
ಇಸ್ರೇಲ್‌ನ ಕಾರ್ಮೆಲ್ ಪರ್ವತದ ಇಳಿಜಾರಿನಲ್ಲಿರುವ ಒಂದು ಪ್ರಾಚೀನ ಗುಹೆಯಲ್ಲಿ ಪತ್ತೆಯಾಗಿರುವ ಸರೀಸೃಪಗಳ ಮೂಳೆಗಳು ವಿಜ್ಞಾನಿಗಳನ್ನು ನಿಜಕ್ಕೂ ಕಂಗಾಲಾಗಿಸಿವೆ. ಸುಮಾರು 11,000 ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಪ್ರಾಚೀನ ಮಾನವರು ಬರೀ ದೊಡ್ಡ ಪ್ರಾಣಿಗಳನ್ನು ಮಾತ್ರವಲ್ಲ, ಹಾವು ಹಾಗೂ ಹಲ್ಲಿಗಳಂತಹ ಸಣ್ಣ ಸರೀಸೃಪಗಳನ್ನು ಕೂಡ ತಮ್ಮ ಆಹಾರವಾಗಿ ಸೇವಿಸುತ್ತಿದ್ದರು ಎಂಬ ಅಚ್ಚರಿಯ ಸಂಗತಿ ಈಗ ಬೆಳಕಿಗೆ ಬಂದಿದೆ.
ಎಲ್-ವಾಡ್ ಟೆರೇಸ್ (El-Wad Terrace) ಎಂಬ ಐತಿಹಾಸಿಕ ಸ್ಥಳದಲ್ಲಿ ನಡೆಸಿದ ಉತ್ಖನನದಲ್ಲಿ ಸುಮಾರು 3,000ಕ್ಕೂ ಹೆಚ್ಚು ಹಾವು ಮತ್ತು ಹಲ್ಲಿಯ ಮೂಳೆಗಳು ಪತ್ತೆಯಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸರೀಸೃಪಗಳ ಮೂಳೆಗಳು ಅಲ್ಲಿಗೆ ಹೇಗೆ ಬಂದವು ಎಂಬುದು ಪುರಾತತ್ವಜ್ಞರಿಗೆ ದೊಡ್ಡ ಸವಾಲಾಗಿತ್ತು. ಇವುಗಳನ್ನು ಆ ಕಾಲದ ಜನರು ಬೇಟೆಯಾಡಿ ತಿಂದು ಹಾಕಿದ್ದಾ? ಅಥವಾ ಹದ್ದು, ರೇವೆನ್‌ನಂತಹ ಬೇಟೆಯಾಡುವ ಪಕ್ಷಿಗಳು ಇವುಗಳನ್ನು ಗುಹೆಗೆ ತಂದು ಹಾಕಿದ್ದವಾ? ಎಂಬ ಅನುಮಾನ ಕಾಡುತ್ತಿತ್ತು. ಈ ನಿಗೂಢ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಮೂಳೆಗಳ ಸೂಕ್ಷ್ಮ ಅಧ್ಯಯನವನ್ನು ಕೈಗೊಂಡರು.
'ಸೈಂಟಿಫಿಕ್ ರಿಪೋರ್ಟ್ಸ್' ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ವಿಜ್ಞಾನಿಗಳು ಪ್ರಾಚೀನ ಮೂಳೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿದರು. ಮಾನವರು ಮಾಂಸವನ್ನು ಕತ್ತರಿಸುವಾಗ ಮೂಳೆಗಳ ಮೇಲೆ ಉಂಟಾಗುವ ಗುರುತುಗಳು ಪ್ರಾಚೀನ ಹಾವಿನ ಮೂಳೆಗಳ ಮೇಲೂ ಸ್ಪಷ್ಟವಾಗಿ ಗೋಚರಿಸಿದವು. ವಿಶೇಷವಾಗಿ ದೊಡ್ಡ ಗಾತ್ರದ ಚಾಟಿ ಹಾವುಗಳ ಕಶೇರುಖಂಡಗಳ ಮೇಲೆ ಪುನರಾವರ್ತಿತವಾದ ಕತ್ತರಿಸಿದ ಗುರುತುಗಳು ಪತ್ತೆಯಾದವು. ಇವು ಯಾದೃಚ್ಛಿಕವಾಗಿ ಅಥವಾ ನೈಸರ್ಗಿಕವಾಗಿ ಉಂಟಾದ ಗಾಯಗಳಲ್ಲ, ಬದಲಿಗೆ ಯಾರೋ ಉದ್ದೇಶಪೂರ್ವಕವಾಗಿ ಮಾಂಸವನ್ನು ಬೇರ್ಪಡಿಸಲು ಮಾಡಿದ ಪ್ರಯತ್ನಗಳು ಎಂಬುದು ಸ್ಪಷ್ಟವಾಯಿತು. ಅಲ್ಲದೆ, ಈ ಮೂಳೆಗಳ ಮೇಲೆ ಪಕ್ಷಿಗಳು ಬೇಟೆಯನ್ನು ನುಂಗಿದಾಗ ಅಥವಾ ಜೀರ್ಣಿಸಿಕೊಂಡಾಗ ಉಂಟಾಗುವ ಆಮ್ಲೀಯ ಸವೆತದ ಗುರುತುಗಳು ಕಂಡುಬಂದಿಲ್ಲ. ಅಂದರೆ, ಗುಹೆಯಲ್ಲಿ ಸಿಕ್ಕ ಪ್ರತಿಯೊಂದು ಸರೀಸೃಪವನ್ನು ಪಕ್ಷಿಗಳು ತಂದಿರಲಿಲ್ಲ; ಬದಲಿಗೆ ಕೆಲವು ನಿರ್ದಿಷ್ಟ ಹಾವುಗಳನ್ನು ಪ್ರಾಚೀನ ಮಾನವರೇ ಬೇಟೆಯಾಡಿ ತಂದಿದ್ದರು.
