
ಬೆಂಗಳೂರು: ನೀವು ಒಂದು ಕಂಪನಿಯಲ್ಲಿ 15 ವರ್ಷಗಳ ಕಾಲ ದುಡಿದು, ಉತ್ತಮ ಸಂಬಳ ಮತ್ತು ನೆಮ್ಮದಿಯ ವಾತಾವರಣದಲ್ಲಿದ್ದೀರಿ ಎಂದುಕೊಳ್ಳಿ. ಅದೇ ಸಮಯದಲ್ಲಿ ನಿಮಗೆ ಮತ್ತೊಂದು ಪ್ರತಿಷ್ಠಿತ ಟೆಕ್ ಕಂಪನಿಯಿಂದ ಬರೋಬ್ಬರಿ 92 ಲಕ್ಷ ರೂಪಾಯಿಗಳ ಬೃಹತ್ ಆಫರ್ ಬಂದರೆ, ನೀವು ಏನು ಮಾಡುತ್ತೀರಿ? ಇದೇ ಪ್ರಶ್ನೆ ಈಗ ಬೆಂಗಳೂರಿನ 40 ವರ್ಷದ ಟೆಕ್ ಮ್ಯಾನೇಜರ್ ಒಬ್ಬರನ್ನು ಗೊಂದಲಕ್ಕೆ ದೂಡಿದೆ. ನೆಮ್ಮದಿಯ ಕೆಲಸದ ವಾತಾವರಣದಲ್ಲಿ ಉಳಿಯಬೇಕೆ ಅಥವಾ ಬೃಹತ್ ವೇತನದೊಂದಿಗೆ ಹೊಸ ಅವಕಾಶವನ್ನು ಅಪ್ಪಿಕೊಳ್ಳಬೇಕೆ ಎಂಬ ಗೊಂದಲದಲ್ಲಿರುವ ಈ ಮ್ಯಾನೇಜರ್, ವೃತ್ತಿ ಸಲಹೆಗಾಗಿ ಈಗ ‘ರೆಡ್ಡಿಟ್’ (Reddit) ಮೊರೆ ಹೋಗಿದ್ದಾರೆ.
ರೆಡ್ಡಿಟ್‌ನಲ್ಲಿ ತಮ್ಮ ಗೊಂದಲವನ್ನು ತೋಡಿಕೊಂಡಿರುವ ಆ ವ್ಯಕ್ತಿ, “ನನಗೆ ಈಗ 40 ವರ್ಷ. ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಲೀಡ್ ಮತ್ತು ಆರ್ಕಿಟೆಕ್ಟ್ ಹುದ್ದೆಗಳ ಮೂಲಕ ಬೆಳೆದು, ಕಳೆದ 3.5 ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದೀಗ ನನಗೆ ಮತ್ತೊಂದು ಬೃಹತ್ ಜಾಗತಿಕ ತಂತ್ರಜ್ಞಾನ ಕಂಪನಿಯಿಂದ ಬಂಪರ್ ಆಫರ್ ಬಂದಿದೆ” ಎಂದು ಬರೆದುಕೊಂಡಿದ್ದಾರೆ.
ನನ್ನ ಈಗಿನ ಕಂಪನಿಯಲ್ಲಿ ₹75 ಲಕ್ಷದ ಸಿಟಿಸಿ (CTC) ಇದ್ದು, ಇದರಲ್ಲಿ ₹65.25 ಲಕ್ಷ ಫಿಕ್ಸ್ಡ್ ಸ್ಯಾಲರಿ ಇದೆ. ಕಳೆದ 15 ವರ್ಷಗಳಿಂದ ದುಡಿದಿರುವ ಕಾರಣ ಕಂಪನಿಯಲ್ಲಿ ಅಪಾರ ವಿಶ್ವಾಸ ಇದೆ. ನೆಮ್ಮದಿಯ ವಾತಾವರಣ, ಸುಲಭವಾದ ಕೆಲಸ, ಜೊತೆಗೆ ಕಚೇರಿ ನನ್ನ ಮನೆಗೆ ಹತ್ತಿರವಿದ್ದು ಪ್ರಯಾಣದ ಕಿರಿಕಿರಿಯೂ ಇಲ್ಲ. ಮುಂದೆ ಹಿರಿಯ ನಾಯಕತ್ವದ ಹುದ್ದೆಗೇರುವ ಸಣ್ಣ ಅವಕಾಶವೂ ಇದೆ.
