
ಕೆಲಸ ಮಾಡುವ ಜಾಗವನ್ನು ಕೆಲವರು ತಮ್ಮ ಎರಡನೇ ಮನೆ ಅಂದುಕೊಳ್ಳುತ್ತಾರೆ. ಅಲ್ಲಿನವರ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು, ಆಫೀಸ್ ಬೇರೆ, ಪರ್ಸನಲ್ ಲೈಫ್ ಬೇರೆ ಅಂತ ಗಟ್ಟಿ ನಿಲುವು ಹೊಂದಿರುತ್ತಾರೆ. ಇದೇ ವಿಚಾರವಾಗಿ ಸದ್ಯ ಒಂದು ಪೋಸ್ಟ್ ಸಕತ್ ವೈರಲ್ ಆಗಿದೆ.
ಹೈದರಾಬಾದ್‌ನ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುವ ದೀಪಿಕಾ ಎಂಬ ಯುವತಿ, ಆಫೀಸಿನಲ್ಲಿ ನಾವು ತಿಳಿಯದೆ ಮಾಡುವ ಕೆಲವು ತಪ್ಪುಗಳು ನಮ್ಮ ಕೆರಿಯರ್‌ಗೆ ಹೇಗೆ ಕುತ್ತು ತರಬಹುದು ಎಂದು ವಿವರಿಸಿದ್ದಾರೆ. Instagram ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಆಫೀಸಿನಲ್ಲಿ ಎಂದಿಗೂ ಹಂಚಿಕೊಳ್ಳಬಾರದ 10 ವಿಷಯಗಳ ಪಟ್ಟಿ ಮಾಡಿದ್ದಾರೆ.
ಸಂಬಳ: ನಿಮ್ಮ ಸ್ಯಾಲರಿ ಎಷ್ಟು ಅಂತ ಸಹೋದ್ಯೋಗಿಗಳಿಗೆ ಹೇಳಬೇಡಿ. ಇದು ಅವರಲ್ಲಿ ಸ್ಪರ್ಧೆ ಮತ್ತು ಅಸೂಯೆಗೆ ಕಾರಣವಾಗಬಹುದು.
ಆಫೀಸ್ ಗಾಸಿಪ್: ತಮಾಷೆಗಾಗಿ ಆಡುವ ಮಾತುಗಳು ಕೂಡ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಬಹುದು.
ಸಹೋದ್ಯೋಗಿಗಳ ಬಗ್ಗೆ ನೆಗೆಟಿವ್ ಮಾತು: ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದು ಬೇಗ ಹರಡುತ್ತದೆ. ಕೊನೆಗೆ ನಿಮಗೇ ಉಲ್ಟಾ ಹೊಡೆಯಬಹುದು.
ಪ್ರೀತಿ, ಸಂಸಾರದ ಸಮಸ್ಯೆಗಳು: ನಿಮ್ಮ ವೈಯಕ್ತಿಕ ಜೀವನದ ಡ್ರಾಮಾಗಳನ್ನು ಆಫೀಸಿನಲ್ಲಿ ಬೇರೆಯವರಿಗೆ ಮನರಂಜನೆಯ ವಿಷಯವಾಗಲು ಬಿಡಬೇಡಿ.
ಆರೋಗ್ಯದ ಮಾಹಿತಿ: ನಿಮ್ಮ ಆರೋಗ್ಯ ಸಮಸ್ಯೆ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದಾದರೆ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಅದನ್ನು ಬಹಿರಂಗಪಡಿಸಿ.
ರಾಜಕೀಯ ಮತ್ತು ಧರ್ಮ: ಇಂತಹ ಚರ್ಚೆಗಳಿಂದ ಆಫೀಸಿನಲ್ಲಿ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಇವುಗಳಿಂದ ದೂರ ಇರುವುದೇ ಉತ್ತಮ.
ಬಾಸ್ ಬಗ್ಗೆ ದೂರು: ಬಾಸ್ ಬಗ್ಗೆ ಸಹೋದ್ಯೋಗಿಗಳ ಬಳಿ ದೂರು ಹೇಳಿಕೊಂಡರೆ ಆಗ ಸಮಾಧಾನ ಎನಿಸಬಹುದು. ಆದರೆ ಇದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.
ಕೆಲಸ ಬದಲಾಯಿಸುವ ಯೋಚನೆ: ಹೊಸ ಕೆಲಸ ಸಿಗುವುದು ಖಚಿತವಾಗುವವರೆಗೂ, ಈಗಿನ ಆಫೀಸಿನಲ್ಲಿ ಈ ಬಗ್ಗೆ ಸುಳಿವು ಕೂಡ ಕೊಡಬೇಡಿ.
ಅತಿಯಾದ ವೈಯಕ್ತಿಕ ಮಾಹಿತಿ: ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಯಾವಾಗಲೂ ಒಂದು ಗೆರೆ ಇರಲಿ.
ಕಂಪನಿಯ ರಹಸ್ಯಗಳು: ಸಂಸ್ಥೆಯ ಗೌಪ್ಯ ಮಾಹಿತಿಗಳನ್ನು ಹೊರಗೆ ಹೇಳಿದರೆ ನಿಮ್ಮ ಕೆರಿಯರ್ ಸರ್ವನಾಶವಾಗುವುದು ಗ್ಯಾರಂಟಿ.
ಹೆಚ್ಚು ಮಾತನಾಡಿದರೆ ನಿಮ್ಮ ಕೆರಿಯರ್ ಹಾಳಾಗಬಹುದು. 'ನಾನು ಕಲಿತ ಈ ಪಾಠಗಳು ನಿಮಗೂ ಉಪಯೋಗಕ್ಕೆ ಬರಲಿ' ಎಂಬ ಕ್ಯಾಪ್ಷನ್‌ನೊಂದಿಗೆ ದೀಪಿಕಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಎಲ್ಲವನ್ನೂ ಮುಚ್ಚಿಡುವುದಕ್ಕಿಂತ, ಯಾರನ್ನು ನಂಬಬೇಕು ಮತ್ತು ಎಷ್ಟು ವಿಷಯ ಹಂಚಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಮುಂದುವರಿಯುವುದು ಉತ್ತಮ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.