ವಿಜ್ಞಾನಿಗಳು ಈ ಸಂಶೋಧನೆಯನ್ನು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಲು ಆಧುನಿಕ ಪ್ರಾಣಿಗಳ ಮೂಳೆಗಳ ಮೇಲೆ ವಿವಿಧ ಪ್ರಯೋಗಗಳನ್ನು ನಡೆಸಿದರು. ಬೆಂಕಿ, ಹವಾಮಾನ ವೈಪರೀತ್ಯ ಮತ್ತು ತುಳಿತಕ್ಕೆ ಒಳಗಾದ ಮೂಳೆಗಳು ಹೇಗಿರುತ್ತವೆ ಎಂದು ಪರಿಶೀಲಿಸಿದರು. ಈ ಪ್ರಯೋಗದ ಫಲಿತಾಂಶಗಳೊಂದಿಗೆ ಪ್ರಾಚೀನ ಮೂಳೆಗಳನ್ನು ಹೋಲಿಸಿ ನೋಡಿದಾಗ ಒಂದು ಕುತೂಹಲಕಾರಿ ವಿಷಯ ತಿಳಿಯಿತು. ಅದೇನೆಂದರೆ, ಆ ಗುಹೆಯಲ್ಲಿ ಸಿಕ್ಕ ಎಲ್ಲ ಹಾವುಗಳು ಮಾನವರ ಆಹಾರವಾಗಿರಲಿಲ್ಲ. ಕೆಲವು ಸಣ್ಣ ಹಾವುಗಳು ಮತ್ತು ಹಲ್ಲಿಗಳು ನೈಸರ್ಗಿಕವಾಗಿ ಅಥವಾ ಪಕ್ಷಿಗಳ ಮೂಲಕ ಗುಹೆಯನ್ನು ಸೇರಿದ್ದವು. ಆದರೆ ದೊಡ್ಡ ಚಾಟಿ ಹಾವುಗಳು ಮತ್ತು ಗಾಜಿನ ಹಲ್ಲಿಗಳನ್ನು ಮಾತ್ರ ವಿಶೇಷವಾಗಿ ಆಯ್ಕೆ ಮಾಡಿ ತಿನ್ನಲಾಗಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಯಿತು.
ಈ ಗುಹೆಯಲ್ಲಿ ವಾಸಿಸುತ್ತಿದ್ದ ಜನರನ್ನು 'ನಟುಫಿಯನ್ ಸಂಸ್ಕೃತಿ'ಗೆ ಸೇರಿದವರು ಎಂದು ಗುರುತಿಸಲಾಗಿದೆ. ಇವರು ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಹಂತಕ್ಕೂ ಮುಂಚಿನ ಕಾಲದವರು. ಅಂದರೆ, ಇವರು ಪ್ರಮುಖವಾಗಿ ಬೇಟೆ ಮತ್ತು ಕಾಡು ಸಂಪತ್ತನ್ನು ಸಂಗ್ರಹಿಸುವುದರ ಮೇಲೆಯೇ ಜೀವಿಸುತ್ತಿದ್ದರು. ಇವರ ಆಹಾರ ಪದ್ಧತಿ ಹೇಗಿತ್ತು ಎಂಬುದಕ್ಕೆ ಈ ಸರೀಸೃಪಗಳೇ ಸಾಕ್ಷಿ. ದೊಡ್ಡ ಪ್ರಾಣಿಗಳು ಸಿಗದೆ ಇದ್ದಾಗ ಅಥವಾ ವಿಭಿನ್ನ ರುಚಿಯನ್ನು ಬಯಸಿದಾಗ, ಈ ಪ್ರಾಚೀನ ಮಾನವರು ಹಾವು ಹಾಗೂ ಹಲ್ಲಿಗಳಂತಹ ಸಣ್ಣ ಪ್ರಾಣಿಗಳ ಮಾಂಸವನ್ನೂ ಬಿಡುತ್ತಿರಲಿಲ್ಲ. ಇದು ಅವರ 'ಡಿನ್ನರ್ ಮೆನು' ಸಾಮಾನ್ಯವಾದದ್ದಲ್ಲ, ಬದಲಿಗೆ ಅತ್ಯಂತ ವೈವಿಧ್ಯಮಯವಾಗಿತ್ತು ಎಂಬುದನ್ನು ತೋರಿಸುತ್ತದೆ.
ಪ್ರತಿ ಮೂಲದಿಂದ ಪೋಷಕಾಂಶದ ಹುಡುಕಾಟ!
ಸಣ್ಣ ಸರೀಸೃಪಗಳು ದೊಡ್ಡ ಪ್ರಾಣಿಗಳಂತೆ ಹೊಟ್ಟೆ ತುಂಬುವಷ್ಟು ಮಾಂಸವನ್ನು ನೀಡುವುದಿಲ್ಲ ನಿಜ. ಆದರೆ, ಕೃಷಿ ಯುಗಕ್ಕೂ ಮುಂಚಿನ ಮಾನವರು ಲಭ್ಯವಿರುವ ಪ್ರತಿಯೊಂದು ಮೂಲದಿಂದಲೂ ತಮಗೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದರು ಎಂಬುದನ್ನು ಈ 3,000 ಮೂಳೆಗಳು ಜಗತ್ತಿಗೆ ಸಾರಿ ಹೇಳಿವೆ.