
ಮಕ್ಕಳು ಫಿಟ್ ಆಗಿರ್ಬೇಕು, ಗ್ರೌಂಡ್ ನಲ್ಲಿ ಆಟ ಆಡ್ಬೇಕು ಅಂತ ಉದ್ದುದ್ದದ ಭಾಷಣ ಮಾಡ್ತೇವೆ. ಮಕ್ಕಳ ಹೆಲ್ತ್ ಗೆ ಆಟ ತುಂಬಾ ಇಂಪಾರ್ಟೆಂಟ್ ಅಂತ ಡಾಕ್ಟರ್ ಹೇಳ್ತಾರೆ. ಇಡೀ ದಿನ ಮೊಬೈಲ್ ಹಿಡಿದು ಕುಳಿತುಕೊಳ್ತೀರಾ, ಹೊರಗೆ ಹೋಗಿ ಆಟ ಆಡಿ ಅಂತ ಪಾಲಕರು ಬೈತಾರೆ. ಅಲ್ಲ, ಮಕ್ಕಳಿಗೆ ಆಟ ಆಡಿ ಅಂದ್ರೆ ಅವರು ಎಲ್ಲಿ ಆಡ್ಬೇಕು? ಇರೋ ಗ್ರೌಂಡ್ ನಲ್ಲಿ ಅಪಾರ್ಟ್ಮೆಂಟ್ ಎದ್ದಿರುತ್ತೆ, ಇಲ್ಲ ಕಸದ ರಾಶಿ ತುಂಬಿರುತ್ತೆ. ರಸ್ತೆ ಮೇಲೆ ಆಡೋಣ ಅಂದ್ರೆ ವಾಹನಗಳ ಓಡಾಟ ನಿಲ್ಲೋದೇ ಇಲ್ಲ. ರಿಸ್ಕ್ ತೆಗೆದ್ಕೊಂಡು ಕೊಳಕಾಗಿರೋ ಗ್ರೌಂಡ್ ಗೆ ಹೋದ್ರೆ ಹುಷಾರ್ ತಪ್ಪೋದು ಗ್ಯಾರಂಟಿ. ಇದ್ರಿಂದ ಬೇಸತ್ತ ಉತ್ತರ ಪ್ರದೇಶದ ಅಲಿಗಢದ ಮಸೂದಾಬಾದ್ ಕಾಲೋನಿಯ ಮಕ್ಕಳು, ಸಂಸದರಿಗೆ ಕ್ಯೂಟ್ ಲೆಟರ್ ಬರೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರ ಲೆಟರ್ ವೈರಲ್ ಆಗಿತ್ತು. ಈಗ ಈ ಲೆಟರ್ ಗೆ ಸಂಸದರಿಂದ ರೆಸ್ಪಾನ್ಸ್ ಸಿಕ್ಕಿದೆ. ಗ್ರೌಂಡ್ ಕ್ಲೀನ್ ಮಾಡುವ ಕೆಲ್ಸ ಶುರುವಾಗಿದೆ.
ಲೆಟರ್ ನಲ್ಲಿ ಏನಿತ್ತು? : ತಮ್ಮ ಸ್ಥಳೀಯ ಆಟದ ಮೈದಾನವನ್ನು ಕ್ಲೀನ್ ಮಾಡಿಕೊಡಿ ಅಂತ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರಿಗೆ ಮಕ್ಕಳು ಅರ್ಜಿ ಬರೆದಿದ್ದರು. ಇಮ್ರಾನ್ ಮಸೂದ್ ಒಡೆತನದಲ್ಲಿದೆ ಎಂದು ಹೇಳಲಾದ ಈ ಮೈದಾನದಲ್ಲಿ ಹುಲ್ಲು ಬೆಳೆದಿದೆ. ಮೈದಾನದ ತುಂಬಾ ಕಸದ ರಾಶಿ. ಹಾವಿನ ಕಾಟ. ಇದ್ರಿಂದ ಬೇಸತ್ತ ಮಕ್ಕಳು, ಸಂಸದರಿಗೆ ಮೈದಾನ ಕ್ಲೀನ್ ಮಾಡುವಂತೆ ಕೈಬಹರದಲ್ಲಿ ಒಂದು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಅನೇಕ ಮಕ್ಕಳ ಸಹಿ ಇತ್ತು. ನಾವು (ಮಸೂದಾಬಾದ್ ಕಾಲೋನಿ) ಮಕ್ಕಳು ನಿಮ್ಮ ಗಮನ ಸೆಳೆಯಲು ಈ ಪತ್ರವನ್ನು ಬರೆಯುತ್ತಿದ್ದೇವೆ. ನಮ್ಮ ಪ್ರದೇಶದಲ್ಲಿ ನಿಮಗೆ ಸೇರಿದೆ ಎಂದು