
ಅಲಿಗಢದ ದಾದೋನ್ ಪ್ರದೇಶದಲ್ಲಿರುವ ರುಸ್ತಂ ನಗರದ ಜನರಿಗೆ ಬುಧವಾರ ಬೆಳ್ಳಂಬೆಳಗ್ಗೆ ದೊಡ್ಡ ಅಚ್ಚರಿಯೊಂದು ಕಂಡಿದೆ. ಹತ್ತಿರದ ಪೊದೆಯಿಂದ ಇದ್ದಕ್ಕಿದ್ದಂತೆ ಒಂದು ಮೊಸಳೆ ಊರೊಳಗೆ ನುಗ್ಗಿ ಬಂದಿದೆ. ಸಾಮಾನ್ಯವಾಗಿ ಮೊಸಳೆ ಎಂದರೆ ಹೆದರಿ ಓಡಿಹೋಗುವವರೇ ಹೆಚ್ಚು. ಆದರೆ ಈ ಜನರು ಹೆದರುವ ಬದಲು ಅದರೊಂದಿಗೆ ಚೆಲ್ಲಾಟವಾಡಿದ್ದಾರೆ!
ಮೊಸಳೆ ತುಂಬಾ ಅಪಾಯಕಾರಿ ಜೀವಿ. ಹತ್ತಿರಕ್ಕೆ ಹೋದರೆ ದಾಳಿ ಮಾಡದೆ ಬಿಡೋದಿಲ್ಲ. ಆದರೆ ಈ ಊರು ಜನರು ಮೊಸಳೆ ಎಂದರೆ ಯಾರಿಗೂ ಭಯವಿಲ್ಲ. ಮೊಸಳೆಯನ್ನೇ ಕೈಯಲ್ಲಿ ಎತ್ತಿಹಿಡಿದು ಎಲ್ಲರಿಗೂ ತೋರಿಸುತ್ತಾ ಮತ್ತೊಬ್ಬ ಅದರ ಬಾಯಿ ತೆರೆದು ಹಲ್ಲು ಎಣಿಸುವ ಸಾಹಸ ಮಾಡಿದ್ದಾನೆ. ವಿಚಿತ್ರ ಎಂದರೆ ಮೊಸಳೆ ಸಹ ಕೂಡ ತನ್ನ ಸ್ವಭಾವಕಕ್ಕೆ ವ್ಯತಿರಿಕ್ತವಾಗಿ ವರ್ತಿಸಿದೆ. ಅಷ್ಟೆಲ್ಲ ಎತ್ತಿಹಿಡಿದು ಚೆಲ್ಲಾಟ ಆಡ್ತಿದ್ರೂ ಯಾರ ಮೇಲೂ ದಾಳಿ ನಡೆಸದೆ ಸಾಧು ಪ್ರಾಣಿಯಂತೆ ಸುಮ್ಮನಿದಿದ್ದು ಅಚ್ಚರಿ ಮೂಡಿಸಿದೆ.
ಬೆಳಗ್ಗೆ ಸುಮಾರು 9 ಗಂಟೆಗೆ ಈ ಘಟನೆ ನಡೆದಿದೆ. ಹಮೀದ್‌ಪುರ್ ಬಾಬ್ರೋತಿಯಾ ಗ್ರಾಮದಿಂದ ಈ ಮೊಸಳೆ ರುಸ್ತಂ ನಗರಕ್ಕೆ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ, ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು. ಮೊಸಳೆಯನ್ನು ಸುತ್ತುವರಿದು ಅದರೊಂದಿಗೆ ಆಟವಾಡುತ್ತಿರುವ ದೃಶ್ಯಗಳು ವಿಡಿಯೋಗಳಲ್ಲಿ ಸೆರೆಯಾಗಿವೆ. ಸ್ವಲ್ಪ ಸಮಯದಲ್ಲೇ, 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಸೆಕ್ಷನ್ ಆಫೀಸರ್ ಅಂಕಿತ್ ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಬಂತು. ತಂಡದಲ್ಲಿದ್ದ ರಾಮಾವತಾರ್ ಯಾದವ್ ಮತ್ತು ದೇವೇಂದ್ರ ಕುಮಾರ್ ಅವರೊಂದಿಗೆ ಸೇರಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದರು.
ಸ್ಥಳೀಯರಾದ ಸತ್ಯಪ್ರಕಾಶ್, ಬಬ್ಲು, ರಾಜು, ಪಂಕಜ್, ವಿವೇಕ್ ಸಿಂಗ್, ರಾಜೇಂದ್ರ ಸಿಂಗ್ ಮತ್ತು ಸೋನು ಕುಮಾರ್ ಅವರು ಮೊಸಳೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಾಯ ಮಾಡಿದರು.
ಸುತ್ತಲಿನ ಪ್ರದೇಶದಲ್ಲಿ ಹೆಚ್ಚು ನೀರು ನಿಂತಿದ್ದರಿಂದ, ಪೊದೆಯಲ್ಲಿದ್ದ ಮೊಸಳೆ ಹೊರಬಂದು ಊರೊಳಗೆ ನುಗ್ಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಈ ಪ್ರದೇಶವು ಗಂಗಾ ನದಿಗೆ ಹತ್ತಿರವಿರುವುದರಿಂದ, ಇಲ್ಲಿ ಮೊಸಳೆಗಳ ಓಡಾಟ ಸಾಮಾನ್ಯವಾಗಿದೆ. ಸಮಾಜ ಸೇವಕ ಬಂಟಿ ಯಾದವ್ ಅವರು ಹೇಳುವ ಪ್ರಕಾರ, ಗಂಗಾ ನದಿ ತೀರದ ಗ್ರಾಮಗಳಿಗೆ ಮೊಸಳೆಗಳು ಪದೇ ಪದೇ ನುಗ್ಗುತ್ತಿವೆ. ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಸ್ಥಳೀಯ ನಿವಾಸಿಗಳಿಗೆ ಅಪಾಯ ಎದುರಾಗಿದೆ. ಗಂಗಾ ನದಿ ತೀರದಲ್ಲಿ ಅಧಿಕಾರಿಗಳು ಕಣ್ಗಾವಲು ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊನೆಗೂ ಅರಣ್ಯ ಇಲಾಖೆಯು ಮೊಸಳೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆರಂಭದಲ್ಲಿ ಅಪಾಯವನ್ನು ಲೆಕ್ಕಿಸದೆ ಮೊಸಳೆ ಜೊತೆ ಆಟವಾಡಿದ್ದ ಗ್ರಾಮಸ್ಥರು, ಈಗ ನಿಟ್ಟುಸಿರು ಬಿಟ್ಟಿದ್ದಾರೆ.