ಮತ್ತೊಂದು ಜಾಗತಿಕ ಟೆಕ್ ಕಂಪನಿಯಿಂದ ₹92 ಲಕ್ಷ ಸಿಟಿಸಿ (₹80 ಲಕ್ಷ ಫಿಕ್ಸ್ಡ್) ಆಫರ್ ಬಂದಿದೆ. ಇದು ಲೈನ್ ಮ್ಯಾನೇಜರ್ (Line Manager) ಹುದ್ದೆಯಾಗಿದ್ದು, ಗಣನೀಯ ಪ್ರಮಾಣದ ವೇತನ ಹೆಚ್ಚಳವಾಗಿದೆ. ನನ್ನ ಪ್ರಸ್ತುತ ಕಂಪನಿಯ ಹೊರತಾಗಿ ಹೊಸ ಜವಾಬ್ದಾರಿಗಳು ಮತ್ತು ಮ್ಯಾನೇಜ್‌ಮೆಂಟ್ ಕೌಶಲ್ಯವನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ಈ ಪೋಸ್ಟ್ ನೋಡಿದ ನೆಟ್ಟಿಗರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಒಬ್ಬರು, “40ರ ವಯಸ್ಸಿನಲ್ಲಿ ನೀವು ಕೇವಲ ವೇತನವನ್ನಷ್ಟೇ ನೋಡದೆ, ನಿಮ್ಮ ವೃತ್ತಿಜೀವನದ ಗುರಿಗಳು ಮತ್ತು ವೈಯಕ್ತಿಕ ಆದ್ಯತೆಗಳನ್ನು ಗಮನಿಸಬೇಕು. ಲೈನ್ ಮ್ಯಾನೇಜರ್ ಆಗಿ ಹೋದರೆ ಭವಿಷ್ಯದಲ್ಲಿ ನಿರ್ದೇಶಕರ ಮಟ್ಟಕ್ಕೆ ಏರಬೇಕಾಗುತ್ತದೆ. ಹಾಗಾಗಿ ಕೇವಲ ಹಣಕ್ಕಾಗಿ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬೇಡಿ” ಎಂದು ಸಲಹೆ ನೀಡಿದ್ದಾರೆ.
ಮತ್ತೊಬ್ಬರು ಕಟುವಾಗಿ ಪ್ರತಿಕ್ರಿಯಿಸಿ, “ನೀವು ಈಗಾಗಲೇ ನಿಮ್ಮ ಕಂಪನಿಗೆ ಬೇರೆ ಆಫರ್ ಬಗ್ಗೆ ತಿಳಿಸಿರುತ್ತೀರಿ. ಅಂದರೆ ನೀವು ಕೆಲಸ ಬಿಡುವ ಯೋಚನೆಯಲ್ಲಿದ್ದೀರಿ ಎಂಬುದು ಅವರಿಗೆ ತಿಳಿದಿರುತ್ತದೆ. ಮುಂದೆ ಅವಕಾಶ ಸಿಕ್ಕಾಗ ಅವರು ನಿಮ್ಮನ್ನೇ ಮೊದಲು ಕೈಬಿಡಬಹುದು. ಆದ್ದರಿಂದ ಹೊಸ ಕಂಪನಿಗೆ ಸೇರುವುದೇ ಉತ್ತಮ” ಎಂದಿದ್ದಾರೆ.
ಮೂರನೆಯವರು ತಮಾಷೆ ಮಾಡುತ್ತಾ, “ದೇವರೇ! ನನಗೂ ಜೀವನದಲ್ಲಿ ಇಂತಹದ್ದೇ ಕಷ್ಟಗಳು ಬರಲಿ” ಎಂದು ಕಾಮೆಂಟ್ ಮಾಡಿದ್ದಾರೆ.
ನಾಲ್ಕನೆಯವರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ, “ನೀವು ಈಗಿರುವ ಕಂಪನಿಯಲ್ಲೇ ಉಳಿಯಬೇಕು. 15 ವರ್ಷಗಳಿಂದ ಬೆಳೆಸಿಕೊಂಡಿರುವ ವಿಶ್ವಾಸಾರ್ಹತೆ, 20% ವೇತನ ಹೆಚ್ಚಳಕ್ಕಿಂತ ದೊಡ್ಡದು” ಎಂದು ಸಲಹೆ ನೀಡಿದ್ದಾರೆ.