಂದಿಯಿಂದಾಗಿ ನನ್ನೆಲ್ಲಾ ಖಾತೆಗಳನ್ನು ಮತ್ತು ಎಫ್‌ಡಿಗಳನ್ನು ಬಹಳ ಹಿಂದೆಯೇ ಮುಚ್ಚಿದೆ, ಎಂದಿದ್ದಾರೆ.
ಕೆಲ ಬಳಕೆದಾರರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಯಮಗಳನ್ನು ಉಲ್ಲೇಖಿಸಿ, ಆರ್‌ಬಿಐ ನಿಯಮಗಳ ಪ್ರಕಾರ, ₹10,649.46 ರಂತಹ ಮೊತ್ತದಲ್ಲಿ 50 ಪೈಸೆಗಿಂತ ಕಡಿಮೆಯಿದ್ದರೆ ಅದನ್ನು ಪೂರ್ಣಾಂಕಗೊಳಿಸಿ ₹10,649 ಎಂದೇ ಪರಿಗಣಿಸಲಾಗುತ್ತದೆ. 50 ಪೈಸೆಗಿಂತ ಕಡಿಮೆ ಇರುವುದನ್ನು ನಿರ್ಲಕ್ಷಿಸಿ ಹತ್ತಿರದ ರೂಪಾಯಿಗೆ ಪೂರ್ಣಾಂಕಗೊಳಿಸಬೇಕು ಎಂಬ ಸುತ್ತೋಲೆಯನ್ನು ಬ್ಯಾಂಕ್‌ಗೆ ತೋರಿಸಿ ಎಂದು ದಾರಿದೀಪ ತೋರಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಬ್ಬರು, ತಪ್ಪು ನಿಮ್ಮದೇ ಸಹೋದರ, ಅದನ್ನು ಬ್ಯಾಂಕಿನ ಮೇಲೆ ಹಾಕಬೇಡಿ. ಬಿಲ್‌ನಲ್ಲಿರುವ ಪ್ರತಿಯೊಂದು ಪೈಸೆಯನ್ನೂ ಗಂಭೀರವಾಗಿ ಪರಿಗಣಿಸದವರಿಗೆ ಇದೊಂದು ಒಳ್ಳೆಯ ಪಾಠ. ಈಗ ವ್ಯವಸ್ಥೆ ಅಥವಾ ಸರ್ಕಾರವನ್ನು ದೂಷಿಸಬೇಡಿ ಎಂದು ಗ್ರಾಹಕರನ್ನೇ ಎಚ್ಚರಿಸಿದ್ದಾರೆ.