
ವಯಸ್ಸು ಕೇವಲ ಒಂದು ಸಂಖ್ಯೆ ಎನ್ನುವುದನ್ನು 24 ವರ್ಷದ ಯುವತಿಯೊಬ್ಬರ ಪಯಣ ಮತ್ತೊಮ್ಮೆ ಸಾಬೀತುಪಡಿಸಿದೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ, ಅಲ್ಲೇ ಮ್ಯಾನ್‌ಹ್ಯಾಟನ್‌ನಲ್ಲಿ ಉದ್ಯೋಗ ಪಡೆದು, ₹45 ಲಕ್ಷ ಶಿಕ್ಷಣ ಸಾಲವನ್ನು ಕೇವಲ 6 ತಿಂಗಳಲ್ಲಿ ತೀರಿಸಿ, ಸ್ವಂತ ಹಣದಲ್ಲೇ 10 ದೇಶಗಳನ್ನು ಸುತ್ತಿ ಇದೀಗ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅವರ ಈ ಜರ್ನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ 24 ವರ್ಷದ ಯುವತಿ ತಮ್ಮ ಕಳೆದ ನಾಲ್ಕು ವರ್ಷಗಳ ಜೀವನದ ಪ್ರಮುಖ ಘಟನೆಗಳನ್ನು ಹಂಚಿಕೊಂಡಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳುವ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಅಮೆರಿಕದಲ್ಲಿ ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸುಮಾರು ₹45 ಲಕ್ಷ ಶಿಕ್ಷಣ ಸಾಲ ಪಡೆದಿದ್ದರು. 21ನೇ ವಯಸ್ಸಿಗೆ ತಮ್ಮ ಕೋರ್ಸ್ ಪೂರ್ಣಗೊಳಿಸಿ, ಬಳಿಕ ಉದ್ಯೋಗದ ಹುಡುಕಾಟ ಆರಂಭಿಸಿದ್ದರು.
ವಿದ್ಯಾಭ್ಯಾಸ ಮುಗಿದ ಕೆಲವೇ ದಿನಗಳಲ್ಲಿ ಅವರ ಕನಸಿನ ಉದ್ಯೋಗವೂ ಸಿಕ್ಕಿತು. ತಮ್ಮ 22ನೇ ಹುಟ್ಟುಹಬ್ಬಕ್ಕೂ ಕೆಲವೇ ದಿನಗಳ ಮೊದಲು ಮ್ಯಾನ್‌ಹ್ಯಾಟನ್‌ನಲ್ಲಿ ಫೈನಾನ್ಷಿಯಲ್ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಮ್ಯಾನ್‌ಹ್ಯಾಟನ್‌ನಂತಹ ವಿಶ್ವದ ಅತ್ಯಂತ ಸ್ಪರ್ಧಾತ್ಮಕ ನಗರಗಳಲ್ಲಿ ಕೆಲಸ ಮಾಡುವುದು ತಮ್ಮ ಪಾಲಿಗೆ ಕನಸು ನನಸಾದ ಕ್ಷಣವಾಗಿತ್ತು ಎಂದು ಅವರು ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಈ ಯುವತಿಯ ಕಥೆಯಲ್ಲಿ ನೆಟ್ಟಿಗರನ್ನು ಹೆಚ್ಚು ಅಚ್ಚರಿಗೊಳಿಸಿದ ಸಂಗತಿ ಇದೇ. ಉದ್ಯೋಗಕ್ಕೆ ಸೇರಿದ ಕೇವಲ ಆರು ತಿಂಗಳೊಳಗೆ ₹45 ಲಕ್ಷದ ಸಂಪೂರ್ಣ ಶಿಕ್ಷಣ ಸಾಲವನ್ನು ಮರುಪಾವತಿ ಮಾಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ದೊಡ್ಡ ಮೊತ್ತದ ಸಾಲ ಮಾಡಿದ್ದರೂ, ಉದ್ಯೋಗ ಆರಂಭಿಸಿದ ಕೆಲವೇ ತಿಂಗಳಲ್ಲಿ ಅದನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಾಲ ತೀರಿಸುವುದರ ಜೊತೆಗೆ ಯುವತಿ ತಮ್ಮ ಗಳಿಕೆಯ ಹಣದಿಂದಲೇ 10 ದೇಶಗಳಿಗೆ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಅಂದರೆ, ಶಿಕ್ಷಣ ಸಾಲ ತೀರಿಸುವ ಗುರಿಯೊಂದಿಗೆ ಹಣಕಾಸಿನ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ತಮ್ಮ 20ರ ದಶಕದ ಆರಂಭದಲ್ಲೇ ಪ್ರಪಂಚ ಸುತ್ತುವ ಅನುಭವವನ್ನೂ ಪಡೆದುಕೊಂಡಿದ್ದಾರೆ.
ಇದೀಗ 24 ವರ್ಷದ ಈ ಯುವತಿ ತಮ್ಮ ಜೀವನದಲ್ಲಿ ಮತ್ತೊಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿ, ಮ್ಯಾನ್‌ಹ್ಯಾಟನ್ ಜೀವನವನ್ನು ಅನುಭವಿಸಿದ ಬಳಿಕ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. 20ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿ, ಅಲ್ಲಿ ವಿದ್ಯಾಭ್ಯಾಸ, ಉದ್ಯೋಗ, ಪ್ರವಾಸ ಹಾಗೂ ವೃತ್ತಿಜೀವನದ ಬೆಳವಣಿಗೆಯನ್ನು ಕಂಡ ಅವರು ಇದೀಗ ತಮ್ಮ ತಾಯ್ನಾಡಿಗೆ ಮರಳುವ ಹಾದಿಯಲ್ಲಿದ್ದಾರೆ.
ಈ ಯುವತಿಯ ಜರ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ವಿಶೇಷವಾಗಿ ಕಡಿಮೆ ವಯಸ್ಸಿನಲ್ಲೇ ದೊಡ್ಡ ಶಿಕ್ಷಣ ಸಾಲವನ್ನು ತೀರಿಸಿ, ವೃತ್ತಿಜೀವನ ಕಟ್ಟಿಕೊಂಡು, ಪ್ರಪಂಚ ಸುತ್ತಿ, ಇದೀಗ ಭಾರತಕ್ಕೆ ಮರಳುವ ನಿರ್ಧಾರ ಕೈಗೊಂಡಿರುವುದನ್ನು ಹಲವರು ಮೆಚ್ಚಿದ್ದಾರೆ. ಅಪಾಯಗಳನ್ನು ಎದುರಿಸಲು ಸಿದ್ಧರಿದ್ದು, ದೀರ್ಘಾವಧಿಯ ಗುರಿಗಳತ್ತ ಶ್ರಮಿಸಿದರೆ ವಯಸ್ಸು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಅವರ ಕಥೆ ತೋರಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಯುವಕರಿಗೆ ಶಿಕ್ಷಣ ಸಾಲ ದೊಡ್ಡ ಹೊರೆ ಎನಿಸಬಹುದು. ಆದರೆ ಸರಿಯಾದ ವೃತ್ತಿಜೀವನದ ಯೋಜನೆ ಮತ್ತು ಹಣಕಾಸಿನ ಶಿಸ್ತಿನೊಂದಿಗೆ ಅದನ್ನು ನಿರ್ವಹಿಸಲು ಸಾಧ್ಯ ಎಂಬ ಚರ್ಚೆಯನ್ನೂ ಈ ವೈರಲ್ ಕಥೆ ಹುಟ್ಟುಹಾಕಿದೆ.