ಹೇಳಲಾಗುವ ಒಂದು ಜಾಗವಿದೆ. ಹತ್ತಿರದಲ್ಲಿ ಬೇರೆ ಯಾವುದೇ ತೆರೆದ ಜಾಗವಿಲ್ಲದ ಕಾರಣ ನಾವು ಆಗಾಗ್ಗೆ ಈ ಮೈದಾನದಲ್ಲಿ ಆಟ ಆಡುತ್ತೇವೆ. ನಾವು ಒಟ್ಟಿಗೆ ಆಡಬಹುದಾದ ಏಕೈಕ ಸ್ಥಳ ಇದು ಎಂದು ಮಕ್ಕಳು ಪತ್ರ ಶುರು ಮಾಡುತ್ತಾರೆ. ಪತ್ರದಲ್ಲಿ ಮೈದಾನದಲ್ಲಿರುವ ಸಮಸ್ಯೆ ಹಾಗೂ ಸುರಕ್ಷತೆಯ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಈ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ನಂತ್ರ ಇಮ್ರಾನ್ ಮಸೂದ್ ಅವರ ಸೋದರಳಿಯ ಖಾಜಿ ಹಮ್ಜಾ ಮಸೂದ್ ತಮ್ಮ Qazihamzamasood ಇನ್ಸ್ಟಾ ಖಾತೆಯಲ್ಲಿ ಈ ಪತ್ರವನ್ನು ಹಂಚಿಕೊಂಡಿದ್ದರು. ನಾನಿಂದು ಈ ಕ್ಯೂಟ್ ಪತ್ರವನ್ನು ರಿಸೀವ್ ಮಾಡಿದ್ದೇನೆ ಅಂತ ಅವರು ಶೀರ್ಷಿಕೆ ಹಾಕಿದ್ದರು. ಮಕ್ಕಳ ಪತ್ರ ವೇಗವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಾಕಷ್ಟು ಕಮೆಂಟ್ ಬಂದಿತ್ತು. ಸಂಸದ ಇಮ್ರಾನ್ ಮಸೂದ್ ಯಾವ ಪ್ರತಿಕ್ರಿಯೆ ನೀಡ್ತಾರೆ, ಮೈದಾನ ಕ್ಲೀನ್ ಆಗುತ್ತಾ ಎಂಬ ಪ್ರಶ್ನೆ ಜನರಲ್ಲಿ ಕಾಡ್ತಿತ್ತು.
ಮಕ್ಕಳ ಪತ್ರಕ್ಕೆ ಸಿಕ್ತು ಪ್ರತಿಕ್ರಿಯೆ : ಮಕ್ಕಳು, ಸಂಸದರಿಗೆ ಪತ್ರ ಬರೆದು ಯಶಸ್ಸು ಕಂಡಿದ್ದಾರೆ. ಮಕ್ಕಳ ಪತ್ರಕ್ಕೆ ಈಗ ಖಾಜಿ ಹಮ್ಚಾ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದರು, ಮಕ್ಕಳ ಬೇಡಿಕೆಗೆ ಸ್ಪಂದಿಸಿದ್ದಾರೆ. ಮೈದಾನದ ಸ್ವಚ್ಛತಾ ಕೆಲ್ಸ ಶುರುವಾಗಿದೆ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕವಾಡ್ ಯಾತ್ರೆಯಿಂದ ಕೆಲ್ಸ ನಿಂತಿತ್ತು. ಈಗ ಶುರುವಾಗಿದೆ ಎನ್ನುತ್ತ, ಗ್ರೌಂಡ್ ಕ್ಲೀನ್ ಮಾಡ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಸಂಸದರ ಪ್ರತಿಕ್ರಿಯೆ ನೋಡಿ ಬಳಕೆದಾರರು ಖುಷಿಯಾಗಿದ್ದಾರೆ. ಒಳ್ಳೆ ಕೆಲ್ಸ ಮಾಡಿದ ಮಕ್ಕಳಿಗೆ ಶಹಬ್ಬಾಸ್ ಹೇಳಿದ್ದಾರೆ.